More

    ಬದುಕಿನೆಡೆಗಿನ ಕುತೂಹಲಕ್ಕಿಂತ ದೊಡ್ಡ ಐಶ್ವರ್ಯ ಏನಿದೆ?

    ಕೆಲವರು ಅನಗತ್ಯವಾಗಿ ಎಲ್ಲರೆದುರು ಮಕ್ಕಳನ್ನು ಹೊಗಳುತ್ತಾರೆ. ಮತ್ತೆ ಕೆಲವರು ಮಕ್ಕಳನ್ನು ಹೊಗಳಿದರೆ ಹಾಳಾಗಿ ಹೋಗುತ್ತಾರೆಂದು ತಿಳಿದಿರುತ್ತಾರೆ. ಒಂದು ಅತಿವೃಷ್ಟಿಯಾದರೆ, ಇನ್ನೊಂದು ಅನಾವೃಷ್ಟಿ. ಮಕ್ಕಳನ್ನು ಸದಾ ನಿರುತ್ಸಾಹಪಡಿಸುತ್ತಿದ್ದರೆ ಅವರಿಗೆ ಜಡತ್ವ ಆವರಿಸಿಕೊಳ್ಳುತ್ತದೆ. ಎಂದಿಗೂ ಹೊಗಳದೇ ಇದ್ದರೆ ನಿಸ್ತೇಜರಾಗಿಬಿಡುತ್ತಾರೆ.

    ಬದುಕಿನೆಡೆಗಿನ ಕುತೂಹಲಕ್ಕಿಂತ ದೊಡ್ಡ ಐಶ್ವರ್ಯ ಏನಿದೆ?ಯಾವ ಪ್ರಾಣಿಗೂ ಇರದ ಒಂದು ಅದ್ಭುತವಾದ ವರವನ್ನು (ಕ್ರಿಯೇಟಿವಿಟಿ) ಪ್ರಕೃತಿ ಮನುಷ್ಯನಿಗೆ ನೀಡಿದೆ. ಮನುಷ್ಯ ಸೃಷ್ಟಿಸಬಲ್ಲ. ತನ್ನ ಸೃಷ್ಟಿಯಲ್ಲಿ ತಾನು ಆನಂದಿಸುತ್ತ, ಬೇರೆಯವರಿಗೂ ಸಂತೋಷವನ್ನು ಹಂಚಬಲ್ಲ. ಮನೆಯನ್ನು ಹೊಸ ರೀತಿ ಅಲಂಕರಿಸಿದರೂ, ಅಡುಗೆಯಲ್ಲಿ ಹೊಸಪ್ರಯೋಗ ಮಾಡಿದರೂ ಅದು ಸೃಷ್ಟಿಯೇ ಅಲ್ಲವೇ? ಯಾವಾಗಲೂ ಮಾಡುವ ಅಡಿಗೆಯ ಬದಲು ಟಿ.ವಿ.ಯಲ್ಲಿ ಸಂಜೀವ್ ಕಪೂರ್ ಹೇಳಿದ ‘ಹೊಸರುಚಿ’ ಮಾಡಿದಾಗ ಮನೆಮಂದಿಯೆಲ್ಲ ಮೆಚ್ಚಿಕೊಳ್ಳುತ್ತ ತಿಂದರೆ ಸಿಗುವ ಆನಂದ ಎಂತಹುದೆಂದು ನಿಮಗೂ ತಿಳಿದಿದೆ.

    ತಮ್ಮ ಮಕ್ಕಳಲ್ಲಿ ಸೃಜನಶೀಲತೆ ಇದೆಯೆಂದು ಕೆಲವರು ನಂಬುವುದಿಲ್ಲ. ಕೇವಲ ಶಿಕ್ಷಣ ಪಡೆಯಲಷ್ಟೇ ಹುಟ್ಟಿದ್ದಾರೆಂದು ಬಲವಾಗಿ ನಂಬುತ್ತಾರೆ. ನಮ್ಮ ಬಗ್ಗೆ ನಮ್ಮಲ್ಲಿ ಪ್ರೀತಿ ಬೆಳೆಸುವುದೇ ಕ್ರಿಯೇಟಿವಿಟಿ. ತಮ್ಮ ಶಕ್ತಿಯ ಬಗ್ಗೆ ನಂಬಿಕೆ ಬೆಳೆಸಿಕೊಳ್ಳದೆ, ‘ಸೃಷ್ಟಿಸುವ ವ್ಯಕ್ತಿಗಳು’ ಬೇರೆ ಇದ್ದಾರೆಂಬ ಭ್ರಮೆಯಲ್ಲಿ ಕೆಲವರಿರುತ್ತಾರೆ. ಪ್ರಯತ್ನವನ್ನೇ ಮಾಡದಿರುವುದರಿಂದ ಅವರು ‘ಜಡವಸ್ತುಗಳ’ ಹಾಗೆ ಇದ್ದುಬಿಡುತ್ತಾರೆ. ಮಕ್ಕಳಲ್ಲಿ ಕ್ರಿಯೇಟಿವಿಟಿ ಬೆಳೆಸಿದರೆ ಅವರು ‘ತಮ್ಮೊಂದಿಗೆ ತಾವು’ ಸ್ನೇಹ ಬೆಳೆಸಿಕೊಂಡು, ತಮ್ಮ ಲೋಕದಲ್ಲಿ ತಾವಿರುತ್ತ, ಹೊರಗೆ ಸ್ನೇಹಿತರನ್ನು, ಟಿ.ವಿಯನ್ನು, ಚಾಟಿಂಗ್ ಅನ್ನು ಕಡಿಮೆ ಮಾಡುತ್ತಾರೆ.

    ಬದುಕಿನೆಡೆಗಿನ ಕುತೂಹಲಕ್ಕಿಂತ ದೊಡ್ಡ ಐಶ್ವರ್ಯ ಇನ್ನೇನಿದೆ? ಕೆರೆಯಲ್ಲಿ ಈಜುವುದರಿಂದ ಹಿಡಿದು ಲೈಬ್ರರಿಯಲ್ಲಿ ಪುಸ್ತಕ ಓದುವವರೆಗೆ, ಚಿನ್ನಿದಾಂಡು ಆಡುವುದರಿಂದ ಹಿಡಿದು ಪಾನಿಪುರಿ ತಿನ್ನುವುದರವರೆಗೆ ಎಲ್ಲವೂ ‘ಆನಂದ’ಗಳೇ. ಆಸಕ್ತಿ, ಕುತೂಹಲ, ಜ್ಞಾನ ಬೆರೆತರೆ ಅದು ಅದ್ಭುತವೇ! ಮಕ್ಕಳು ಬೆಳೆಸಿಕೊಂಡ ಅಭ್ಯಾಸಗಳಿಗೆ ಸಮಯ ವ್ಯರ್ಥ ಮಾಡುವ ಬದಲು, ಇನ್ನಷ್ಟು ಸಂತೋಷಕೊಡುವ ಲಾಭದಾಯಕ ಅಭ್ಯಾಸಗಳನ್ನು ರೂಢಿ ಮಾಡಿಕೊಳ್ಳಲು ಪ್ರೇರೇಪಿಸಿ. ಅದೇ ವಿಜಯಕ್ಕೆ ಮೊದಲ ಸೋಪಾನ. ಪೇಂಟಿಂಗ್, ಕ್ಲೇ ಮಾಡೆಲಿಂಗ್, ಸ್ಪೋರ್ಟಿಂಗ್, ಕ್ರಾಫ್ಟಿಂಗ್ ಮುಂತಾದ ಸೃಜನಾತ್ಮಕ ಕಲೆಗಳಲ್ಲಿ ಅವರು ತೊಡಗಿಸಿಕೊಳ್ಳಲಿ. ಮಕ್ಕಳ ಬುದ್ಧಿಶಕ್ತಿಯನ್ನು ಬೆಳೆಸುವ ಆಧುನಿಕವಾದದ ಆಟಿಕೆಗಳು ಬಹಳ ಸಿಗುತ್ತವೆ. ಚದುರಂಗ, ವರ್ಡ್ಸ್ ಬಿಲ್ಡಿಂಗ್, ಟ್ರೇಡ್​ಗೇಮ್್ಸ ಮೊದಲಾದವನ್ನು ಕೊಡಿಸಿರಿ.

    ನಿಮ್ಮ ರಜೆಚೀಟಿಯನ್ನು ಮಕ್ಕಳಿಗೆ ಹೇಳಿ ಬರೆಸಿರಿ. ನೀವೊಬ್ಬ ಎಕ್ಸಿಕ್ಯುಟಿವ್ ಆಗಿದ್ದರೆ ನಿಮ್ಮ ಸಬಾರ್ಡಿನೇಟ್​ನ ಕೆಲಸವನ್ನು ಮೆಚ್ಚಿ ಹೊಗಳುತ್ತ ಒಂದು ಲೆಟರ್ ಡ್ರಾಫ್ಟ್ ಮಾಡಲು ಮಕ್ಕಳಿಗೆ ತಿಳಿಸಿರಿ. ಅದು ಮಕ್ಕಳಿಗೆ ಒಂದು ಅದ್ಭುತವಾದ, ಮಧುರ ಅನುಭವವಾಗುತ್ತದೆ. ಮಕ್ಕಳು ಹೊಸ ಪ್ರಯೋಗಗಳನ್ನು ಮಾಡಲು ಅಂಜುವವರಾದರೆ ಅವರಿಗೆ ಈ ಸುಭಾಷಿತವನ್ನು ಹೇಳಿರಿ.

    ‘ನನ್ನಿಂದ ಆಗುವುದಿಲ್ಲ, ಅಷ್ಟೇನೂ ಗೊತ್ತಿಲ್ಲ, ಯಾವ ಅನುಭವವೂ ಇಲ್ಲ ಎಂದು ತಿಳಿದುಕೊಳ್ಳಬೇಡ, ಅನುಭವ ಇರದಿದ್ದವರೇ ಗೂಗಲ್, ಆಪಲ್ ತಯಾರು ಮಾಡಿದರು. ಅನುಭವ ಇದ್ದವರು ಟೈಟಾನಿಕ್ ತಯಾರು ಮಾಡಿದರು’.

    ನೂರು ಕಿಮೀ ವೇಗದಲ್ಲಿ ಬೈಕ್ ಓಡಿಸುವ ಡೇರ್ ಡೆವಿಲ್​ಗಳು ಕೂಡ ಇಂಟರ್​ವ್ಯೂ ರೂಮ್ಲ್ಲಿ ಟೆನ್​ಷನ್​ನಿಂದ ನಡುಗುತ್ತಾರೆ. ಈ ಭಯವನ್ನು ಅವರು ಯುಕ್ತವಯಸ್ಸಿಗೆ ಬಂದಾಗಲೇ ಹೋಗಲಾಡಿಸಬೇಕು. ಮಕ್ಕಳ ಒಂದು ಬಲಹೀನತೆ ಎಂದರೆ ಪಬ್ಲಿಕ್ ಸ್ಪೀಕಿಂಗ್! ಕ್ಲಾಸ್​ರೂಂನಲ್ಲಿ ಇರುವವರು ಎಲ್ಲರೂ ಸ್ನೇಹಿತರೇ ಆಗಿರುವುದರಿಂದ ಭಾಷಣ ಮಾಡಬಲ್ಲರು. ಆದರೆ ಅಪರಿಚಿತ ಪ್ರೇಕ್ಷಕರ ಎದುರು ಮಾತನಾಡಬಲ್ಲರೇ? ಹದಿನಾಲ್ಕು ವರ್ಷದವರೆಗೆ ಮಕ್ಕಳಲ್ಲಿ ಈ ಸ್ಟೇಜ್ ಫಿಯರ್ ಇರುವುದಿಲ್ಲ. ಅಲ್ಲಿಂದ ಮುಂದೆ ಗಂಡು/ಹೆಣ್ಣು ಭೇದ, ನಾಚಿಕೆ, ಹಿಂಜರಿಕೆ ಪ್ರಾರಂಭವಾಗುತ್ತವೆ. ಆ ವಯಸ್ಸಿನಲ್ಲೇ ಹತ್ತು ಮಂದಿಯಲ್ಲಿ ತೂರಿಕೊಂಡು ಮುನ್ನುಗ್ಗುವ ಹಾಗೆ ಮಾಡಬೇಕು. ಎಲ್ಲಿ ಅವಕಾಶ ಸಿಕ್ಕರೆ ಅಲ್ಲಿ ಸ್ಟೇಜ್ ಹತ್ತುವಂತೆ ಮಾಡಿರಿ. ಸ್ಟೇಜ್ ಹತ್ತಿ ಮಾತಾಡುವ ಅವಕಾಶ ಸಿಗುವ ಮೀಟಿಂಗ್​ಗಳಿಗೆ ಮಕ್ಕಳನ್ನು ಕರೆದೊಯ್ಯಿರಿ. ಮತ್ತೊಂದು ವಿಷಯವನ್ನು ಇಲ್ಲಿಯೇ ರ್ಚಚಿಸೋಣ. ಉದ್ಯೋಗದಾತ ತಾನು ಕೊಡುವ ಸಂಬಳಕ್ಕೆ ತಕ್ಕ ಕೆಲಸ ಮಾಡುವ ಸಾಮರ್ಥ್ಯ ಅಭ್ಯರ್ಥಿಯಲ್ಲಿ ಇದೆಯೇ ಎಂದು ಪರೀಕ್ಷಿಸುತ್ತಾನೆ. ಅವನಿಗೆ ಅಭ್ಯರ್ಥಿ ಎಷ್ಟು ಅಂಕ ಗಳಿಸಿದ್ದಾನೆ ಎನ್ನುವುದು ಮುಖ್ಯವಲ್ಲ. ಯಾರು ಭಯಪಡದೆ ಚೆನ್ನಾಗಿ ಮಾತನಾಡುತ್ತಾರೆ? ಯಾರು ನಗುತ್ತ ಆಕರ್ಷಕವಾಗಿ (ಅಂದವಾಗಿ ಅಲ್ಲ) ಇದ್ದಾರೆ? ಸಬ್ಜೆಕ್ಟ್​ಗೆ ಹೊರತಾದ ಪ್ರಪಂಚಜ್ಞಾನ ಸ್ವಲ್ಪವಾದರೂ ಇದೆಯೇ? ಎಂದು ನೋಡುತ್ತಾರೆಯೇ ಹೊರತು ಯಾವ ಕಾಲೇಜ್​ನಲ್ಲಿ ಓದಿದ? ಎಷ್ಟು ಮಾರ್ಕ್ಸ್

    ಬಂದಿದೆ ಎಂದಲ್ಲ. ಮಾರ್ಕ್ಸ್/ಡಿಗ್ರಿ/ಕಾಲೇಜ್​ಗಳು ನೌಕರಿಗೆ ಅಳತೆಗೋಲು ಎಂಬ ಅಭಿಪ್ರಾಯವನ್ನು ಇಂದೇ ತೊರೆಯಿರಿ.

    ಒಬ್ಬ ಕಂಪ್ಯಾನಿಯನ್ ಆಗಿರಿ: ಒಂದು ವಯಸ್ಸು ಬೆಳೆದ ಮೇಲೆ ಮಕ್ಕಳು ನಿಮ್ಮ ಜೊತೆ ಮುಂಚಿನ ಹಾಗೆ ಇರದಿದ್ದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ. ಮುಖ್ಯವಾಗಿ ಗಂಡುಮಕ್ಕಳು ಅಷ್ಟು ಕ್ಲೋಸ್ ಆಗಿರುವುದಿಲ್ಲ. ಕಡೇ ಪಕ್ಷ ಮಕ್ಕಳಿಗೆ ಹನ್ನೆರಡು ವರ್ಷ ಬರುವಷ್ಟರಲ್ಲಿ ಅವರೊಂದಿಗೆ ಸ್ನೇಹ ಸಂಪಾದಿಸಬೇಕು. ಹಾಗೆಂದು ಅವರ ಹೋಂವರ್ಕ್ ನೀವು ಮಾಡಿಕೊಡುವುದು, ಅವರು ಪರೀಕ್ಷೆ ಬರೆಯುತ್ತಿದ್ದರೆ ಹೊರಗೆ ನಿಂತು ಚಡಪಡಿಸುವುದು ಇವೆಲ್ಲ ಬೇಡ. ಮಕ್ಕಳಿಗೋಸ್ಕರ ತಮ್ಮ ಕೆಲಸಗಳ ಪ್ರಾಧಾನ್ಯವನ್ನು ಬದಲಾಯಿಸಿಕೊಳ್ಳುವುದು ಶ್ರೇಯಸ್ಕರ. ವಾರದಲ್ಲಿ ಐದು ದಿನ ಸ್ನೇಹಿತರೊಂದಿಗೆ ಮಧ್ಯರಾತ್ರಿಯವರೆಗೆ ಸಮಯ ಕಳೆಯುವ ತಂದೆಯರು ವಾರದಲ್ಲಿ ಕಡೇ ಪಕ್ಷ ಒಂದು ದಿನವಾದರೂ ಮಕ್ಕಳ ಜೊತೆ ಕಳೆಯುವುದಿಲ್ಲ ಎಂದರೆ ನಂಬುತ್ತೀರಾ?

    ಹೋಂವರ್ಕ್ ಮಾಡುವಾಗ ಸಹಾಯ ಮಾಡಿರಿ. ಸ್ನೇಹದಿಂದ ಇರುತ್ತ, ಮಕ್ಕಳನ್ನು ಆಗಾಗ ವಿಹಾರಯಾತ್ರೆಗಳಿಗೆ ಕರೆದೊಯ್ಯಿರಿ. ಮಕ್ಕಳು ಪೋಸ್ಟ್ ಗ್ರಾಜುಯೇಟ್​ಗಳಾಗಿದ್ದರೆ ಮನೆಯವರೆಲ್ಲ ಒಟ್ಟಾಗಿ ಸಿನಿಮಾಗೆ ಹೋಗಿರಿ. ಈ ರೀತಿ ಮಾಡಿದರೆ ಕುಟುಂಬ ಸದಸ್ಯರ ನಡುವಿನ ಸಂಬಂಧ ಗಟ್ಟಿಗೊಳ್ಳುತ್ತದೆ.

    (ತಂದೆ ಮಗನ ಪ್ರೀತಿ ಬಗ್ಗೆ ವಿಧು ವಿನೋದ್ ಚೋಪ್ರಾ ಚಿತ್ರಿಸಿದ ‘ಫೆರಾರಿ ಕೀ ಸಫಾರಿ’ ಚೆನ್ನಾಗಿದೆ. ನೋಡಿರಿ). ಮೈದಾನದಲ್ಲಿ ಸ್ವಲ್ಪ ಹೊತ್ತು ಮಕ್ಕಳ ಜೊತೆ ಆಡುವುದು, ಜಾಗಿಂಗ್ ಒಳ್ಳೆಯ ಅಭಿರುಚಿ.

    ಒಬ್ಬ ಪೈಲಟ್ ತನ್ನ ಆತ್ಮಚರಿತ್ರೆಯಲ್ಲಿ ಹೀಗೆ ಬರೆದಿದ್ದಾನೆ: ‘ಪೈಲಟ್ ಶಿಕ್ಷಣ ಪೂರ್ತಿಯಾದ ಮೇಲೆ ಎರಡು ಸಾವಿರ ಅಡಿ ಎತ್ತರದಲ್ಲಿ ವಿಮಾನ ಹಾರಾಟ ನಡೆಸಿದ್ದೇನೆ. ನನಗೆ ಶಿಕ್ಷಣ ಕೊಟ್ಟ ವ್ಯಕ್ತಿ ಅಲ್ಲದೆ, ಮೊಟ್ಟಮೊದಲ ಬಾರಿಗೆ ಕರೆದೊಯ್ಯುತ್ತಿರುವ ಪ್ರಯಾಣಿಕರ ಕಡೆ ನೋಡಿದೆ. ನನ್ನ ಮೊದಲ ಪ್ಯಾಸೆಂಜರ್ ನನ್ನ ತಂದೆ. ಆಸಕ್ತಿಯಿಂದ ಕೆಳಗೆ ನೋಡುತ್ತಿದ್ದರು. ನಗರದ ಮೇಲೆ ಮೂರು ಪ್ರದಕ್ಷಿಣೆ ಹಾಕಿತು ವಿಮಾನ. ವಿಮಾನ ಹಾರಾಟದ ವಿನ್ಯಾಸಗಳನ್ನು ಅಪ್ಪನಿಗೆ ತೋರಿಸಿದೆ. ಗಂಟೆಯ ನಂತರ ಕೆಳಗೆ ಇಳಿಯುತ್ತ ‘ಅಪ್ಪ ಎಂಜಾಯ್ ಮಾಡಿದಿರಾ?’ ಎಂದು ಕೇಳಿದೆ. ಆಗ ಅವರು ಹೇಳಿದ ಮಾತನ್ನು ನಾನು ಜೀವಮಾನ ಪೂರ್ತಿ ಮರೆಯಲಾರೆ. ‘ನನಗೆ ವಿಮಾನ ಪ್ರಯಾಣದ ಆಸೆ ಇರಲಿಲ್ಲವೋ, ನಿನ್ನ ಮೇಲೆ ನನಗೆಷ್ಟು ನಂಬಿಕೆ ಇದೆ ಎಂಬುದನ್ನು ತೋರಿಸಲಿಕ್ಕೆ ಬಂದೆ’ ಎಂದರು. ನನ್ನ ಯಶಸ್ಸಿನಲ್ಲಿ ಅವರ ಪಾರ್ಟಿಸಿಪೇಶನ್, ನಂಬಿಕೆ ಕಂಡು ನನ್ನ ಕಣ್ಣುಗಳು ಒದ್ದೆಯಾದವು’.

    ಮಕ್ಕಳು ಶಾಲೆಯ ಕಾರ್ಯಕ್ರಮದಲ್ಲಿ ಹಾಡುತ್ತಿದ್ದರೆ ತಪ್ಪದೇ ಹೋಗಿರಿ. ನೀವು ಹಾಜರಾದರೆ ಮಕ್ಕಳಿಗೆ ಆಗುವ ಆನಂದ ಅಷ್ಟಿಷ್ಟಲ್ಲ. ನಾವು ನಾಲ್ಕು ಮಂದಿ ಅಣ್ಣತಮ್ಮಂದಿರು. ಸಣ್ಣವರಿದ್ದಾಗ ಭಾನುವಾರ ಖಮ್ಮಮ್ ಪ್ಲೇಗ್ರೌಂಡ್​ನಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದರೆ ನಮ್ಮ ತಂದೆ ದೂರದಲ್ಲಿ ಮರದ ಕೆಳಗೆ ಕುಳಿತು ಸ್ಕೋರ್ ಬರೆದುಕೊಳ್ಳುತ್ತಿದ್ದರು. ಅರವತ್ತು ವರ್ಷಗಳ ನಂತರವೂ ಈ ವಿಷಯ ನೆನಪಿರುವುದಕ್ಕೆ ನಮ್ಮ ಬಗ್ಗೆ ಅವರಿಗಿದ್ದ ಆಸಕ್ತಿ, ಪ್ರೀತಿಯೇ ಕಾರಣ.

    ಮಕ್ಕಳಲ್ಲಿರುವ ದೊಡ್ಡತನವನ್ನು ಗುರುತಿಸಿ: ದೊಡ್ಡವರು ಏನಾದರೂ ಸಲಹೆ ಕೇಳಿದರೆ ಟೀನ್ಸ್ ಮಕ್ಕಳು ಬಹಳ ಹೆಮ್ಮೆಪಟ್ಟುಕೊಳ್ಳುತ್ತಾರೆ. ಮಿದುಳನ್ನು ಇನ್ನಷ್ಟು ಷಾರ್ಪ್ ಆಗಿ ಬಳಸಲಾರಂಭಿಸುತ್ತಾರೆ. ಉದಾಹರಣೆಗೆ ನೀವೊಂದು ವಾಹನ ಕೊಳ್ಳಬೇಕೆಂದಿದ್ದರೆ ‘ಯಾವುದು ಬೆಸ್ಟ್ ವೆಹಿಕಲ್? ಅದರ ಬೆಲೆ ಎಷ್ಟು ಅಂತ ವಿಚಾರಿಸಿ’ ಎಂದು ಮಕ್ಕಳಿಗೆ ಹೇಳಿರಿ. ಆಗವರು ದೇಶದಲ್ಲಿರುವ ಎಲ್ಲ ವೆಹಿಕಲ್​ಗಳ ಬಗ್ಗೆ ಎಲ್ಲ ವಿವರಗಳನ್ನು ಕಲೆ ಹಾಕುತ್ತಾರೆ. ಸೈಟ್ ಇಲ್ಲವೇ ಫ್ಲಾಟ್ ಕೊಳ್ಳಲು ಹೋಗುವಾಗ ಮಕ್ಕಳನ್ನು ಜೊತೆಯಲ್ಲಿ ಕರೆದೊಯ್ಯಿರಿ. ಅವರನ್ನೇ ಆಯ್ಕೆ ಮಾಡಲು ಕೇಳಿರಿ. ನೀವು ಅಷ್ಟರಲ್ಲಿಯೇ ನಿರ್ಧಾರ ಕೈಗೊಂಡಿದ್ದರೂ ಅವರ ಅಭಿಪ್ರಾಯ ಕೇಳಿ ತಿಳಿದು, ನಂತರ ನಿಮ್ಮ ನಿರ್ಧಾರವನ್ನು ತಿಳಿಸಿ ಅವರನ್ನು ಒಪ್ಪಿಸಿ. ನಿಮ್ಮ ನಿರ್ಧಾರ ಅವರದೇ ಎಂದು ಎಲ್ಲರಿಗೂ ಹೇಳಿರಿ. ನಿಮಗೆ ಅಂಥ ಅದ್ಭುತವಾದ ಸೈಟ್/ಫ್ಲಾಟ್ ಸೂಚಿಸಿದ್ದು ತಾವೇ ಎಂದು ಜೀವಮಾನಪೂರ್ತಿ ಹೆಮ್ಮೆ ಪಡುತ್ತಾರೆ.

    ‘ಒಳ್ಳೇ ಹುಡುಗ ಅಲ್ಲವಾ. ಅಂಗಡಿಗೆ ಹೋಗಿ ಕಾಲು ಕೆ.ಜಿ. ಸಕ್ಕರೆ ತಗೊಂಡು ಬಾಪ್ಪಾ’ ಅನ್ನುತ್ತೀರಿ. ತರುವುದು ಅವನ ಕೆಲಸ. ಅದಕ್ಕೋಸ್ಕರ ‘ಒಳ್ಳೆಯ ಹುಡುಗ’ ಎಂದೇಕೆ ಹೇಳಬೇಕು? ಯಾರೂ ಹೇಳದಿದ್ದರೂ ಅವನು ತಮ್ಮನ ತಲೆಗೆ ಎಣ್ಣೆ ಹಚ್ಚಿ ಬಾಚಿದರೆ ಆಗ ಒಳ್ಳೆಯ ಹುಡುಗ ಎಂಬ ವಿಶೇಷಣ ಬಳಸಬೇಕು. ಹೊಗಳಿದಾಗ ಕೆಲಸ ಮಾಡುವುದು ಅಭ್ಯಾಸವಾಗಿಬಿಟ್ಟರೆ ‘ಬೇರೆಯವರ ಸೇವೆ ಮಾಡುವುದೇ ಒಳ್ಳೆಯತನಕ್ಕೆ ಚಿಹ್ನೆ’ ಎಂದುಕೊಳ್ಳುವ ಮಕ್ಕಳು ದೊಡ್ಡವರಾದಾಗ ಮಹಾವಾಚಾಳಿಗಳೂ, ಹೊಗಳಿಕೆಗೆ ಉಬ್ಬುವವರೂ ಆಗುತ್ತಾರೆ. ಸ್ವಲ್ಪ ಹೊಗಳಿ ಅಟ್ಟಕ್ಕೇರಿಸಿದರೆ ಸಾಕು ಸಾಲದ ಗ್ಯಾರೆಂಟಿಗಳಿಗೆ ಸಹಿ ಮಾಡಿಬಿಡುತ್ತಾರೆ.

    ಮನೆಯಲ್ಲಿ ಇಬ್ಬರೋ, ಮೂವರೋ ಮಕ್ಕಳಿದ್ದರೆ ಒಬ್ಬನನ್ನು ಹೊಗಳಿದರೆ ಉಳಿದವರು ಬೇಸರ ಪಡುತ್ತಾರೆ, ಈರ್ಷ್ಯೆ ಪಡುತ್ತಾರೆ ಎನ್ನುವ ಭಾವನೆ ಬೇಡ. ಮಕ್ಕಳಲ್ಲಿ ಯಾವುದಾದರೂ ಸ್ಪೆಷಲ್ ಟ್ಯಾಲೆಂಟ್ ಇದ್ದರೆ ಆಗ ಅವರನ್ನು ಹೊಗಳಿದರೆ ತಪ್ಪಲ್ಲ. ಆದರೆ ಆ ಸಮಯದಲ್ಲಿ ಇನ್ನೊಬ್ಬನನ್ನು ತೆಗಳಬಾರದು. ನಿಮ್ಮ ಹೊಗಳಿಕೆಯಲ್ಲಿ ಪ್ರಾಮಾಣಿಕತೆ ಇದ್ದರೆ ಆಗ ಸೋದರನೂ/ಸೋದರಿಯೂ ಮೆಚ್ಚಿಕೊಂಡು ಅಭಿನಂದಿಸುತ್ತಾರೆ. ಕೆಲವರು ಅನಗತ್ಯವಾಗಿ ಎಲ್ಲರೆದುರು ಮಕ್ಕಳನ್ನು ಹೊಗಳುತ್ತಾರೆ. ಮತ್ತೆ ಕೆಲವರು ಮಕ್ಕಳನ್ನು ಹೊಗಳಿದರೆ ಹಾಳಾಗಿ ಹೋಗುತ್ತಾರೆಂದು ತಿಳಿದಿರುತ್ತಾರೆ. ಒಂದು ಅತಿವೃಷ್ಟಿಯಾದರೆ, ಇನ್ನೊಂದು ಅನಾವೃಷ್ಟಿ. ಮಕ್ಕಳನ್ನು ಸದಾ ನಿರುತ್ಸಾಹಪಡಿಸುತ್ತಿದ್ದರೆ ಅವರಿಗೆ ಜಡತ್ವ ಆವರಿಸಿಕೊಳ್ಳುತ್ತದೆ. ಎಂದಿಗೂ ಹೊಗಳದೇ ಇದ್ದರೆ ನಿಸ್ತೇಜರಾಗಿಬಿಡುತ್ತಾರೆ. ಅದಕ್ಕೊಂದು ಉದಾಹರಣೆ. ಅನಂತಪುರಂ ಶಾಲೆಯ ಗಣಿತ ಶಿಕ್ಷಕರು ಅರ್ಧವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಟೇಬಲ್ ಮೇಲಿಟ್ಟು ಒಬ್ಬೊಬ್ಬರನ್ನೇ ಕರೆದು ಕೊಡುತ್ತಿದ್ದರು. ಒಬ್ಬನಿಗೆ ತೊಂಬತ್ತು ಅಂಕಗಳು ಬಂದಿದ್ದವು. ಇನ್ನೊಬ್ಬನಿಗೆ ತೊಂಬತ್ತೆಂಟು. ಉಳಿದವರೆಲ್ಲರಿಗೂ ಉತ್ತರ ಪತ್ರಿಕೆ ಕೊಟ್ಟರೂ ನನ್ನನ್ನು ಕರೆಯಲಿಲ್ಲ. ಟೇಬಲ್ ಮೇಲೆ ಒಂದೇ ಒಂದು ಉತ್ತರ ಪತ್ರಿಕೆ ಉಳಿದಿತ್ತು. ಆಗ ಅದು ನನ್ನದೇ ಎಂಬ ಯೋಚನೆ ಬರಲಿಲ್ಲ. ಕಡೆಗೆ ನನ್ನನ್ನು ಕರೆದರು ‘ನೂರಕ್ಕೆ ನೂರು ಅಂಕ’ ಎಂದು ಮೇಷ್ಟ್ರು ಘೊಷಿಸಿದಾಗ ಎಲ್ಲರೂ ಚಪ್ಪಾಳೆ ತಟ್ಟಿದರು.

    ಭೋಜನವಿರಾಮ ಸಮಯದಲ್ಲಿ ಓಡುತ್ತ ಮನೆಗೆ ಬಂದೆ. ಅಮ್ಮ ಇರಲಿಲ್ಲ. ಅಮ್ಮಮ್ಮ ಪಕ್ಕದ ಮನೆಯಾಕೆ ಜೊತೆ ಮಾತನಾಡುತ್ತಿದ್ದರು. ಆಯಾಸಪಡುತ್ತ ನನ್ನ ಉತ್ತರಪತ್ರಿಕೆ ತೋರಿಸಿ ‘ಗಣಿತದಲ್ಲಿ ನೂರಕ್ಕೆ ನೂರು’ ಎಂದೆ. ಆಕೆ ಬಹಳ ಕ್ಯಾಷುವಲ್ಲಾಗಿ ‘ಹಾಗೇನು? ಅಡುಗೆ ಮಾಡಿಟ್ಟಿದ್ದೀನಿ. ಹೋಗಿ ಊಟ ಮಾಡು’ ಎಂದು ಹೇಳಿ ಹರಟೆ ಮುಂದುವರಿಸಿದರು. ಆ ಘಟನೆ ನನಗಿನ್ನೂ ನೆನಪಿದೆ. ಸಣ್ಣ ಸಣ್ಣ ಘಟನೆಗಳೂ ಮಕ್ಕಳ ಮೇಲೆ ಎಷ್ಟು ಗಾಢ ಪ್ರಭಾವ ಬೀರುತ್ತವೆ ಎಂದು ತಿಳಿಸುವುದಕ್ಕೆ ಈ ಉದಾಹರಣೆ. ಹಾಗಾಗಿ, ಮಕ್ಕಳು ಯಶಸ್ಸು ಗಳಿಸಿದಾಗ ಸಂತೋಷದಿಂದ ಬೆನ್ನು ತಟ್ಟಿ.

    (ಲೇಖಕರು ಖ್ಯಾತ ಕಾದಂಬರಿಕಾರರು, ವ್ಯಕ್ತಿತ್ವ ವಿಕಸನ ತರಬೇತುದಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts