More

    ಸಲಿಂಗಿಗಳ ಹಕ್ಕುಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ನೀಡಿದ ನಿರ್ದೇಶನಗಳೇನು?

    ನವದೆಹಲಿ: ಸಲಿಂಗ ವಿವಾಹ ವಿಚಾರದಲ್ಲಿ ಇಂದು ಮಹತ್ವದ ತೀರ್ಪು ಪ್ರಕಟಿಸಿರುವ ಸುಪ್ರೀಂಕೋರ್ಟ್ ಸಲಿಂಗ ವಿವಾಹಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಎಂದು ಹೇಳಿದೆ. ಅಲ್ಲದೆ, ಇದೇ ಸಂದರ್ಭದಲ್ಲಿ ಸಲಿಂಗಿಗಳ ಹಕ್ಕುಗಳ ಬಗ್ಗೆಯೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದ್ದು, ಸಲಿಂಗಿಗಳನ್ನು ಅವರ ಲೈಂಗಿಕ ದೃಷ್ಟಿಕೋನ ಆಧಾರದ ಮೇಲೆ ತಾರತಮ್ಯ ಮಾಡದಂತೆ ನೋಡಿಕೊಳ್ಳುವಂತೆ ಸೂಚಿಸಿದೆ.

    ಸಲಿಂಗಿಗಳ ಹಕ್ಕುಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಅವರಿಗಾಗಿ ಹಾಟ್‌ಲೈನ್ ಸ್ಥಾಪಿಸಲು ಸರ್ಕಾರಕ್ಕೆ ನಿರ್ದೇಶಿಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಸಲಿಂಗಕಾಮ ಎಂಬುದು ಯುಗಗಳಿಂದಲೂ ತಿಳಿದಿರುವ ನೈಸರ್ಗಿಕ ವಿದ್ಯಮಾನವಾಗಿದೆ ಎಂದು ಹೇಳಿದರು.

    ಪೊಲೀಸರಿಗೂ ಸೂಚನೆ
    ಇದಿಷ್ಟೇ ಅಲ್ಲದೆ, ಸಲಿಂಗ ಜೋಡಿಯ ಸಂಬಂಧದ ವಿಚಾರಚಾಗಿ ಅವರ ವಿರುದ್ಧ ಎಫ್​ಐಆರ್​ ದಾಖಲಿಸುವ ಮುನ್ನ ಪ್ರಾಥಮಿಕ ತನಿಖೆಯನ್ನು ನಡೆಸಬೇಕೆಂದು ಪೊಲೀಸರಿಗೆ ಡಿವೈ ಚಂದ್ರಚೂಡ್ ಹೇಳಿದರು. ಅಲ್ಲದೆ, ಕೇವಲ ಅವರ ಲೈಂಗಿಕ ಗುರುತಿನ ಬಗ್ಗೆ ವಿಚಾರಿಸಲು ಪೊಲೀಸ್ ಠಾಣೆಗೆ ಕರೆಸಿಕೊಳ್ಳುವ ಮೂಲಕ ಸಲಿಂಗ ಸಮುದಾಯಕ್ಕೆ ಯಾವುದೇ ಕಿರುಕುಳ ನೀಡಬಾರದು ಎಂದರು.

    ಸಲಿಂಗ ಸಮುದಾಯದ ಜನರು ತಮ್ಮ ಕುಟುಂಬಗಳಿಗೆ ಮರಳಲು ಅಥವಾ ಯಾವುದೇ ಹಾರ್ಮೋನ್ ಚಿಕಿತ್ಸೆಗೆ ಒಳಗಾಗುವಂತೆ ಒತ್ತಾಯಿಸುವಂತಿಲ್ಲ. ಲಿಂಗ ಬದಲಾವಣೆಯ ಕಾರ್ಯಾಚರಣೆಗೆ ಅಂತರ್ ಲಿಂಗ ಮಕ್ಕಳನ್ನು ಬಲವಂತಪಡಿಸದಂತೆ ನೋಡಿಕೊಳ್ಳಬೇಕು ಎಂದು ಸರ್ಕಾರವನ್ನು ಕೇಳಿದರು. ಅಲ್ಲದೆ, ಪ್ರತಿಯೊಬ್ಬರಿಗೂ ತಮ್ಮ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕಿದೆ, ಸರ್ಕಾರವು ಸಲಿಂಗ ಸಂಬಂಧಗಳಿಗೆ ಕಾನೂನು ಸ್ಥಾನಮಾನ ನೀಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಲಿಂಗ ದಂಪತಿಗೆ ತಾರತಮ್ಯ ಮಾಡದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಇದನ್ನೂ ಓದಿ: ಲೈಂಗಿಕ ಕಿರುಕುಳ ಪ್ರಕರಣ; ಗುಣತಿಲಕೆ ಮೇಲಿನ ನಿಷೇಧವನ್ನು ಹಿಂಪಡೆದ ಶ್ರೀಲಂಕಾ ಕ್ರಿಕೆಟ್

    ಇಂದಿನ ತೀರ್ಪು
    ಭಾರತದಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ಪ್ರಕಟಿಸಿದ್ದು, ಸಲಿಂಗ ವಿವಾಹಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಲೈಂಗಿಕ ದೃಷ್ಟಿಕೋನದ ಆಧಾರದ ಮೇಲೆ ಹಕ್ಕನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಸಲಿಂಗ ವಿವಾಹಕ್ಕೆ ಒಪ್ಪಿಗೆ ನೀಡುತ್ತಿಲ್ಲ ಎಂಬ ಕಾರಣದಿಂದ ವಿಶೇಷ ವಿವಾಹ ಕಾಯ್ದೆಯನ್ನು ರದ್ದುಪಡಿಸಲು ಸಾಧ್ಯವಿಲ್ಲ. ಸಲಿಂಗ ವಿವಾಹ ಮಾನ್ಯತೆಯ ವಿಚಾರದಲ್ಲಿ ಸಂಸತ್ತು ತೀರ್ಮಾನಿಸಬೇಕು. ಹೊಸ ವಿವಾಹ ವ್ಯವಸ್ಥೆಯನ್ನು ರಚಿಸುವಂತೆ ಸಂಸತ್ತು ಅಥವಾ ಸರ್ಕಾರವನ್ನು ನಾವು ಒತ್ತಾಯಿಸಲು ಸಾಧ್ಯವಿಲ್ಲ. ವಿಶೇಷ ವಿವಾಹ ಕಾಯ್ದೆಯ (SMA) ಸೆಕ್ಷನ್ 4 ಸಲಿಂಗ ದಂಪತಿಗಳನ್ನು ಒಳಗೊಂಡಿಲ್ಲ ಎಂಬ ಕಾರಣಕ್ಕೆ ಅಸಾಂವಿಧಾನಿಕ ಎಂದು ಪರಿಗಣಿಸಲಾಗುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಹೇಳಿದ್ದು, ಸದ್ಯ ಸಲಿಂಗ ವಿವಾಹದ ನಿರ್ಧಾರವೂ ಕೇಂದ್ರ ಸರ್ಕಾರದ ಅಂಗಳದಲ್ಲಿದೆ.

    ವಿಶ್ವದ 34 ದೇಶಗಳಲ್ಲಿ ಸಲಿಂಗಕಾಮಿ ವಿವಾಹಗಳನ್ನು ಗುರುತಿಸಲಾಗಿದೆ. ಇದರಲ್ಲಿ ಕೆನಡಾ, ಅಮೆರಿಕ, ಬ್ರೆಜಿಲ್, ಅರ್ಜೆಂಟೀನಾ, ಬ್ರಿಟನ್, ಜರ್ಮನಿ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮುಂತಾದ ದೇಶಗಳು ಸೇರಿವೆ. (ಏಜೆನ್ಸೀಸ್​)

    ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಇಲ್ಲ: ಸುಪ್ರೀಂ ಕೋರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts