More

    ಹಸಿತ್ಯಾಜ್ಯ ಗೊಬ್ಬರ ತಯಾರಿ ಯಶಸ್ಸು

    ಅನ್ಸಾರ್ ಇನೋಳಿ ಉಳ್ಳಾಲ

    ಕೃಷಿಕರೊಬ್ಬರ ಸಹಕಾರದಿಂದ ಸೋಮೇಶ್ವರ ಪುರಸಭೆ ಪರ್ಯತ್ತೂರಿನಲ್ಲಿ ಹಸಿತ್ಯಾಜ್ಯ ನಿರ್ವಹಣೆಗೆ ಮುಂದಾಗಿದ್ದು, ಯಶಸ್ಸು ಪಡೆದಿದೆ.

    2019ರಲ್ಲಿ ಸೋಮೇಶ್ವರ ಪುರಸಭೆಯಿಂದ ಮೊದಲ ಸಲ ಘನತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಸುವ ಘಟಕ ನಿರ್ಮಾಣವಾಗಿತ್ತು. ಆ ವೇಳೆ ಜಮೀನು ಕೊರತೆ, ಸ್ಥಳೀಯರಿಂದ ಅಸಹಕಾರ ಎದುರಾಗಿತ್ತು. ನಂತರ ಕುಂಪಲ ನಿಸರ್ಗ ಲೇಔಟ್‌ನಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಅವಕಾಶ ಸಿಕ್ಕಿದ್ದು, ಬೆಡ್, ಸಿಮೆಂಟ್ ಬಿನ್‌ಗಳನ್ನು ಅಳವಡಿಸಿ, ತಜ್ಞರ ಸಹಕಾರದಲ್ಲಿ ಘಟಕ ಸ್ಥಾಪಿಸಲಾಗಿತ್ತು. ಇಲ್ಲಿನ 150 ಮನೆಗಳ ಹಸಿ ಕಸವನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸಲಾಗಿತ್ತು. ಆದರೆ ಮೇಲ್ಛಾವಣಿ ಅಳವಡಿಸದ ಕಾರಣ ಮಳೆಗಾಲದಲ್ಲಿ ಸಮಸ್ಯೆ ಎದುರಾದರೂ ಸ್ಥಳೀಯರ ಸಹಕಾರದಿಂದ ಸಮಸ್ಯೆ ನಿವಾರಿಸಲಾಗಿದೆ.

    ಕಳೆದ ಜುಲೈನಲ್ಲಿ ಪರ್ಯತ್ತೂರಿನಲ್ಲಿ ಇನ್ನೊಂದು ಘಟಕ ಸ್ಥಾಪಿಸಲಾಗಿದೆ. ಇದಕ್ಕೆ ಸ್ಥಳೀಯರಾದ ಪುರುಷೋತ್ತಮ ಗಟ್ಟಿ ಮನೆಯೆದುರಿನ ತೋಟದಲ್ಲಿ ಜಮೀನು ನೀಡಿದ್ದಾರೆ. ವೈಜ್ಞಾನಿಕವಾಗಿ ಘಟಕ ನಿರ್ವಹಿಸಲಾಗುತ್ತಿದ್ದು, ಜಮೀನು ಸಿಕ್ಕರೆ ಇನ್ನೂ ಘಟಕಗಳನ್ನು ಹೆಚ್ಚಿನ ಸ್ಥಾಪಿಸುವುದು, ಇಲ್ಲವೇ ಪ್ರತಿಯೊಬ್ಬರ ಮನೆಯಲ್ಲೇ ಹಸಿತ್ಯಾಜ್ಯ ನಿರ್ವಹಣೆಗೆ ಬೆಂಬಲ ನೀಡಲು ಪುರಸಭೆ ಮುಂದಾಗಿದೆ.

    ಕೆಜಿಗೆ 8 ರೂ., ಎರಡು ಟನ್ ಮಾರಾಟ: ಈ ಘಟಕಗಳ ನಿರ್ವಹಣೆ, ಮನೆಗಳಿಗೆ ತ್ಯಾಜ್ಯ ಸಂಗ್ರಹಿಸಲು ಹೊರಗುತ್ತಿಗೆ ನೀಡಲಾಗಿದೆ. ಪ್ರತಿದಿನ ಆರು ಪೌರ ಕಾರ್ಮಿಕರು ಎರಡು ವಾಹನಗಳಲ್ಲಿ ಮೂರು ಟನ್ ಹಸಿಕಸ ಪ್ರತಿದಿನ ಸಂಗ್ರಹಿಸುತ್ತಿದ್ದಾರೆ. ವಾರಕ್ಕೊಮ್ಮೆ ಒಣಕಸ ಮತ್ತು ಉಳಿದ ದಿನಗಳಲ್ಲಿ ಹಸಿಕಸ ಸಂಗ್ರಹ ವಿಂಗಡಿಸಲಾಗುತ್ತಿದೆ. ಈಗಾಗಲೇ ಎರಡು ಟನ್ ಗೊಬ್ಬರ ತಯಾರಿಸಲಾಗಿದ್ದು, ಕೆ.ಜಿ.ಗೆ 8 ರೂಪಾಯಿಯಂತೆ ಮಾರಾಟ ಮಾಡಲಾಗಿದೆ. ಜತೆಗೆ ಪುರಸಭೆ ಆವರಣದಲ್ಲಿ ತರಕಾರಿ ಬೆಳೆಗೂ ಬಳಸಲಾಗಿದೆ.

    45 ದಿನಗಳಲ್ಲೇ ಗೊಬ್ಬರ ರೆಡಿ: ಹಸಿ ಕಸವನ್ನು ಮೊದಲಿಗೆ ಸಿಮೆಂಟಿನ ಬಿನ್‌ಗಳಿಗೆ ಹಾಕಲಾಗುತ್ತದೆ. ಬಳಿಕ ದುರ್ವಾಸನೆ ತಡೆಯಲು ರಾಸಾಯನಿಕ ಸಿಂಪಡಿಸಲಾಗುತ್ತದೆ. ಇದಕ್ಕೆ ತೆಂಗಿನಸಿಪ್ಪೆಯ ಹುಡಿಯನ್ನೂ ಮಿಶ್ರಣ ಮಾಡಲಾಗುತ್ತದೆ. ಪ್ರಸ್ತುತ 14 ಬಿನ್‌ಗಳನ್ನು ಪರ್ಯತ್ತೂರಿನಲ್ಲಿ ಬಳಸಲಾಗಿದ್ದು, ಇದರಿಂದ 1.50 ಟನ್ ಗೊಬ್ಬರ ತಯಾರಿಸಲಾಗುತ್ತದೆ. ಅಂತಿಮವಾಗಿ ಇದನ್ನು ಸೋಸಿ ಪ್ಯಾಕೆಟ್ ಮಾಡಿ ಮಾರಾಟ ಮಾಡಲಾಗುತ್ತದೆ. ಈ ಪ್ರಕ್ರಿಯೆಗೆ 45 ದಿನ ಬೇಕಾಗುತ್ತದೆ. ಈ ಗೊಬ್ಬರ ದುರ್ವಾಸನೆ ಇರುವುದಿಲ್ಲ. ಇಂತಹ ಗೊಬ್ಬರ ಮನೆ ಟೆರೇಸ್, ಫ್ಲಾೃಟ್‌ಗಳಲ್ಲೂ ತಯಾರಿಸಿ ಕೈತೋಟ, ತರಕಾರಿಗೆ ಬೆಳೆಸಬಹುದು.

    ಮೊದಲ ಘಟಕದಲ್ಲಿ ಮಳೆಗಾಲದಲ್ಲಿ ಸ್ವಲ್ಪ ಸಮಸ್ಯೆ ಆಗಿತ್ತು, ಅದರ ಅನುಭವದ ಮೇರೆಗೆ ಎರಡನೇ ಘಟಕ ಆರಂಭಿಸಲಾಗಿದೆ. ಘಟಕ ಆರಂಭಕ್ಕೆ ಜಮೀನು ಸಮಸ್ಯೆ ಇದ್ದು ಪುರುಷೋತ್ತಮ ಗಟ್ಟಿ ಸ್ವಂತ ಜಮೀನು ನೀಡಿದ್ದಾರೆ. ಮುಂದಕ್ಕೆ ಮನೆ, ಫ್ಲ್ಯಾಟ್‌ಗಳಲ್ಲೇ ಹಸಿತ್ಯಾಜ್ಯ ನಿರ್ವಹಣೆ ಗುರಿ ಇದೆ. ಜಮೀನು ಇದ್ದವರು ತಮ್ಮಲ್ಲೆ ಗೊಬ್ಬರ ತಯಾರಿಗೆ ಮುಂದಾದರೆ ಪುರಸಭೆ ಸಂಪೂರ್ಣ ಸಹಕಾರ ನೀಡಲಿದೆ.

    ವಾಣಿ ವಿ.ಆಳ್ವ
    ಮುಖ್ಯಾಧಿಕಾರಿ, ಸೋಮೇಶ್ವರ ಪುರಸಭೆ

    ಮನೆ, ಹೋಟೆಲ್‌ಗಳಲ್ಲಿ ಸಂಗ್ರಹವಾಗುವ ತ್ಯಾಜ್ಯ ರಸ್ತೆಬದಿ, ಸಾರ್ವಜನಿಕ ಸ್ಥಳದಲ್ಲಿ ಬಿಸಾಡಿ ಪರಿಸರ ಹಾಳು ಮಾಡುವ ಬದಲು ಮರುಬಳಕೆಗೆ ಆಗಲಿ ಎನ್ನುವ ನೆಲೆಯಲ್ಲಿ ಪುರಸಭೆಯ ಮನವಿ ಮೇರೆಗೆ ಜಮೀನು ನೀಡಲಾಗಿದೆ, ಇದರೊಂದಿಗೆ ಹಸಿತ್ಯಾಜ್ಯ ನಿರುಪಯುಕ್ತವಲ್ಲ ಎನ್ನುವ ಸಂದೇಶವೂ ನೀಡಲಾಗುತ್ತಿದೆ.

    ಪುರುಷೋತ್ತಮ ಗಟ್ಟಿ
    ಜಮೀನು ದಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts