More

    ಶಿಲೆಕಲ್ಲು ಗಣಿಗೆ ನಡುಗಿದೆ ಘಟ್ಟ

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

    ಅತಿ ಸೂಕ್ಷ್ಮ ಪರಿಸರ ವಲಯ… ಸುರಕ್ಷಿತ ಮೂಕಾಂಬಿಕಾ ಅಭಯಾರಣ್ಯ.. ಸೌಪರ್ಣಿಕಾ ಏತ ನೀರಾವರಿ ಆಣೆಕಟ್ಟು, ಕೆಳಭಾಗದಲ್ಲಿ ಚೆಕ್ ಡ್ಯಾಮ್, ನಿತ್ಯಹರಿದ್ವರ್ಣದ ಕಾಡು, ವನ್ಯಜೀವಿಗಳ ಆವಾಸ, ಗೂಡು ಕಟ್ಟಿರುವ ಪಕ್ಷ ಸಂಕುಲ.. ಇಂಥ ಜಾಗದಲ್ಲಿ ಗಣಿಗಾರಿಕೆಗೆ ಅವಕಾಶವೇ ಇಲ್ಲ.

    ಆದರೂ ನೀರವ ರಾತ್ರಿಯಲ್ಲಿ ಶಿಲೆಕಲ್ಲು ಸ್ಪೋಟಿಸುವ ಭಾರಿ ಸದ್ದಿಗೆ ಪರಿಸರದ ಮನೆಗಳು ಗಡಗಡ ನಡುಗಿದರೆ, ಗೂಡಲ್ಲಿ ಕೂತ ಪಕ್ಷಿಗಳು ದಿಕ್ಕಪಾಲಾಗಿ ಹಾರುತ್ತವೆ. ವನ್ಯಜೀವಗಳ ರೋಧನದಿಂದ ಮಲಗಿದವರಿಗೆ ನಿದ್ರಾಭಂಗ. ಶಿಲೆಕಲ್ಲು ಸ್ಪೋಟಕ್ಕೆ ನಾಲ್ಕಾರು ಕಿ. ಮೀ ವ್ಯಾಪ್ತಿಯಲ್ಲಿ ಭೂಮಿ ನಡುಗಿದ ಅನುಭವ. ಸ್ಪೋಟದ ಅದರುವಿಕೆಗೆ ಅಣೆಕಟ್ಟು ಏನಾದರೂ ಒಡೆದರೆ ಹತ್ತಾರು ಮನೆಗಳು, ಅಣೆಕಟ್ಟು ಪ್ರದೇಶ ಜಲಪ್ರಳಯಕ್ಕೆ ಕೊಚ್ಚಿ ಹೋಗಲಿದೆ. ಇಂಥ ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿ ಗಣಿಗಾರಿಕೆ ಪರವಾನಗಿ ಹೇಗೆ ನೀಡಲಾಗಿದೆ ಎಂಬುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ಬೈಂದೂರು ತಾಲೂಕಿನ ಇಡೂರು ಕುಂಜ್ಞಾಡಿ ಎದುರುಬೈಲು ಎಂಬಲ್ಲಿ ನಡೆಯುತ್ತಿರುವ ಶಿಲೆಕಲ್ಲು ಗಣಿಗಾರಿಕೆಗಾಗಿ ರೂಪಿಸಿದ ನಿಯಮಗಳು ಸರ್ಕಾರ ನಿಗದಿಪಡಿಸಿದ ನಿಯಮಗಳಿಗೆ ತದ್ವಿರುದ್ದವಾಗಿದೆ. ಪಶ್ಚಿಮ ಘಟ್ಟದ ತಪ್ಪಲು, ಮೂಕಾಂಬಿಕಾ ಅಭಯಾರಣ್ಯದ ಬುಡದಲ್ಲಿ ಶಿಲೆಕಲ್ಲು ಎಬ್ಬಿಸಿ, ಘಟ್ಟದ ಅಸ್ತಿತ್ವಕ್ಕೆ ಆಪಾಯ ತರುವ ಪ್ರಯತ್ನ ನಡೆಯುತ್ತಿದೆ. ಇಲ್ಲಿ ಗಣಿಗಾರಿಕೆಗೆ ಯಾವ ಮಾನದಂಡದಲ್ಲಿ ಪರವಾನಗಿ ನೀಡಲಾಗಿದೆ ಎಂಬುದನ್ನು ಗಣಿ ಇಲಾಖೆಯೇ ಸ್ಪಷ್ಟಪಡಿಸಬೇಕು. ಕೃಷಿ ಹಿನ್ನೆಲೆಯಲ್ಲಿ ಶಿಲೆಕಲ್ಲು ಕ್ವಾರಿಗೆ ಪರವಾನಗಿ ಕೊಟ್ಟರೂ ಭೂಮಿಗಿಂತ 5 ಮೀಟರ್ ಆಳಕ್ಕೂ ಅಧಿಕ ಕಲ್ಲು ತೆಗೆಯುವಂತಿಲ್ಲ. ಎದುರಬೈಲಲ್ಲಿ ಶಿಲೆಕಲ್ಲು ತೆಗೆದ ದೊಡ್ಡ ಕೆರೆಯೇ ನಿರ್ಮಾಣವಾಗಿದೆ. ಒಂದು ಬಾರಿ ಹತ್ತಾರು ಗುಳಿಗಳನ್ನುಸ್ಪೋಟಿಸುವುದರಿಂದ ಇಡೀ ಪರಿಸರ ಅದರುತ್ತದೆ ದೊಡ್ಡ ಶಬ್ದದೊಂದಿಗೆ. ಶಿಲೆಕಲ್ಲು ಗಣಿ ನಡೆಸುವವರು ಜಾಗ ಪಟ್ಟಾ ಎನ್ನುತ್ತಿದ್ದರೂ ಇಡೂರು ಕುಂಜ್ಞಾಡಿ ಗ್ರಾಪಂ ಶಿಲೆಕಲ್ಲು ಗಣಿ ನಡೆಯುವ ಜಾಗ ಕುಮ್ಕಿ ಎಂದು ಹೇಳಿದೆ.

    ತಡವಾಗಿ ಎಚ್ಚೆತ್ತ ಗ್ರಾಮ ಪಂಚಾಯಿತಿಗಳು: ನಾಡಾ, ಆಲೂರು, ಹಕ್ಲಾಡಿ ಗ್ರಾಮಗಳ ಪ್ರಮುಖ ಸಂಪರ್ಕ ಕೊಂಡಿ ಬಂಟ್ವಾಡಿ ಸೇತುವೆ. ಪ್ರತಿದಿನ ಭಾರಿ ವಾಹನಗಳಲ್ಲಿ ಕಲ್ಲು ಸಾಗಾಟ ನಡೆಸುವುದು ಬಂಟ್ವಾಡಿ ಸೇತುವೆ ಮೇಲೆ. ಸೇತುವೆ ಇಲ್ಲದ ಕಾಲದಲ್ಲಿ ನಾಡಾ ಗ್ರಾಮ ಸೇನಾಪುರ, ಹಕ್ಲಾಡಿ ಗ್ರಾಮ ವಾಸಿಗಳು ಬಂಟ್ವಾಡಿ ಹಾಗೂ ಹಕ್ಲಾಡಿ ಸ್ಟೋರ್ ಬಳಿ ದೋಣಿ ಮೂಲಕ ಕುಂದಾಪುರ ಸೇರುತ್ತಿದ್ದರು. ಆಲೂರು ಗ್ರಾಮದವರಿಗೆ ಬಂಟ್ವಾಡಿ ಮೂಲಕ ಕುಂದಾಪುರ ಹತ್ತಿರದ ದಾರಿಯಾದರೂ ಚಿತ್ತೂರು ವಂಡ್ಸೆ ಮೂಲಕ ಕುಂದಾಪುರ ಸುತ್ತಿ ಬಳಸಿ ಹೋಗುತ್ತಿದ್ದರು. ಸೇತುವೆ ಆದನಂತರ ಮೂರು ಗ್ರಾಮದ ಸಾವಿರಾರು ಜನರಿಗೆ ನೂರಾರು ವಾಹನಗಳಿಗೆ ಬಂಟ್ವಾಡಿ ಸೇತುವೆ ಸಂಪರ್ಕ ಕೊಂಡಿಯಾಗಿದೆ. ಪ್ರತಿದಿನ 25 ಬಸ್ ಇದೆ. ಮೂರು ದಶಕದ ಹಿಂದೆ ವಕೀಲ ಕೃಷ್ಣಪ್ಪ ಶೆಟ್ಟಿ ಪ್ರಯತ್ನದಲ್ಲಿ ಬಂಟ್ವಾಡಿ ಸೇತುವೆ ಆಗಿದ್ದು, ಈಗ ಭಾರಿ ವಾಹನಗಳ ಸಂಚಾರಕ್ಕೆ ಸೇತುವೆ ಅದುರುತ್ತಿದೆ. ಸೇತುವೆ 16 ಟನ್ ಸಾಮರ್ಥ್ಯ ಹೊಂದಿದ್ದು, ಶಿಲೆಕಲ್ಲು ಸಾಗಿಸುವ ಭಾರೀ ವಾಹನದಲ್ಲಿ 40ರಿಂದ 50 ಟನ್ ಶಿಲೆಕಲ್ಲು ಸಾಗಾಟ ನಡೆಯುತ್ತದೆ. ಅಧಿಕ ಭಾರದ ಲಾರಿ ಹೀಗೆ ಸಂಚರಿಸಿದರೆ, ಸೇತುವೆ ಅಸ್ತಿತ್ವಕ್ಕೆ ಅಪಾಯವಿದೆ. ಸೇತುವೆ ಕುಸಿದರೆ ಆಲೂರು, ನಾಡಾ, ಹಕ್ಲಾಡಿ ಗ್ರಾಮಗಳು 50 ವರ್ಷ ಹಿಂದಕ್ಕೆ ಸರಿಯಲಿವೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳು ಭಾರಿ ವಾಹನ ಸಂಚಾರದ ಪರಿಣಾಮದ ಬಗ್ಗೆ ನಿರ್ಣಯ ಮಂಡಿಸಿ, ಲೋಕೋಪಯೋಗಿ ಇಲಾಖೆ, ಜಿಲ್ಲಾಡಳಿತ ಹಾಗೂ ಗಣಿ ಇಲಾಖೆಗೆ ಸಲ್ಲಿಸಲು ಸಿದ್ಧವಾಗಿವೆ.

    ಇಡೂರು -ಕುಂಜ್ಞ್ಞಾಡಿ ಗ್ರಾಮ ಎದುರುಬೈಲು ಶಿಲೆಕಲ್ಲು ಕ್ವಾರಿ ಕೃಷಿ ಹಿನ್ನೆಲೆಯಲ್ಲಿ ಪರವಾನಗಿ ಪಡೆದಿದ್ದು, ಪ್ರತಿದಿನ 10 ಲೋಡ್ ಶಿಲೆಕಲ್ಲು ಸಾಗಾಟಕ್ಕೆ ಅನುಮತಿ ಪಡೆದಿದ್ದಾರೆ. ರಾತ್ರಿ ಕಲ್ಲು ಸಾಗಾಟ, ಅಧಿಕ ಕಲ್ಲು ಸಾಗಾಟ, ರಾತ್ರಿ ಸ್ಪೋಟ ಮಾಡುವುದರ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಕ್ರಮ ಮಾಡಿದರೆ ಪರವಾನಗಿ ರದ್ದು ಮಾಡುವ ಜೊತೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ.
    ಮಹೇಶ್, ಹಿರಿಯ ಅಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ

    ಅತಿಸೂಕ್ಷ್ಮ ಪರಿಸರ ವಲಯದಲ್ಲಿ ಗಣಿಗಾರಿಕೆ ನಡೆಸುವುದಿರಲಿ ಸ್ಪೋಟಕ್ಕೂ ಅವಕಾಶ ಇಲ್ಲ. ತಕ್ಷಣ ಗಣಿಗಾರಿಕೆ ಇಲಾಖೆಯಿಂದ ಶಿಲೆಕಲ್ಲು ಗಣಿ ಬಗ್ಗೆ ವರದಿ ತರಿಸಿ ಅಧಿಕಾರಿಗಳ ಅಲ್ಲಿನ ಸ್ಥಿತಿಗತಿ, ಪರವಾನಗಿ ಕೊಟ್ಟ ರೀತಿಯ ಬಗ್ಗೆ ಪರಿಶೀಲನೆ ಮಾಡುತ್ತೇವೆ. ನಿಯಮ ಉಲ್ಲಂಘಿಸಿದ್ದರೆ ಕ್ರಮದ ಜೊತೆ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಹೇಗೆ ಪರವಾನಗಿ ನೀಡಲಾಗಿದೆ ಎಂಬ ಮಾಹಿತಿ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ.
    ಕೆ.ರಾಜು, ಉಪವಿಭಾಗಾಧಿಕಾರಿ, ಕುಂದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts