More

    ಪೊಲೀಸರ ತೂಕ ಇಳಿಕೆ ರಾಜ್ಯವ್ಯಾಪಿ ಶಿಬಿರ

    ಮಂಗಳೂರು: ಪೊಲೀಸ್ ಕಮಿಷನರೇಟ್ ಮಾದರಿಯಲ್ಲೇ ಪೊಲೀಸರ ದೈಹಿಕ ಸಾಮರ್ಥ್ಯ ವರ್ಧನೆ ಶಿಬಿರವನ್ನು ರಾಜ್ಯದ ಇತರ ಕಡೆಗಳಿಗೂ ವಿಸ್ತರಿಸುವ ಯೋಜನೆ ಇದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

    ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಒಂದು ತಿಂಗಳಿನಿಂದ ನಡೆದ ದೈಹಿಕ ಸಾಮರ್ಥ್ಯ ವರ್ಧನೆ ಹಾಗೂ ದೈಹಿಕ ಸದೃಢತೆ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಸೋಮವಾರ ಮಾತನಾಡಿದರು.

    ತೂಕ ಹತೋಟಿಯಲ್ಲಿಡುವ ಪ್ರಯೋಗ ಈಗಾಗಲೇ ಕೆಎಸ್‌ಆರ್‌ಪಿಯಲ್ಲಿ ಆಗಿದೆ. ಆದರೆ ಸಿವಿಲ್ ಪೊಲೀಸ್‌ನಲ್ಲಿ ಈ ವ್ಯವಸ್ಥೆ ಮಂಗಳೂರಿನಲ್ಲಿ ಯಶಸ್ವಿಯಾಗಿ ನಡೆದಿದೆ ಎಂದು ಶ್ಲಾಘಿಸಿದ ಅವರು, ಇಂತಹ ಕಾರ್ಯಾಗಾರ ರಾಜ್ಯವ್ಯಾಪಿ ನಡೆಯಬೇಕಾಗಿದೆ. ಶೀಘ್ರದಲ್ಲೇ ಈ ಕುರಿತು ಆದೇಶ ಹೊರಡಿಸುವುದಾಗಿ ಹೇಳಿದರು.
    ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮಾತನಾಡಿ, ಮಾ.1ರಿಂದ 29 ದಿನಗಳ ಕಾಲ ಕಾರ್ಯಾಗಾರ ನಡೆಸಲಾಗಿದ್ದು, 70 ಕೆ.ಜಿ.ಗಿಂತ ಅಧಿಕ ತೂಕದ 26 ಮಹಿಳಾ ಪೊಲೀಸರು, 90 ಕೆ.ಜಿಗಿಂತ ಅಧಿಕ ತೂಕದ 50 ಮಂದಿ ಪುರುಷ ಪೊಲೀಸರು ಭಾಗವಹಿಸಿದ್ದರು. ಪ್ರತಿದಿನ ಯೋಗ, ವ್ಯಾಯಾಮ, ಸಂತುಲಿತ ಆಹಾರ ಕ್ರಮ, ವೇಗದ ನಡಿಗೆ ಇತ್ಯಾದಿ ಚಟುವಟಿಕೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರದಲ್ಲಿ ಭಾಗವಹಿಸಿದವರು 1ರಿಂದ 10.40 ಕೆ.ಜಿ.ವರೆಗೆ ತೂಕ ಇಳಿಕೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

    ಶಾಸಕ ಡಾ.ಭರತ್ ಶೆಟ್ಟಿ, ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ ಗಾಂವ್ಕರ್, ಪತಂಜಲಿ ಯೋಗ ಸಮಿತಿಯ ಪ್ರಭಾರಿ ಲಾಲ್‌ಜಿ, ಉಪ ಪ್ರಭಾರಿ ರಾಜೇಶ್, ಫಾದರ್ ಮುಲ್ಲರ್ ಸಂಸ್ಥೆಯ ಫಾ.ರಿಚರ್ಡ್ ಮತ್ತಿತರರಿದ್ದರು.

     ಭಾನುಪ್ರಕಾಶ್ ಟಾಪರ್: ಪೊಲೀಸರ ದೈಹಿಕ ಸದೃಢತೆ ಕಾರ್ಯಾಗಾರದಲ್ಲಿ 10.40 ಕೆ.ಜಿ. ತೂಕ ಇಳಿಸುವ ಮೂಲಕ ಎಆರ್‌ಎಸ್‌ಐ ಭಾನುಪ್ರಕಾಶ್ ಎಲ್ಲರಿಗಿಂತ ಗರಿಷ್ಠ ಸಾಧನೆ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಉಳಿದಂತೆ 4 ಮಂದಿ 9 ಕೆ.ಜಿ.ಗೂ ಅಧಿಕ ತೂಕ ಇಳಿಸಿಕೊಂಡರೆ, 18 ಮಂದಿ 7ರಿಂದ 9 ಕೆ.ಜಿ, 44 ಮಂದಿ 4ರಿಂದ 6 ಕೆ.ಜಿ, 9 ಮಂದಿ 1ರಿಂದ 3 ಕೆ.ಜಿ ತೂಕ ಇಳಿಸಿದ್ದಾರೆ ಎಂದು ಡಿಸಿಪಿ ಹರಿರಾಂ ಶಂಕರ್ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts