ಗಂಗಾವತಿ: ನಗರದ ಆರಾಧ್ಯದೈವ ಶ್ರೀಚನ್ನಬಸವ ಶಿವಯೋಗಿಗಳ 76ನೇ ವರ್ಷದ ಪುಣ್ಯಸ್ಮರಣೋತ್ಸವ ನಿಮಿತ್ತ ಶಾಸ್ತ್ರೋಕ್ತವಾಗಿ ಜೋಡು ರಥೋತ್ಸವ ಶನಿವಾರ ಸರಳ ರೀತಿಯಲ್ಲಿ ಆಚರಿಸಲಾಯಿತು.
ಕರೊನಾ ಮುಂಜಾಗ್ರತೆ ಕ್ರಮಗಳ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಯ್ೂ ೋಷಿಸಿದ್ದು, ರಥೋತ್ಸವ ರದ್ದುಗೊಳಿಸುವಂತೆ ಜಿಲ್ಲಾಡಳಿತ ಸೂಚಿಸಿತ್ತು. ಪುಣ್ಯಸ್ಮರಣೋತ್ಸವ ನಿಮಿತ್ತ ಕರ್ತೃ ಗದ್ದುಗೆ ಮತ್ತು ಶಿಲಾಮೂರ್ತಿಗೆ ವಿಶೇಷ ಪೂಜೆ, ಪುರಾಣ ಮಂಗಲ, ರುದ್ರಾಭಿಷೇಕ ಮತ್ತು ವಿಶೇಷ ಹೂವಿನ ಅಲಂಕಾರ ನೆರವೇರಿಸಲಾಗಿತ್ತು. ಸರ್ವಾಲಂಕೃತ ಜೋಡು ರಥೋತ್ಸವನ್ನು ಸಂಪ್ರದಾಯದಂತೆ ಸೀಮಿತ ಭಕ್ತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಎಳೆಯುವ ಮೂಲಕ ಜಾತ್ರಾಮಹೋತ್ಸವಕ್ಕೆ ತೆರೆ ಎಳೆಯಲಾಯಿತು. ಆರಂಭದಲ್ಲಿ ಶಿಲಾಮೂರ್ತಿ ದರುಶನಕ್ಕೆ ಅವಕಾಶ ನೀಡಿದ್ದರೂ, ಜನಜಂಗುಳಿ ಹೆಚ್ಚುತ್ತಿದ್ದಂತೆ ದೇವಾಲಯದ ಮೂರು ದಿಕ್ಕಿನ ದ್ವಾರಬಾಗಿಲು ಬೀಗ ಹಾಕುವ ಮೂಲಕ ನಿಯಂತ್ರಿಸಲಾಯಿತು.
ಲಘುಲಾಠಿ ಪ್ರಹಾರ: ಕರೊನಾ ಮುಂಜಾಗ್ರತೆ ಕ್ರಮ ಹಿನ್ನೆಲೆಯಲ್ಲಿ ನಗರಸಭೆ ಪೌರಾಯುಕ್ತ ಅರವಿಂದ ಜಮಖಂಡಿ ನೇತೃತ್ವದ ಅಧಿಕಾರಿಗಳ ವಿಶೇಷ ತಂಡ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಭಕ್ತರ ನಿಯಂತ್ರಣಕ್ಕೆ ದರುಶನ ಮತ್ತು ಪ್ರಸಾದ ವಿತರಣೆ ವ್ಯವಸ್ಥೆ ರದ್ದು ಮಾಡಲಾಯಿತು. ದರುಶನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದಂತೆ ನಗರ ಪಿಐ ವೆಂಕಟಸ್ವಾಮಿ ನೇತೃತ್ವದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸುವ ಮೂಲಕ ಚದುರಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ದೇವಾಲಯದ ಸುತ್ತಲಿನ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸಲಾಯಿತು.