More

    ದ.ಕ. ವೀಕೆಂಡ್ ಕರ್ಫ್ಯೂ ಜಾರಿ, ಸೋಮವಾರ ಮುಂಜಾನೆ 5 ಗಂಟೆಯವರೆಗೆ ನಿರ್ಬಂಧ

    ಮಂಗಳೂರು: ಕೋವಿಡ್ ಸೋಂಕು ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣ ಕ್ರಮವಾಗಿ ಕೇರಳ ಗಡಿಭಾಗದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿದಿನ ರಾತ್ರಿ 9ರಿಂದ ಬೆಳಗ್ಗೆ 5ರವರೆಗೆ ರಾತ್ರಿ ಕರ್ಫ್ಯೂ ಜತೆಗೆ ವಾರಾಂತ್ಯ ಕರ್ಫ್ಯೂ ಜಾರಿಯಾಗಿದ್ದು, ಆಗಸ್ಟ್ 16ರವರೆಗೆ ಮುಂದುವರಿಯಲಿದೆ.

    ಈ ಅವಧಿಯಲ್ಲಿ ಎಲ್ಲ ರೀತಿಯ ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಸಮಾರಂಭಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಮದುವೆ ಮತ್ತು ಕೌಟುಂಬಿಕ ಸಮಾರಂಭಗಳಿಗೆ ಅವಕಾಶವಿದ್ದು, 50 ಮಂದಿ ಮೀರುವಂತಿಲ್ಲ. ಅಂತ್ಯಸಂಸ್ಕಾರಗಳಲ್ಲಿ ಜನರ ಮಿತಿ 20 ಮಾತ್ರ.

    ಏನಿದೆ/ ಏನೇನಿಲ್ಲ?: ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಗ್ಗೆ 5 ತನಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಇರಲಿದೆ. ರೋಗಿಗಳು ಮತ್ತು ಸಹಾಯಕರು, ಲಸಿಕೆ ಪಡೆಯಲು ಹೋಗುವವರು ಪೂರಕ ದಾಖಲೆ ತೋರಿಸಿ ಸಂಚರಿಸಬಹುದು. ಆಹಾರ, ದಿನಸಿ, ಹಣ್ಣು-ತರಕಾರಿ, ಮೀನು- ಮಾಂಸ, ಹಾಲು, ಪ್ರಾಣಿಗಳ ಆಹಾರ ಮಳಿಗೆ, ಬೀದಿ ಬದಿ ವ್ಯಾಪಾರ, ಮದ್ಯದ ಮಳಿಗೆ (ಪಾರ್ಸೆಲ್ ಮಾತ್ರ)ಗಳಿಗೆ ಬೆಳಗ್ಗೆ 5ರಿಂದ ಮಧ್ಯಾಹ್ನ 2 ಗಂಟೆವರೆಗೆ ಅವಕಾಶವಿದೆ. ಹೋಟೆಲ್‌ಗಳಲ್ಲಿ ಆಹಾರ ಹೋಂ ಡೆಲಿವರಿ ದಿನದ 24 ಗಂಟೆ ನೀಡಬಹುದು.

    ಎಲ್ಲ ಕೇಂದ್ರ -ರಾಜ್ಯ ಸರ್ಕಾರಿ ಕಚೇರಿಗಳು, ಸ್ವಾಯತ್ತ ಸಂಸ್ಥೆಗಳ ಕಚೇರಿಗಳು ತೆರೆದಿರಲಿವೆ. ಅಗತ್ಯ ಸೇವೆಗಳನ್ನು ಒದಗಿಸುವ ಕೈಗಾರಿಕೆ, ಕಂಪನಿ, ಸಂಸ್ಥೆಗಳು, ದಿನವಿಡೀ ತೆರೆಯಲು ಅನುಮತಿ ಇದ್ದು, ಸಿಬ್ಬಂದಿ ಐಡಿ ತೋರಿಸಿ ಸಂಚರಿಸಬಹುದು. ಟೆಲಿಕಾಂ, ಇಂಟರ್ನೆಟ್ ಸೇವಾದಾರ ಸಂಸ್ಥೆಗಳ ಸಿಬ್ಬಂದಿ ಐಡಿ ತೋರಿಸಿ ಸಂಚರಿಸಬಹುದು. ಐಟಿ ಕಂಪನಿಗಳು ಅವಶ್ಯಕ ಸಿಬ್ಬಂದಿ ಮಾತ್ರ ಸಂಚರಿಸಲು ಅವಕಾಶ. ಉಳಿದವರು ವರ್ಕ್ ಫ್ರಂ ಹೋಂ ನಡೆಸಲು ಸೂಚನೆ ನೀಡಲಾಗಿದೆ.
    ಬಸ್ ಸಹಿತ ಸಾರ್ವಜನಿಕ ಸಾರಿಗೆ, ರೈಲು, ವಿಮಾನ ಸಂಚಾರಕ್ಕೂ ಅವಕಾಶ ನೀಡಲಾಗಿದೆ. ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ. ರೈಲು, ಬಸ್, ವಿಮಾನ ನಿಲ್ದಾಣಗಳಿಗೆ ಹೋಗಿ, ಬರುವ ಖಾಸಗಿ ವಾಹನಗಳು ಹಾಗೂ ಟ್ಯಾಕ್ಸಿಗಳಿಗೆ ಕೂಡ ಸಂಚರಿಸಲು ಅನುಮತಿ ನೀಡಲಾಗಿದೆ. ಆದರೆ ಪ್ರಯಾಣಿಸುವವರು ಸಂಚಾರದ ದಾಖಲೆ ಜತೆಗೆ ಇಟ್ಟುಕೊಳ್ಳಬೇಕು.

    ಧಾರ್ಮಿಕ ಕೇಂದ್ರಗಳಿಗೆ ಪ್ರವೇಶವಿಲ್ಲ: ವಾರಾಂತ್ಯದಲ್ಲಿ ಯಾವುದೇ ದೇವಾಲಯ, ಚರ್ಚ್, ಮಸೀದಿಗಳಿಗೆ ಸಾರ್ವಜನಿಕರ ಪ್ರವೇಶವಿಲ್ಲ. ಇತರ ದಿನಗಳಲ್ಲಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದೇವಸ್ಥಾನಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ತೆರೆದಿರುತ್ತದೆ, ಆದರೆ ಯಾವುದೇ ಸೇವೆಗಳಿಗೆ ಅವಕಾಶವಿಲ್ಲ. ಇತರ ಕ್ಷೇತ್ರಗಳಲ್ಲಿ ವಾರಾಂತ್ಯ ಹೊರತುಪಡಿಸಿದ ದಿನಗಳಲ್ಲಿ ಭಕ್ತರ ಭೇಟಿಗೆ ಅವಕಾಶವಿದೆ. ಜಾತ್ರೆ, ಹಬ್ಬಗಳು, ಮೆರವಣಿಗೆ ಇತ್ಯಾದಿಗಳನ್ನು ನಿಷೇಧಿಸಲಾಗಿದೆ.

    ವಿರಳ ಬಸ್ ಸಾಧ್ಯತೆ: ವೀಕೆಂಡ್ ಕರ್ಫ್ಯೂ ಸಂದರ್ಭ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆಯಾದರೂ ಈ ಅವಧಿಯಲ್ಲಿ ಕನಿಷ್ಠ ಬಸ್ ವ್ಯವಸ್ಥೆ ಇರುವ ಸೂಚನೆ ಲಭ್ಯವಾಗಿದೆ. ಕರ್ಫ್ಯೂ ಸಂದರ್ಭ ಜನರ ಓಡಾಟ ಕೂಡ ಕಡಿಮೆ ಇರುವ ಕಾರಣ ಜನರ ಆವಶ್ಯತೆಗೆ ತಕ್ಕ ಹಾಗೆ ಬಸ್‌ಗಳನ್ನು ಒದಗಿಸಲು ಕೆಎಸ್‌ಆರ್‌ಟಿಸಿ ಹಾಗೂ ಕೆನರಾ ಬಸ್ ಮಾಲೀಕರ ಸಂಘ ನಿರ್ಧರಿಸಿದೆ. ಬಸ್ ಓಡಿಸುವ ಕುರಿತು ಸ್ಥಳೀಯ ಆವಶ್ಯಕತೆ ಗಮನದಲ್ಲಿಟ್ಟು ಬಸ್ ಮಾಲೀಕರೇ ತೀರ್ಮಾನ ತೆಗೆದುಕೊಳ್ಳುವಂತೆ ಸಿಟಿ ಬಸ್ ಮಾಲೀಕರ ಸಂಘ ತನ್ನ ಸದಸ್ಯರಿಗೆ ಸೂಚಿಸಿದೆ.

    ನರ್ಸಿಂಗ್ ವಿದ್ಯಾರ್ಥಿಗಳಿಗೆ ಕ್ವಾರಂಟೈನ್: ಕೇರಳ, ಮಹಾರಾಷ್ಟ್ರದಿಂದ ಆಗಮಿಸುವ ನರ್ಸಿಂಗ್, ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು ಆರ್‌ಟಿಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರದೊಂದಿಗೆ ಆಗಮಿಸಿ, ಒಂದು ವಾರ ಕ್ವಾರಂಟೈನ್ ಆಗಿರಬೇಕು. ಏಳು ದಿನಗಳ ಬಳಿಕ ಕೋವಿಡ್ ಟೆಸ್ಟ್ ನಡೆಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts