More

    WEB EXCLUSIVE: ‘ಮ್ಯೂಸಿಯಂ ಮಾಲ್ಗುಡಿ’ಗೆ ಪ್ರವಾಸಿಗರು ಫಿದಾ: ತಿಂಗಳಲ್ಲೇ 5 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ

    ಶಿವಮೊಗ್ಗ: ಅರಸಾಳಿನ ‘ಮ್ಯೂಸಿಯಂ ಮಾಲ್ಗುಡಿ’ ಉದ್ಘಾಟನೆಯಾದ ಒಂದು ತಿಂಗಳಲ್ಲೇ ಪ್ರವಾಸಿಗರ ಮನಸೂರೆಗೊಂಡಿದೆ. ಈ ಅವಧಿಯಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದಾರೆ.

    ಶಂಕರನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಧಾರಾವಾಹಿ ಚಿತ್ರೀಕರಣಗೊಂಡ ಹೊಸನಗರ ತಾಲೂಕು ಅರಸಾಳಿನ ರೈಲ್ವೆ ನಿಲ್ದಾಣ ಆವರಣದಲ್ಲಿ ತಿಂಗಳ ಹಿಂದೆ ಆರಂಭಗೊಂಡ ‘ಮ್ಯೂಸಿಯಂ ಮಾಲ್ಗುಡಿ’ಗೆ ಪ್ರವಾಸಿಗರು ಫಿದಾ ಆಗಿದ್ದಾರೆ. ಪ್ರತಿ ದಿನ ಸುಮಾರು 150 ಮಂದಿ ಇಲ್ಲಿಗೆ ಭೇಟಿ ನೀಡಿದರೆ, ವಾರಾಂತ್ಯ ಶನಿವಾರ, ಭಾನುವಾರಗಳಲ್ಲಿ ಸರಾಸರಿ 250 ಮಂದಿ ಪ್ರವಾಸಿಗರು ವೀಕ್ಷಣೆ ಮಾಡಿದ್ದಾರೆ.

    ಕಲಾವಿದ ಜಾನ್ ದೇವರಾಜ್ ಕೈಚಳಕದಲ್ಲಿ ನಿರ್ಮಾಣವಾಗಿರುವ ‘ಮ್ಯೂಸಿಯಂ ಮಾಲ್ಗುಡಿ’ 90ರ ದಶಕವನ್ನು ನೆನಪಿಸುವಂತಿದೆ. ಹೀಗಾಗಿ ಶಿವಮೊಗ್ಗ- ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವವರನ್ನು ಆಕರ್ಷಿಸುತ್ತಿದೆ. ಪ್ರಯಾಣದಿಂದ ದಣಿದವರಿಗೆ ಒಂದು ತಾಸು ವಿಶ್ರಾಂತಿಯ ಜತೆಗೆ ಕೆಲ ಚೇತೋಹಾರಿ ಕ್ಷಣಗಳನ್ನು ಕಳೆಯಲು ಇದು ಪೂರಕ. ಇದನ್ನೂ ಓದಿ: ಡ್ರಗ್ಸ್​ ಮಾಫಿಯಾ ಪ್ರಕರಣದ ತನಿಖೆಯಲ್ಲಿ ನಾವು ಹಸ್ತಕ್ಷೇಪ ಮಾಡೋದಿಲ್ಲ: ಗೃಹ ಸಚಿವ

    ದಣಿವು ತಣಿಸುವ ಮಾಲ್ಗುಡಿ ಚಾಯ್: ಮಾಲ್ಗುಡಿ ಡೇಸ್ ಧಾರಾವಾಹಿಯ ಚಿತ್ರೀಕರಣದಲ್ಲಿ ಬಳಕೆಯಾಗಿದ್ದ ರೈಲ್ವೆ ಬೋಗಿ ಮಾದರಿಯಲ್ಲೇ ಮರದಿಂದ ಬೋಗಿಯೊಂದನ್ನು ಸಿದ್ಧಪಡಿಸಲಾಗಿದೆ. ನಾಗ್ಪುರದಿಂದ ತಯಾರಾಗಿ ಬಂದಿರುವ ಈ ಬೋಗಿಯನ್ನು ಕ್ಯಾಂಟೀನ್ ಆಗಿ ಪರಿವರ್ತಿಸಲಾಗಿದೆ.

    ಜನಶತಾಬ್ದಿ ರೈಲಿನ ಆಸನಗಳ ರೀತಿಯಲ್ಲಿ ಸಿದ್ಧಗೊಂಡಿರುವ ಇದಕ್ಕೆ ‘ಮಾಲ್ಗುಡಿ ಚಾಯ್’ ಎಂದು ಹೆಸರಿಡಲಾಗಿದೆ. ಮ್ಯೂಸಿಯಂ ಮಾಲ್ಗುಡಿಗೆ ಬರುವ ಪ್ರವಾಸಿಗರ ದಣಿವು ತಣಿಸುವ ಮಾಲ್ಗುಡಿ ಚಾಯ್ ವಿಶಿಷ್ಟ ಅನುಭವ ನೀಡುತ್ತದೆ. ಇದರೊಳಗೆ ಕುಳಿತು, ಕಾಫಿ, ಟೀ ಹೀರಿದರೆ ರೈಲಿನಲ್ಲಿ ಕುಳಿತು ಚಹಾ, ಕಾಫಿ ಸೇವಿಸಿದ ಅನುಭವವಾಗುತ್ತದೆ.

    ಮಾಲ್ಗುಡಿ-ಮಲೆನಾಡು: ಮ್ಯೂಸಿಯಂ ಮಾಲ್ಗುಡಿಯಲ್ಲಿ 80ರ ದಶಕದ ಮಾಲ್ಗುಡಿ ಡೇಸ್ ಚಿತ್ರೀಕರಣ ನೆನಪಿಸುವ ವಸ್ತುಗಳ ಸಂಗ್ರಹದ ಜತೆಗೆ ಮಲೆನಾಡಿನಲ್ಲಿ ದಶಕಗಳ ಹಿಂದೆ ಬಳಕೆಯಲ್ಲಿದ್ದ ಅನೇಕ ಪರಿಕರಗಳನ್ನು ಓರಣವಾಗಿ ಇಡಲಾಗಿದೆ. ಇವುಗಳನ್ನು ನೋಡಿದಾಗ ಕವಿಶೈಲ, ಗಡಿಕಲ್ಲಿನಲ್ಲಿರುವ ಹಂಪಿ ವಿವಿಯ ವಸ್ತು ಸಂಗ್ರಹಾಲಯ ನೆನಪಾದರೆ ಅಚ್ಚರಿಯಿಲ್ಲ.

    ಮಾಲ್ಗುಡಿ ಡೇಸ್ ನಿರ್ಮಾತೃ ಆರ್.ಕೆ ನಾರಾಯಣ್, ಆ ಕತೆಗೆ ಕಿರುತೆರೆ ರೂಪ ನೀಡಿದ ಶಂಕರ್‌ನಾಗ್, ಕೇಂದ್ರ ಬಿಂದುವಾಗಿದ್ದ ಮಾಸ್ಟರ್ ಮಂಜುನಾಥ್ ಇವರೆಲ್ಲರ ಭಾವಚಿತ್ರದೊಂದಿಗೆ, ಚಿತ್ರೀಕರಣದ ವಿವಿಧ ಹಂತಗಳನ್ನು ಸಾರುವ ಛಾಯಾಚಿತ್ರಗಳನ್ನೂ ಇರಿಸಲಾಗಿದೆ. ಇದು ಈ ಮ್ಯೂಸಿಯಂ ಮಾಲ್ಗುಡಿ ಹಾಗೂ ಮಲೆನಾಡಿನ ಬೆಸುಗೆಯಂತಿದೆ. ಇದನ್ನೂ ಓದಿ:ಪ್ರತಿಯೊಬ್ಬರ ಜಾತಕ ಕಳ್ಳರ ಈ ಬರಹದಲ್ಲಿದೆ! ನಿಮ್ಮ ಮನೆಯಲ್ಲೂ ಕಂಡರೆ ಇರಲಿ ಎಚ್ಚರ…

    ಒಂದು ತಾಸು ವೀಕ್ಷಣೆ: ದೂರದಿಂದ ಬಂದವರಿಗೆ ಮಾಲ್ಗುಡಿ ಮ್ಯೂಸಿಯಂ ನಿರಾಸೆ ಮಾಡುವುದಿಲ್ಲ. ಭರ್ತಿ ಒಂದು ತಾಸು ವೀಕ್ಷಣೆಗೆ ಇಲ್ಲುಂಟು ಅವಕಾಶ. ಪ್ರತಿಯೊಂದನ್ನೂ ನೋಡಿ, ಅರಿಯುವ ಆಸಕ್ತರಿಗೆ ಅನೇಕ ಅದ್ಭುತಗಳು ಇಲ್ಲಿ ಸಿಗುತ್ತವೆ. ತಣ್ಣಗಿನ ಪರಿಸರದಲ್ಲಿ ಕೆಲ ಹೊತ್ತು ಕಳೆಯಲು ಅಡ್ಡಿಯಿಲ್ಲ.

    ಮಾಲ್ಗುಡಿ ಸೆಲ್ಫಿ ಸ್ಪಾಟ್: ಸೆಲ್ಫಿ ಪ್ರಿಯರಿಗೆ, ಫೋಟೋ ಬಗ್ಗೆ ವಿಶೇಷ ಆಸಕ್ತಿ ಇರುವವರಿಗೆ ಮ್ಯೂಸಿಯಂ ಮಾಲ್ಗುಡಿ ಹೇಳಿ ಮಾಡಿಸಿದಂತಿದೆ. ಪ್ರವೇಶ ದ್ವಾರ, ಅದರ ಎದುರಿನ ಚಿಕ್ಕ ಕಾರಂಜಿ, ಮಾಲ್ಗುಡಿ ಚಾಯ್ ಬೋಗಿ, ಗುಹೆಯಿಂದ ಹೊರ ಬರುತ್ತಿರುವಂತೆ ನಿರ್ಮಾಣಗೊಂಡಿರುವ ರೈಲ್ವೆ ಇಂಜಿನ್‌ನ ಪ್ರತಿಕೃತಿ, ಹುಲಿ, ಟಿಕೆಟ್ ನೀಡುವ ವ್ಯಕ್ತಿಯ ಪ್ರತಿಕೃತಿಗಳು ಫೋಟೋ ಸೆಷನ್‌ಗೆ ಹೇಳಿ ಮಾಡಿಸಿದಂತಿದೆ. ಇದನ್ನೂ ಓದಿ: VIDEO: ಆಸೀಸ್ ವಿರುದ್ಧ ಗೆದ್ದು ಬೀಗಿದ ಇಂಗ್ಲೆಂಡ್ ತಂಡದ ಸಂಭ್ರಮ ಹೇಗಿತ್ತು ಗೊತ್ತಾ.?

    ಇದು ಅಗತ್ಯವಿತ್ತು: ಶಿವಮೊಗ್ಗ-ಮಂಗಳೂರು ರಸ್ತೆಯಲ್ಲಿ ಸಂಚರಿಸುವವರಿಗೆ ಸ್ವಲ್ಪ ವಿಶ್ರಾಂತಿ ಪಡೆಯುವುದಕ್ಕೆ ಪೂರಕವಾಗಿ ಹಲವು ಪ್ರವಾಸಿ ತಾಣಗಳಿವೆ. ತುಂಗಾ ಜಲಾಶಯ, ಸಕ್ರೆಬೈಲು ಆನೆ ಬಿಡಾರ, ಮಂಡಗದ್ದೆ ಪಕ್ಷಿಧಾಮವಿದೆ. ಶಿವಮೊಗ್ಗ-ರಿಪ್ಪನ್‌ಪೇಟೆ ನಡುವೆ ಸಂಚರಿಸುವವರು ಸಣ್ಣದೊಂದು ಬ್ರೇಕ್ ತೆಗೆದುಕೊಳ್ಳಲು ವಿಶೇಷ ಜಾಗದ ಅವಶ್ಯಕತೆಯೊಂದಿತ್ತು. ಅದು ‘ಮ್ಯೂಸಿಯಂ ಮಾಲ್ಗುಡಿ’ ಮೂಲಕ ಸಾಕಾರಗೊಂಡಿದೆ.

    ಶೀಘ್ರದಲ್ಲೇ ಶುಲ್ಕ ನಿಗದಿ

    ಮ್ಯೂಸಿಯಂ ಮಾಲ್ಗುಡಿಯ ನಿರ್ವಹಣೆಗೆ ಶೀಘ್ರದಲ್ಲೇ ರೈಲ್ವೆ ಇಲಾಖೆ ಶುಲ್ಕ ನಿಗದಿ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. 5 ರೂ. ಶುಲ್ಕ ನಿಗದಿಪಡಿಸಲು ತೀರ್ಮಾನಿಸಲಾಗಿದೆ. ಇದರಿಂದ ಮ್ಯೂಸಿಯಂ ನಿರ್ವಹಣೆ ಜತೆಗೆ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ನಿಖರ ಸಂಖ್ಯೆ ಅರಿಯಲು ಸಾಧ್ಯ ಎಂಬ ಕಾರಣಕ್ಕೆ ಪ್ರವೇಶ ಶುಲ್ಕ ನಿಗದಿ ಮಾಡಲಾಗುತ್ತಿದೆ.

    ಮ್ಯೂಸಿಯಂ ಆರಂಭವಾದ ದಿನದಿಂದಲೇ ಜನ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಸಂದರ್ಶಕರ ಅಭಿಪ್ರಾಯ ದಾಖಲಿಸಲು ಪ್ರತ್ಯೇಕ ಪುಸ್ತಕ ಇರಿಸಲಾಗಿದೆ. ಅವರೆಲ್ಲರ ಅನಿಸಿಕೆಗಳನ್ನು ಓದಿದಾಗ ಖುಷಿಯಾಗುತ್ತದೆ. ಮುಂದಿನ ದಿನಗಳಲ್ಲಿ ಇದೊಂದು ಉತ್ತಮ ಪ್ರವಾಸಿ ತಾಣವಾಗುವುದರಲ್ಲಿ ಆಶ್ಚರ್ಯವಿಲ್ಲ.
    | ಗೋಪಾಲಕೃಷ್ಣ,‘ಮ್ಯೂಸಿಯಂ ಮಾಲ್ಗುಡಿ’ಯ ಉಸ್ತುವಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts