More

    Web Exclusive | ಎಲ್ಲಿ ಹೋದಳು ಅಮ್ಮ?: 3 ಮರಿಗಳನ್ನು ಬಿಟ್ಟು ಹೋದ ತಾಯಿ ಹುಲಿ ಹುಡುಕಾಟದಲ್ಲಿ ಅರಣ್ಯ ಇಲಾಖೆ

    | ಕಿರಣ್ ಮಾದರಹಳ್ಳಿ ಚಾಮರಾಜನಗರ

    ಬಂಡೀಪುರ ಕಾಡಿನ ಮಧ್ಯದೊಳಗೆ ಕರುಳ ಬಳ್ಳಿಯ ಕೊಂಡಿಯನ್ನು ಕಳಚಿ ಎಲ್ಲಿ ಹೋದಳು ಅಮ್ಮ?

    ಹಸಿವ ತಾಳದ ಕಂದಮ್ಮಗಳು ಉಸಿರು ತೊರೆಯುವ ಮುನ್ನ ಬಂದು ಎದೆ ಹಾಲನುಣಿಸಬೇಕಿದ್ದ ಆ ತಾಯಿಗೆ ಏನಾದಳು?

    ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ನುಗು ವನ್ಯಜೀವಿ ವಲಯದಲ್ಲಿ ನಾಲ್ಕು ಮರಿಗಳನ್ನು ಬಿಟ್ಟು ತಾಯಿ ಹುಲಿ ಎಲ್ಲಿ ಹೋಯಿತು, ತನ್ನ ಕರುಳ ಕುಡಿಗಳನ್ನು ಹಸಿವಿನಿಂದ ಸಾಯಲು ಬಿಟ್ಟು ಏಕೆ ಹೋಯಿತು, ಮರಿಗಳನ್ನು ತೊರೆದು ಮರಳಿ ಬಾರದೂರಿಗೆ ತಾಯಿ ಹುಲಿ ಹೊರಟು ಬಿಟ್ಟಿದೆಯೇ ಎಂಬ ಪ್ರಶ್ನೆಗಳು ‘ಮೂರು ಹುಲಿ ಮರಿಗಳ ಸಾವಿನ ಪ್ರಕರಣ’ವನ್ನು ಸುತ್ತು ವರಿದಿವೆ.

    ನುಗು ವನ್ಯಜೀವಿ ವಲಯದಲ್ಲಿ ತಾಯಿ ಹುಲಿಯಿಂದ ಬೇರ್ಪಟ್ಟಿದ್ದ 2 ತಿಂಗಳ ಮೂರು ಹುಲಿ ಮರಿಗಳನ್ನು ಮಾ.28ರಂದು ಅರಣ್ಯ ಇಲಾಖೆ ಪತ್ತೆಹಚ್ಚಿತ್ತು. ಮೂರರಲ್ಲಿ ಒಂದು ಹೆಣ್ಣು ಹುಲಿ ಹಸಿವಿನಿಂದ ಬಳಲಿ ಸ್ಥಳದಲ್ಲೇ ಅಸುನೀಗಿತ್ತು. ನಿತ್ರಾಣಗೊಂಡಿದ್ದ ಉಳಿದ ಎರಡು ಮರಿಗಳನ್ನು ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಆರೈಕೆಗೆಂದು ರವಾನಿಸಿದಾಗ ಅದರಲ್ಲಿ ಒಂದು ಹೆಣ್ಣು ಹುಲಿ ಮರಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿತು. ಇನ್ನೊಂದು ಗಂಡು ಹುಲಿ ಮರಿ ಚಿಕಿತ್ಸೆ ಪಡೆಯುತ್ತಿದೆ. ಈ ಮಧ್ಯೆ ಮಾ.29ರಂದು ನುಗು ವಲಯದಲ್ಲಿ ಮತ್ತೊಂದು ಹೆಣ್ಣು ಹುಲಿ ಮರಿಯ ಮೃತದೇಹ ಪತ್ತೆಯಾಯಿತು.

    ಸಕಲ ಜೀವರಾಶಿಗಳಿಗೂ ತಾಯಿ ಪ್ರೀತಿ ಒಂದೇ. ಮಾತೃ ಮಮತೆಯ ವಿಚಾರದಲ್ಲಿ ಹುಲಿಗಳು ತನ್ನ ಮರಿಗಳನ್ನು 2ರಿಂದ 3 ವರ್ಷ ಜತೆಗಿಟ್ಟುಕೊಂಡು ಸಂರಕ್ಷಣೆ ಮಾಡುತ್ತವೆ. ಈ ವೇಳೆ ಬೇರೆ ಪ್ರಾಣಿಗಳ ದಾಳಿ ತಪ್ಪಿಸಿ, ಬೇಟೆಯಾಡುವುದನ್ನು ಹೇಳಿಕೊಟ್ಟು ಬದುಕು ಕಲಿಸೋ ಮೊದಲ ಗುರುವಾಗುತ್ತವೆ. ತಾಯಿ ಹುಲಿ ತನ್ನ ಮರಿಗಳನ್ನು ಅಷ್ಟು ಸುಲಭವಾಗಿ ಬಿಟ್ಟು ಹೋಗುವುದಿಲ್ಲ. ಆದರೆ ಹುಲಿ ಮರಿ ಗಳ ಸಾವಿನ ಪ್ರಕರಣದಲ್ಲಿ ನಡೆದಿರುವುದೇ ಬೇರೆ. ಹೀಗಾಗಿ, ತಾಯಿ ಹುಲಿ ತನ್ನ ಮರಿಗಳ ಬಳಿಗೆ ಮರಳದಿರಲು ಕಾರಣವೇನು ಅಥವಾ ತಾಯಿ ಹುಲಿಯೂ ಮೃತಪಟ್ಟಿದೆಯೇ ಎನ್ನುವ ಅನುಮಾನಗಳು ಪ್ರಾಣಿಪ್ರಿಯರಲ್ಲಿ ಕಳವಳ ಸೃಷ್ಟಿಸಿದೆ.

    ‘ಅಮ್ಮ’ನಿಗಾಗಿ ಹುಡುಕಾಟ

    ತಾಯಿ ಹುಲಿಯ ಇರುವಿಕೆ ಮತ್ತು ಮರಿಗಳನ್ನು ಬಿಟ್ಟು ಹೋಗಲು ಕಾರಣ ತಿಳಿದುಕೊಳ್ಳಲು ಅರಣ್ಯ ಇಲಾಖೆ ಮುಂದಾಗಿದೆ. ನುಗು ವನ್ಯಜೀವಿ ವಲಯದಲ್ಲಿ ಹುಲಿ ಮರಿಗಳು ಪತ್ತೆಯಾದ ಸ್ಥಳದಲ್ಲಿ ಮಾ.29ರಂದು ಕ್ಯಾಮರಾಗಳನ್ನು ಅಳವಡಿಸಲಾಗಿದೆ. ತಾಯಿ ಹುಲಿ ಮರಿಗಳನ್ನು ಹುಡುಕಿಕೊಂಡು ಬಂದರೆ ಕ್ಯಾಮರಾ ಟ್ರ್ಯಾಪ್​ನಲ್ಲಿ ಚಿತ್ರ ಸೆರೆ ಸಿಕ್ಕಿ ಅಮ್ಮನ ಇರುವಿಕೆ ಖಚಿತವಾಗುತ್ತದೆ. ಜತೆಗೆ, ಅರಣ್ಯ ಇಲಾಖೆಯ 50 ಸಿಬ್ಬಂದಿಯನ್ನು ಕೂಂಬಿಂಗ್​ಗೆ ಇಳಿಸಿ ತಾಯಿ ಹುಲಿಯನ್ನು ಹುಡುಕಲಾಗುತ್ತಿದೆ. ಮರಿಗಳನ್ನು ಬಿಟ್ಟು ತಾಯಿ ಹುಲಿ ಆಹಾರ ಅರಸಿ ಹೋಗಿ ಹಿಂದಿರುಗದೆ ಇರಬಹುದು. ಹುಲಿ ಮರಿಗಳ ಮೈ ಮೇಲೆ ಕಂಡುಬಂದಿರುವ ಉಣ್ಣೆಗಳು ತಾಯಿಯಿಂದಲೇ ರವಾನೆಯಾಗಿರಬಹುದು. ಹೀಗಾಗಿ, ತಾಯಿ ಹುಲಿಯ ಆರೋಗ್ಯ ಹದಗೆಟ್ಟಿರಲೂಬಹುದು.

    ಹುಲಿ ಮರಿಗಳು 10 ದಿನಗಳಿಂದ ಆಹಾರವಿಲ್ಲದೆ ನಿತ್ರಾಣಗೊಂಡಿದ್ದವು. ಬೇಸಿಗೆ ಹಿನ್ನೆಲೆಯಲ್ಲಿ ಹಿನ್ನೀರಿನ ಕಡೆಗೆ ಬಲಿಪ್ರಾಣಿಗಳು ವಲಸೆ ಹೋಗಿರುತ್ತವೆ. ಒಂದು ಪ್ರದೇಶವನ್ನು ವಾಸಸ್ಥಳವನ್ನಾಗಿಸಿಕೊಂಡಿರುವ ಹುಲಿ ಆಹಾರ ಅರಸಿ ಹೋದಾಗ ಬೇರೆ ಹುಲಿಗಳೊಂದಿಗೆ ಕಾದಾಟವೂ ನಡೆದಿರಬಹುದು ಎಂದು ಹೇಳಲಾಗುತ್ತಿದೆ. ಅರಣ್ಯ ಇಲಾಖೆ ನಡೆಸುತ್ತಿರುವ ಕೂಂಬಿಂಗ್​ನಲ್ಲಿ ತಾಯಿ ಹುಲಿ ಪತ್ತೆಯಾದರೆ ಸ್ಪಷ್ಟತೆ ಸಿಗಲಿದೆ.

    Web Exclusive | ಎಲ್ಲಿ ಹೋದಳು ಅಮ್ಮ?: 3 ಮರಿಗಳನ್ನು ಬಿಟ್ಟು ಹೋದ ತಾಯಿ ಹುಲಿ ಹುಡುಕಾಟದಲ್ಲಿ ಅರಣ್ಯ ಇಲಾಖೆ
    ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ನುಗು ವನ್ಯಜೀವಿ ವಲಯದಲ್ಲಿ ಹಸಿವಿನಿಂದ ಮೃತಪಟ್ಟಿದ್ದ ಹೆಣ್ಣು ಹುಲಿ ಶವಪರೀಕ್ಷೆ ನಡೆಸಿದ ಸ್ಥಳದಲ್ಲಿ ಪತ್ತೆಯಾಗಿರುವ ಹುಲಿಯ ಹೆಜ್ಜೆ ಗುರುತು.

    ಬಂದು ಹೋಗಿರುವ ಹುಲಿ ಯಾವುದು?

    ಮಾ. 28ರಂದು ನುಗು ವನ್ಯಜೀವಿ ವಲಯದಲ್ಲಿ ಮೃತಪಟ್ಟಿದ್ದ ಹೆಣ್ಣು ಹುಲಿ ಮರಿಯ ಶವಪರೀಕ್ಷೆಯನ್ನು ಅರಣ್ಯ ಇಲಾಖೆ ಸ್ಥಳದಲ್ಲೇ ನಡೆಸಿತ್ತು. ಈ ಸ್ಥಳಕ್ಕೆ ರಾತ್ರಿ ಹುಲಿಯೊಂದು ಬಂದು ಹೋಗಿರುವ ಹೆಜ್ಜೆ ಗುರುತು ಮರುದಿನ ಬೆಳಗ್ಗೆ ಪತ್ತೆಯಾಗಿದೆ. ಇದು ತಾಯಿ ಹುಲಿ ಎಂದು ಹೇಳುವುದು ಕಷ್ಟ. ಹೀಗಾಗಿ, ಬಂದು ಹೋಗಿರುವುದು ಯಾವ ಹುಲಿ ಎಂದು ತಿಳಿದುಕೊಳ್ಳಬೇಕಾಗಿದೆ. ತನ್ನ ಮರಿಗಳಿದ್ದ ಜಾಗಕ್ಕೆ ತಾಯಿ ಹುಲಿ ಮರಳಿ ಬಂದೇ ಬರುತ್ತದೆ ಎನ್ನುವ ನಂಬಿಕೆ ಮೇಲೆ ಸ್ಥಳದಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

    ತಾಯಿ ಹುಲಿಯ ಹುಡುಕಾಟಕ್ಕಾಗಿ ಕೂಂಬಿಂಗ್ ನಡೆಯುತ್ತಿದೆ. ಕ್ಯಾಮರಾ ಟ್ರ್ಯಾಪ್ ಮತ್ತು ಸಿಬ್ಬಂದಿ ನಿಯೋಜಿಸಿ ತಾಯಿ ಹುಲಿ ಪತ್ತೆಹಚ್ಚಲಾಗುತ್ತಿದೆ. ಹುಲಿ ಮರಿಗಳು ಸೋಂಕಿನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ತಾಯಿ ಹುಲಿಗೂ ಏನಾದರೂ ಆಗಿದೆಯೇ ಎಂದು ತಿಳಿದುಕೊಂಡು ಅದನ್ನು ಕಾಪಾಡಬೇಕು. ಜತೆಗೆ, ಮರಿಗಳನ್ನು ಬಿಟ್ಟುಹೋಗಿರುವುದಕ್ಕೆ ಕಾರಣವೇನು ಎಂದು ತಿಳಿಯಲು ಕಾರ್ಯಾ ಚರಣೆ ನಡೆಸಲಾಗುತ್ತಿದೆ.

    | ರವಿಕುಮಾರ್ ಎಸಿಎಫ್, ಹೆಡಿಯಾಲ ಉಪವಿಭಾಗ, ಬಂಡೀಪುರ, ಗುಂಡ್ಲುಪೇಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts