More

    Web Exclusive | ತಾಯಿ ಮಡಿಲು ಸೇರುವುದೇ ಮರಿ ಹುಲಿ?: ಅರಣ್ಯದಲ್ಲಿ ಬೇರ್ಪಟ್ಟು, ಮೈಸೂರು ಮೃಗಾಲಯದಲ್ಲಿ ಆಶ್ರಯ

    ಗುರುಪ್ರಸಾದ್ ತುಂಬಸೋಗೆ ಮೈಸೂರು

    ಬಂಡೀಪುರದ ನುಗು ವ್ಯಾಪ್ತಿಯಲ್ಲಿ ಪತ್ತೆಯಾದ ಹುಲಿ ಮರಿ, ತನ್ನ ತಾಯಿಯ ವಾತ್ಸಲ್ಯದಿಂದ ವಂಚಿತವಾಗಿ ಮೃಗಾಲಯದಲ್ಲಿ ಜೀವನ ಕಳೆಯುವಂತಾಗಿದೆ. ಅತ್ತ, ತಾಯಿ ಹುಲಿಯೂ ತನ್ನ ಕರುಳ ಕುಡಿಗಳನ್ನು ಕಳೆದುಕೊಂಡು ಅರಣ್ಯದಲ್ಲಿ ಮೂಕವೇದನೆ ಅನುಭವಿಸುವಂತಾಗಿದೆ. ಆದ್ದರಿಂದ ಅರಣ್ಯ ಇಲಾಖೆ ತಾಯಿ ಮತ್ತು ಮರಿಯನ್ನು ಒಂದೆಡೆ ಸೇರಿಸುವರೇ ಎಂಬ ನಿರೀಕ್ಷೆ ಹೆಚ್ಚಾಗಿದೆ.

    ಕಳೆದ ವಾರ ನುಗು ವಲಯದಲ್ಲಿ ಎರಡು ಹುಲಿ ಮರಿಗಳು ಜೀವಂತವಾಗಿಯೂ, ಮತ್ತೆರಡು ಹುಲಿ ಮರಿಗಳು ಮೃತಪಟ್ಟ ಸ್ಥಿತಿಯಲ್ಲೂ ಪತ್ತೆಯಾಗಿದ್ದವು. ಜೀವಂತವಾಗಿದ್ದ ಎರಡು ಮರಿಗಳನ್ನು ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಸಾಗಿಸುವಾಗ ಒಂದು ಮೃತಪಟ್ಟಿತ್ತು. ಈಗ ಒಂದು ಮರಿ ಮಾತ್ರ ಉಳಿದುಕೊಂಡಿದ್ದು, ಮೃಗಾಲಯದಲ್ಲಿ ಆರೈಕೆ ಮಾಡಲಾಗುತ್ತಿದೆ.

    ಈ ನಡುವೆ, ಕೇವಲ ಒಂದು ತಿಂಗಳ ಪ್ರಾಯದ ಮರಿಗಳನ್ನು ತಾಯಿ ಹುಲಿ ಬಿಟ್ಟು ಹೋಗಲು ಕಾರಣವೇನು? ಆಹಾರ ಸಿಗಲಿಲ್ಲವೆ? ಅಪಾಯಕ್ಕೆ ಸಿಲುಕಿತೆ? ಬೇರೆ ಸರಹದ್ದು ಹುಡುಕಿಕೊಂಡು ಹೋಯಿತೆ? ಮರಿಗಳಿಗೆ ಅನಾರೋಗ್ಯವೆಂದು ಬಿಟ್ಟು ಹೋಯಿತೆ ಎಂಬಿತ್ಯಾದಿ ಪ್ರಶ್ನೆಗಳು ಎದುರಾಗಿವೆ. ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಅರಣ್ಯ ಇಲಾಖೆ, ನುಗು ವಲಯದಲ್ಲಿ ತಾಯಿ ಹುಲಿ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ, ತೀವ್ರ ಹುಡುಕಾಟ ನಡೆಸಿದೆ. ಕಾರ್ಯಾಚರಣೆಗೆ ಸಹಾಯಕವಾಗಲೆಂದು ಅಳವಡಿಸಿರುವ ಕ್ಯಾಮರಾದಲ್ಲಿ ಹೆಣ್ಣು ಹುಲಿಯ ಚಲನವಲನಗಳ ದೃಶ್ಯಾವಳಿಗಳು ಸೆರೆಯಾಗಿವೆ ಎನ್ನಲಾಗಿದೆ. ಮರಿಗಳು ಸಿಕ್ಕ ಸ್ಥಳದ ಆಸುಪಾಸಿನಲ್ಲೇ ಹೆಚ್ಚು ಓಡಾಡುತ್ತಿರುವುದರಿಂದ ತಾಯಿ ಹುಲಿ ಅದೇ ಆಗಿರಬಹುದೆಂದು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಊಹಿಸಿದ್ದಾರೆ. ಈ ಸಂಗತಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೂ ತಂದಿದ್ದಾರೆ.

    ಮರಿಗಳನ್ನು ಕಳೆದುಕೊಂಡಿರುವ ತಾಯಿ ಹುಲಿ ಅರಣ್ಯದಲ್ಲಿ ಮೂಕವೇದನೆ ಅನುಭವಿಸುತ್ತಿದ್ದು, ಅದೇ ಸ್ಥಳದಲ್ಲಿ ಮರಿಗಳಿಗಾಗಿ ಹುಡುಕಾಟ ನಡೆಸಿದೆ ಎನ್ನಲಾಗಿದೆ. ಇತ್ತ ಮೃಗಾಲಯದಲ್ಲಿ ಆಶ್ರಯ ಪಡೆದಿರುವ ಹುಲಿ ಮರಿಯೂ ತಾಯಿಯಿಂದ ದೂರವಾಗಿದೆ. ಇದರಿಂದ ಕಾಡಿನಲ್ಲಿ ಪ್ರಕೃತ್ತಿದತ್ತವಾದ ಬೇಟೆ ಮುಂತಾದ ಶಿಕ್ಷಣ ಮತ್ತು ಮಾತೃ ವಾತ್ಸಲ್ಯದಿಂದ ವಂಚಿತವಾಗುತ್ತಿದೆ. ಆದ್ದರಿಂದ ಈಗ ಅದೇ ಸ್ಥಳದಲ್ಲಿ ಸುತ್ತಾಡುತ್ತಿರುವ ಹುಲಿ ತಾಯಿ ಹುಲಿಯೇ ಎಂಬುದನ್ನು ಖಚಿತಪಡಿಸಿಕೊಂಡು ಅವೆರಡನ್ನೂ ಒಂದೆಡೆ ಸೇರಿಸುವ ಪ್ರಯತ್ನ ಮಾಡಬೇಕಿದೆ. ತಾಯಿ ಹುಲಿ ತನ್ನ ಮರಿಯನ್ನು ಬಿಟ್ಟು ಹೆಚ್ಚು ದಿನವಾಗಿಲ್ಲವಾದ್ದರಿಂದ ಮರಿಯನ್ನು ಆ ಜಾಗದಲ್ಲಿ ಬಿಟ್ಟು ಒಂದೆಡೆ ಸೇರಿಸುವ ಪ್ರಯೋಗ ಮಾಡಬಹುದೇ? ಈಗ ಒಂಟಿತನ ಅನುಭವಿಸುತ್ತಿರುವ ತಾಯಿ ಮತ್ತು ಮರಿ ಎರಡನ್ನೂ ಒಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಪ್ರಯತ್ನಿಸುವರೇ ಎಂಬುದನ್ನು ಕಾದು ನೋಡಬೇಕಾಗಿದೆ.

    ಮರಿಗಳು ಸಿಕ್ಕ ಜಾಗದಲ್ಲಿ ಅಳವಡಿಸಿರುವ ಕ್ಯಾಮರಾ ಟ್ರ್ಯಾಪ್​ನಲ್ಲಿ ಹೆಣ್ಣು ಹುಲಿಯ ಚಿತ್ರ ಸೆರೆಯಾಗಿದೆ. ಈ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ತಾಯಿ ಮತ್ತು ಮರಿಯನ್ನು ಒಂದೆಡೆ ಸೇರಿಸುವ ತಿರ್ವನವನ್ನು ಅವರು ಕೈಗೊಳ್ಳುತ್ತಾರೆ.

    | ರವಿಕುಮಾರ್ ಎಸಿಎಫ್, ಹೆಡಿಯಾಲ ಉಪವಿಭಾಗ

    ಮೇಟಿಕುಪ್ಪೆ ಹುಲಿಗಳಿಗೆ ದೃಢವಾಗಿತ್ತು ಕರುಳಬಳ್ಳಿಯ ಸಂಬಂಧ

    2015ರ ಜನವರಿಯಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಎಚ್.ಡಿ.ಕೋಟೆ ತಾಲೂಕಿನ ಮೇಟಿಕುಪ್ಪೆ ವನ್ಯಜೀವಿ ವಲಯದಲ್ಲಿ 7ರಿಂದ 8 ತಿಂಗಳಿನ ಎರಡು ಹುಲಿ ಮರಿಗಳು ಹಸಿವಿನಿಂದ ನಿತ್ರಾಣಗೊಂಡು ಮೃತಪಟ್ಟಿದ್ದವು. ತಾಯಿಯಿಂದ ಬೇರ್ಪಟ್ಟ ಕಾರಣಕ್ಕೆ ಹಸಿವಿನಿಂದ ಎರಡೂ ಮರಿಗಳು ಮೃತಪಟ್ಟಿರುವುದು ಖಚಿತವಾಗಿತ್ತು. ಆದರೆ ತಾಯಿ ಹುಲಿಗೆ ಏನಾಗಿದೆ ಎಂಬುದು ಗೊತ್ತಾಗಿರಲಿಲ್ಲ. ಅದೇ ಸ್ಥಳದಲ್ಲಿ ಹುಡುಕಿದಾಗ ಇನ್ನೊಂದು ಮರಿಯ ಸ್ಥಿತಿ ಗಂಭೀರವಾಗಿತ್ತು. ಅದನ್ನು ಹಿಡಿದು ಮೈಸೂರು ಮೃಗಾಲಯಕ್ಕೆ ಕಳುಹಿಸಿ ಚಿಕಿತ್ಸೆ ನೀಡಲಾಯಿತು. ಅದಕ್ಕೆ ‘ಧನುಷ್’ ಎಂದು ಹೆಸರಿಡಲಾಗಿತ್ತು.

    ಈ ನಡುವೆ, 2014ರ ಡಿಸೆಂಬರ್​ನಲ್ಲೇ ಮೇಟಿಕುಪ್ಪೆ ಅರಣ್ಯದಲ್ಲಿ ಗಾಯಗೊಂಡ ಸ್ಥಿತಿಯಲ್ಲಿದ್ದ ಅಂದಾಜು ಎಂಟು ವರ್ಷದ ಹೆಣ್ಣು ಹುಲಿಯನ್ನು ಸೆರೆ ಹಿಡಿದು ಮೃಗಾಲಯಕ್ಕೆ ತಂದು ‘ರಮ್ಯ’ ಎಂದು ಹೆಸರಿಡಲಾಗಿತ್ತು. ರಮ್ಯ ಮತ್ತು ಧನುಷ್ ಒಂದೇ ಪ್ರದೇಶದಲ್ಲಿ ಸೆರೆ ಸಿಕ್ಕಿದ್ದರಿಂದ ಅವೆರಡರ ಸಂಬಂಧ ತಿಳಿಯಲು ಅರಣ್ಯಾಧಿಕಾರಿಗಳು ವಂಶವಾಹಿ ಮಾದರಿಯನ್ನು ಹೈದಾರಾಬಾದ್​ನ ಅಣುಜೀವಿ ಮತ್ತು ಸೂಕ್ಷ್ಮಜೀವಿ ಸಂಶೋಧನಾ ಪ್ರಯೋಗಾಲಯಕ್ಕೆ (ಸಿಸಿಎಂಬಿ) ಕಳುಹಿಸಿಕೊಟ್ಟಿದ್ದರು. ನಂತರ ಅವೆರಡೂ ತಾಯಿ ಮತ್ತು ಮರಿ ಎಂಬುದನ್ನು ಪ್ರಯೋಗಾಲಯ ಖಚಿತಪಡಿಸಿತ್ತು. ಹುಲಿಗಳ ಕರುಳು ಬಳ್ಳಿ ಸಂಬಂಧ ತಿಳಿಯಲು ಅದೊಂದು ಮಹತ್ವದ ಹೆಜ್ಜೆಯಾಗಿತ್ತು. ನಂತರ ಧನುಷ್ ನ್ಯುಮೋನಿಯಾದಿಂದ ಮೃತಪಟ್ಟಿತು.

    ಕಾಡು ಸೇರಿದ ಅವನಿ ಮರಿ: ಮೂರು ವರ್ಷಗಳ ಹಿಂದೆ ಮಹಾರಾಷ್ಟ್ರದ ಅವನಿ ಹುಲಿಯು ಗುಂಡಿಗೆ ಬಲಿಯಾದಾಗ ಅದರ ಎರಡು ಮರಿಗಳಲ್ಲಿ ಒಂದು ಹಸಿವಿನಿಂದ ಮೃತಪಟ್ಟಿತ್ತು. ಇನ್ನೊಂದು ಮರಿಯನ್ನು ಆರೈಕೆ ಮಾಡಿ ಮೂರು ವರ್ಷ ಬೆಳೆಸಲಾಯಿತು. ಈಗ ಅದನ್ನು ಕಾಡಿಗೆ ಬಿಡಲಾಗಿದೆ.

    ಮಧುಮಲೈನಲ್ಲಿ ಅನಾಥವಾಗಿದ್ದ ಎರಡು ಮರಿ

    2020ರ ನವೆಂಬರ್​ನಲ್ಲಿ ಬಂಡೀಪುರಕ್ಕೆ ಹೊಂದಿಕೊಂಡಂತಿರುವ ತಮಿಳುನಾಡಿನ ಮಧುಮಲೈ ವಲಯದ ಸಿಂಗಾರ ವಲಯದಲ್ಲಿ ಹೆಣ್ಣು ಹುಲಿಯೊಂದು ಅನುಮಾನಾಸ್ಪದವಾಗಿ ಮೃತಪಟ್ಟಿತ್ತು. ಸುತ್ತಮುತ್ತಲ ಪ್ರದೇಶವನ್ನು ಹುಡುಕಾಡಿದಾಗ ಮೂರು ವಾರಗಳ ವಯೋಮಾನದ ಎರಡು ಗಂಡು ಹುಲಿ ಮರಿಗಳು ಪತ್ತೆಯಾಗಿದ್ದವು. ಅವುಗಳನ್ನು ತಮಿಳುನಾಡಿನ ಅರಣ್ಯ ಇಲಾಖೆ ರಕ್ಷಿಸಿ, ಅಣ್ಣಮಲೈ ಝುೂಗೆ ಕಳುಹಿಸಿಕೊಟ್ಟಿದ್ದರು.

    ಮೂರು ಮರಿಗಳ ಸಾವು: 2016ರ ಆಗಸ್ಟ್​ನಲ್ಲೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಡಿ.ಬಿ.ಕುಪ್ಪೆ ವ್ಯಾಪ್ತಿಯಲ್ಲಿ ಮೂರು ಹುಲಿ ಮರಿಗಳು ಅನಾಥವಾಗಿ ಮೃತಪಟ್ಟವು. ಆದರೆ ತಾಯಿ ಏನಾಯಿತು ಎಂಬುದು ಕೊನೆಗೂ ಗೊತ್ತಾಗಲಿಲ್ಲ. ಆದರೆ ಬಿಸಲವಾಡಿ ಕೆರೆ ಬಳಿ ಸಿಕ್ಕ ಮರಿ ಹುಲಿಗೆ ಉಗುರು ನಾಪತ್ತೆಯಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts