More

    Web Exclusive | ಸರ್ಕಾರದಿಂದ 2,620 ರೂ. ಬೆಂಬಲ ಬೆಲೆ ನಿಗದಿ; ಮಾರುಕಟ್ಟೆಯಲ್ಲಿ ಕ್ವಿಂಟಾಲ್​ಗೆ 3,600 ರಿಂದ 4000 ರೂ. ದರ!

     1 ಲಕ್ಷ ಹೆಕ್ಟೇರ್​ನಷ್ಟು ಕಡಿಮೆಯಾದ ಜೋಳ ಬಿತ್ತನೆ ಪ್ರದೇಶ | ಖರೀದಿ ಕೇಂದ್ರಗಳತ್ತ ತಲೆ ಹಾಕದ ರೈತ  ಪಡಿತರದಲ್ಲಿ ಬಿಳಿಜೋಳ ವಿತರಣೆ ಯೋಜನೆಗೆ ಹಿನ್ನಡೆ | ಚಿಲ್ಲರೆ ಮಾರುಕಟ್ಟೆಯನ್ನೇ ನೆಚ್ಚಿಕೊಂಡ ಬೆಳೆಗಾರರು

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ರೈತರಿಗೆ ಹಾಗೂ ಕೃಷಿ ಉತ್ಪನ್ನಕ್ಕೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ ಸರ್ಕಾರ ಪ್ರತಿವರ್ಷವೂ ಬೆಂಬಲ ಬೆಲೆ ಯೋಜನೆಯಡಿ ವಿವಿಧ ಬೆಳೆಗಳ ಖರೀದಿ ಕೇಂದ್ರ ತೆರೆಯುತ್ತದೆ. ಆದರೆ, ಹಿಂಗಾರು ಹಂಗಾಮಿನಲ್ಲಿ ಬೆಳೆದ ಬಿಳಿಜೋಳ ಉತ್ಪಾದನೆ ಕುಸಿತ ಹಾಗೂ ಮಾರುಕಟ್ಟೆಗಳಿಗಿಂತ ಕಡಿಮೆ ದರ ನಿಗದಿ ಮಾಡಿರುವ ಹಿನ್ನೆಲೆಯಲ್ಲಿ ರೈತರು ಬಿಳಿಜೋಳ ಖರೀದಿ ಕೇಂದ್ರಗಳತ್ತ ಸುಳಿಯುತ್ತಿಲ್ಲ.

    ಬೆಂಬಲ ಬೆಲೆಯಡಿ ರೈತರಿಂದ ಕ್ವಿಂಟಾಲ್​ಗೆ 2,620 ರೂ.ನಂತೆ ಬಿಳಿಜೋಳ ಖರೀದಿಸಲು ಸರ್ಕಾರ ಮುಂದಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಕ್ವಿಂಟಾಲ್​ಗೆ 3,600 ರಿಂದ 4000 ರೂ.ಗೆ ಜೋಳ ಮಾರಾಟವಾಗುತ್ತಿದೆ. ಈ ದರ ವ್ಯತ್ಯಾಸದ ಹಿನ್ನೆಲೆಯಲ್ಲಿ ರೈತರು ಸರ್ಕಾರ ತೆರೆದಿರುವ ಖರೀದಿ ಕೇಂದ್ರಕ್ಕೆ ಜೋಳ ನೀಡುತ್ತಿಲ್ಲ. ಹೀಗಾಗಿ ಪಡಿತರದಲ್ಲಿ ಬಿಳಿಜೋಳ ವಿತರಿಸಬೇಕೆನ್ನುವ ಸರ್ಕಾರದ ಯೋಜನೆಗೆ ಆರಂಭದಲ್ಲೇ ಹಿನ್ನಡೆ ಉಂಟಾಗಿದೆ.

    ನೋಂದಣಿಯೂ ಇಲ್ಲ: ರಾಜ್ಯದಲ್ಲಿ ಹಿಂಗಾರು ಹಂಗಾಮಿನಲ್ಲಿ ಸುಮಾರು 6.64 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿಳಿಜೋಳ ಬಿತ್ತನೆಯಾಗಿತ್ತು. ಆದರೆ, ಮಳೆ ಕೊರತೆ, ಅಕಾಲಿಕ ಮಳೆ ಇನ್ನಿತರ ಕಾರಣಗಳಿಂದ ಉತ್ಪಾದನೆಯಲ್ಲಿ ಶೇ. 35 ಕುಸಿತ ಕಂಡಿದೆ. ಹೀಗಾಗಿ ಚಿಲ್ಲರೆ ಮತ್ತು ಸಗಟು ಮಾರುಕಟ್ಟೆಗಳಲ್ಲಿ ಜೋಳಕ್ಕೆ ಬೇಡಿಕೆ ಹೆಚ್ಚಾಗಿದೆಯಲ್ಲದೆ, ಬೆಲೆಯೂ ಏರಿದೆ. ಆದರೆ, ಸರ್ಕಾರದ ಖರೀದಿ ಕೇಂದ್ರಗಳಲ್ಲಿ ದರ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಜೋಳ ಬೆಳೆದ ಯಾವುದೇ ರೈತರೂ ತಿಂಗಳು ಕಳೆದರೂ ಖರೀದಿ ಕೇಂದ್ರಗಲ್ಲಿ ತಮ್ಮ ಹೆಸರು ನೋಂದಾಯಿಸಿಯೂ ಇಲ್ಲ.

    ಬಲು ಬೇಡಿಕೆ: ಮಳೆಯಾಶ್ರಿತ ಜಮೀನಿನಲ್ಲಿ 1 ಹೆಕ್ಟೇರ್ ಪ್ರದೇಶದಲ್ಲಿ ಸರಾಸರಿ 8ರಿಂದ 11 ಕ್ವಿಂಟಲ್ ಜೋಳದ ಇಳುವರಿ ಬರುತ್ತದೆ. ಮಳೆ ಕೊರತೆ, ರೋಗಬಾಧೆ ತಗುಲಿದರೆ ಸರಾಸರಿ 4 ರಿಂದ 5 ಕ್ವಿಂಟಲ್ ಇಳುವರಿ ಬರುತ್ತದೆ. ಕಳೆದ ಎರಡು ವರ್ಷದ ಅವಧಿಯಲ್ಲಿ ನೀರಾವರಿ ಪ್ರದೇಶ ಹೆಚ್ಚಳದಿಂದಾಗಿ ಬಿಳಿಜೋಳ ಬಿತ್ತನೆ ಪ್ರದೇಶ ಸುಮಾರು 1 ಲಕ್ಷ ಹೆಕ್ಟೇರ್​ನಷ್ಟು ಕಡಿಮೆಯಾಗಿ ಉತ್ಪನ್ನವೂ ಇಳಿಕೆ ಕಂಡಿದೆ. ಇದರಿಂದಾಗಿ ಜೋಳಕ್ಕೆ ಬಲು ಬೇಡಿಕೆ ಬರುತ್ತಿದ್ದು, ದರದಲ್ಲಿಯೂ ಕ್ವಿಂಟಲ್​ಗೆ 1,450 ರಿಂದ 2,000 ರೂ. ಹೆಚ್ಚಳವಾಗಿದೆ. ಇಂತಹ ಸಂದರ್ಭದಲ್ಲಿಯೂ ಸರ್ಕಾರ ಬೆಂಬಲ ಬೆಲೆ ಖರೀದಿ ಕೇಂದ್ರಗಳತ್ತ ರೈತ ಮುಖ ಮಾಡುತ್ತಿಲ್ಲ.

    50 ಸಾವಿರ ಕ್ವಿಂಟಲ್ ಅಗತ್ಯತೆ: ರಾಜ್ಯದ 17 ಜಿಲ್ಲೆಗಳಲ್ಲಿ ಬಿಳಿಜೋಳ ಬಳಕೆ ಮಾಡುವವರಿದ್ದಾರೆ. ಹೀಗಾಗಿ ತಿಂಗಳಿಗೆ ಕನಿಷ್ಠವೆಂದರೂ 50 ಸಾವಿರ ಕ್ವಿಂಟಲ್​ನಷ್ಟು ಜೋಳ ಬೇಕಾಗುತ್ತದೆ. ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಜೋಳ ಬಿತ್ತನೆ ಪ್ರದೇಶವೂ ಕಡಿಮೆಯಾಗಿದೆ. ಹೀಗಾಗಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳನ್ನೇ ಹೆಚ್ಚು ಅವಲಂಬಿಸುವಂತಾಗಿದೆ ಎಂದು ಕೃಷಿ, ಆಹಾರ ಮತ್ತು ಪಡಿತರ ಧಾನ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ರಾಜ್ಯದಲ್ಲಿ ಬಿಳಿಜೋಳ ದರದ ವಿವರ

    • ವರ್ಷ: ಕ್ವಿಂಟಲ್ ದರ (ಸಾವಿರ ರೂ.)
    • 2015: 800 ರಿಂದ 1,250
    • 2016: 850 ರಿಂದ 1,000
    • 2017: 1,250 ರಿಂದ 1,500
    • 2018:1,800 ರಿಂದ 2,350
    • 2019: 2,600 ರಿಂದ 2,900
    • 2020: 3,200 ರಿಂದ 4,050
    • 2021: 2,620 ರಿಂದ 4,000

    ಬಿಳಿ ಜೋಳ ಉತ್ಪಾದನೆ ಕುಸಿತ, ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ದರ ಕಡಿಮೆ ಇರುವುದರಿಂದ ರೈತರು ಜೋಳ ಕೊಡುತ್ತಿಲ್ಲ. ಹೆಚ್ಚಿನ ದರದಲ್ಲಿ ಚಿಲ್ಲರೆ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯೊಂದರಲ್ಲೇ ಪಡಿತರ ಚೀಟಿದಾರರಿಗೆ ವಿತರಿಸಲು ತಿಂಗಳಿಗೆ ಸುಮಾರು 20 ಸಾವಿರ ಕ್ವಿಂಟಲ್ ಜೋಳ ಬೇಡಿಕೆಯಿದೆ. ಹೀಗಾಗಿ ಜೋಳ ಸಂಗ್ರಹಕ್ಕಾಗಿ 53 ಖರೀದಿ ಕೇಂದ್ರ ಆರಂಭಿಸಲಾಗಿದೆ. ಆದರೆ, ಈವರೆಗೂ ಯಾವುದೇ ರೈತರು ನೋಂದಣಿ ಮಾಡಿಲ್ಲ.

    | ಚನ್ನಬಸಪ್ಪ ಕೊಡ್ಲಿ ಜಂಟಿ ನಿರ್ದೇಶಕ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts