More

    Web Exclusive | ಹಳಿ ತಪ್ಪಿದ ಹೋಟೆಲ್ ಉದ್ಯಮ: ಖಾದ್ಯ ತೈಲ, ತರಕಾರಿ ತುಟ್ಟಿ; ಜಿಎಸ್​ಟಿ ಮನ್ನಾ ಮಾಡಲು ಉದ್ಯಮಿಗಳ ಆಗ್ರಹ

    | ಅರವಿಂದ ಅಕ್ಲಾಪುರ ಶಿವಮೊಗ್ಗ

    ಕರೊನಾ ಲಾಕ್​ಡೌನ್ ತೆರವು ಬಳಿಕ ನಿಧಾನವಾಗಿ ಹಳಿಗೆ ಮರಳುತ್ತಿದ್ದ ಹೋಟೆಲ್ ಉದ್ಯಮಕ್ಕೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಅಡುಗೆ ಅನಿಲ, ಖಾದ್ಯ ತೈಲ, ತರಕಾರಿ ಬೆಲೆ ಗಗನಮುಖಿಯಾಗಿರುವುದರಿಂದ ರಾಜ್ಯದ 40 ಸಾವಿರಕ್ಕೂ ಅಧಿಕ ಹೋಟೆಲ್ ಉದ್ದಿಮೆದಾರರು ಕಂಗಾಲಾಗಿದ್ದಾರೆ. ಜಿಎಸ್​ಟಿ ಮನ್ನಾ ಹಾಗೂ ಬೆಲೆ ಏರಿಕೆ ನಿಯಂತ್ರಣಕ್ಕೆ ಕೇಂದ್ರದ ಮೇಲೆ ಒತ್ತಡ ತರಬೇಕು ಎಂದು ಸಿಎಂ ಬಿಎಸ್​ವೈ ಅವರಿಗೆ ಮನವಿ ಮಾಡಲು ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ.

    ಹೋಟೆಲ್ ಉದ್ಯಮಕ್ಕೆ ಪೂರಕವಾಗಿರುವ ವಸ್ತುಗಳ ಬೆಲೆ ಕಳೆದೊಂದು ತಿಂಗಳಲ್ಲಿ ಬಹುತೇಕ ದುಪ್ಪಟ್ಟಾಗಿದೆ. ಇದನ್ನೆಲ್ಲ ಹೊಂದಿಸಿಕೊಂಡು ವ್ಯವಹಾರ ನಡೆಸಬೇಕು. ಜತೆಗೆ ಹೋಟೆಲ್ ನಿರ್ವಹಣೆ, ಸಿಬ್ಬಂದಿ ವೇತನ, ವಿದ್ಯುತ್ ಬಿಲ್, ತೆರಿಗೆಗೆ ಪ್ರತ್ಯೇಕ ಖರ್ಚು. ಇಷ್ಟಾದ ಮೇಲೂ ಶೇ.5ರಷ್ಟು ಲಾಭ ಸಿಗುವುದಿಲ್ಲ. ಕೆಲವೊಮ್ಮೆ ನಷ್ಟ ಉಂಟಾಗುತ್ತದೆ ಎಂಬುದು ಹೋಟೆಲ್ ಮಾಲೀಕರ ಅಳಲು.

    ಹಿಂದಿನ ವರ್ಷಗಳಲ್ಲಿ ಕೆಲವೊಮ್ಮೆ, ಅಡುಗೆ ಅನಿಲ, ಖಾದ್ಯ ತೈಲ, ಬೇಳೆ ಕಾಳು ಯಾವುದಾದರೂ ಒಂದರ ಬೆಲೆ ಕೊಂಚ ಏರಿಕೆಯಾಗುತ್ತಿತ್ತು. ಹೋಟೆಲ್ ಮಾಲೀಕರು ಹೇಗೋ ಪರಿಸ್ಥಿತಿ ನಿಭಾಯಿಸುತ್ತಿದ್ದರು. ಆದರೆ ಈಗ ತದ್ವಿರುದ್ಧ ಪರಿಸ್ಥಿತಿಯಿದೆ. ಏಕಕಾಲಕ್ಕೆ ಎಲ್ಲವೂ ಗಗನಕ್ಕೇರಿದೆ. ಹೋಟೆಲ್ ಉದ್ಯಮಕ್ಕೆ ಇದು ಸತ್ವ ಪರೀಕ್ಷೆ ಕಾಲ.

    ಅತ್ತ ದರಿ-ಇತ್ತ ಪುಲಿ: ಪ್ರಸ್ತುತ ಹೋಟೆಲ್ ಉದ್ಯಮಗಳ ಸ್ಥಿತಿ ಅತ್ತ ದರಿ-ಇತ್ತ ಪುಲಿ ಂಬಂತಾಗಿದೆ. ಬೆಲೆ ಏರಿಕೆ ಕಾರಣ ಊಟ – ತಿಂಡಿ ತಿನಿಸುಗಳ ಬೆಲೆ ಹೆಚ್ಚಿಸಿದರೆ ಈಗ ಹೋಟೆಲ್​ಗಳತ್ತ ಮುಖ ಮಾಡುತ್ತಿರುವ ಗ್ರಾಹಕರನ್ನೂ ಕಳೆದುಕೊಳ್ಳುವ ಭೀತಿ. ಹಾಗೆಂದು ವ್ಯವಹಾರವನ್ನೂ ಸ್ಥಗಿತಗೊಳಿಸುವಂತಿಲ್ಲ. ತಿಂಡಿ, ತಿನಿಸುಗಳ ಬೆಲೆ ಏರಿಕೆ ಮಾಡಿದರೆ ಸರ್ಕಾರವೇನು ಪ್ರಶ್ನಿಸುವುದಿಲ್ಲ. ಆದರೆ ಜೇಬಿಗೆ ಹೊರೆಯಾಗುತ್ತದೆ ಎಂಬ ಕಾರಣಕ್ಕೆ ಜನರು ಹೋಟೆಲ್​ಗೆ ಬರುವುದಿಲ್ಲ. ಹೀಗಾಗಿ ಹೋಟೆಲ್ ಮಾಲೀಕರು ದಾರಿ ಕಾಣದಂತಾಗಿದ್ದಾರೆ.

    ಶೇಕಡವಾರು ಬೆಲೆ ಹೆಚ್ಚಳ

    • ತರಕಾರಿ: 30-35
    • ಬೇಳೆ ಕಾಳು: 50
    • ಖಾದ್ಯ ತೈಲ: 80-100
    • ಅಡುಗೆ ಅನಿಲ: 20

    ಸವಾಲುಗಳು ಹಲವು

    • ಕಾರ್ವಿುಕರನ್ನು ಕಡೆಗಣಿಸುವಂತಿಲ್ಲ.
    • ಕರೊನಾ ಹಿನ್ನೆಲೆಯಿಂದಾಗಿ ಹೆಚ್ಚು ನಿಗಾ ವಹಿಸಬೇಕು.
    • ಫುಡ್​ಕೋರ್ಟ್​ಗಳತ್ತ ಮುಖ ಮಾಡುತ್ತಿರುವ ಜನ.
    • ಗ್ರಾಹಕರನ್ನು ಕಳೆದುಕೊಳ್ಳದಂತೆ ವ್ಯವಹರಿಸಬೇಕು.
    • ಮೆಸ್, ಮನೆ ತಯಾರಿ ತಿನಿಸುಗಳ ಸ್ಪರ್ಧೆ ಇದೆ.
    • ಹೋಟೆಲ್​ಗಳ ಸಂಖ್ಯೆಯಲ್ಲೂ ಹೆಚ್ಚಳ

    ಸಿಎಂ ಭೇಟಿಗೆ ನಿರ್ಧಾರ: ಮುಂದಿನ ವಾರ ಹೋಟೆಲ್ ಮಾಲೀಕರ ಅಸೋಸಿಯೇಷನ್ ಪದಾಧಿಕಾರಿಗಳು ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಹೋಟೆಲ್ ಉದ್ಯಮದ ಸಂಕಷ್ಟಗಳನ್ನು ಗಮನಕ್ಕೆ ತರಲು ನಿರ್ಧರಿಸಿದ್ದಾರೆ. ಅಡುಗೆ ಅನಿಲ, ಖಾದ್ಯ ತೈಲ, ಬೇಳೆ ಕಾಳುಗಳ ಬೆಲೆ ನಿಯಂತ್ರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಸಿಎಂ ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

    ಜಿಎಸ್​ಟಿ ಮನ್ನಾ ಮಾಡಿ: ಬೆಲೆ ಏರಿಕೆ ನಿಯಂತ್ರಣಕ್ಕೆ ಬರುವವರೆಗೂ ಹೋಟೆಲ್ ಉದ್ಯಮಕ್ಕೆ ವಿಧಿಸಲಾಗುತ್ತಿರುವ ಶೇ.5 ಜಿಎಸ್​ಟಿಯನ್ನು ಮನ್ನಾ ಮಾಡಬೇಕೆಂಬುದು ರಾಜ್ಯ ಹೋಟೆಲ್ ಮಾಲೀಕರ ಅಸೋಸಿಯೇಷನ್​ನ ಪ್ರಮುಖ ಒತ್ತಾಯವಾಗಿದೆ. ಅನಧಿಕೃತ ಹೋಟೆಲ್​ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವೇ ಅವುಗಳನ್ನೂ ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು. ವಿದ್ಯುತ್ ಬಿಲ್ ಪಾವತಿಯಲ್ಲೂ ರಿಯಾಯಿತಿ ನೀಡಬೇಕೆಂಬುದು ಅಸೋಸಿಯೇಷನ್ ಆಗ್ರಹ.

    Web Exclusive | ಹಳಿ ತಪ್ಪಿದ ಹೋಟೆಲ್ ಉದ್ಯಮ: ಖಾದ್ಯ ತೈಲ, ತರಕಾರಿ ತುಟ್ಟಿ; ಜಿಎಸ್​ಟಿ ಮನ್ನಾ ಮಾಡಲು ಉದ್ಯಮಿಗಳ ಆಗ್ರಹಕರೊನಾ ಅವಧಿಯಲ್ಲಿ ಸರ್ಕಾರ ನಮ್ಮ ಬೆಂಬಲಕ್ಕೆ ಬರಲಿಲ್ಲ. ಇನ್ನೂ ಅನೇಕ ಹೋಟೆಲ್​ಗಳು ತೆರೆದೇ ಇಲ್ಲ. ಬೆಲೆ ಏರಿಕೆಯಿಂದ ಹೋಟೆಲ್ ನಿರ್ವಹಣೆ ಕಷ್ಟವಾಗುತ್ತಿದೆ. ಗ್ರಾಹಕರಿಗೆ ಗುಣಮಟ್ಟದ ಆಹಾರ ನೀಡಬೇಕು. ಹೀಗಾಗಿ ಈಗಿನ ಸಂದರ್ಭದಲ್ಲಾದರೂ ಸರ್ಕಾರ ಜಿಎಸ್​ಟಿಯಲ್ಲಿ ಕೊಂಚ ವಿನಾಯಿತಿ ನೀಡಬೇಕು.

    | ಎನ್.ಗೋಪಿನಾಥ್ ಹೋಟೆಲ್ ಉದ್ಯಮಿ, ಶಿವಮೊಗ್ಗ

    ಶೇ.20ರಷ್ಟು ಮಂದಿಗೆ ಇನ್ನೂ ಕರೊನಾ ಭಯ ಹೋಗಿಲ್ಲ. ಅವರೆಲ್ಲ ಹೋಟೆಲ್​ಗೆ ಬರುತ್ತಿಲ್ಲ. ಸುಮಾರು 9 ತಿಂಗಳ ಬಳಿಕ ಹೋಟೆಲ್ ಉದ್ಯಮ ಯಥಾಸ್ಥಿತಿಗೆ ಬರುತ್ತಿರುವ ಸಮಯದಲ್ಲೇ ಬೆಲೆ ಏರಿಕೆ ಬಿಸಿ ತಟ್ಟಿದೆ. ಕಾರ್ವಿುಕರ ವಾರ್ಷಿಕ ರಜೆಯನ್ನು ಸರ್ಕಾರ 30 ರಿಂದ 45 ದಿನಕ್ಕೆ ಹೆಚ್ಚಿಸಿದೆ. ಈಗಿನ ಸಂದರ್ಭ ಹೋಟೆಲ್ ಉದ್ಯಮಕ್ಕೆ ಸ್ವಲ್ಪವೂ ಪೂರಕವಾಗಿಲ್ಲ.

    | ಚಂದ್ರಶೇಖರ ಹೆಬ್ಬಾರ್ ಹೊಟೇಲ್ ಮಾಲೀಕರ ಅಸೋಸಿಯೇಷನ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts