More

    Web Exclusive | ಕಾರವಾರದಲ್ಲಿ ರಾಜ್ಯದ ಮೊದಲ ನೇವಿಗೇಶನ್-ಶಿಪ್ಪಿಂಗ್ ಪರವಾನಗಿ ಕೇಂದ್ರ

    | ಸುಭಾಸ ಧೂಪದಹೊಂಡ ಕಾರವಾರ

    ಇನ್ನು ಬಾರ್ಜ್, ಟಗ್ ಬೋಟ್ ನಡೆಸುವವರಿಗೆ ಕಾರವಾರದಲ್ಲೇ ಪರವಾನಗಿ ಪತ್ರ ದೊರೆಯಲಿದೆ. ಬೋರ್ಡ್ ಆಫ್ ಎಕ್ಸಾಮಿನೇಶನ್ ಫಾರ್ ಸೀ ಫೇರರ್ಸ್ ಎಂಬ ಸಂಸ್ಥೆಯೊಂದಿಗೆ ಬಂದರು ಇಲಾಖೆ ಒಪ್ಪಂದ ಮಾಡಿಕೊಂಡಿದ್ದು, ನೇವಿಗೇಶನ್ ಹಾಗೂ ಶಿಪ್ಪಿಂಗ್ ಸಂಬಂಧಿಸಿದ ಪರೀಕ್ಷೆ ನಡೆಸಿ ಪ್ರಮಾಣಪತ್ರ ನೀಡಲಿದೆ.

    ಈ ಹಿಂದೆ ಪರೀಕ್ಷೆ ಹಾಗೂ ಪ್ರಮಾಣಪತ್ರಕ್ಕಾಗಿ ಮಹಾರಾಷ್ಟ್ರ, ಕೇರಳಕ್ಕೆ ಅಲೆದಾಡಬೇಕಿತ್ತು. ಇದು ಕರ್ನಾಟಕದ ಮೊದಲ ಶಿಪ್ಪಿಂಗ್ ಮತ್ತು ನೇವಿಗೇಶನ್ ಪರವಾನಗಿ ಕೇಂದ್ರವಾಗಿದೆ. ಸೀ ಫೇರರ್ಸ್ ಸಂಸ್ಥೆಯು ಅಭ್ಯರ್ಥಿಗಳ ಅನುಭವ, ತರಬೇತಿ ಆಧರಿಸಿ ಲಿಖಿತ ಪರೀಕ್ಷೆ ಹಾಗೂ ಪ್ರಾಯೋಗಿಕ ಪರೀಕ್ಷೆ ಆಯೋಜಿಸಲಿದೆ. ನೀಡಲಾಗುವ ಪ್ರಮಾಣಪತ್ರದಲ್ಲಿ ಸಂಸ್ಥೆಯ ಮುಖ್ಯಸ್ಥರ ಜತೆ ಬಂದರು ಇಲಾಖೆ ನಿರ್ದೇಶಕರ ಸಹಿಯೂ ಇರಲಿದೆ. ಈ ಪ್ರಮಾಣಪತ್ರಕ್ಕೆ ದೇಶಾದ್ಯಂತ ಮನ್ನಣೆ ಸಿಗಲಿದೆ.

    ಉದ್ಯೋಗಾವಕಾಶ: ಕಾರವಾರ ವಾಣಿಜ್ಯ ಬಂದರು, ಕದಂಬ ನೌಕಾನೆಲೆ, ಪಕ್ಕದ ಗೋವಾದ ವಾಣಿಜ್ಯ ಬಂದರುಗಳು ಸೇರಿ ವಿವಿಧೆಡೆ ಬಾರ್ಜ್, ಟಗ್ ಬೋಟ್ ಚಲಾಯಿಸುವ ಅನುಭವಿಗಳಿಗೆ ಭಾರಿ ಬೇಡಿಕೆ ಇದೆ. ಇದುವರೆಗೆ ಸಾರಂಗ ಪ್ರಮಾಣಪತ್ರ ಮಾತ್ರ ಕಾರವಾರದಲ್ಲಿ ನೀಡಲಾಗುತ್ತಿತ್ತು. ಮಾಸ್ಟರ್ ಗ್ರೇಡ್ 1, ಗ್ರೇಡ್ 2, ಮತ್ತು 3, ಇಂಜಿನ್ ಡ್ರೖೆವರ್ ಮುಂತಾದ ಹುದ್ದೆಗಳಿಗೆ ಪರವಾನಗಿ ಪಡೆಯಲು ಮಹಾರಾಷ್ಟ್ರ, ಕೇರಳಕ್ಕೆ ತೆರಳಬೇಕಿತ್ತು. ಇದರಿಂದ ಸ್ಥಳೀಯ ಅವಕಾಶವಿದ್ದರೂ ಇಲ್ಲಿನವರ ಆಯ್ಕೆ ಅಪರೂಪವಾಗಿತ್ತು. ಹಾಗಾಗಿ ಪಕ್ಕದ ರಾಜ್ಯದವರೇ ಈ ಹುದ್ದೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಲಂಕರಿಸುತ್ತಿದ್ದರು. ಇನ್ನು ಇಲ್ಲೇ ಈ ಎಲ್ಲ ಪರವಾನಗಿ ದೊರೆಯಲಿವೆ. ಇದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚುವ ನಿರೀಕ್ಷೆ ಇದೆ.

    ತರಬೇತಿ ಕೇಂದ್ರಕ್ಕೆ ಬೇಡಿಕೆ: ಪರವಾನಗಿಗಾಗಿ ಇಲ್ಲೇ ಕೇಂದ್ರವಾಗಿದ್ದರೂ ರಾಜ್ಯದಲ್ಲಿ ಯಾವುದೇ ನಾವಿಕ ಕೌಶಲ ಶಾಲೆ ಅಥವಾ ತರಬೇತಿ ಕೇಂದ್ರವಿಲ್ಲ. ಡಿಜಿ ಶಿಪ್ಪಿಂಗ್​ನಲ್ಲಿ ಅನುಮತಿ ಪಡೆದ ಒಂದು ಸಂಸ್ಥೆಯಲ್ಲಿ ನಾಲ್ಕು ವಾರ ತರಬೇತಿ ಪಡೆದ ಹೊರತೂ ಮಾಸ್ಟರ್ ಪರೀಕ್ಷೆ ಬರೆಯಲು ಸಾಧ್ಯವಿಲ್ಲ. ಇದರಿಂದ ಇಲ್ಲೇ ತರಬೇತಿ ಕೇಂದ್ರವನ್ನೂ ತೆರೆಯಲು ಸರ್ಕಾರ ಕ್ರಮ ವಹಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

    ಮಾಸ್ಟರ್, ಇಂಜಿನ್​ಡ್ರೖೆವರ್ ಮುಂತಾದ ಹುದ್ದೆಗಳಿಗೆ ಪ್ರಮಾಣಪತ್ರ ನೀಡುವ ಸಂಬಂಧ ದಿನಾಂಕ ನಿಗದಿ ಮಾಡಲಾಗುತ್ತಿದೆ. ಪರೀಕ್ಷೆಗಳು ಶೀಘ್ರದಲ್ಲಿ ನಡೆಯಲಿವೆ.

    | ಕ್ಯಾ. ಸ್ವಾಮಿ ಬಂದರು ಇಲಾಖೆ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts