More

    Web Exclusive | ಸರ್ಕಾರಿ ಪದವಿ ಕಾಲೇಜುಗಳಿಗಿಲ್ಲ ಕಾಯಂ ನಾವಿಕ!; ರಾಜ್ಯದ 431 ಕಾಲೇಜುಗಳಲ್ಲಿ ಒಂದರಲ್ಲಷ್ಟೇ ಕಾಯಂ ಪ್ರಾಂಶುಪಾಲ, ಉಳಿದೆಡೆ ಪ್ರಭಾರ..

    | ಎಚ್.ಪಿ. ಕೃಷ್ಣಶೆಟ್ಟಿ ಮೈಸೂರು

    ನಾವಿಕನಿಲ್ಲದ ಹಡಗಿನಂತೆ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಇದಕ್ಕೆ ಕಾಯಂ ಪ್ರಾಂಶುಪಾಲರು ಇಲ್ಲದಿರುವುದೇ ಪ್ರಮುಖ ಕಾರಣ.

    ಹೌದು.. ರಾಜ್ಯದಲ್ಲಿ 431 ಸರ್ಕಾರಿ ಪದವಿ ಕಾಲೇಜುಗಳಿದ್ದು, ಅವುಗಳಲ್ಲಿ ಚಿತ್ರದುರ್ಗದ ಕಲಾ ಕಾಲೇಜಿನಲ್ಲಿ ಮಾತ್ರ ಕಾಯಂ ಪ್ರಾಂಶುಪಾಲರು ಇದ್ದರೆ, ಉಳಿದ 430 ಕಾಲೇಜುಗಳಲ್ಲಿ ಪ್ರಭಾರ ಪ್ರಾಂಶುಪಾಲರಿದ್ದಾರೆ. ಚಿತ್ರದುರ್ಗ ಕಾಲೇಜಿನ ಪ್ರಾಂಶುಪಾಲ ಸುಧಾಕರ್ ಕೂಡ ಇನ್ನೆರಡು ತಿಂಗಳಿನಲ್ಲಿ ನಿವೃತ್ತಿಯಾಗಲ್ಲಿದ್ದಾರೆ. ಅವರು ನಿವೃತ್ತಿಯಾದರೆ ಎಲ್ಲ 431 ಕಾಲೇಜುಗಳಿಗೂ ಪ್ರಭಾರ ಪ್ರಾಂಶುಪಾಲರೇ ಗತಿ ಎಂಬಂತಾಗಲಿದೆ.

    ರಾಜ್ಯ ಸರ್ಕಾರ 2008ರಲ್ಲಿ ಪ್ರಾಂಶುಪಾಲರನ್ನು ನೇಮಕ ಮಾಡಿತ್ತು. ಬಳಿಕ 12 ವರ್ಷಗಳಿಂದ ಪ್ರಾಂಶುಪಾಲರ ನೇಮಕಾತಿ ಆಗಿಲ್ಲ. ಕಾಯಂ ಪ್ರಾಂಶುಪಾಲರು ಇಲ್ಲದಿರುವುದರಿಂದ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗದ ಕಾರಣ ಶೈಕ್ಷಣಿಕ ಪ್ರಗತಿಗೆ ತೀವ್ರ ತೊಂದರೆಯಾಗುತ್ತಿದೆ. ಪ್ರಸ್ತುತ ಹಲವು ಕಾಲೇಜುಗಳಲ್ಲಿ ಇನ್ನೂ ಸೇವಾ ಪೂರ್ವ ಅವಧಿ ಘೊಷಣೆಯಾಗದೇ ಇರುವ ಸಹಾಯಕ ಪ್ರಾಧ್ಯಾಪಕರು ಪ್ರಭಾರ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    310 ಕಾಲೇಜುಗಳಿಗೆ ಪ್ರಾಂಶುಪಾಲರನ್ನು ನೇಮಕ ಮಾಡಲು 2020ರ ಫೆ.20ರಂದು ಸರ್ಕಾರ ಮಂಜೂರಾತಿ ನೀಡಿತ್ತು. 250ಕ್ಕೂ ಕಡಿಮೆ ವಿದ್ಯಾರ್ಥಿಗಳಿರುವ ಕಾಲೇಜುಗಳಿಗೆ ಪ್ರಾಂಶುಪಾಲರ ಹುದ್ದೆ ಮಂಜೂರಾಗಿಲ್ಲ. ಈ ಹಿಂದೆ ಅರ್ಹತೆಯುಳ್ಳ ಪ್ರಾಧ್ಯಾಪಕರಿಗೆ ಪ್ರಾಂಶುಪಾಲರ ಹುದ್ದೆಗೆ ಪದೋನ್ನತಿ ನೀಡಲಾಗುತ್ತಿತ್ತು. ಆದರೆ ಈ ಬಾರಿ ಪದೋನ್ನತಿ ನೀಡಲು ಉನ್ನತ ಶಿಕ್ಷಣ ಇಲಾಖೆ ನಿರಾಕರಿಸಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೇಮಕಾತಿಗೆ ಮುಂದಾಗಿತ್ತಲ್ಲದೇ, ತಡವಾಗಿ ಅಂದರೆ, ಸೆಪ್ಟೆಂಬರ್ 9 ರಂದು ನೇಮಕಕ್ಕೆ ಪ್ರಕಟಣೆ ಹೊರಡಿಸಿತ್ತು. ಆದರೆ, 5 ತಿಂಗಳು ಕಳೆದರೂ ಕೋವಿಡ್ ಕಾರಣದಿಂದ ಆರ್ಥಿಕ ಸಮಸ್ಯೆಯ ನೆಪವೊಡ್ಡಿ ನೇಮಕಾತಿ ಪ್ರಕ್ರಿಯೆ ನಡೆಸಿಲ್ಲ. ಈಗ ಕೋವಿಡ್ ಪ್ರಕರಣಗಳು ಇಳಿಕೆಯಾಗಿದ್ದು ಆರ್ಥಿಕತೆ ಸಹಜ ಸ್ಥಿತಿಗೆ ಮರಳುತ್ತಿದ್ದರೂ ಉನ್ನತ ಶಿಕ್ಷಣ ಇಲಾಖೆ ನೇಮಕಾತಿಗೆ ಮೀನಮೇಷ ಎಣಿಸುತ್ತಿದೆ.

    ವಯೋಮಿತಿ ನಿಗದಿಗೆ ವಿರೋಧ: ಪ್ರಾಂಶುಪಾಲರ ಹುದ್ದೆ ಭರ್ತಿಗೆ ವಯೋಮಿತಿ ನಿಗದಿ ಮತ್ತು ಖಾಸಗಿ ಕಾಲೇಜು ಅಧ್ಯಾಪಕರಿಗೂ (ಯುಜಿಸಿ ವೇತನ ಪಡೆಯುತ್ತಿರುವವರು) ನೇಮಕಾತಿಯಲ್ಲಿ ಅವಕಾಶ ನೀಡಿರುವುದಕ್ಕೆ ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘ (ಕೆಜಿಸಿಟಿಎ) ವಿರೋಧವ್ಯಕ್ತಪಡಿಸುತ್ತಿದೆ. ಇನ್ನು 55 ವರ್ಷ ಪೂರ್ಣಗೊಳಿಸಿರುವವರು ಪ್ರಾಂಶುಪಾಲರ ಹುದ್ದೆಗೆ ಅರ್ಹರಲ್ಲ ಎಂದು ಇಲಾಖೆ ತಿಳಿಸಿದೆ. ಇದು ಸರಿಯಲ್ಲ. ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವವರೆಲ್ಲರೂ 50ರಿಂದ 55 ವರ್ಷ ದಾಟಿರುವವರು. 55 ವರ್ಷ ನಿಗದಿ ಮಾಡಿದರೆ ಅರ್ಹರು ಯಾರೂ ಸಿಗುವುದಿಲ್ಲ. ಯುಜಿಸಿ ವಯೋಮಿತಿ ನಿಗದಿ ಮಾಡಿಲ್ಲ. ಹೀಗಿರುವಾಗ ವಯೋಮಿತಿ ನಿಗದಿಗೊಳಿಸಿರುವ ಕ್ರಮವನ್ನು ಮತ್ತು ಖಾಸಗಿ ಕಾಲೇಜು ಅಧ್ಯಾಪಕರಿಗೆ ಅವಕಾಶ ನೀಡುವುದನ್ನು ಕೈಬಿಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಡಾ. ಟಿ.ಎಂ.ಮಂಜುನಾಥ್ ತಿಳಿಸಿದ್ದಾರೆ.

    ಪರೀಕ್ಷೆ ನಡೆಸಿದರೆ ಅಭ್ಯಂತರವಿಲ್ಲ: ಸರ್ಕಾರ ಪ್ರಾಂಶುಪಾಲರ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಸಲು ಮುಂದಾಗಿದೆ. ಪರೀಕ್ಷೆ ನಡೆಸಿದರೆ ನಮ್ಮ ಅಭ್ಯಂತರವಿಲ್ಲ. ಪರೀಕ್ಷೆ ಎದುರಿಸಲು ಸಿದ್ಧರಿದ್ದೇವೆ ಎಂದು ಆಕಾಂಕ್ಷಿಗಳು ಹೇಳುತ್ತಾರೆ. ಪಿಎಚ್.ಡಿ ಮಾಡಿರಬೇಕು. 15 ವರ್ಷ ಸೇವೆ ಸಲ್ಲಿಸಿರಬೇಕು. ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವವರು ಪ್ರಾಂಶುಪಾಲರ ಹುದ್ದೆಗೆ ಅರ್ಹರಾಗುತ್ತಾರೆ.

    ಪ್ರಾಧ್ಯಾಪಕರ ಹುದ್ದೆಗಿಲ್ಲ ಬಡ್ತಿ: ಮತ್ತೊಂದೆಡೆ ಪ್ರಾಧ್ಯಾಪಕರ ಹುದ್ದೆಗೆ ಬಡ್ತಿ ನೀಡಲೂ ಉನ್ನತ ಶಿಕ್ಷಣ ಇಲಾಖೆ ಮನಸ್ಸು ಮಾಡುತ್ತಿಲ್ಲ. ಇದರಿಂದ ನೂರಾರು ಅರ್ಹ ಸಹ ಪ್ರಾಧ್ಯಾಪಕರು ಅವಕಾಶವಂಚಿತರಾಗಿ ನಿವೃತ್ತರಾಗುವಂತಾಗಿದೆ. ಸಹ ಪ್ರಾಧ್ಯಾಪಕರಾಗಿರುವವರು ಪದೋನ್ನತಿ ಹೊಂದಲು 2006 ಮತ್ತು 2016ರ ಯುಜಿಸಿ ನಿಯಮಾವಳಿಗಳಲ್ಲಿ ಅವಕಾಶ ನೀಡಲಾಗಿದೆ. ಆದರೆ, 14 ವರ್ಷಗಳಿಂದ ಈ ಪ್ರಕ್ರಿಯೆ ನಡೆದಿಲ್ಲ.

    ಪ್ರಾಂಶುಪಾಲರನ್ನು ನೇಮಕ ಮಾಡುವಂತೆ ಹಲವು ಬಾರಿ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದೇವೆ. ಆದರೆ ನೇಮಕ ಮಾಡಲು ಮನಸ್ಸು ಮಾಡುತ್ತಿಲ್ಲ. ವಯೋಮಿತಿ ನಿಗದಿ ಮಾಡದೆ ಯುಜಿಸಿ ನಿಯಮಾವಳಿಗಳನ್ನು ಅನುಸರಿಸಿ, ಯುಜಿಸಿ ವೇತನ ಪಡೆಯುತ್ತಿರುವವರನ್ನು ನೇಮಕ ಮಾಡಬೇಕು. ಖಾಸಗಿ ಕಾಲೇಜಿನವರಿಗೆ ಅವಕಾಶ ನೀಡಬಾರದು ಎಂಬುದು ನಮ್ಮ ಆಗ್ರಹವಾಗಿದೆ.

    | ಡಾ.ಟಿ.ಎಂ.ಮಂಜುನಾಥ್ ಅಧ್ಯಕ್ಷ, ಕೆಜಿಸಿಟಿಎ

    ಹಿಂದೆ ಹಣಕಾಸು ಇಲಾಖೆ 310 ಪ್ರಾಂಶುಪಾಲರ ನೇಮಕಕ್ಕೆ ಅನುಮೋದನೆ ನೀಡಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾದ್ದರಿಂದ ಅನುಮೋದನೆಗೆ ತಡೆ ಹಿಡಿಯಿತು. ಈಗ ಮರು ಅನುಮೋದನೆಗಾಗಿ ಕಾಯುತ್ತಿದ್ದೇವೆ. ಅನುಮೋದನೆ ಸಿಕ್ಕಿದ ನಂತರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು.

    | ಡಾ.ಸಿ.ಎನ್.ಅಶ್ವತ್ಥನಾರಾಯಣ ಉನ್ನತ ಶಿಕ್ಷಣ ಸಚಿವ

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts