More

    Web Exclusive | ಕೀಟ ಬೇಟೆಗಿಳಿದ ಬೆಳ್ಳಕ್ಕಿಯೆಂಬ ಸೈನಿಕರು!; ಕಡಲೆ ಬೆಳೆ ರಕ್ಷಣೆಗೆ ಹಕ್ಕಿಗಳಿಗೆ ಮೊರೆ, ಬಾನಾಡಿಗಳಿಗೆ ರಾಜಾತಿಥ್ಯ

    | ಶಿವಕುಮಾರ ಶಶಿಮಠ ಗಜೇಂದ್ರಗಡ

    ಕಡಲೆ ಬೆಳೆಗೆ ಈಗ ಎಲ್ಲಿಲ್ಲದ ಕೀಟಗಳ ಕಾಟ ಆರಂಭವಾಗಿದೆ. ಇದನ್ನು ರಕ್ಷಣೆ ಮಾಡಲು ಕೀಟನಾಶಕ ಸಿಂಪಡಿಸಬೇಕು. ಹೀಗೆ ಮಾಡಿದರೆ ಬೆಳೆ ವಿಷವಾಗುತ್ತದೆ. ಜತೆಗೆ, ಭೂಮಿಯೂ ಸಾರ ಕಳೆದುಕೊಳ್ಳುತ್ತದೆ. ಜತೆಯಲ್ಲಿ, ಬೆಲೆಯೂ ಹೆಚ್ಚು. ಇದನ್ನು ಗ್ರಹಿಸಿದ ರೈತರು ಪ್ರಕೃತಿಯ ಸಮಸ್ಯೆಗೆ ಪ್ರಕೃತಿಯಿಂದಲೇ ಉತ್ತರವನ್ನು ಕಂಡುಕೊಳ್ಳಲು ಮುಂದಾಗಿದ್ದಾರೆ. ಹೌದು! ರೈತರು ಈಗ ‘ಬೆಳ್ಳಕ್ಕಿ’ಯ ಮೊರೆ ಹೋಗಿದ್ದಾರೆ. ಹೀಗಾಗಿ, ಬೆಳ್ಳಕ್ಕಿಗಳಿಗೆ ಸದ್ಯ ರಾಜಾತಿಥ್ಯ ದೊರೆಯುತ್ತಿದೆ.

    ಹಕ್ಕಿಗಳನ್ನು ಆಕರ್ಷಿಸುವುದು ಹೇಗೆ?: ಕಡಲೆ ಬೆಳೆಯತ್ತ ಬೆಳ್ಳಕ್ಕಿಗಳನ್ನು ಆಕರ್ಷಿಸುವ 8 ದಿನಗಳ ಮುಂಚೆ ಬೆಳೆಗೆ ಕ್ರಿಮಿನಾಶಕ ಸಿಂಪಡಿಸುವುದಿಲ್ಲ. ನಂತರ ಹೊಲದ ತುಂಬೆಲ್ಲ ಮಂಡಕ್ಕಿ (ಚುರುಮುರಿ) ಚೆಲ್ಲುತ್ತಾರೆ. ಮಂಡಕ್ಕಿ ತಿನ್ನಲು ಬರುವ ಬೆಳ್ಳಕ್ಕಿಗಳ ಹಿಂಡು ಮಂಡಕ್ಕಿ ಜತೆಗೆ ಕಡಲೆಗೆ ಅಂಟಿರುವ ಕೀಟಗಳನ್ನು ತಿನ್ನುತ್ತವೆ. ಬೆಳಗ್ಗೆ ಮತ್ತು ಸಂಜೆ ಹೊತ್ತು ನಾಲ್ಕೈದು ದಿನಗಳ ಕಾಲ ಹೀಗೆ ಮಾಡಿದರೆ ಕಡಲೆ ಬೆಳೆಯಲ್ಲಿನ ಕೀಟಗಳು ಸಂಪೂರ್ಣ ನಿಯಂತ್ರಣಕ್ಕೆ ಬರುತ್ತವೆ. ಬೆಳೆಗೆ ಯಾವುದೇ ರಾಸಾಯನಿಕ ಸಿಂಪಡಿಸದಿದ್ದರೆ ಬೆಳ್ಳಕ್ಕಿಗಳು ಬೆಳೆಯನ್ನು ಬಿಟ್ಟು ಕದಲುವುದಿಲ್ಲ. ರಾಸಾಯನಿಕ ವಾಸನೆ ಇದ್ದರೆ, ಇಂತಹ ಬೆಳೆಯನ್ನು ಈ ಪಕ್ಷಿಗಳು ತಿರುಗಿಯೂ ನೋಡುವುದಿಲ್ಲ.

    ಪ್ರಸಕ್ತ ವರ್ಷ ತಾಲೂಕಿನಲ್ಲಿ 46,927 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೆಳೆ ಬೆಳೆಯಲಾಗಿದೆ. ಕೊಡಗಾನೂರ, ಸೂಡಿ, ಮುಶಿಗೇರಿ, ನಿಡಗುಂದಿ, ಹಾಲಕೇರಿ ಗ್ರಾಮಗಳಲ್ಲಿ ಕೀಟನಿಯಂತ್ರಣಕ್ಕೆ ರೈತರು ಹಕ್ಕಿಗಳ ಮೊರೆ ಹೋಗಿದ್ದಾರೆ.

    ಕಡಿಮೆ ಖರ್ಚಿನಲ್ಲಿ ಅತಿ ಲಾಭ ನೀಡುತ್ತಾ ಬಂದಿದ್ದ ಕಡಲೆಗೆ ಪ್ರಸಕ್ತ ವರ್ಷ ಅಂಟಿಕೊಂಡಿರುವ ಕೀಟಬಾಧೆ ನಿಯಂತ್ರಣ ದೊಡ್ಡ ಸವಾಲಾಗಿ ಪರಿಣಮಿಸಿದೆ. ಬೆಳ್ಳಕ್ಕಿ ಆಕರ್ಷಿಸುವ ಮೂಲಕ ಕೀಟನಿಯಂತ್ರಣ ಕ್ರಮದಿಂದಾಗಿ ನಿಟ್ಟುಸಿರು ಬಿಡುವಂತಾಗಿದೆ.

    | ಸಂಗಯ್ಯ ಭೂಸನೂರಮಠ ರೈತ

    ಕೀಟಬಾಧೆ ನಿಯಂತ್ರಣಕ್ಕೆ ರೈತರು ಪಕ್ಷಿಗಳನ್ನು ಆಯ್ಕೆ ಮಾಡಿಕೊಂಡಿರುವುದು ಉತ್ತಮ ಬೆಳವಣಿಗೆ. ಬೆಳೆಗೆ ರಾಸಾಯನಿಕ ಸಿಂಪಡಣೆ ಮಾಡುವುದರಿಂದ ಇಳುವರಿ ಕ್ಷೀಣಿಸುತ್ತದೆ. ಸಾಗುವಳಿ ಭೂಮಿಯ ಫಲವತ್ತತೆ ಕ್ಷೀಣಿಸುತ್ತದೆ. ಪಕ್ಷಿಗಳನ್ನು ಆಕರ್ಷಿಸುವುದರಿಂದ ರೈತರು ನೈಸರ್ಗಿಕ ಕೃಷಿಗೆ ಆದ್ಯತೆ ನೀಡಿದಂತಾಗುತ್ತದೆ.

    | ಸಾವಿತ್ರಿ ಶಿವನಗೌಡ್ರ ಕೃಷಿ ಅಧಿಕಾರಿ ನರೇಗಲ್ಲ

    Web Exclusive | ಕೀಟ ಬೇಟೆಗಿಳಿದ ಬೆಳ್ಳಕ್ಕಿಯೆಂಬ ಸೈನಿಕರು!; ಕಡಲೆ ಬೆಳೆ ರಕ್ಷಣೆಗೆ ಹಕ್ಕಿಗಳಿಗೆ ಮೊರೆ, ಬಾನಾಡಿಗಳಿಗೆ ರಾಜಾತಿಥ್ಯ
    ರೋಣ ಪಟ್ಟಣದ ಹೊಲವೊಂದರಲ್ಲಿ ಮಹಿಳೆಯರು ಹೊಲಕ್ಕೆ ಚರಗ ಚೆಲ್ಲುತ್ತಿರುವುದು.

    ಲಾಗಾಯ್ತಿನಿಂದಲೂ ಇತ್ತು ಪದ್ಧತಿ

    ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬರುವ ಎಳ್ಳಮಾವಾಸ್ಯೆ ದಿನ ಹೊಲಕ್ಕೆ ‘ಚರಗ ಚೆಲ್ಲುವ’ ಸಂಪ್ರದಾಯ ಉತ್ತರ ಕರ್ನಾಟಕದಲ್ಲಿ ಬೆಳೆದುಬಂದಿದೆ. ಇದಕ್ಕೆ ಪ್ರಮುಖ ಕಾರಣ ಕಡಲೆ ಬೆಳೆಗೆ ಅಂಟಿದ ಕೀಟ ನಿಯಂತ್ರಣವೇ ಆಗಿದೆ. ಎಳ್ಳಮಾವಾಸ್ಯೆ ಹೊತ್ತಿಗೆ ಹಿಂಗಾರು ಪೈರು ಬೆಳೆದು ನಿಂತಿರುತ್ತದೆ. ಅದರಲ್ಲೂ ಜೋಳದ ಮಧ್ಯ ಕಡಲೆ ಬೆಳೆಗೆ ಕಾಯಿಕೊರಕ ಹುಳ ಬಿದ್ದು ಹಾನಿ ಮಾಡುತ್ತದೆ. ಈ ಹೊತ್ತಲ್ಲಿ ಚರಗ ಚೆಲ್ಲುವುದರಿಂದ ಖಾದ್ಯ ತಿನ್ನಲು ಹಕ್ಕಿಗಳು ಬರುತ್ತವೆ. ಆಗ ಖಾದ್ಯದೊಂದಿಗೆ ಕಡಲೆಗೆ ಬಿದ್ದಿರೋ ಕಾಯಿಕೊರಕ ಹುಳು ಕಣ್ಣಿಗೆ ಬೀಳುತ್ತವೆ. ಹಕ್ಕಿಗಳು ಕಾಯಿಕೊರಕದ ಹುಳುವನ್ನು ತಿನ್ನುತ್ತವೆ. ಇದರಿಂದ ಹುಳುಗಳ ನಿಯಂತ್ರಣವಾಗುತ್ತದೆ. ಈ ಕಾರಣಕ್ಕಾಗಿ ಚರಗ ಚೆಲ್ಲುವ ಪದ್ಧತಿ ರೂಢಿಯಲ್ಲಿದೆ ಎನ್ನುತ್ತಾರೆ ರೈತರು.

    ಮದ್ವೆಗೆ ಬರ್ದಿದ್ರೂ ಉಡುಗೊರೆ ಹಾಕಿ! ಲಗ್ನಪತ್ರಿಕೆಯಲ್ಲೇ ಗೂಗಲ್​ ಪೇ, ಫೋನ್​ ಪೇ ಕ್ಯೂಆರ್​ ಕೋಡ್​

    ನಿನ್ನೆ ರಾತ್ರಿ ಮನೆಯಲ್ಲಿ ಮಲಗಿದ್ದಳು, ಇವತ್ತು ಬೆಳಗ್ಗೆ ಮನೆ ಪಕ್ಕದಲ್ಲೇ ಶವವಾಗಿದ್ದಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts