More

  ನೇಕಾರರ ಬದುಕು ಹರಿದ ಕರೊನಾ

  ಬೆಳಗಾವಿ: ಬಟ್ಟೆ ನೇಯ್ದು ಅದರಿಂದಲೇ ಉಪಜೀವನ ಸಾಗಿಸುತ್ತಿದ್ದ ಜಿಲ್ಲೆಯ ಸಾವಿರಾರು ನೇಕಾರರ ಕುಟುಂಬಗಳು ಈಗ ಕರೊನಾ ವೈರಸ್ ಅಬ್ಬರಕ್ಕೆ ತತ್ತರಿಸಿದ್ದಾರೆ. ದಿನವೂ ಕೈಗಳಿಗೆ ಕೆಲಸ ನೀಡುತ್ತಿದ್ದ ಕೈಮಗ್ಗಗಳೆಲ್ಲ ಈಗ ಸ್ತಬ್ಧಗೊಂಡಿವೆ. ಮಹಾಮಾರಿ ಹೊಡೆತಕ್ಕೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಈ ಕುಟುಂಬಗಳೆಲ್ಲ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.

  ಬೆಳಗಾವಿ, ರಾಮದುರ್ಗ, ನಿಪ್ಪಾಣಿ, ಸವದತ್ತಿ, ಹುಕ್ಕೇರಿ, ಬೈಲಹೊಂಗಲ ಹಾಗೂ ಕಿತ್ತೂರು ತಾಲೂಕಿನ ನೂರಾರು ಗ್ರಾಮಸ್ಥರು ಬಟ್ಟೆ ನೇಯ್ದು ಜೀವನ ಸಾಗಿಸುತ್ತಾರೆ. ಸದ್ಯ ಕರೊನಾ ಸೋಂಕು ನಿಯಂತ್ರಿಸಲು ಸರ್ಕಾರ ಲಾಕ್‌ಡೌನ್ ಆದೇಶ ಹೇರಿದ್ದರಿಂದ ನೆಯ್ಗೆಯ ಕಾಯಕವೇ ನಿಂತಿದೆ. ಇದರಿಂದ ಕಳೆದ ಒಂದು ತಿಂಗಳಿಂದ ಕೆಲಸವಿಲ್ಲದೆ, ಸಂಸಾರ ನಿರ್ವಹಣೆ ಮಾಡಲಾಗದೆ ಕಂಗಾಲಾಗಿದ್ದಾರೆ.

  ಪ್ರತಿದಿನ ಬಟ್ಟೆ ನೇಯ್ದರಷ್ಟೇ ನಮಗೆ ಊಟ. ಕುಟುಂಬ ಸದಸ್ಯೆರಲ್ಲರೂ ಸೇರಿ ಬಟ್ಟೆ ತಯಾರಿಸಿ ದೂರದ ಬೆಳಗಾವಿ, ಧಾರವಾಡ-ಹುಬ್ಬಳ್ಳಿ, ವಿಜಯಪುರ, ಬಾಗಲಕೋಟೆ ಹಾಗೂ ಮಹಾರಾಷ್ಟ್ರಕ್ಕೆ ಹೋಗಿ ಮಾರಾಟ ಮಾಡಿ ಬರುತ್ತಿದ್ದೆವು. ಅದರಿಂದ ಸಿಗುತ್ತಿದ್ದ ಲಾಭದಲ್ಲೇ ಜೀವನ ಸಾಗಿಸುತ್ತಿದ್ದೆವು. ಆದರೆ, ಈಗ ಕರೊನಾ ವೈರಸ್ ಭೀತಿಗೆ ನಮ್ಮ ಕುಲಕಸುಬೇ ನಿಂತುಹೋಗಿದೆ. ನಮಗೀಗ ದಿಕ್ಕೇ ತೋಚದಂತಾಗಿವೆ. ನಮ್ಮ ಬದುಕೀಗ ಮೂರಾಬಟ್ಟೆಯಾಗಿದೆ ಎಂದು ನೇಕಾರರ ಕುಟುಂಬಗಳು ಗೋಗರೆಯುತ್ತಿವೆ.

  24,800 ಯಂತ್ರಗಳು ಸ್ತಬ್ಧ: ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 24,800 ಕೈಮಗ್ಗಗಳಿವೆ. ಸುಮಾರು 10,250 ಕುಟುಂಬಗಳು ಇದೇ ಮಗ್ಗಗಳನ್ನು ನಂಬಿಕೊಂಡಿವೆ. ಆದರೆ, ಸದ್ಯ ಸರ್ಕಾರದ ಲಾಕ್‌ಡೌನ್ ಆದೇಶದಿಂದಾಗಿ ಈ ಎಲ್ಲ ಕೈಮಗ್ಗಗಳ ಘಟಗಳು ಸ್ಥಗಿತಗೊಂಡಿವೆ. ಅನೇಕ ನೇಕಾರರ ಕುಟುಂಬಳು ಉಟ್ಟ ಬಟ್ಟೆಯಲ್ಲೇ ಕಾಲ ಕಳೆಯುವಂತಾಗಿದೆ. ಮನೆಯಲ್ಲಿ ನೇಯ್ದಿಟ್ಟ ಬಟ್ಟೆಗಳನ್ನು ಮಾರಾಟ ಮಾಡಲಾಗುತ್ತಿಲ್ಲ. ಇದರಿಂದ ಹೊಸ ಬಟ್ಟೆಗಳ ಬಣ್ಣ ಮಾಸುತ್ತಿವೆ. ಇನ್ನು ಲಕ್ಷಾಂತರ ರೂ. ಸಾಲ ಮಾಡಿ ಖರೀದಿಸಿದ್ದ ಯಂತ್ರಗಳು ಧೂಳು ತಿನ್ನುತ್ತಿವೆ.

  ಸಾಲದ ಸುಳಿ: ಪ್ರತಿದಿನ ಬಟ್ಟೆ ನೇಯ್ದು ಸುಮಾರು 500ರಿಂದ 600 ರೂ. ಉಳಿತಾಯ ಮಾಡುತ್ತಿದ್ದೆವು. ಇದೇ ಹಣದಲ್ಲಿ ಜೀವನ ಸಾಗಿಸುವ ಜತೆಗೆ ತಿಂಗಳಿಗೆ 10 ರಿಂದ 15 ಸಾವಿರ ರೂ.ವರೆಗೆ ಸಾಲದ ಅಸಲು ಹಾಗೂ ಬಡ್ಡಿ ಕಟ್ಟುತ್ತಿದ್ದವು. ಆದರೆ, ಈಗ ಕರೊನಾ ವೈರಸ್‌ನಿಂದಾಗಿ ಕೈಮಗ್ಗಗಳು ಬಂದ್ ಆಗಿವೆ. ಯಂತ್ರ ಖರೀದಿಗೆ 2 ಲಕ್ಷ ರೂ. ಖರ್ಚಾಗಿದೆ. ಹೀಗಾಗಿ ಸಾಲ ತೀರಿಸಲು ತೊಂದರೆಯಾಗಲಿದೆ. ಸಾಲ ತೀರಿಸಲು ಸಮಯಾವಕಾಶ ನೀಡಿದ್ದರೂ ಗಳಿಕೆಯಲ್ಲಿ ಹಿನ್ನಡೆಯಾಗಲಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ಬಡ ನೇಕಾರರು.

  ಅಂದು ಪ್ರವಾಹ…ಇಂದು ಕರೊನಾ ಕಾರ್ಮೋಡ: ಕಳೆದ ವರ್ಷ ಜಿಲ್ಲೆಯ ಸಾವಿರಾರು ನೇಕಾರ ಕುಟುಂಬಗಳು ನೆರೆಗೆ ತುತ್ತಾಗಿ, ತುತ್ತು ಅನ್ನಕ್ಕೂ ಪರದಾಡಿದ್ದವು. ಈ ವರ್ಷ ಮಹಾಮಾರಿ ಕರೊನಾ ಸೋಂಕಿನ ವಕ್ರದೃಷ್ಟಿ ಬಟ್ಟೆ ತಯಾರಿಸುವವರ ಬದುಕನ್ನೂ ಬೆಂಡಾಗಿಸಿದೆ. ನೆರೆ ಅಬ್ಬರದ ಕಹಿ ಘಟನೆ ಮಾಸುವ ಮುನ್ನವೇ ಸೋಂಕಿನ ರೂಪದಲ್ಲಿ ವಕ್ಕರಿಸಿದ ಕರೊನಾ, ನೇಕಾರರ ಬದುಕನ್ನೇ ಹರಿದಿದೆ. ‘ಪ್ರವಾಹ ಗೆದ್ದು ಹೊಸ ಜೀವನ ಆರಂಭಿಸಿದ್ದ ನೇಕಾರ ಕುಟುಂಬಗಳಿಗೀಗ ಕರೊನಾ ಕಾರ್ಮೋಡ ಆವರಿಸಿದೆ. ನಮ್ಮ ಬಳಿ ನಮ್ಮದು ಎಂದು ಏನೂ ಉಳಿದಿಲ್ಲ. ರಾಜ್ಯ ಸರ್ಕಾರ ಎಲ್ಲ ನೇಕಾರರ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡಬೇಕು’ ಎಂದು ಬೆಳಗಾವಿ ಜಿಲ್ಲೆಯ ನೇಕಾರ ಕುಟುಂಬಗಳು ಆಗ್ರಹಿಸಿವೆ.

  ಕರೊನಾ ಸೋಂಕಿನಿಂದ ಕೈಮಗ್ಗಗಳು ಸ್ಥಗಿತಗೊಂಡಿದ್ದರಿಂದ ಸಾವಿರಾರು ನೇಕಾರ ಕುಟುಂಬಗಳು ತೊಂದರೆ ಅನುಭವಿಸುತ್ತಿವೆ. ಸರ್ಕಾರ ಕಳೆದ ವರ್ಷ ನೆರೆಹಾವಳಿಗೆ ನಲುಗಿದ್ದ ನೇಕಾರ ಕುಟುಂಬಕ್ಕೆ ತಲಾ 25 ಸಾವಿರ ರೂ. ಸಹಾಯಧನ ನೀಡಿತ್ತು. ಈಗ ಅದೇ ಮಾದರಿಯಲ್ಲಿ ನೇಕಾರ ಕುಟುಂಬಗಳಿಗೆ ವಿಶೇಷ ಅನುದಾನ ನೀಡಬೇಕು.
  | ಗಜಾನನ ಎಸ್. ಗುಂಜೇರಿ
  ಜಿಲ್ಲಾ ನೇಕಾರ ಸಂಘಟನೆಗಳ ಒಕ್ಕೂಟ ಅಧ್ಯಕ್ಷ, ಬೆಳಗಾವಿ

  ನೇಕಾರರ ಸಮಸ್ಯೆ ಕುರಿತು ಕಳೆದ ವಾರವಷ್ಟೇ ಜವಳಿ ಇಲಾಖೆ ಸಚಿವರು ಹಾಗೂ ಆಯುಕ್ತರು ರಾಜ್ಯ ಎಲ್ಲ ಉಪನಿರ್ದೇಶಕರೊಂದಿಗೆ ವಿಡಿಯೋ ಸಂವಾದ ನಡೆಸಿದ್ದಾರೆ. ಸಹಾಯಧನ ನೀಡುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲ ನೇಕಾರರ ಕುಟುಂಬಗಳ ಸರ್ವೇ ಮಾಡಿ ಕಳುಹಿಸಿದ್ದೇವೆ. ಕುಲಕಸುಬನ್ನೇ ನಂಬಿರುವ ನೇಕಾರ ಕಟುಂಬಗಳು ಆರ್ಥಿಕ ತೊಂದರೆ ಅನುಭಿಸುತ್ತಿದ್ದು, ಪ್ರತಿ ಕುಟುಂಬಕ್ಕೆ ತಿಂಗಳಿಗೆ 5 ಸಾವಿರ ರೂ. ಸಹಾಯಧನ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದೇವೆ.
  | ತೀರ್ಥಪ್ಪ ಗೋಟೂರ ಉಪನಿರ್ದೇಶಕರು, ಜವಳಿ ಇಲಾಖೆ, ಬೆಳಗಾವಿ

  – ಅಕ್ಕಪ್ಪ ಮಗದುಮ್ಮ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts