More

    ನೇಕಾರರ ಬದುಕು ಇನ್ನೂ ಅತಂತ್ರ!

    ಬೆಳಗಾವಿ: ಹತ್ತಾರು ವರ್ಷಗಳಿಂದ ನೇಕಾರಿಕೆಯನ್ನೇ ನೆಚ್ಚಿಕೊಂಡಿದ್ದವರ ಬದುಕೀಗ ಹರಕಲು ಬಟ್ಟೆಯಂತಾಗಿದ್ದು, ಬದುಕಿನ ಬಂಡಿ ಸಾಗಿಸಲಾಗದ ಸ್ಥಿತಿ ಸೃಷ್ಟಿಯಾಗಿದೆ. ಇದಕ್ಕೆ ಕಾರಣ, ಕರೊನಾ ವೈರಸ್ ತಂದಿತ್ತ ಆತಂಕ ಹಾಗೂ ಲಾಕ್‌ಡೌನ್ ಸೃಷ್ಟಿಸಿದ ಅಭದ್ರತೆ.

    ಲಾಕ್‌ಡೌನ್ ಬಳಿಕ ಅವನತಿಯತ್ತಲೇ ಸಾಗುತ್ತಿದ್ದ ನೇಕಾರಿಕೆಗೆ ತುಸು ಚೇತರಿಕೆ ನೀಡಲು ಸರ್ಕಾರ ಮುಂದಾಗಿದೆ. ಆದರೆ, ಸರ್ಕಾರ ವಿಧಿಸಿರುವ ನಿಯಮಾವಳಿಗಳು ಈಗ ನೇಕಾರರು ಹಾಗೂ ಕೂಲಿ ನೇಕಾರರನ್ನು ಅಡಕತ್ತರಿಯಲ್ಲಿ ಸಿಲುಕಿಸಿವೆ.

    ಧೂಳು ತಿನ್ನುತ್ತಿವೆ ಸೀರೆ: ರಾಜ್ಯದಲ್ಲಿ 1.5 ಲಕ್ಷ ವಿದ್ಯುತ್ ಮಗ್ಗಗಳಿದ್ದು, ಕರೊನಾ ಸಂಕಷ್ಟ ದಿಂದಾಗಿ ಬಹುತೇಕ ನೇಕಾರರು ಮೂರುವರೆ ತಿಂಗಳಿಂದ ಕೆಲಸವನ್ನೇ ಸ್ಥಗಿತಗೊಳಿ ಸಿದ್ದಾರೆ. ಲಾಕ್‌ಡೌನ್‌ಗೂ ಮುನ್ನ ತಯಾರಿಸಿದ್ದ ಲಕ್ಷ ಲಕ್ಷ ಸಂಖ್ಯೆಯ ಸೀರೆಗಳು ಮಾರಾಟ ವಾಗದೇ ಧೂಳು ತಿನ್ನುತ್ತಿವೆ. ಲಾಕ್‌ಡೌನ್ ತೆರವಾಗಿದ್ದರೂ ಇನ್ನೂ ಅನೇಕ ಕಡೆಗಳಲ್ಲಿ ಮಗ್ಗಗಳ ‘ಸದ್ದು’ ಕೇಳುತ್ತಿಲ್ಲ. ಹಾಗಾಗಿ ನೇಕಾರರಿಗೆ ನೆರವಾಗುವ ದೃಷ್ಟಿಯಿಂದ 2020ರ ಏ.1ರಿಂದ ಜೂ.30ರವರೆಗೆ(ಲಾಕ್‌ಡೌನ್ ಅವಧಿ) ವಿದ್ಯುತ್ ಮಗ್ಗ ಘಟಕಗಳಲ್ಲಿ ತಯಾರಿಸಿ, ದಾಸ್ತಾನು ಮಾಡಿರುವ ಸೀರೆಗಳ ಖರೀದಿಗಾಗಿ ಸರ್ಕಾರ ಮಾಹಿತಿ ಸಂಗ್ರಹಿಸುತ್ತಿದೆ.

    ನಿಯಮಾವಳಿ ಗೊಂದಲ: ನೇಕಾರರಿಂದ ಖರೀದಿಸಿದ ಸೀರೆಗಳನ್ನು ಕರೊನಾತಂಕದ ಮಧ್ಯೆಯೂ ಸೇವೆ ಸಲ್ಲಿಸುತ್ತಿರುವ ವಿವಿಧ ಇಲಾಖೆಗಳ ಮಹಿಳಾ ಸಿಬ್ಬಂದಿಗೆ ಉಚಿತವಾಗಿ ವಿತರಿಸಲು ಸರ್ಕಾರ ಚಿಂತನೆ ನಡೆಸಿದೆ. ಹೀಗಾಗಿ ಜು. 15ರೊಳಗೆ ನೇಕಾರರು ತಮ್ಮ ಬಳಿಯಿರುವ ಸೀರೆಗಳ ದಾಸ್ತಾನು ವಿವರವನ್ನು ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮಕ್ಕೆ ಸಲ್ಲಿಸುವಂತೆ ಆದೇಶ ಹೊರಡಿಸಲಾಗಿದೆ. ಆದರೆ, ಲಾಕ್‌ಡೌನ್ ಅವಧಿಯಲ್ಲಿ ಮಗ್ಗಗಳೇ ಬಂದ್ ಆಗಿದ್ದರಿಂದ ನಾವು ಸೀರೆಗಳನ್ನೇ ತಯಾರಿಸಿಲ್ಲ. ಈ ಗೊಂದಲ ನಿವಾರಣೆಗಾಗಿ ಅಧಿಕಾರಿಗಳಿಗೆ ಕರೆ ಮಾಡಿದರೆ, ಯಾರೂ ಸ್ಪಂದಿಸುತ್ತಿಲ್ಲ. ಹಾಗಾದರೆ, ಸೀರೆಗಳ ದಾಸ್ತಾನು ಮಾಹಿತಿ ನೀಡುವುದಾದರೂ ಹೇಗೆ ಎಂಬುದು ನೇಕಾರರ ಪ್ರಶ್ನೆ.

    ಕೂಲಿ ನೇಕಾರರ ಹೆಣಗಾಟ: ಅತ್ತ ನೇಕಾರರಿಗೆ ಒಂದು ಸಮಸ್ಯೆಯಾದರೆ, ಇತ್ತ ಕೂಲಿ ನೇಕಾರರಿಗೆ ಸರ್ಕಾರ ವಿಧಿಸಿರುವ ನಿಯಮ ಪರಿಹಾರ ಪಡೆಯಲು ತೊಡಕಾಗಿ ಪರಿಣಮಿ ಸಿದೆ. ಕೂಲಿ ನೇಕಾರರಿಗೆ 2 ಸಾವಿರ ರೂ. ಪರಿಹಾರ ನೀಡಲು ಸರ್ಕಾರ ಮುಂದಾಗಿದೆ. ಆದರೆ, ದಾಖಲೆ ನೀಡುವಂತೆ ಕೇಳಿರುವುದು ಕೂಲಿ ನೇಕಾರರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

    ಮುಚ್ಚಳಿಕೆ ಪತ್ರ ನೀಡಲು ಹಿಂದೇಟು: ವಿದ್ಯುತ್ ಮಗ್ಗ ಘಟಕಗಳು ಮತ್ತು ವಿದ್ಯುತ್ ಸಬ್ಸಿಡಿ ಪಡೆದವರ ಸಮಗ್ರ ಮಾಹಿತಿ ಕೈಮಗ್ಗ ಮತ್ತು ಜವಳಿ ಇಲಾಖೆ ಬಳಿ ಇದೆ. ಆದರೂ, ಘಟಕಗಳ ಮಾಲೀಕರಿಂದ ಕೂಲಿ ನೇಕಾರರು ಮುಚ್ಚಳಿಕೆ ಪತ್ರ ತರುವಂತೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಮುಚ್ಚಳಿಕೆ ಪತ್ರ ಬರೆದುಕೊಟ್ಟರೆ ಕಾರ್ಮಿಕ ಕಾನೂನು ಅನ್ವಯವಾಗಿ ತಾವು ತೊಂದರೆಗೆ ಒಳಗಾಗಬಹುದು ಎನ್ನುವ ಆತಂಕದಿಂದ ಮಾಲೀಕರು ಪತ್ರ ನೀಡಲು ಹಿಂದೇಟು ಹಾಕುತ್ತಿದ್ದಾರೆ.

    ಸರ್ಕಾರದ ಅವೈಜ್ಞಾನಿಕ ಆದೇಶದಿಂದಾಗಿ ಶೇ.70ರಷ್ಟು ಮಂದಿ ಪರಿಹಾರ ಸೌಲಭ್ಯದಿಂದ ವಂಚಿತರಾಗುವಂತಾಗಿದೆ ಎಂದು ನೇಕಾರ ಕಾರ್ಮಿಕರ ಬಳಗದ ಸದಸ್ಯರಾದ ಸೋಮಶೇಖರ ಕವಡಿ, ವಿಠ್ಠಲ ಬಂಗೋಡಿ, ಶಂಕರ ಢವಳಿ, ಸಾಗರ ಸಾತ್ಪುತೆ, ರವಿ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ತಯಾರಿಸಿದ ಎಲ್ಲ ಸೀರೆಗಳನ್ನೂ ಸರ್ಕಾರ ಖರೀದಿಸಲಿ: ಮಾರ್ಚ್‌ನಿಂದ ಜೂನ್ ತಿಂಗಳು ಮದುವೆಗಳಿಗೆ ಸುಗ್ಗಿಯ ಕಾಲ. ಈ ಅವಧಿಯಲ್ಲೇ ಕರೊನಾ ವಕ್ಕರಿಸಿದ್ದರಿಂದ ನೇಕಾರರ ಬದುಕು ಹಳಿ ತಪ್ಪಿದೆ. ಲಾಕ್‌ಡೌನ್‌ಗೂ ಮುನ್ನ ತಯಾರಿಸಿದ್ದ ಸೀರೆಗಳೇ ಮಾರಾಟವಾಗಿಲ್ಲ. ಬೆಳಗಾವಿ, ಬಾಗಲಕೋಟೆ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ವಿದ್ಯುತ್ ಮಗ್ಗ ಘಟಕಗಳಲ್ಲೇ 50 ಲಕ್ಷಕ್ಕೂ ಅಧಿಕ ಸೀರೆಗಳಿವೆ. ರಾಜ್ಯಾದ್ಯಂತ ನೇಕಾರರ ಬಳಿ ದಾಸ್ತಾನು ಇರುವ ಸೀರೆಗಳನ್ನು ಸರ್ಕಾರ ಖರೀದಿಸಬೇಕು ಎಂದು ಸಾಮಾಜಿಕ ಹಾಗೂ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಒತ್ತಾಯಿಸಿದ್ದಾರೆ.

    ಏಪ್ರಿಲ್‌ನಿಂದ ಜೂನ್ ತಿಂಗಳಲ್ಲಿ ನೇಕಾರರು ತಯಾರಿಸಿ, ದಾಸ್ತಾನು ಮಾಡಿರುವ ಸೀರೆಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆದರೆ, ಲಾಕ್‌ಡೌನ್‌ಗೂ ಮುನ್ನ ದಾಸ್ತಾನು ಮಾಡಿದ್ದ ಸೀರೆಗಳ ಖರೀದಿಗೂ ನೇಕಾರರಿಂದ ಬೇಡಿಕೆ ಬಂದಿದೆ. ನೇಕಾರರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು.
    | ಜಿ.ಪಿ. ಶ್ರೀನಿವಾಸಮೂರ್ತಿ ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವದ್ಧಿ ನಿಗಮ, ಬೆಳಗಾವಿ

    ವಿದ್ಯುತ್ ಮಗ್ಗ ಘಟಕಗಳಲ್ಲಿ ಕೆಲಸ ಮಾಡುತ್ತಿರುವ ಕೂಲಿ ನೇಕಾರರಿಗೆ ಮುಚ್ಚಳಿಕೆ ಪತ್ರ ಬರೆದುಕೊಟ್ಟರೆ ಮಾಲೀಕರಿಗೆ ಯಾವ ತೊಂದರೆಯೂ ಆಗದು. ಆನ್‌ಲೈನ್‌ನಲ್ಲಿ ಸಲ್ಲಿಕೆಯಾದ ಅರ್ಜಿಗಳು ಪರಿಶೀಲನೆ ಹಂತದಲ್ಲಿದ್ದು, ಶೀಘ್ರ ಅರ್ಜಿದಾರರ ಬ್ಯಾಂಕ್ ಖಾತೆಗೆ ನೇರವಾಗಿ ಪರಿಹಾರ ಮೊತ್ತ ಸಂದಾಯ ಮಾಡಲಾಗುವುದು.
    | ಕೀರ್ತಪ್ಪ ಗೋಟೂರ ಉಪನಿರ್ದೇಶಕ, ಕೈಮಗ್ಗ ಮತ್ತು ಜವಳಿ ಇಲಾಖೆ, ಬೆಳಗಾವಿ

    | ಇಮಾಮಹುಸೇನ್ ಗೂಡುನವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts