More

    ಕರೊನಾದಿಂದಾಗಿ ಹರಿದ ಬಟ್ಟೆಯಾದ ನೇಕಾರರ ಬದುಕು

    ತುಮಕೂರು: ಕೈಗಾರೀಕರಣದ ನಂತರ ಮಾರುಕಟ್ಟೆ ಕಳೆದುಕೊಂಡು ಅತಂತ್ರವಾಗಿರುವ ನೇಕಾರರು ಕರೊನಾದಿಂದಾಗಿ ಮತ್ತಷ್ಟು ಕಂಗಾಲಾಗಿದ್ದಾರೆ.

    ತುಮಕೂರು ಜಿಲ್ಲೆಯಲ್ಲಿ 10 ಸಾವಿರಕ್ಕೂ ಹೆಚ್ಚು ಕುಟುಂಬಗಳು ಕೈಮಗ್ಗ ಹಾಗೂ ವಿದ್ಯುತ್ ಮಗ್ಗಗಳನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದು, 3 ತಿಂಗಳಿನಿಂದ ಕೆಲಸವಿಲ್ಲದೆ ಬದುಕು ಬೀದಿಗೆ ಬಂದಿದೆ.

    ಬೆಂಗಳೂರು ಪ್ರಮುಖ ಮಾರುಕಟ್ಟೆಯಾಗಿಸಿಕೊಂಡು ರೇಷ್ಮೆ ಸೀರೆ ನೇಯುತ್ತಿದ್ದವರಿಗೆ ಸೀರೆ ಕೊಂಡುಕೊಳ್ಳುವವರೇ ಇಲ್ಲದಂತಾಗಿದ್ದು, ಉದ್ಯೋಗವಿಲ್ಲದೆ ಖಾಲಿ ಕೈಯಲ್ಲಿ ಕೂರುವಂತಾಗಿದೆ. ಜಿಲ್ಲೆಯಲ್ಲಿ 1700 ಪವರ್ ಲೂಮ್ಸ್ ಯೂನಿಟ್‌ಗಳಿದ್ದು, ಸರ್ಕಾರದಿಂದ ಕೆಲಸ ನಡೆಯುವಾಗ ಪವರ್ ಸಬ್ಸಿಡಿ ಪಡೆಯುತ್ತಿದ್ದಾರೆ. ಕೈಮಗ್ಗ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿದ್ದು ಎಲ್ಲಿಯೂ ನೋಂದಣಿಯಾಗದೆ ಜೀವನ ಅತಂತ್ರ ಸ್ಥಿತಿಗೆ ತಲುಪಿದೆ.

    ತುಮಕೂರು, ತಿಪಟೂರಿನ ಅಣೇಪಾಳ್ಯ, ನೊಣವಿನಕೆರೆ, ಗುಬ್ಬಿ, ಕಲ್ಲೂರು, ಸೋಮಲಾಪುರ, ಪಾವಗಡ, ವೈ.ಎಸ್.ಹೊಸಕೋಟೆ, ಚಿಕ್ಕನಾಯಕನಹಳ್ಳಿ, ಮಧುಗಿರಿ ಸೇರಿ ಬಹುತೇಕ ಎಲ್ಲ ತಾಲೂಕಿನಲ್ಲಿಯೂ 10 ಸಾವಿರಕ್ಕೂ ಹೆಚ್ಚು ಕುಟುಂಬಗಳು ಕೈಮಗ್ಗ ಹಾಗೂ ವಿದ್ಯುತ್ ಮಗ್ಗಗಳನ್ನು ನಂಬಿಕೊಂಡು ಜೀವನ ಕಟ್ಟಿಕೊಂಡಿದ್ದಾರೆ.

    ಮಾಲೀಕರಲ್ಲ, ಕಾರ್ಮಿಕರು: ಜಿಲ್ಲೆಯಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಕೈಮಗ್ಗ ನಂಬಿಕೊಂಡು ಜೀವನ ನಡೆಸುತ್ತಿದ್ದರೂ ಯಾರೊಬ್ಬರೂ ಮಾರುಕಟ್ಟೆಯ ಬಗ್ಗೆ ತಿಳಿವಳಿಕೆ ಹೊಂದಿಲ್ಲ. ಬೆಂಗಳೂರಿನಲ್ಲಿ ಕುಳಿತ ಮಾಲೀಕರು ರೇಷ್ಮೆ ನೂಲು, ಜರಿ ನೀಡುತ್ತಾರೆ, ಅಗ್ಗದ ಬೆಲೆಗೆ ಸೀರೆ ಕೊಂಡುಕೊಂಡು ಮಾರಾಟ ಮಾಡುವುದು ಮೊದಲಿಂದಲೂ ನಡೆದುಬಂದಿದೆ.

    ಮಾರುಕಟ್ಟೆಯ ಶೋಷಣೆಯ ನಡುವೆಯೂ ಶ್ರಮದಿಂದಲೇ ಬದುಕು ಕಟ್ಟಿಕೊಂಡಿರುವ ನೇಕಾರರು ಬದುಕನ್ನು ಲಾಕ್‌ಡೌನ್ ಮಹಾಮಾರಿ ಕಿತ್ತುಕೊಂಡಿದೆ. ಧರ್ಮಾತೀತ, ಜಾತ್ಯತೀತವಾಗಿ ಗುರುತಿಸಿಕೊಂಡಿರುವ ನೇಕಾರರು ಅಸಂಘಟಿತ ಕಾರ್ಮಿಕರಾಗಿದ್ದು, ಸರ್ಕಾರದ ಯೋಜನೆಗಳು ಅರ್ಹರಿಗೆ ಸಿಗುವುದು ಕಷ್ಟಸಾಧ್ಯ.

    ಪವರ್‌ಲೂಮ್ಸ್ ಬಗ್ಗೆ ತಾತ್ಸಾರ: ಸರ್ಕಾರ ನೇಕಾರರನ್ನು ಗುರುತಿಸುವಾಗ ಕೈಮಗ್ಗಗಳನ್ನು ಪರಿಗಣಿಸುತ್ತಿದೆ. ಆದರೆ ಕಾಲಕ್ಕೆ ತಕ್ಕಂತೆ ಆಧುನೀಕರಣವಾಗಿ ವಿದ್ಯುತ್ ಮಗ್ಗ ನಡೆಸುವವರಿಗೆ ವಾರ್ಷಿಕ ಸಹಾಯಧನ ನೀಡದೆ ನಿರ್ಲಕ್ಷಿಸಿದೆ.

    ಇನ್ನೂ ಕರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ನೇಕಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಿಯಾದರೂ ಕೈಮಗ್ಗ ಕಾರ್ಮಿಕರು ಎಲ್ಲಿಯೂ ನೋಂದಣಿಯಾಗದ ಕಾರಣ ಅವರು ಇದರಿಂದ ವಂಚಿತರಾಗುತ್ತಿದ್ದು, ಎಲ್ಲರಿಗೂ ಸೌಲಭ್ಯ ಸಿಗುವಂತೆ ಮಾಡುವ ಸವಾಲು ಸರ್ಕಾರದ ಮುಂದಿದೆ.

    ಜಿಲ್ಲೆಯಲ್ಲಿ ಕೈಮಗ್ಗಗಳಿಗೆ ಮಾತ್ರ ಸರ್ಕಾರದಿಂದ ವಾರ್ಷಿಕ 2000 ಸಹಾಯಧನ ನೀಡಲಾಗುತ್ತದೆ, ಉಳಿದಂತೆ ಪವರ್‌ಲೂಮ್ಸ್ ಬಗ್ಗೆ ಸರ್ಕಾರದ ಮಾರ್ಗಸೂಚಿ ಕಾಯುತ್ತಿದ್ದೇವೆ. ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ನೇಕಾರರಿಗೆ ಸರ್ಕಾರದ ಯಾವುದೇ ಯೋಜನೆ ಸದ್ಯಕ್ಕಿಲ್ಲ. ವಿದ್ಯುತ್ ಬಿಲ್ ಸಂಪೂರ್ಣ ವಿನಾಯಿತಿ ಘೋಷಿಸಬೇಕು.
    ಸಂತೋಷ್ ಪ್ರಭಾರ ಉಪನಿರ್ದೇಶಕ, ಕೈಮಗ್ಗ ಮತ್ತು ಜವಳಿ ಇಲಾಖೆ

    ಮಗ್ಗದಲ್ಲಿ ಕೂಲಿ ನಡೆಸುವ ಸಾವಿರಾರು ಜನ ಕೆಲಸವಿಲ್ಲದೆ ಕೂತಿದ್ದೇವೆ, ಬೇರೆ ಕೆಲಸವೂ ಗೊತ್ತಿಲ್ಲದ ನಮ್ಮೆಲ್ಲರ ಭವಿಷ್ಯ ಅಂಧಕಾರದಲ್ಲಿ ಮುಳುಗಿದೆ. ನಮ್ಮನ್ನೇ ನಂಬಿರುವ ಕುಟುಂಬ ಸದಸ್ಯರಿಗೆ ಅನ್ನ ನೀಡಲು ಸಾಧ್ಯವಾಗದ ಸ್ಥಿತಿ ದಿನವೂ ಕಣ್ಣಿರು ಸುರಿಸುತ್ತಿದ್ದೇವೆ.
    ರವೀಶ್ ಕೈಮಗ್ಗ ನೇಕಾರ, ಅಣ್ಣಾಪುರ

    ಸರ್ಕಾರ ಕೈಮಗ್ಗಗಳಿಗೆ ಸಹಾಯಧನ ನೀಡುತ್ತಿದ್ದು ಪವರ್‌ಲೂಮ್ಸ್‌ಗೂ ಸಹಾಯಧನ ನೀಡಬೇಕು. ಮಾರುಕಟ್ಟೆಯಲ್ಲಿ ಸೀರೆಗಳನ್ನು ಕೇಳುವವರು ಇಲ್ಲ. ಬದುಕು ಬೀದಿಗೆ ಬಂದಿದೆ. ದುಡಿದು ತಿಂದ ಕೈಗಳು ಬೇಡಿ ತಿನ್ನುವಂತಾಗಿದೆ.
    ಗಂಗಾಧರ್ ಸೋಮಲಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts