More

    ಸೀರೆ ನೇಯುವವರಿಗೆ ಬೇಕು ನೆರವು

    ವಿಜಯವಾಣಿ ವಿಶೇಷ ರಾಣೆಬೆನ್ನೂರ

    ಇಡೀ ನಾಡಿನಾದ್ಯಂತ ಕಾಡುತ್ತಿರುವ ಕರೊನಾ ವೈರಸ್ ರೋಗದ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ಲಾಕ್​ಡೌನ್ ಆದೇಶದಿಂದ ನೇಕಾರರು ಸೀರೆ ನೇಯುವುದನ್ನೇ ಕೈ ಬಿಡುವ ಪರಿಸ್ಥಿತಿ ಎದುರಾಗಿದೆ.

    ಸೀರೆ ನೇಯಲು ಬೇಕಾಗಿರುವ ಕಚ್ಚಾವಸ್ತು ಪೂರೈಕೆಯಾಗದ ಕಾರಣ ನಗರ ಹಾಗೂ ತಾಲೂಕಿನಲ್ಲಿರುವ ನೂರಾರು ಕೈಮಗ್ಗ, ಪವರ್​ಲೂಮ್ಳು ಬಂದ್ ಆಗುವ ಆತಂಕ ಎದುರಿಸುತ್ತಿವೆ. ಲಾಕ್​ಡೌನ್ ಹೀಗೆಯೇ ಮುಂದುವರಿದರೆ ಅವರ ನೇಕಾರಿಕೆ ಉದ್ಯೋಗ ನೆಲ ಕಚ್ಚುವ ಸಂಭವವಿದೆ.

    ಇಲ್ಲಿಯ ಸಿದ್ಧೇಶ್ವರ ನಗರ, ನೇಕಾರ ಕಾಲನಿ, ತಾಲೂಕಿನ ತುಮ್ಮಿನಕಟ್ಟಿ ಗ್ರಾಮ ಸೇರಿ ತಾಲೂಕಿನಲ್ಲಿ ಒಂದು ಸಾವಿರಕ್ಕೂ ಅಧಿಕ ಕುಟುಂಬಗಳು ನೇಕಾರಿಕೆ ನಂಬಿ ಜೀವನ ಸಾಗಿಸುತ್ತಿದ್ದಾರೆ. 3 ಸಾವಿರಕ್ಕೂ ಅಧಿಕ ಜನ ನೇಕಾರರಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕರೊನಾ ಏಟಿಗೆ ನೇಕಾರಿಕೆ ಉದ್ಯಮ ತತ್ತರಿಸಿದೆ.

    ಈಗ ನೇಕಾರರು ನೇಯ್ದ ಸೀರೆಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಲಾಕ್​ಡೌನ್​ನಿಂದ ಮದುವೆ, ಜಾತ್ರೆ, ಮುಂಜಿಯಂತಹ ಕಾರ್ಯಕ್ರಮಗಳು ನಡೆಯದಿರುವುದರಿಂದ ಸೀರೆಗಳ ವ್ಯಾಪಾರ ಬಂದ್ ಆಗಿದೆ. ಮಾರುಕಟ್ಟೆ ಬಂದ್ ಆಗಿದ್ದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ, ಸರ್ಕಾರವು ನೇಕಾರರ ನೆರವಿಗೆ ಬರಬೇಕಿದೆ ಎಂಬ ಒತ್ತಾಯ ಕೇಳಿಬಂದಿದೆ.

    ಸಿಗುತ್ತಿಲ್ಲ ಕಚ್ಚಾವಸ್ತು: ನೇಕಾರಿಕೆ ಉದ್ಯೋಗಕ್ಕೆ ಮುಖ್ಯವಾಗಿ ನೂಲು, ಬಟ್ಟೆಗೆ ಹಾಕುವ ಬಣ್ಣ, ಮಗ್ಗಕ್ಕೆ ಬೇಕಾದ ಬಿಡಿ ವಸ್ತುಗಳು ಸೇರಿ ಮೂಲ ಕಚ್ಚಾ ವಸ್ತು ಅತ್ಯವಶ್ಯ. ಅದಿಲ್ಲದೆ, ಯಾವುದೇ ಕೆಲಸ ನಡೆಯದು. ಇಲ್ಲಿಯ ನೇಕಾರರು ಮಹಾರಾಷ್ಟ್ರ, ತಮಿಳನಾಡು ಸೇರಿ ಬೇರೆ ಬೇರೆ ಜಿಲ್ಲೆ, ರಾಜ್ಯಗಳಿಗೆ ಹೋಗಿ ಕಚ್ಚಾವಸ್ತು ತರುತ್ತಿದ್ದರು. ಆದರೀಗ ಲಾಕ್​ಡೌನ್ ಇರುವುದರಿಂದ ಸಾರಿಗೆ ವ್ಯವಸ್ಥೆ ಇಲ್ಲ. ವೈಯಕ್ತಿಕ ವಾಹನ ಸೌಕರ್ಯ ಮಾಡಿಕೊಂಡು ಹೋದರೂ ಚೆಕ್​ಪೋಸ್ಟ್​ನಲ್ಲಿ ಬಿಡುತ್ತಿಲ್ಲ. ಹೀಗಾಗಿ, ಕಚ್ಚಾವಸ್ತು ತರಲಾಗದೆ ಉದ್ಯಮವನ್ನೇ ನಿಲ್ಲಿಸುವ ಹಂತಕ್ಕೆ ಬಂದಿದ್ದೇವೆ ಎಂಬುದು ನೇಕಾರರ ಅಳಲು.

    ನೇಯ್ದ ಸೀರೆ ಕೊಳ್ಳುವವರಿಲ್ಲ: ಇಲ್ಲಿಯ ನೇಕಾರರು ನೇಯುವ ಮಸರಾಯಿ ಸೀರೆಗಳಿಗೆ ಹುಬ್ಬಳ್ಳಿ, ವಿಜಯಪುರ, ಬೆಳಗಾವಿ ಸೇರಿ ಉತ್ತರ ಕರ್ನಾಟಕ ಭಾಗದಲ್ಲಿ ಬಹು ಬೇಡಿಕೆಯಿದೆ. ವ್ಯಾಪಾರಸ್ಥರು ನೇರವಾಗಿ ಇಲ್ಲಿಗೆ ಬಂದು ಸೀರೆಗಳನ್ನು ಖರೀದಿಸಿಕೊಂಡು ಹೋಗುತ್ತಿದ್ದರು. ನೇಕಾರರು ಸಹ ಲಾಕ್​ಡೌನ್​ಗೂ ಮುಂಚೆ ತಮ್ಮಲ್ಲಿದ್ದ ಕಚ್ಚಾವಸ್ತುಗಳನ್ನು ಬಳಸಿ ಸೀರೆಗಳನ್ನು ನೇಯ್ದು ಇಟ್ಟುಕೊಂಡಿದ್ದಾರೆ.

    ಆದರೀಗ ಕೃಷಿ ಹೊರತುಪಡಿಸಿ ಯಾವುದೇ ವಸ್ತುಗಳನ್ನು ಸಾಗಾಟಕ್ಕೆ ಸರ್ಕಾರ ಸಮ್ಮತಿ ಸೂಚಿಸದ ಕಾರಣ ನೇಕಾರರು ಸೀರೆಗಳನ್ನು ಬೇರೆಡೆ ಸಾಗಾಟ ಮಾಡಲಾಗದೇ ಮನೆಯಲ್ಲಿಯೇ ಇಟ್ಟುಕೊಂಡು ಕುಳಿತ್ತಿದ್ದಾರೆ. ಇದರಿಂದಾಗಿ ಉದ್ಯಮ ಸಂಪೂರ್ಣ ನಷ್ಟದಲ್ಲಿದೆ. ಕೂಲಿ ಕಾರ್ವಿುಕರಿಗೆ ಸಂಬಳ ನೀಡಲು ಬೇರೆಡೆಯಿಂದ ಬಡ್ಡಿಯಂತೆ ಸಾಲ ತಂದು ಕೊಡಬೇಕಾದ ಅನಿವಾರ್ಯತೆ ಎದುರಾಗಿದೆ.

    ಸರ್ಕಾರ ಕಳೆದ ಬಾರಿ ಸಾಲ ಮನ್ನಾ ಮಾಡಿದೆಯಾದರೂ ಅದು ಸಹಕಾರಿ ಸಂಘದಲ್ಲಿ ಸಾಲ ಪಡೆದವರಿಗೆ ಮಾತ್ರ ಅನ್ವಯಿಸುತ್ತದೆ. ಬಹುತೇಕರು ಖಾಸಗಿ ಬ್ಯಾಂಕ್​ಗಳಲ್ಲಿ ಸಾಲ ಮಾಡಿಕೊಂಡಿದ್ದಾರೆ. ಜಿಲ್ಲೆಗೆ 109 ಕೋಟಿ ರೂ. ಸಾಲದ ಮೊತ್ತ ಬಂದಿದ್ದರೂ ಈವರೆಗೂ 3-4 ಕೋಟಿ ರೂ. ಮಾತ್ರ ಬಳಕೆಯಾಗಿದೆ. ಆದ್ದರಿಂದ ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂಬುದು ನೇಕಾರರ ಒತ್ತಾಯವಾಗಿದೆ.

    ನೇಕಾರಿಕೆಯಲ್ಲಿ ಒಬ್ಬರು ಮಾಲೀಕರು ಇದ್ದರೆ, ಅವರ ಬಳಿ ನೂರಾರು ಜನ ಕಾರ್ವಿುಕರು ಕೆಲಸ ಮಾಡುತ್ತಿರುತ್ತಾರೆ. ಆದ್ದರಿಂದ ರಾಜ್ಯ ಸರ್ಕಾರ ಮತ್ತು ಜವಳಿ ಇಲಾಖೆ ನೇಕಾರರನ್ನು ಕಾರ್ವಿುಕರನ್ನಾಗಿ ಘೊಷಿಸಬೇಕು. ಈ ಮೂಲಕ ಕಾರ್ವಿುಕರಿಗೆ ಸಿಗುವ ಎಲ್ಲ ಸೌಲಭ್ಯಗಳು ದೊರೆಯುವಂತೆ ಮಾಡಬೇಕು. ಲಾಕ್​ಡೌನ್​ನಿಂದ ಉದ್ಯಮ ಸ್ಥಗಿತಗೊಂಡಿದ್ದು, ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು.

    | ಮಂಜುನಾಥ ಹಲಗೇರಿ, ನೇಕಾರ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts