More

    ರಾಜ್ಯದಲ್ಲಿ ನೈಋತ್ಯ ಮಾನ್ಸೂನ್ ಮುಕ್ತಾಯ: ಈಶಾನ್ಯ ಮಾರುತ ಆಗಮನ ಯಾವಾಗ?

    ಬೆಂಗಳೂರು: ರಾಜ್ಯದಲ್ಲಿ ನೈಋತ್ಯ ಮಾನ್ಸೂನ್ (ಮುಂಗಾರು ಮಳೆ) ಶುಕ್ರವಾರಕ್ಕೆ (ಸೆ.30) ಮುಕ್ತಾಯವಾಗಿದ್ದು, ಈ ಬಾರಿ ವಾಡಿಕೆಗಿಂತ ತುಸು ಹೆಚ್ಚು ಮಳೆ ಬಿದ್ದಿದೆ.

    ಜೂ 1ರಿಂದ ಸೆ.30ರವರೆಗೆ ರಾಜ್ಯಾದ್ಯಂತ ವಾಡಿಕೆಯಂತೆ 852 ಮಿಮೀ ಮಳೆಯಾಗಬೇಕಿತ್ತು. ಆದರೆ, 1,019 ಮಿಮೀ ಬಿದ್ದಿದ್ದು, ಶೇ.20 ಹೆಚ್ಚು ಸುರಿದಿದೆ. ಈ ಅವಧಿಯಲ್ಲಿ ಮಂಡ್ಯ, ತುಮಕೂರು ಮತ್ತು ರಾಮನಗರದಲ್ಲಿ ವಾಡಿಕೆಗಿಂತ ಎರಡು ಪಟ್ಟು ಹೆಚ್ಚು ಮಳೆಯಾದರೆ, ಶಿವಮೊಗ್ಗದಲ್ಲಿ ವಾಡಿಕೆಗಿಂತ ಶೇ.3 ಕಡಿಮೆ ಸುರಿದಿದೆ. 8 ಜಿಲ್ಲೆಗಳಲ್ಲಿ ಅತಿ ಹೆಚ್ಚು, 12 ಜಿಲ್ಲೆಗಳಲ್ಲಿ ಹೆಚ್ಚು, 11 ಜಿಲ್ಲೆಗಳಲ್ಲಿ ವಾಡಿಕೆಯಷ್ಟೇ ಮಳೆಯಾಗಿದೆ. ಮುಂಗಾರು ಅವಧಿಯಲ್ಲಿ ಯಾವುದೇ ಜಿಲ್ಲೆಗಳು ಮಳೆ ಕೊರತೆ ಅನುಭವಿಸಿಲ್ಲ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿರುವ ಅಂಕಿ ಅಂಶಗಳಿಂದ ತಿಳಿದು ಬಂದಿದೆ. 2021-22ರ ಮುಂಗಾರಿನ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಶೇ.8 ಕಡಿಮೆ ಮಳೆಯಾದರೆ, 2020-21ರಲ್ಲಿ ವಾಡಿಕೆಕ್ಕಿಂತ ಶೇ.16 ಹೆಚ್ಚು ಮಳೆ ಬಿದ್ದಿತ್ತು.

    ಭಾರತದಲ್ಲಿ ಈ ಬಾರಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ವಾಡಿಕೆಯಂತೆ ಮುಂಗಾರು ಮಳೆ ಬೀಳುತ್ತದೆಯೆಂದು ಭಾರತೀಯ ಹವಾಮಾನ ಇಲಾಖೆ ಹಾಗೂ ಸ್ಕೈಮೇಟ್ ಹೇಳಿದ್ದ ಭವಿಷ್ಯ ನಿಜವಾಗಿದೆ. ಕರ್ನಾಟಕದಲ್ಲಿಯೂ ಉತ್ತಮ ವರ್ಷಧಾರೆಯಾಗಲಿದೆ ಎಂದು ಹವಾಮಾನ ತಜ್ಞರು ಹೇಳಿರುವುದೂ ಸತ್ಯವಾಗಿದೆ. ಈ ಬಾರಿ ವಾಡಿಕೆಗಿಂತ ಮುನ್ನ ಮಾರುತಗಳು ರಾಜ್ಯಕ್ಕೆ ಪ್ರವೇಶಿಸಿದ್ದರೂ ದುರ್ಬಲಗೊಂಡ ಪರಿಣಾಮ ಆರಂಭದಲ್ಲಿ ಕೈಕೊಟ್ಟಿತ್ತು. ನಂತರ ಮಾನ್ಸೂನ್ ಚುರುಕುಗೊಂಡ ಪರಿಣಾಮ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ವರ್ಷಧಾರೆಯಾಯಿತು. ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಶೇ. 79, ಉತ್ತರ ಒಳನಾಡಿನಲ್ಲಿ ಶೇ. 26 ಹಾಗೂ ಮಲೆನಾಡಿನಲ್ಲಿ ಶೇ.11 ಹೆಚ್ಚು ಮಳೆ ಬಿದ್ದರೆ, ಕರಾವಳಿಯಲ್ಲಿ ವಾಡಿಕೆಯಷ್ಟೇ ಸುರಿದಿದೆ.

    ವಾಡಿಕೆಯಷ್ಟೇ ಹಿಂಗಾರು ಮಳೆ: ಈ ಬಾರಿ ಈಶಾನ್ಯ ಮಾರುತ (ಹಿಂಗಾರು ಮಳೆ) ರಾಜ್ಯಕ್ಕೆ ತಡವಾಗಿ ಆಗಮಿಸಲಿದೆ. ವಾಡಿಕೆಯಂತೆ ಪ್ರಸ್ತುತ ತಿಂಗಳ 2ನೇ ವಾರದಲ್ಲಿ ಆಗಮಿಸಬೇಕಿತ್ತು. ಆದರೆ, ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ನೈಋತ್ಯ ಮಾನ್ಸೂನ್ ಇನ್ನೂ ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ ತಡವಾಗಿ ಆಗಮಿಸಲಿದೆ. ಈ ಬಾರಿ ದೇಶಾದ್ಯಂತ ವಾಡಿಕೆಯಷ್ಟೇ ಹಿಂಗಾರು ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. ರಾಜ್ಯದಲ್ಲಿ ಈ ತಿಂಗಳು ಮೂರನೇ ವಾರದಿಂದ ಆರಂಭವಾಗುವ ಹಿಂಗಾರು ಡಿ.31ರವರೆಗೆ ಬೀಳಲಿದೆ. ಹಿಂಗಾರು ಮಳೆ ಅವಧಿಯಲ್ಲಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಶೇ.60 ಮಳೆ ಬೀಳಲಿದೆ.

    ಮುಂದಿನ 4 ದಿನ ಮಳೆ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದಲ್ಲಿ 4 ದಿನ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ. ಶಿವಮೊಗ್ಗ, ಹಾಸನ, ಕೊಡಗು, ಮೈಸೂರು ಮತ್ತು ಚಾಮರಾಜನಗರದಲ್ಲಿ ಅ.2ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಅ.2ರಿಂದ ಅ.5ರವರೆಗೆ ಹಗುರದಿಂದ ಸಾಧಾರಣ ಮಳೆ ಬೀಳಲಿದೆ.

    ತೆರೆ ಮೇಲೆ ರಾರಾಜಿಸಲಿದ್ದಾರೆ ‘ಜೂನಿಯರ್’ ಜನಾರ್ದನ ರೆಡ್ಡಿ; ಕಿರೀಟಿ ಹೊಸ ಸಿನಿಮಾ ಟೈಟಲ್​ ಲಾಂಚ್..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts