More

    ಸರ್ಕಾರಿ ಕಚೇರಿಗಳಲ್ಲಿ ಆಯುಧಪೂಜೆ

    ತುಮಕೂರು: ಸರ್ಕಾರಿ ಕಚೇರಿಗಳಲ್ಲಿ ಶುಕ್ರವಾರವೇ ಆಯುಧ ಪೂಜಾ ಸಂಭ್ರಮ ಕಂಡುಬಂತು. ನಾಲ್ಕನೇ ಶನಿವಾರ ಸರ್ಕಾರಿ ಕಚೇರಿಗಳಿಗೆ ರಜೆ ಇರುವುದರಿಂದ ಶುಕ್ರವಾರ ಬೆಳಗ್ಗೆಯಿಂದಲೇ ಎಲ್ಲ ಕಚೇರಿಗಳಲ್ಲೂ ಸ್ವಚ್ಛತೆ ಕಾರ್ಯ ಆರಂಭವಾಗಿತ್ತು. ಹಾಗಾಗಿ, ಬಹುತೇಕ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳಿಗು ತಾತ್ಕಾಲಿಕ ಬಿಡುವು ಕೊಡಲಾಗಿತ್ತು.

    ಎಲ್ಲ ಸರ್ಕಾರಿ ಕಚೇರಿಗಳಲ್ಲಿ ತಳಿರು-ತೋರಣ, ಹೂವಿನಿಂದ ಅಲಂಕರಿಸಿದ ಪೂಜೆ ಸಂಭ್ರಮದ ಜತೆಗೆ ಕಚೇರಿ ಮುಖ್ಯಸ್ಥರು ಓಡಾಡುವ ವಾಹನಗಳ ಸರ್ವೀಸ್ ಮಾಡಿಸಿ ಹೂವಿನಿಂದ ಶೃಂಗರಿಸಿ ಸಂಜೆ ಎಲ್ಲರೂ ಜತೆಗೂಡಿ ಬೂದುಗುಂಬಳ ನೀವಾಳಿಸಿ ಹೊಡೆಯಲಾಯಿತು. ಆಯುಧಪೂಜೆ ಭಾನುವಾರ, ಸೋಮವಾರ ವಿಜಯದಶಮಿ ಇದೆ. ಹಾಗಾಗಿ, ಸೋಮವಾರವೂ ಸರ್ಕಾರಿ ಕಚೇರಿಗಳಿಗೆ ಬಿಡುವು.

    ಶುಕ್ರವಾರ ಮಧ್ಯಾಹ್ನದಿಂದಲೇ ಬಹುತೇಕ ಕಚೇರಿಗಳಲ್ಲಿ ಖುರ್ಚಿಗಳು ಖಾಲಿ ಕಾಣುತ್ತಿದ್ದವು. ಸರ್ಕಾರಿ ಕಚೇರಿಗಳ ಕೆಲಸಗಳಿಗೆ ಬಂದಿದ್ದ ಸಾರ್ವಜನಿಕರು ಖಾಲಿ ಚೇರುಗಳನ್ನು ಕಂಡು ಬಂದ ದಾರಿಗೆ ಸುಂಕುವಿಲ್ಲವೆಂಬಂತೆ ತೆರಳುತ್ತಿದ್ದರು. ಇನ್ನೇನಿದ್ದರೂ ಹಬ್ಬ, ರಜೆ ಮುಗಿದಬಳಿಕ ಅ.28ಕ್ಕೆ ಆಗ್ನೇಯ ಪದವೀಧರರ ಚುನಾವಣೆ ಇರುವುದರಿಂದ ಇನ್ನೂ ಕಚೇರಿಗಳಲ್ಲಿ ಯಾವ ಕಡತಗಳು ಜಾಗ ಬಿಟ್ಟು ಕದಲುವುದಿಲ್ಲ.

    ಹೊಸ ವಾಹನ ಖರೀದಿ: ದಸರಾ ಹಬ್ಬದ ಸಂಭ್ರಮಕ್ಕೆ ಕರೊನಾ ಅಡ್ಡಿಬಂದಿಲ್ಲ, ಆಯುಧಪೂಜೆ ಹಿನ್ನೆಲೆಯಲ್ಲಿ ದ್ವಿಚಕ್ರವಾಹನ, ಕಾರುಗಳ ಖರೀದಿ ಭರಾಟೆ ಜೋರಿತ್ತು. ನಗರದ 12 ದ್ವಿಚಕ್ರವಾಹನಗಳ ಶೋರೂಂಗಳಲ್ಲಿ ಹಬ್ಬಕ್ಕಾಗಿ ದ್ವಿಚಕ್ರ ವಾಹನಗಳನ್ನು ಪಡೆಯಲು ಮುಂಗಡ ಬುಕ್ಕಿಂಗ್ ಮಾಡಿರುವರು ತುಂಬಿ ಹೋಗಿದ್ದರು. ಇನ್ನೂ ಹೊಸ ಕಾರುಗಳನ್ನು ಪಡೆಯಲು ಕಾರು ಶೋರೂಂಗಳಲ್ಲು ಜನದಟ್ಟಣೆ ಇತ್ತು. ಶಾಂತಿನಾಥ ಮೋಟರ್ಸ್‌ನಲ್ಲಿ ಜಿಲ್ಲೆಯಲ್ಲಿ ಒಂದೇದಿನ 210 ಹೋಂಡಾ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿದೆ. ಮಾರುತಿ ಶೋರೂಂನಲ್ಲೂ ಕಾರು ಖರೀದಿ ನಿರೀಕ್ಷೆಗಿಂತ ಹೆಚ್ಚಿತ್ತು. ಒಟ್ಟಾರೆ ಹೊಸ ವಾಹನ ಖರೀದಿಗೆ ಲಾಕ್‌ಡೌನ್ ನಷ್ಟ ಅಡ್ಡಬರಲಿಲ್ಲ. ಆದರೆ, ಹಬ್ಬಕ್ಕೆ ಹೊಸ ವಾಹನ ಖರೀದಿಸುವರಿಗೆ ವಾಹನಗಳ ಪೂರೈಕೆ ಇಲ್ಲದೆ ನಿರಾಸೆ ಅನುಭವಿಸುವರ ಸಂಖ್ಯೆಯೇ ಹೆಚ್ಚಿತ್ತು.

    ಗಗನಕ್ಕೇರಿದ ಹೂವಿನ ದರ: ಆಯುಧಪೂಜೆ, ವಿಜಯದಶಮಿ ಹಿನ್ನೆಲೆಯಲ್ಲಿ ಹೂವಿನ ದರ ಗಗನಕ್ಕೇರಿತ್ತು. ಕಾಕಡ ಕೆಜಿಗೆ 1 ಸಾವಿರ, ದುಂಡುಮಲ್ಲಿಗೆ 1 ಕೆಜಿಗೆ 1500 ರೂ., ಬಟನ್ಸ್ 20 ಮಾರಿಗೆ 3-4 ಸಾವಿರ ರೂ., ಸೇವಂತಿಗೆ 20 ಮಾರಿಗೆ 3-4 ಸಾವಿರ ರೂ., ಕನಕಾಂಬರ 40 ಮಾರಿಗೆ 5 ಸಾವಿರ ರೂ., ಮಾರುಕಟ್ಟೆಯಲ್ಲಿತ್ತು. ಹೂವಿನದರ ಜನರನ್ನು ಬೆಚ್ಚಿಬೀಳಿಸುವಂತಿತ್ತು. ಬೂದುಗುಂಬಳ ಕೆಜಿಗೆ 30-40 ರೂ., ಇದೆ. ಹಣ್ಣುಗಳು ಅಂತಹ ದುಬಾರಿ ಇರಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts