More

    ಪೈರಸಿ ಹಾವಳಿ: ಮೊದಲು ನಾವು ಬದಲಾಗಬೇಕು ಎನ್ನುತ್ತಾರೆ ಪುನೀತ್ ರಾಜ್​ಕುಮಾರ್

    ಬೆಂಗಳೂರು: ‘ಮೊದಲು ನಾವು ಬದಲಾಗಬೇಕು …’ ಹಾಗೆನ್ನುವ ಮೂಲಕ ಪೈರಸಿಗೆ ಹೊಸ ಆಯಾಮ ಕೊಡುತ್ತಾರೆ ಪುನೀತ್. ಪೈರಸಿಯನ್ನು ತಡೆಗಟ್ಟುವುದು ಹೇಗೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿರುವಾಗ, ನಾವು ಬದಲಾಗುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕು ಎಂಬುದು ಅವರ ಅಭಿಪ್ರಾಯ.

    ‘ಇಂದು ತಂತ್ರಜ್ಞಾನ ಬಹಳ ಬೆಳೆದಿದೆ. ಏನೇ ಮಾಡಿದರೂ ಇನ್ನೇನೋ ಒಂದು ದಾರಿ ಹುಡುಕುತ್ತಾರೆ. ಹಾಗಾಗಿ ಫೈಟ್ ಮಾಡೋದು ಕಷ್ಟ. ಅದರ ಬದಲು ನಾವು ಬದಲಾಗಬೇಕು. ಪೈರಸಿ ಚಿತ್ರಗಳನ್ನು ನೋಡುವುದನ್ನು ನಿಲ್ಲಿಸಬೇಕು. ನಾವು ನೋಡಿದರೆ ತಾನೆ, ಪೈರಸಿ ಹೆಚ್ಚುವುದು? ಹಾಗಾಗಿ ಮೊದಲು ನಾವು ಬದಲಾಗಬೇಕು. ನಾವು ಬದಲಾಗದಿದ್ದರೆ, ಏನೂ ಬದಲಾಗುವುದಿಲ್ಲ’ ಎನ್ನುತ್ತಾರೆ ಪುನೀತ್ ರಾಜಕುಮಾರ್.

    ಬಹಳ ದಿನಗಳೇ ಆಗಿತ್ತು ಪುನೀತ್ ಮಾಧ್ಯಮದವರೊಂದಿಗೆ ಮಾತನಾಡಿ. ಅಂಥದ್ದೊಂದು ಸಂದರ್ಭ ಸೃಷ್ಟಿಸಿದ್ದು ‘ಯುವರತ್ನ’. ಪುನೀತ್ ಅಭಿನಯದ ಈ ಚಿತ್ರ ಏಪ್ರಿಲ್ ಒಂದಕ್ಕೆ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಮಾರ್ಚ್ 24ಕ್ಕೆ ಚಿತ್ರದ ಪ್ರೀರಿಲೀಸ್ ಇವೆಂಟ್ ನಡೆಯಲಿದೆ. ಈ ಬಗ್ಗೆ ಮಾಹಿತಿ ನೀಡುವುದಕ್ಕೆ ಚಿತ್ರತಂಡ ಮಾಧ್ಯಮದವರೆದುರು ಬಂದಿತ್ತು. ಒಂದು ಸುತ್ತು ಪತ್ರಿಕಾಗೋಷ್ಠಿ ಮುಗಿಸಿ ಬಂದ ಪುನೀತ್, ಮಾತಿಗೆ ಕುಳಿತರು.

    ಚಿತ್ರದ ಮೌಲ್ಯ ಇಷ್ಟ: ಪೈರಸಿ ಕುರಿತಾದ ತಮ್ಮ ಅಭಿಪ್ರಾಯ ಹಂಚಿಕೊಂಡ ಪುನೀತ್, ನಂತರ ಚಿತ್ರದತ್ತ ಶಿಫ್ಟ್ ಆದರು. ತಾನ್ಯಾಕೆ ‘ಯುವರತ್ನ’ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡೆ ಎಂದು ವಿವರಿಸುವ ಅವರು, ‘ಇದೊಂದು ಹಿಟ್ ಕಾಂಬಿನೇಷನ್ ಎನ್ನುವುದಕ್ಕಿಂತ, ಸಂತೋಷ್ ಮತ್ತು ಹೊಂಬಾಳೆ ಫಿಲಂಸ್ ಜತೆಗೆ ಒಂದು ಸಂಬಂಧ ಬೆಳೆದು ಬಿಟ್ಟಿದೆ. ನಟ-ನಿರ್ವಪಕ-ನಿರ್ದೇಶಕ ಎನ್ನುವುದಕ್ಕಿಂತ ನಾವೆಲ್ಲ ಫ್ಯಾಮಿಲಿ ತರಹ ಆಗಿಬಿಟ್ಟಿದ್ದೇವೆ. ಹಾಗಾಗಿ ಈ ಸಿನಿಮಾ ಮಾಡುವ ನಿರ್ಧಾರವಾಯಿತು. ಮೇಲಾಗಿ ಈ ಚಿತ್ರದ ಮೌಲ್ಯ ಬಹಳ ಇಷ್ಟವಾಯಿತು. ಚಿತ್ರದಲ್ಲೊಂದು ಒಳ್ಳೆಯ ಕಥೆ ಇದೆ. ಅದ್ಭುತವಾದ ಮೆಸೇಜ್ ಇದೆ. ಅದೇ ಕಾರಣಕ್ಕೆ ಒಪ್ಪಿಕೊಂಡೆ’ ಎನ್ನುತ್ತಾರೆ ಪುನೀತ್.

    ಹೇಳುವ ರೀತಿ ಬಹಳ ಮುಖ್ಯ: ಪುನೀತ್ ಮತ್ತು ಸಂತೋಷ್ ಕಾಂಬಿನೇಷನ್​ನ ‘ರಾಜ್​ಕುಮಾರ’ ಜನರಲ್ಲಿ ಜಾಗೃತಿ ಮೂಡಿಸಿತ್ತು. ‘ಯುವರತ್ನ’ ಸಹ ಅದೇ ರೀತಿ ಸಾಗುತ್ತದಾ? ಇದಕ್ಕೆ ಪುನೀತ್ ಉತ್ತರ ಹೀಗಿದೆ. ‘ಸಿನಿಮಾದಿಂದ ಜಾಗೃತಿ ಮೂಡಿಸಬಹುದು ಎಂಬ ಮಾತನ್ನು ನಾನು ಮೊದಲು ಒಪು್ಪತ್ತಿರಲಿಲ್ಲ. ಅಪ್ಪಾಜಿ ಕಾಲದಲ್ಲಿ ಹಾಗಿತ್ತು. ಆದರೆ, ಈಗ ಸಿನಿಮಾ ಒಂದು ಪಕ್ಕಾ ಮನರಂಜನಾ ಮಾಧ್ಯಮ. ಯಾಕೆ ಅಷ್ಟೊಂದು ಸೀರಿಯಸ್ ಆಗಿ ತೆಗೆದುಕೊಳ್ಳಬೇಕು ಎಂದು ಅನಿಸುತ್ತಿತ್ತು. ಆದರೆ, ‘ರಾಜ್​ಕುಮಾರ’ ಚಿತ್ರದ ನಂತರ ಕೆಲವರು ಅದರ ಬಗ್ಗೆ ಮಾತನಾಡಿದ್ದು ನೋಡಿ, ಜನ ಇಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುತ್ತಾರಾ ಎಂದನಿಸಿತು. ಯಾವುದೇ ಕಥೆ ಇರಲಿ, ಹೇಳುವ ರೀತಿ ಬಹಳ ಮುಖ್ಯ. ಈ ಕಥೆಯನ್ನು ಸಂತೋಷ್ ಬಹಳ ಚೆನ್ನಾಗಿ ಹೇಳಿದ್ದಾರೆ’ ಎನ್ನುತ್ತಾರೆ ಪುನೀತ್.

    ಮುಜುಗರದ ವಿಷಯ: ಪುನೀತ್ ಚಿತ್ರರಂಗದಲ್ಲಿ 45 ವರ್ಷಗಳನ್ನು ಪೂರೈಸಿದ್ದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು, ಸೋಷಿಯಲ್ ಮೀಡಿಯಾದಲ್ಲಿ ಡಿಪಿ ಪ್ರದರ್ಶಿಸುವ ಮೂಲಕ ಹಂಚಿಕೊಂಡರು. ‘ಇದೆಲ್ಲ ನನಗೆ ಬಹಳ ಮುಜುಗರದ ವಿಷಯ. ಆದರೆ, ಅಭಿಮಾನಿಗಳು ಪ್ರೀತಿಯಿಂದ ಸಂಭ್ರಮಿಸಿದ್ದಾರೆ. ಹಲವು ಸೆಲೆಬ್ರಿಟಿಗಳು ಸಹ ವಿಷ್ ಮಾಡಿದ್ದಾರೆ. ನಿಜ ಹೇಳಬೇಕೆಂದರೆ, ಎಷ್ಟು ವರ್ಷ ಅಂತೆಲ್ಲ ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ. ನನಗೆ ವೈಯಕ್ತಿಕವಾಗಿ ಇಷ್ಟವಿಲ್ಲ. ಆದರೆ, ಅಭಿಮಾನಿಗಳ ಪ್ರೀತಿಗಿಂತ ದೊಡ್ಡದ್ಯಾವುದು?’ ಎಂದು ಪ್ರಶ್ನಿಸುತ್ತಾರೆ ಪುನೀತ್.

    ಈ ವರ್ಷವೇ ‘ಜೇಮ್ಸ್’

    ಪುನೀತ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಜೇಮ್್ಸ’ ಇದೀಗ ಅರ್ಧ ಮುಗಿದಿದ್ದು, ಅದು ಸಹ ಇದೇ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆಯಂತೆ. ನಂತರ ಹೊಂಬಾಳೆ ಫಿಲಂಸ್​ಗೆ ಇನ್ನೊಂದು ಚಿತ್ರ, ದಿನಕರ್ ತೂಗುದೀಪ ಮತ್ತು ಎಸ್. ಕೃಷ್ಣ ನಿರ್ದೇಶನದ ಚಿತ್ರಗಳನ್ನೂ ಒಪ್ಪಿಕೊಂಡಿದ್ದಾರಂತೆ. ಆದರೆ, ಯಾವುದರ ನಂತರ ಯಾವುದು ಎಂಬುದು ಸದ್ಯಕ್ಕೆ ಫಿಕ್ಸ್ ಆಗಿಲ್ಲವಂತೆ.

    ಶ್ರದ್ಧಾ ಕಪೂರ್​ ಹಾಕಿರುವ ಈ ಬಿಕಿನಿ ರೇಟ್ ಕೇಳಿದ್ರೆ ನೀವು ಹೌಹಾರೋದು ಗ್ಯಾರಂಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts