More

    ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವುದು ಆರ್‌ಸಿಬಿ ಗುರಿ ಎಂದ ಎಬಿಡಿ

    ಅಬುಧಾಬಿ: 2016ರ ಐಪಿಎಲ್ ಟೂರ್ನಿಯ ಬಳಿಕ ಮತ್ತೊಮ್ಮೆ ಭರ್ಜರಿ ಲಯದಲ್ಲಿ ಮುನ್ನುಗುತ್ತಿರುವ ಆರ್‌ಸಿಬಿ ತಂಡವನ್ನು ಈ ಬಾರಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿಸುವುದೇ ತಮ್ಮ ಗುರಿಯಾಗಿದೆ ಎಂದು ಸ್ಟಾರ್ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್‌ ಹೇಳಿದ್ದಾರೆ. ಪ್ಲೇಆಫ್​ ಸ್ಥಾನ ತಂಡಕ್ಕೆ ಈಗಾಗಲೆ ಬಹುತೇಕ ಖಚಿತವಾಗಿರುವುದರಿಂದ ಆರ್‌ಸಿಬಿ ತಂಡ ಈ ಹೊಸ ಗುರಿಯನ್ನು ನಿಗದಿಪಡಿಸಿಕೊಂಡಿದೆ.

    ಕೋಲ್ಕತ ನೈಟ್‌ರೈಡರ್ಸ್‌ ವಿರುದ್ಧದ ಬುಧವಾರದ ಪಂದ್ಯಕ್ಕೆ ಮುನ್ನ ಮಾತನಾಡಿದ ಎಬಿಡಿ, ‘ತಂಡ ಅಗ್ರಸ್ಥಾನದೊಂದಿಗೆ ಲೀಗ್ ಹಂತ ಕೊನೆಗೊಳಿಸಿದರೆ ಮಾನಸಿಕವಾಗಿ ಹೆಚ್ಚಿನ ಬಲ ಸಿಗಲಿದೆ. ಇದರಿಂದ ಅತ್ಯಂತ ಸ್ಥಿರ ನಿರ್ವಹಣೆಯ ತಂಡ ನಮ್ಮದು ಎಂದೂ ನಿರೂಪಿಸಿದಂತಾಗುತ್ತದೆ. ಹೀಗಾಗಿ ಅಗ್ರಸ್ಥಾನಕ್ಕೇರುವುದೇ ನಮ್ಮ ಧ್ಯೇಯ. ಆದರೆ ಒಮ್ಮೆಗೆ ಒಂದು ಪಂದ್ಯದ ಮೇಲೆ ಮಾತ್ರ ಗಮನಹರಿಸಲಿದ್ದೇವೆ’ ಎಂದು ಹೇಳಿದರು.

    ಆರ್‌ಸಿಬಿ ತಂಡ ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಮುನ್ನ ಆಡಿದ 9 ಪಂದ್ಯಗಳಲ್ಲಿ 6ರಲ್ಲಿ ಗೆದ್ದು, 3 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ನೆಲೆಸಿದೆ.

    ಕರ್ನಾಟಕದ ಕ್ರಿಕೆಟ್ ಪ್ರೇಮಿಗಳಿಂದ ‘ಆಪದ್ಬಾಂಧವ’ ಎಂದೇ ಕರೆಸಿಕೊಳ್ಳುವ ಎಬಿಡಿ, ಈಗಾಗಲೆ ಹಾಲಿ ಋತುವಿನಲ್ಲಿ 2 ಪಂದ್ಯಗಳನ್ನು ಆರ್‌ಸಿಬಿಗೆ ಏಕಾಂಗಿಯಾಗಿ ಗೆದ್ದುಕೊಟ್ಟಿದ್ದಾರೆ. ರಾಜಸ್ಥಾನ ವಿರುದ್ಧ 22 ಎಸೆತಗಳಲ್ಲಿ ಅಜೇಯ 55 ರನ್ ಸಿಡಿಸಿ 178 ರನ್ ಚೇಸಿಂಗ್‌ಗೆ ನೆರವಾಗಿದ್ದರೆ, ಕೆಕೆಆರ್ ವಿರುದ್ಧದ ಹಿಂದಿನ ಪಂದ್ಯದಲ್ಲಿ 33 ಎಸೆತಗಳಲ್ಲಿ 73 ರನ್ ಬಾರಿಸಿ ಬೃಹತ್ ಮೊತ್ತ ಪೇರಿಸಲು ನೆರವಾಗಿದ್ದರು.

    ‘ನಾವು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದರೆ ಇತರ ತಂಡಗಳಿಗೂ ಎಚ್ಚರಿಕೆ ರವಾನಿಸಿದಂತಾಗುತ್ತದೆ. ಹೀಗಾಗಿ ಬರೀ ಪ್ಲೇಆಫ್​ಗೆ ಅರ್ಹತೆ ಪಡೆಯುವುದಷ್ಟೇ ನಮ್ಮ ಗುರಿ ಅಲ್ಲ. ಅಗ್ರಸ್ಥಾನಕ್ಕೇರುವ ಸಾಮರ್ಥ್ಯವೂ ತಂಡಕ್ಕಿದೆ’ ಎಂದು ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಹೇಳಿದರು.

    ಐಪಿಎಲ್ ಅವಳಿ ಸೂಪರ್ ಓವರ್‌ಗಿಂತ ಕುತೂಹಲ ಕೆರಳಿಸಿದ್ದಳು ಇವಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts