More

    ವಿಶ್ವಗುರು: ಆತ್ಮನಿರ್ಭರತೆಯ ಯಜ್ಞಕ್ಕೆ ನಾವೇ ಸಮಿತ್ತು!

    ವಿಶ್ವಗುರು: ಆತ್ಮನಿರ್ಭರತೆಯ ಯಜ್ಞಕ್ಕೆ ನಾವೇ ಸಮಿತ್ತು!

    ಭಾರತ ಹೊಸದಾಗಿ ನಿರ್ವಣವಾಗಬೇಕೆಂದರೆ ನಮ್ಮೆಲ್ಲರ ಶ್ರಮ ಅಗತ್ಯ. ಚೀನಾದ ಎದುರಿಗೆ ಯುದ್ಧಕ್ಕೆಂದು ತಯಾರಾಗುವಾಗ ನಮ್ಮನ್ನು ಅನೇಕ ಪ್ರಶ್ನೆಗಳು ಕಾಡುತ್ತಿವೆ. ಚೀನಾ ಶಕ್ತಿಶಾಲಿ ಎಂದು ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ ವಾಸ್ತವವಾಗಿ ಯಾವ ದಿಕ್ಕಿನಿಂದ ನೋಡಿದರೂ ಚೀನಾಕ್ಕಿಂತಲೂ ನಾವೇ ಬಲಶಾಲಿ. ಆದರೆ, ನಮ್ಮ ಕಾರ್ಯಕ್ಷಮತೆ ನಾವೇ ಹೆಚ್ಚಿಸಿಕೊಳ್ಳಬೇಕಿದೆ.

    ಕರೊನಾ ಕೈ ಮೀರುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಬಲು ಬೇಗ ಭಾರತ ಅಮೆರಿಕವನ್ನು ದಾಟಿಬಿಡುವುದೇನೋ ಎಂಬ ಭಯ ಕಾಡುತ್ತಿದೆ. ಯಾವುದನ್ನು ಮಾಧ್ಯಮಗಳಲ್ಲಿ ಬೇರೆ ದೇಶಗಳಲ್ಲಿ ನೋಡುತ್ತಿದ್ದೆವೋ ಅವೆಲ್ಲ ಭಾರತಕ್ಕೆ ವಕ್ಕರಿಸಿಕೊಳ್ಳುವುದು ಮುನ್ಸೂಚನೆಯಾಗಿ ಕಾಣುತ್ತಿದೆ. ಒಂದೆಡೆ ಕರೊನಾ ಪ್ರಜೆಗಳನ್ನು ನಿಷ್ಕ್ರಿಯಗೊಳಿಸುತ್ತಿದ್ದರೆ ಮತ್ತೊಂದೆಡೆ ಇದರ ಸೈಡ್ ಎಫೆಕ್ಟ್​ನಂತೆ ವ್ಯಾಪಾರೋದ್ಯಮಗಳು ಕುಸಿದುಹೋಗಿ ಅವ್ಯಕ್ತವಾದ ಭಯವೊಂದು ಕಾಡುತ್ತಿದೆ. ಕರೊನಾ ಮುಗಿದನಂತರ ಇದು ಚೇತರಿಸಿಕೊಳ್ಳುವುದಾದರೂ ಹೇಗೆ ಎನ್ನುವ ಪ್ರಶ್ನೆ ಈಗಾಗಲೇ ಅನೇಕರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿಯೇ ಯುವಾಬ್ರಿಗೇಡ್ ಈ ಬಾರಿಯ ‘ಫಿಫ್ತ್​ಪಿಲ್ಲರ್’ ಕಾಯರ್åಕ್ರಮವನ್ನು ಫೈಟ್​ಬ್ಯಾಕ್ ಎನ್ನುವ ಹೆಸರಿನಲ್ಲಿ ವಿಶೇಷವಾಗಿ ಆಯೋಜಿಸಿತ್ತು.

    ಉದ್ಯಮಿಗಳ ಸಮಸ್ಯೆ ಭಿನ್ನ-ಭಿನ್ನ ಸ್ವರೂಪದ್ದು. ಅಂಗಡಿಗಳ ಬಾಡಿಗೆ ಕಟ್ಟಬೇಕು, ಕೆಲಸದವರಿಗೆ ಸಂಬಳ ಕೊಡಬೇಕು, ಸಂಬಳ ನಿಲ್ಲಿಸಿ ಅವರನ್ನು ಊರಿಗೆ ಕಳಿಸಿಬಿಟ್ಟರೆ ಮರಳಿ ಬರುತ್ತಾರೋ ಇಲ್ಲವೋ ಎನ್ನುವ ಆತಂಕ. ಜೊತೆಯಲ್ಲಿ ಉಳಿಸಿಕೊಳ್ಳೋಣವೆಂದರೆ ಕರೊನಾ ಎಷ್ಟು ದಿನ ಎಂಬ ವಿಚಾರವೇ ಗೊತ್ತಿಲ್ಲದ ಅನಿಶ್ಚಿತತೆ. ಕೆಲವು ವಸ್ತುಗಳ ಶೆಲ್್ಪ ಲೈಫ್ ಸುದೀರ್ಘವಾದದ್ದಾದರೆ ಇನ್ನೂ ಕೆಲವು ತಿಂಗಳು, ವಾರ ಅಥವಾ ಗಂಟೆಗಳಲ್ಲಿ ಹಾಳಾಗುವಂಥದ್ದು.

    ಮುನ್ಸೂಚನೆ ಕೊಡದೇ ಲಾಕ್​ಡೌನ್ ಆರಂಭಿಸಿದಾಕ್ಷಣ ಹೋಟೆಲ್ ಉದ್ಯಮ ಕಳೆದುಕೊಂಡ ಹಣ ಅಪಾರವಾದದ್ದು. ಲಾಕ್​ಡೌನ್ ತೆರವುಗೊಳಿಸಿದ ನಂತರ ಮತ್ತೆ ಅದನ್ನು ಮುಚ್ಚುವ ಮಾತುಗಳನ್ನು ಆಡುತ್ತಿರುವುದನ್ನು ಕೇಳಿದರೆ ದೊಡ್ಡ-ದೊಡ್ಡ ಉದ್ಯಮಗಳು ಕಣ್ಣೀರಿಡುವ ಸ್ಥಿತಿಯಲ್ಲಿವೆ. ವಿಶೇಷವೆಂದರೆ ಇಂತಹ ಸಂದರ್ಭದಲ್ಲೂ ಅನೇಕ ಉದ್ಯಮಿಗಳು ವ್ಯಾಪಾರವನ್ನು ಜೀವಂತವಾಗಿಟ್ಟಿರಲು ಹೊಸ-ಹೊಸ ಆಲೋಚನೆಗಳನ್ನು ಮಾಡಿದ್ದಾರೆ. ಲಾಕ್​ಡೌನ್ ಮುಗಿಯುವ ಸ್ಥಿತಿ ಕಾಣದೇ ಹೋದಾಗ, ಲಾಕ್​ಡೌನ್ ಮುಗಿದ ನಂತರವೂ ಹಿಂದಿನ ಸ್ಥಿತಿಗೆ ಮರಳುವುದು ಸುಲಭ ಸಾಧ್ಯವಲ್ಲ ಎಂದು ಅರಿವಾದಾಗ ಅನೇಕ ಉದ್ಯಮಿಗಳು ತಮ್ಮದ್ದೇ ಆದ ಮಾರ್ಗವನ್ನು ರೂಪಿಸಿಕೊಂಡಿದ್ದಾರೆ.

    ಸ್ವಾತಿಗ್ರೂಪ್​ನ ಹೋಟೆಲ್​ಗಳ ಮಾಲೀಕರಾದ ಗೋಪಾಲ್ ಶೆಟ್ಟಿ ತಮ್ಮ ಹೋಟೆಲಿನ ಮೇಲ್ಭಾಗದಲ್ಲಿರುವ ಮದುವೆಯ ಹಾಲನ್ನು 40-50 ಜನರು ಸೇರುವ ಮದುವೆಯ ಆವರಣವಾಗಿ ಪರಿವರ್ತಿಸಿ ಕಡಿಮೆ ಬೆಲೆಗೆ ಅದನ್ನು ಬಾಡಿಗೆಗೆ ಕೊಡುವ ಪ್ರಯತ್ನ ಆರಂಭಿಸಿಬಿಟ್ಟಿದ್ದಾರೆ. ಈ ಲಾಕ್​ಡೌನಿನ ಅವಧಿಯಲ್ಲಿಯೇ ಆರೆಂಟು ಮದುವೆಗಳನ್ನು ಮಾಡಿ ವಹಿವಾಟನ್ನು ನಿಲ್ಲಿಸದೆ ಜೀವಂತವಾಗಿ ಇರಿಸಿದ್ದಾರೆ. ಮನೆ-ಮನೆಗೂ ಊಟ ತಲುಪಿಸುವ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದು ತಮ್ಮ ಬಳಿಯಿದ್ದ ಕೆಲಸಗಾರರು ದುಡಿಯಲು ಬೇಕಾದ ವ್ಯವಸ್ಥೆಯನ್ನು ರೂಪಿಸಿಕೊಟ್ಟಿದ್ದಾರೆ. ಹೋಟೆಲ್​ನ ಉದ್ಯಮದವರಿಗೆ ಈ ಬಗೆಯ ಹೊಸ ಉಪಾಯಗಳು ಅನಿವಾರ್ಯ. ಈ ಉದ್ಯಮದಷ್ಟೇ ಹೊಡೆತ ತಿಂದಿರುವ ಮತ್ತೊಂದು ವಹಿವಾಟು ಟ್ಯಾಕ್ಸಿಗಳದ್ದು. ಕ್ವಿಕ್​ರೈಡ್​ನ ಶೋಭನಾ ತಮ್ಮ ಕಾರ್​ಪೂಲಿಂಗ್ ಚಿಂತನೆಯನ್ನು ವೈದ್ಯರುಗಳೇ ಮೊದಲಾದ ಕರೊನಾ ವಾರಿಯರ್ಸ್​ಗಳಿಗೆ ವಿಸ್ತರಿಸಿ ವ್ಯವಸ್ಥೆ ಪೂರ್ಣ ಕುಸಿಯದಂತೆ ನೋಡಿಕೊಂಡಿದ್ದಾರೆ.

    ಹುಬ್ಬಳ್ಳಿಯ ಋತ್ವಿಕ್ ತನ್ನ ಬೇಕರಿಯ ಶಾಖೆಗಳು ಮುಚ್ಚಿದಾಗ ಕೆಲಸಗಾರರ ಸಂಬಳವನ್ನು ಸರಿದೂಗಿಸಲು ನೀಮ್ ಟೆಕ್ ಎಂಬ ಹೊಸ ಕಂಪನಿಯನ್ನೇ ಆರಂಭಿಸಿದರು. ಮನೆ, ಅಂಗಡಿ, ಫ್ಯಾಕ್ಟರಿ ಮೊದಲಾದವನ್ನು ಬ್ಯಾಕ್ಟಿರಿಯಾ, ವೈರಸ್​ಗಳಿಂದ ಮುಕ್ತಗೊಳಿಸುವ ಪ್ರಯತ್ನಕ್ಕೆ ಬೇವಿನಿಂದ ಹೊರತೆಗೆದ ಔಷಧವನ್ನು ಬಳಸುವ ಪಕ್ಕಾ ದೇಸೀ ವಿಧಾನವನ್ನು ಈ ಹೊತ್ತಿನಲ್ಲೇ ಸಾಕಾರಗೊಳಿಸಿಕೊಂಡರು. ಅದಕ್ಕೆ ಬೇಕಾದ ಅನುಮತಿಯನ್ನೂ ಪಡೆದುಕೊಂಡು ಕೆಲಸ ಆರಂಭಿಸಿಯೇಬಿಟ್ಟರು. ಪರಿಣಾಮ ಇಂದು ಆ ಕೆಲಸಗಾರರು ಮೊದಲಿಗಿಂತ ಹೆಚ್ಚು ದುಡಿಯುತ್ತಿದ್ದಾರೆ. ಅಲ್ಲದೆ ಈಗ ಬೇಕರಿಗಳು ತೆರೆದುಕೊಂಡಿರುವುದರಿಂದ ನೀಮ್ೆಕ್​ಗಾಗಿ ಹೆಚ್ಚಿನ ಕೆಲಸಗಾರರನ್ನು ಕಂಪನಿಗೆ ನೇಮಕ ಮಾಡಿಕೊಳ್ಳಲಾಗಿದೆ. ಕರೊನಾ ಕೆಲಸ ತೆಗೆಯಲಿಲ್ಲ, ಬದಲಿಗೆ ಉದ್ಯೋಗ ನೀಡುವ ಸಾಮರ್ಥ್ಯ ಕೊಡುತ್ತಿದೆ ಎಂಬುದನ್ನು ಋತ್ವಿಕ್ ಸಾಬೀತುಪಡಿಸಿದ್ದಾರೆ!

    ಸಂಗೀತಾ ಮೊಬೈಲ್​ನ ಅಂಗಡಿಗಳನ್ನು ಯಾರು ಕಂಡಿಲ್ಲ ಹೇಳಿ? ದೇಶದಾದ್ಯಂತ 600ಕ್ಕೂ ಹೆಚ್ಚು ಔಟ್​ಲೆಟ್​ಗಳನ್ನು ಹೊಂದಿರುವ ಸಂಗೀತಾ ನಿಸ್ಸಂಶಯವಾಗಿ ಭಾರತದ ಅತ್ಯಂತ ದೊಡ್ಡ ಮೊಬೈಲ್ ಮಾರಾಟಗಾರರು. ಅದರ ಮುಖ್ಯಸ್ಥರಾದ ಸುಭಾಷ್​ಚಂದ್ರ ಪ್ರತೀ ತಿಂಗಳು ಸಂಬಳಕ್ಕೆಂದೇ ನಾಲ್ಕುಕೋಟಿ ರೂಪಾಯಿ ಖರ್ಚು ಮಾಡುತ್ತಾರೆ. ಸಾವಿರಾರು ಉದ್ಯೋಗಿಗಳು ಕೆಲಸಕ್ಕಿದ್ದಾರೆ. ಅವರೆಲ್ಲರನ್ನೂ ನಿರಂತರವಾಗಿ ಕೆಲಸದಲ್ಲಿ ಇರಿಸಲೆಂದೇ ಅವರು ವಿಶೇಷವಾದ ಉಪಾಯ ಮಾಡಿದರಂತೆ. ಇಷ್ಟೂ ದಿನ ತಮ್ಮ ಅಂಗಡಿಗಳಲ್ಲಿ ಮೊಬೈಲ್ ಖರೀದಿಸಿದವರಿಗೆ ಕೆಲಸಗಾರರ ಮೂಲಕ ಫೋನ್ ಮಾಡಿಸಿ, ಅವರಿಗೆ, ಅವರ ಆತ್ಮೀಯರಿಗೆ ಬೇಕಾದ ವಸ್ತುಗಳನ್ನು ತಲುಪಿಸುವ ಹೊಸ ಜಾಲವನ್ನೇ ನಿರ್ವಿುಸಿಕೊಂಡರಂತೆ. ಲಾಕ್​ಡೌನ್​ನ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಕೆಲವು ಪ್ರಮುಖ ಕೈಗಾರಿಕೆಗಳಿಗೆ ಕಾರ್ವಿುಕರು ಬೇಕಾಗಿದ್ದಾಗ ಇವರೇ ಅದನ್ನು ಒದಗಿಸಿಕೊಟ್ಟರೆಂದು ಸುಭಾಷ್​ಚಂದ್ರ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

    ತೀರ್ಥಹಳ್ಳಿಯ ವಿಶ್ವನಾಥ್ ಕುಂಟುವಳ್ಳಿ ಅವರದ್ದು ಬೇರೆಯೇ ಕಥೆ. ಕುಂಬಳಕಾಯಿ ಬೆಳೆದ ರೈತರು ಲಾಕ್​ಡೌನ್​ನ ಅವಧಿಯಲ್ಲಿ ಕಣ್ಣೀರಿಡುತ್ತ ಕುಳಿತಿದ್ದಾಗ ಅಡುಗೆಮನೆ ಸೇರಿಕೊಂಡ ವಿಶ್ವನಾಥ್ ಈ ಕುಂಬಳಕಾಯಿಗಳಿಂದ ಆಗ್ರಾದ ಪೇಟಾ ಮಾದರಿಯ ಸಿಹಿಯನ್ನು ತಯಾರಿಸಿದರು. ಈ ಕುಂಬಳಕಾಯಿಗಳನ್ನು ಕತ್ತರಿಸಿ ಚೂರು ಮಾಡಲು ತಾವೇ ಯಂತ್ರವನ್ನು ಆವಿಷ್ಕರಿಸಿ 500 ಟನ್​ಗಳಷ್ಟು ಕುಂಬಳಕಾಯಿಯನ್ನು ರೈತರಿಂದ ಖರೀದಿಸಿದರು. ಏಳೆಂಟು ಟನ್​ಗಳಿಗಾಗುವಷ್ಟು ಪೇಟಾ ಮಾಡಿ ಆಗ್ರಾ ಪೇಟಕ್ಕೆ ಪರ್ಯಾಯವಾದ ಸಿಹಿಯೊಂದನ್ನು ತಮ್ಮ ಹಳ್ಳಿ ಆರಗದ ಹೆಸರಿನಲ್ಲಿ ಆರಗಾ ಪೇಟಾವಾಗಿ ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಿದರು.

    ಈ ಬಗೆಯ ಅನೇಕ ಕಥನಗಳು ಕರೊನಾ ಕಾಲದಲ್ಲಿ ನಡೆದಿವೆ. ಸಮಸ್ಯೆಗಳನ್ನೇ ವೈಭವೀಕರಿಸುವ ಬಹುತೇಕರು ಈ ರೀತಿಯ ಸಾಹಸಗಳನ್ನು ಮರೆಮಾಚಿಬಿಡುತ್ತಾರೆ. ಇಂತಹ ಪ್ರತೀ ಹೋರಾಟವೂ ಹೊಸಬರಲ್ಲಿ ಚೈತನ್ಯವನ್ನು ಹುಟ್ಟುಹಾಕಲು ಸಾಕಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ಉದ್ಯಮಿಗಳ ಈ ಸಾಹಸಪ್ರವೃತ್ತಿಯ ಕಾರ್ಯಕ್ರಮವನ್ನು (ಫಿಪ್್ತಪಿಲ್ಲರ್) ಉದ್ಘಾಟಿಸಿದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸಾವಧಾನಚಿತ್ತವಾಗಿ ಆಲಿಸಿದರು. ಉದ್ಯಮ ಕ್ರಿಯಾಶೀಲವಾಗಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನೆಲ್ಲ ವಿಸ್ತಾರವಾಗಿ ವಿವರಿಸಿದರು. ಆನಂತರ ಉದ್ಯಮಿಗಳೊಂದಿಗೆ ಮುಕ್ತ ಚರ್ಚೆಯಲ್ಲಿ ಪಾಲ್ಗೊಂಡು ಅನೇಕ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಹುಡುಕಲು ಕಟಿಬದ್ಧ ಎಂದು ಹೇಳಲು ಮರೆಯಲಿಲ್ಲ. ಕಟ್ಟಡ ನಿರ್ಮಾಣ ಅನುಮತಿಗಾಗಿ ಹತ್ತಾರು ಕಚೇರಿಗಳಿಗೆ ಅಲೆಯುವ ಪರಿಸ್ಥಿತಿಯನ್ನು ನಿವಾರಿಸಬೇಕೆಂಬ ಉದ್ಯಮಿ ರವೀಂದ್ರ ಪೈ ಅವರ ಬೇಡಿಕೆಗೆ ಸಕಾರಾತ್ಮಕ ಸ್ಪಂದನೆಯಿತ್ತು. ಅದಕ್ಕೆ ಕಾರಣವೂ ಇದೆ. ಆರ್ಥಿಕ ಪುನಶ್ಚೇತನಕ್ಕೆ ಕಟ್ಟಡ ನಿರ್ಮಾಣ ನಿಜಕ್ಕೂ ಶಕ್ತಿ ತುಂಬುತ್ತದೆ. ಮೇಲ್ನೋಟಕ್ಕೆ ಕಟ್ಟಡ ನಿರ್ಮಾಣ ಕೈಗಾರಿಕೆ ಎಂದೆನಿಸುವುದಿಲ್ಲವಾದರೂ ನಿರ್ವಣಕ್ಕೆ ಬೇಕಾದ ಪ್ರತಿಯೊಂದು ವಸ್ತುವೂ ಒಂದೊಂದು ಕೈಗರಿಕೆಯೇ. ಸಿಮೆಂಟ್, ಕಬ್ಬಿಣಗಳಿಂದ ಹಿಡಿದು ಮನೆಯನ್ನು ಒಳಗೆ ಸಿಂಗರಿಸುವವರೆಗೂ ಎಲ್ಲವೂ ಸ್ವತಃ ದೊಡ್ಡ ಕೈಗಾರಿಕೆಗಳಾಗಿ ಬೆಳೆದು ನಿಂತಿವೆ. ಒಮ್ಮೆ ಕಟ್ಟಡ ನಿರ್ಮಾಣ ಚಟುವಟಿಕೆಗಳು ಚುರುಕುಗೊಂಡರೆ ಇದಕ್ಕೆ ಪೂರಕವಾದ ಎಲ್ಲ ಉದ್ಯಮಗಳೂ ವೇಗವನ್ನು ಪಡೆದುಕೊಂಡುಬಿಡುತ್ತವೆ.

    ಇದರೊಟ್ಟಿಗೆ ಮೊಬೈಲ್ ತಯಾರಿಕೆಯ ವಿಚಾರಕ್ಕೆ ಬಂದರೆ ಕರ್ನಾಟಕವಷ್ಟೇ ಅಲ್ಲ, ಇಡಿಯ ದೇಶ ಹಿಂದೆ ಉಳಿದಿದೆ. ಚೀನಾದೊಂದಿಗಿನ ಆರ್ಥಿಕ ಸಮರದ ಈ ಹೊತ್ತಿನಲ್ಲಿ ಆತ್ಮನಿರ್ಭರವಾಗಬೇಕಿರುವ ಭಾರತದ ಕನಸನ್ನು ನನಸಾಗಿಸಲು ಸಿದ್ಧರಿದ್ದೇವೆ ಎಂದು ಹೇಳಿದ ಮೊಬೈಲ್ ತಯಾರಿಕರಿಗೆ ಮಂತ್ರಿಗಳು ವಿಶೇಷ ಭರವಸೆ ಕೊಟ್ಟು ಬೆನ್ತಟ್ಟಿದ್ದು ಪ್ರೋತ್ಸಾಹದಾಯಕವಾಗಿತ್ತು!

    ಉದ್ಯಮಗಳಿಗೆ ಸಮಸ್ಯೆಗಳು ಖಂಡಿತ ಇವೆ. ಆದರೆ ಅದರ ನಿವಾರಣೆಗೆ ಸರ್ಕಾರಗಳಷ್ಟೇ ಅಲ್ಲ, ಪ್ರತಿಯೊಬ್ಬ ವ್ಯಕ್ತಿಯೂ ಈಗ ಮನಸ್ಸು ಮಾಡಬೇಕಿದೆ. ನಾವೆಲ್ಲರೂ ಸರ್ಕಾರದೆಡೆಗೆ ಮುಖ ಮಾಡುತ್ತ ನಮ್ಮ ಆಂತರ್ಯದ ಶಕ್ತಿಯನ್ನು ಮರೆತೇಬಿಟ್ಟಿದ್ದೇವೆ. ಚೀನಾ ಕಡಿಮೆ ಬೆಲೆಗೆ ವಸ್ತು ಕೊಡುತ್ತದೆ ಎಂದು ಗಂಟೆಗಟ್ಟಲೆ ಕೊರೆಯುವ ಕಮ್ಯುನಿಸ್ಟರು ಚೀನಾದ ಕಾರ್ವಿುಕರ ಕಾರ್ಯಕ್ಷಮತೆಯೂ ಅಪರೂಪದ್ದು ಎಂದು ಹೇಳುವುದನ್ನು ಮರೆತೇಬಿಡುತ್ತಾರೆ. ತಮಾಷೆಗಾದರೂ ಜಗತ್ತಿನಲ್ಲಿ ಚಾಲ್ತಿಯಲ್ಲಿರುವ ಮಾತೊಂದಿದೆ. ಚೀನಿಯರು ಎಂಟು ಗಂಟೆ ಕೆಲಸ ಮಾಡಿದರೆ ಹತ್ತು ಗಂಟೆಗಳಿಗಾಗುವಷ್ಟು ಉತ್ಪಾದಕತೆ ತೋರುತ್ತಾರೆ. ಭಾರತೀಯರಾದರೋ ಹತ್ತು ದಿನಗಳಿಗೆ ಕೆಲಸ ಮಾಡಿದರೆ ಎಂಟು ಗಂಟೆಗಳಿಗೆ ಸಾಕಾಗುವಷ್ಟು ಉತ್ಪಾದಕತೆ ತೋರುತ್ತಾರೆ ಅಂತ. ಜಗತ್ತಿನ ಅರಿವಿದ್ದವರು ಇದನ್ನು ಸುಳ್ಳೆಂದು ಹೇಳುವುದಿಲ್ಲ. ಆದರೆ ನಮ್ಮ ಕಮ್ಯುನಿಸ್ಟರನ್ನು ಕೇಳಿ ನೋಡಿ, ಅವರಿಗೆ ಎಲ್ಲಕ್ಕೂ ಚೀನಾ ಬೇಕು. ಆದರೆ ಭಾರತೀಯ ಕಾರ್ವಿುಕರನ್ನು ಮಾತ್ರ ಪ್ರತಿಭಟನೆಯ ಹೆಸರಿನಲ್ಲಿ ಸದಾ ಬೀದಿಗೆ ತಂದು ನಿಲ್ಲಿಸಬೇಕು. ಹೀಗಾಗಿ ಉದ್ಯಮಿಯೊಬ್ಬರು ಕೆಲಸಕ್ಕೆ ಸಂಬಳ ದಿನಗೂಲಿ ಎಂದು ಕೊಡುವ ಬದಲು ವ್ಯಕ್ತಿಯ ಕಾರ್ಯಕ್ಕೆ ಸರಿದೂಗುವಷ್ಟು ಕೊಡಬೇಕೆಂಬ ಕಲ್ಪನೆಯನ್ನು ಹರಿಬಿಟ್ಟಿದ್ದು ಅನೇಕರಿಗೆ ಹಿಡಿಸಿತ್ತು.

    ಇಡಿಯ ಸಭೆ ವಿಶೇಷವಾಗಿ ಚರ್ಚೆ ನಡೆಸಿದ್ದು ಇಂದಿನ ಶಿಕ್ಷಣ ವ್ಯವಸ್ಥೆಯ ಮೇಲೆ. ನಮ್ಮ ಕಾಲೇಜಿನಲ್ಲಿ ಓದುವ ವಿದ್ಯಾರ್ಥಿಗಳು ಒಂದಷ್ಟು ಕೋಡಿಂಗ್ ಕಲಿತು ಯಾವುದಾದರೂ ಸಾಫ್ಟ್​ವೇರ್ ಕಂಪನಿ ಕೈ ಹಿಡಿದರೆ ಸಾಕೆಂದು ಕಾಯುತ್ತ ಕುಳಿತಿರುತ್ತಾರೆ. ತನ್ನದ್ದೇ ಆದ ಆವಿಷ್ಕಾರದಲ್ಲಿ ತಾನು ತೊಡಗಬೇಕು, ಹೊಸ ಕಂಪನಿ ನಿರ್ವಿುಸಬೇಕು ಎಂಬ ಕಲ್ಪನೆಯಲ್ಲಿ ಅವರಿಲ್ಲವೇ ಇಲ್ಲ. ಇವರನ್ನು ಆತ್ಮನಿರ್ಭರ ಭಾರತಕ್ಕೆ ತಕ್ಕಂತೆ ಪುನರ್ ರೂಪಿಸಬೇಕಾದ ಹೊಣೆಗಾರಿಕೆ ನಮ್ಮ ಮೇಲೆಯೇ ಇದೆ ಎಂದು ಎಲ್ಲರಿಗೂ ಈಗ ಅನಿಸುತ್ತಿದೆ. ಬರಲಿರುವ ದಿನಗಳಲ್ಲಿ ಈ ಕುರಿತಂತೆ ಆಲೋಚಿಸಬೇಕಿದೆ. ಜಿಲ್ಲಾಕೇಂದ್ರಗಳಲ್ಲಿ ಈ ರೀತಿ ಉದ್ಯಮಿಗಳನ್ನು ಸೇರಿಸಿ ಅವರುಗಳಲ್ಲೂ ಈ ಬಗೆಯ ಆತ್ಮವಿಶ್ವಾಸವನ್ನು ತುಂಬಿ, ತನ್ಮೂಲಕ ಹೊಸ ಪೀಳಿಗೆಯ ತರುಣರನ್ನು ಸೂಕ್ತವಾಗಿ ನಿರ್ವಿುಸುವ ಜವಾಬ್ದಾರಿಯನ್ನು ನಾವೆಲ್ಲ ಹೊರಬೇಕಿದೆ.

    ಭಾರತ ಹೊಸದಾಗಿ ನಿರ್ವಣವಾಗಬೇಕೆಂದರೆ ನಮ್ಮೆಲ್ಲರ ಶ್ರಮ ಅಗತ್ಯ. ಚೀನಾದ ಎದುರಿಗೆ ಯುದ್ಧಕ್ಕೆಂದು ತಯಾರಾಗುವಾಗ ನಮ್ಮನ್ನು ಅನೇಕ ಪ್ರಶ್ನೆಗಳು ಕಾಡುತ್ತಿವೆ. ಚೀನಾ ಶಕ್ತಿಶಾಲಿ ಎಂದು ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ ವಾಸ್ತವವಾಗಿ ಯಾವ ದಿಕ್ಕಿನಿಂದ ನೋಡಿದರೂ ಚೀನಾಕ್ಕಿಂತಲೂ ನಾವೇ ಬಲಶಾಲಿ. ಇಲ್ಲಿ ಪ್ರಜಾಪ್ರಭುತ್ವ ಇದೆ, ಪೊಲೀಸರ ದೌರ್ಜನ್ಯವಿಲ್ಲ, ಯಾರ ಮೇಲೂ ಒತ್ತಡ ಹಾಕಿ ದೇಶ ತನಗೆ ಬೇಕಾದ್ದನ್ನು ಮಾಡಿಸಿಕೊಳ್ಳುವುದಿಲ್ಲ, ಪತ್ರಿಕೆಗಳು ಅಗತ್ಯಬಿದ್ದಾಗ ಪ್ರಧಾನಮಂತ್ರಿಯನ್ನು ಟೀಕಿಸುತ್ತವೆ. ಸೈನ್ಯ ಮತ್ತು ದೇಶಗಳು ಒಂದಕ್ಕೊಂದು ಪೂರಕವಾಗಿ ಕೆಲಸ ನಿರ್ವಿುಸುತ್ತವೆ. ಚೀನಾದಲ್ಲಿ ಇವ್ಯಾವುವೂ ಇಲ್ಲ. ಅಲ್ಲಿರುವುದು ಒಂದೇ ಒಂದು ಸರ್ವಾಧಿಕಾರತ್ವ. ಷಿ ಜಿನ್​ಪಿಂಗ್ ಆದೇಶಿಸಿದಂತೆ ಜನ ಕೇಳಿಕೊಂಡಿರಬೇಕು ಅಷ್ಟೇ. ಹಾಗಂತ ನಾವು ಹೆದರಬೇಕಿಲ್ಲ. ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿಯೇ ಸಮರ್ಥವಾಗಿರುವ ರಾಷ್ಟ್ರವನ್ನು ಕಟ್ಟಬಹುದು. ಅದಕ್ಕೆ ನಮಗೆ ನಾವೇ ಚೌಕಟ್ಟು ಹಾಕಿಕೊಂಡು ಕಾರ್ಯಕ್ಷಮತೆಯನ್ನು ವೃದ್ಧಿಸಿಕೊಳ್ಳಬೇಕಾಗಿದೆ ಅಷ್ಟೇ. ಇದೊಂದು ಪರ್ವಕಾಲ. ಈಗಲೂ ಇದನ್ನು ಮಾಡಲು ನಮ್ಮಿಂದಾಗದಿದ್ದರೆ, ಇನ್ನೆಂದೂ ಇಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts