ಹಾಸನ: ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಾಸನ ಪ್ರಥಮ ಸ್ಥಾನ ಪಡೆದಿತ್ತು. ಅದರ ಬೆನ್ನಲ್ಲೇ ಪರೀಕ್ಷೆಯಲ್ಲಿ ನಕಲು ಮಾಡಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಈ ಆರೋಪದ ಬಗ್ಗೆ ಹಾಸನ ಉಸ್ತುವಾರಿ ಸಚಿವ ಮಾಧುಸ್ವಾಮಿ ಪ್ರತಿಕ್ರಿಯೆ ನೀಡಿ, ಕಳೆದ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಾಸನದಲ್ಲಿ ವಿದ್ಯಾರ್ಥಿಗಳ ಬಳಿ ನಕಲು ಮಾಡಿಸಲಾಗಿದೆ ಎಂಬ ಆರೋಪಕ್ಕೆ ನಾನೀಗ ಏನೂ ಪ್ರತಿಕ್ರಿಯೆ ನೀಡುವುದಿಲ್ಲ. ಕಳೆದ ಬಾರಿ ಉತ್ತಮ ಫಲಿತಾಂಶ ಬಂದಿದೆ. ಈ ಬಾರಿ ಅದರ ಹತ್ತಿರಕ್ಕೂ ಫಲಿತಾಂಶ ಬಾರದೆ ಇದ್ದರೆ ಅನುಮಾನ ಬರುತ್ತದೆ. ಈ ಸಲವೂ ಅದೇ ರಿಸಲ್ಟ್ ಬಂದರೆ ಯಾವುದೇ ಅನುಮಾನವೂ ಇರುವುದಿಲ್ಲ ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಬಳಿಕ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ ಆಗುತ್ತದೆ ಎಂದು ಸಿದ್ದರಾಮಯ್ಯನವರು ಹೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಮಾಧುಸ್ವಾಮಿ, ಬಿಜೆಪಿ ಶಾಸಕರಿಗೆ ಆಸೆ ಇದ್ದರೂ ಅಸಮಾಧಾನ ಸ್ಫೋಟ ಮಾಡಿಕೊಂಡು ಆಚೆಗೆ ಹೋಗುವ ಸ್ಥಿತಿಯಲ್ಲಿ ಯಾರೂ ಇಲ್ಲ ಎಂದು ಭಾವಿಸಿದ್ದೇನೆ. ನಮ್ಮ ಸರ್ಕಾರ ರಚನೆ ಮಾಡುವಾಗ ಏನು ಸಮಸ್ಯೆ ಆಯಿತು, ಹಠ ಮಾಡಿದರೆ ಏನಾಗುತ್ತದೆ ಎಂಬ ಅರಿವು ಇರುವುದರಿಂದ ಸಿದ್ದರಾಮಯ್ಯನವರು ನಿರೀಕ್ಷೆ ಮಾಡಿದ ಫಲಿತಾಂಶ ಸಿಗೋದಿಲ್ಲ ಎಂದರು.
ಮಂಗಳೂರು ಬಾಂಬ್ ಪ್ರಕರಣದ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿದ ಹೇಳಿಕೆಯ ಬಗ್ಗೆ ಮಾತನಾಡಿದ ಮಾಧುಸ್ವಾಮಿ, ಈ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ. ಒಬ್ಬ ಮಾಜಿ ಮುಖ್ಯಮಂತ್ರಿ ಹೀಗೆಲ್ಲ ಮಾತನಾಡಬಾರದು. ನಾವೆಲ್ಲ ಆಡಳಿತ ನಡೆಸುವ ಹಂತದಲ್ಲಿರುವವರು ಯಾವುದೇ ಅಭಿಪ್ರಾಯ ಕ್ರಿಯೇಟ್ ಮಾಡಬಾರದು. ಹಾಗಲ್ಲ, ಹೀಗಲ್ಲ ಎಂದು ಹೇಳುತ್ತ ಹೋದರೆ ಪೊಲೀಸರು ಕೆಲಸ ಮಾಡುವುದು ಕಷ್ಟವಾಗುತ್ತದೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)