More

    ಕಲ್ಲಂಗಡಿ ಬೆಳೆಯತ್ತ ಕರಾವಳಿ ಕೃಷಿಕರ ಚಿತ್ತ

    ಕೋಟ: ಕರಾವಳಿ ಭಾಗದಲ್ಲಿ ಕಲ್ಲಂಗಡಿ ಬೆಳೆಯವರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೋಟ ಹೋಬಳಿಯ ಮಣೂರು, ಮೂಡುಗಿಳಿಯಾರು, ಗಿಳಿಯಾರು, ಪಡುಕರೆ, ಸಾಲಿಗ್ರಾಮದ ಕಾರ್ಕಡ, ಸಾಸ್ತಾನದ ಪಾಂಡೇಶ್ವರ ಹೀಗೆ ಕೆಲವು ಭಾಗಗಳಲ್ಲಿ ಈ ಬೆಳೆಯನ್ನು ಬೆಳೆಯಲು ಪ್ರಾರಂಭಿಸಿ ಲಾಭದಾಯಕ ಕೃಷಿಯನ್ನಾಗಿಸಿಕೊಂಡಿದ್ದಾರೆ.

    ಕೋಟದ ರೈತಧ್ವನಿ ಸಂಘದ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ, ಮೂಡುಗಿಳಿಯಾರು ಪರಿಸರದ ರಮೇಶ್ ಹೇರ್ಳೆ, ಗಿಳಿಯಾರಿನ ಭೋಜ ಪೂಜಾರಿಯವರ ಹೊಲದಲ್ಲಿ ಬೆಳೆದ ಕಲ್ಲಂಗಡಿ ಹಣ್ಣು ಸದ್ಯ ಮಾರುಕಟ್ಟೆಗೆ ಸಿದ್ಧಗೊಂಡಿದೆ.
    ಲಾಕ್‌ಡೌನ್ ಭಯದಿಂದ ಕಳೆದ ವರ್ಷ ಮನೆಬಾಗಿಲಿನಲ್ಲಿ ರಾಶಿ ಹಾಕಿ ಮಾರಾಟ ಮಾಡಿದ್ದಾರೆ. ಅದೇ ರೀತಿ ಈ ಬಾರಿಯೂ ಸನ್ನಿವೇಶ ಸೃಷ್ಟಿಯಾಗಿದೆ. ಒಂದೆಡೆ ಕರ್ಫ್ಯೂ ಇನ್ನೊಂದೆಡೆ ಕಲ್ಲಂಗಡಿ ಗದ್ದೆಯಲ್ಲೇ ಉಳಿದು ಕೊಳೆಯುವ ಭಯದ ನಡುವೆ ರೈತರು ಮಾರಾಟಕ್ಕೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಮೊರೆಹೋಗಿದ್ದಾರೆ. ಅದರಂತೆ ಜಯರಾಮ ಶೆಟ್ಟಿ, ಭೋಜ ಪೂಜಾರಿ ಕೆ.ಜಿ.ಗೆ 10 ರೂ. ದರಲ್ಲಿ ವ್ಯಾಪಾರ ನಡೆಸಲು ಪ್ರಾರಂಭಿಸಿದ್ದು, ಒಂದೇ ದಿನ 1 ಟನ್ ಖಾಲಿಯಾಗಿದೆ.

    ಸಾವಯವ ಗೊಬ್ಬರ ಬಳಕೆ: ಕಲ್ಲಂಗಡಿ ಹಣ್ಣಿಗೆ ಈ ಕರಾವಳಿ ಭಾಗದಲ್ಲಿ ಸಾವಯವ ಗೊಬ್ಬರ ಬಳಸಿ ಅದರಿಂದ ಹೆಚ್ಚು ಫಸಲು ಪಡೆಯುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಈ ಕಾರ್ಯಕ್ಕೆ ಹೆಚ್ಚು ಕೆಲಸ ತಂತ್ರಗಳಾದರೂ ಈ ಆಯ್ಕೆಯಿಂದ ಲಾಭದಾಯಕ ಕೃಷಿಯಾಗಿಸಲು ಸಾಧ್ಯವಿದೆ ಎಂದು ಈ ಭಾಗದ ರೈತರು ತೋರಿಸಿಕೊಟ್ಟಿದ್ದಾರೆ.
    ಈ ವರ್ಷದ ಅಕಾಲಿಕ ಮಳೆಯಿಂದ ರೈತ ಬೆಳೆದ ವಿವಿಧ ಬೆಳೆಗಳಿಗೆ ಮಾರಕವಾಗಿ ಪರಿಣಮಿಸಿದೆ. ಅದರಲ್ಲೂ ಭೋಜ ಪೂಜಾರಿ ಅವರಿಗೆ ಅಕಾಲಿಕ ಮಳೆಯಿಂದ ಹುಳದ ಬಾಧೆ ಉಂಟಾಗಿ 10 ಟನ್ ಕಲ್ಲಂಗಡಿ ಹಾಳಾಗಿದೆ.

    ಮಾಧ್ಯಮ ಪ್ರಚಾರದಿಂದ ಕಲ್ಲಂಗಡಿ ಬೆಳೆದ ರೈತ ನಿರಾಳದಲ್ಲಿ ವ್ಯವಹರಿಸುವಂತಾಗಿದೆ. ಕರೊನಾ ಕಾಲಘಟ್ಟವನ್ನು ಲೆಕ್ಕಿಸದೆ ಪೂರ್ವಾಹ್ನ 10ರೊಳಗೆ ಮನೆಗೆ ಬಂದು ಖರೀದಿಸಿದ್ದಾರೆ.
    ಎಂ.ಜಯರಾಮ ಶೆಟ್ಟಿ ಮಣೂರು, ಕೋಟ ರೈತಧ್ವನಿ ಸಂಘ ಅಧ್ಯಕ್ಷ

    ಕಷ್ಟಪಟ್ಟು ಬೆಳೆದ ಕಲ್ಲಂಗಡಿ ಹಣ್ಣಿಗೆ ಲಾಭದಾಯಕ ದರ ಹಾಗೂ ನಿರ್ಭಯದಿಂದ ವ್ಯವಹರಿಸುವ ಸ್ಥಿತಿ ಸೃಷ್ಟಿಯಾಗಬೇಕು. ಕಳೆದ ಬಾರಿ ಇಲ್ಲಿನ ಸ್ಥಳೀಯ ರೈತರೊಬ್ಬರು ಬೆಳೆದ ಕಲ್ಲಂಗಡಿ ಹಣ್ಣು ಕೊವೀಡ್ ಭಯದ ನಡುವೆ ರಾಷ್ಟ್ರೀಯ ಹೆದ್ದಾರಿ ಸಮೀಪ ತಮ್ಮ ಮನೆಯಲ್ಲಿ ವ್ಯವಹರಿಸಲು ಅನುಕೂಲ ಕಲ್ಪಿಸಲಾಗಿದೆ. ಸರ್ಕಾರ ಇಂಥಹ ಬೆಳೆಗಳಿಗೆ ಪ್ರೋತ್ಸಾಹ ನೀಡಬೇಕು. ಸರ್ಕಾರವೇ ನೇರ ಖರೀದಿಸಿ ವ್ಯವಹರಿಸುವಂತಾಗಬೇಕು.
    ಸಂತೋಷ್ ಪ್ರಭು ಕೋಟ, ಉದ್ಯಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts