More

    ಗ್ರಾಮೀಣ ಪ್ರದೇಶದ ಬೋರ್‌ವೇಲ್, ತೆರೆದ ಬಾವಿಗಳ ನೀರಿನ ಪರೀಕ್ಷೆ

    ಪುತ್ತೂರು: ತೆರೆದಬಾವಿ ಹಾಗೂ ಬೋರ್‌ವೆಲ್‌ನ ನೀರು ಬಳಕೆಗೆ ಯೋಗ್ಯವೇ ಎಂಬುದನ್ನು ಪರೀಕ್ಷಿಸಿ ನೀರು ಪೂರೈಸುವ ಮಹತ್ತರ ಯೋಜನೆ ಪುತ್ತೂರಿನಲ್ಲಿ ಅನುಷ್ಠಾನಕ್ಕೆ ಬಂದಿದ್ದು, ತಾಲೂಕಿನ ಪ್ರತಿ ಗ್ರಾಪಂಗೆ ನೀರು ಶುದ್ಧತೆ ಪರೀಕ್ಷೆ ಮಾಡಬಹುದಾದ ಫೀಲ್ಡ್ ಟೆಸ್ಟ್ ಕಿಟ್‌ಗಳನ್ನು ವಿತರಿಸಲಾಗಿದೆ.

    ಪುತ್ತೂರು ನಗರ ಹಾಗೂ ಗ್ರಾಮಾಂತರ ಭಾಗದ ಬಹುತೇಕ ತೆರೆದಬಾವಿ ಹಾಗೂ ಬೋರ್‌ವೆಲ್‌ನ ನೀರು ಕಬ್ಬಿಣ ವಾಸನೆ ಹಾಗೂ ಮಲೀನವಾಗಿರುವ ಬಗ್ಗೆ ವರ್ಷದ ಹಿಂದೆ ಹಲವು ದೂರುಗಳು ಬಂದಿದ್ದು, ಗ್ರಾಪಂ ಅಧೀನದ ನೀರಿನ ಮೂಲಗಳ ಮಲೀನ ತೆರವು ಮಾಡಿ ಶುದ್ಧ ಕುಡಿಯುವ ನೀರಾಗಿ ಪರಿವರ್ತನೆಗೊಳಿಸುವ ನಿಟ್ಟಿನಲ್ಲಿ ಫೀಲ್ಡ್ ಟೆಸ್ಟ್ ಕಿಟ್   ಬಳಸಿಕೊಳ್ಳಲಾಗುತ್ತಿದೆ.

    ನೀರಿನ ಶುದ್ಧತೆ ಪರಿಶೀಲನೆ: ಜಿಲ್ಲಾ ಗ್ರಾಮೀಣ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಈ ಕಿಟ್  ಗಳನ್ನು ಪುತ್ತೂರಿನ ಎಲ್ಲ ಗ್ರಾಪಂಗೆ ನೀಡಲಾಗಿದೆ. ಈ ಕಿಟ್ ಬಳಸುವ ಮೂಲಕ ಪ್ರತಿ ಗ್ರಾಪಂನ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿನ ಮನೆ ಸಹಿತ ಸರ್ಕಾರಿ ಕಟ್ಟಡಗಳಿಗೆ ನೀಡುವ ಕುಡಿಯುವ ನೀರಿನ ಶುದ್ಧತೆ ಪರೀಕ್ಷಿಸಬಹುದು.
     
    ತಲಾ ಐವರು ಪರೀಕ್ಷಕರು:  ಫೀಲ್ಡ್ ಟೆಸ್ಟ್ ಕಿಟ್ಮೂಲಕ ನೀರಿನಲ್ಲಿರುವ ಬ್ಯಾಕ್ಟೀರಿಯಾ ಹಾಗೂ ರಾಸಾಯನಿಕಗಳನ್ನು ಪತ್ತೆ ಹಚ್ಚಬಹುದು. ಈ ಕಿಟ್‌ಗಳನ್ನು ಪ್ರತಿ ಗ್ರಾಪಂಗಳಿಗೆ ನೀಡಲಾಗುತ್ತಿದ್ದು, ಬೇಸಿಕ್ ಹಂತದ ರಾಸಾಯನಿಕ ಹಾಗೂ ಬ್ಯಾಕ್ಟೀರಿಯಾಗಳನ್ನು ಮಾತ್ರ ಈ ಕಿಟ್‌ಗಳಿಂದ ಪತ್ತೆಹಚ್ಚಬಹುದು. ಹೆಚ್ಚಿನ ಕಂಟೆಂಟ್‌ಗಳಿದ್ದರೆ ನೀರು ಮತ್ತು ನೈರ್ಮಲ್ಯ ಇಲಾಖೆ ಪ್ರಯೋಗಾಲಯಕ್ಕೆ ನೀರಿನ ಸ್ಯಾಂಪಲ್ಲನ್ನು ಕಳುಹಿಸಿ ಅಲ್ಲಿನ ತಜ್ಞರಿಂದ ಕಂಡು ಹಿಡಿಯಲಾಗುತ್ತದೆ. ಗ್ರಾಪಂ ವ್ಯಾಪ್ತಿಯ ಬೋರ್‌ವೆಲ್‌ಗಳಿಂದ ಬಾಟಲಿಗಳಲ್ಲಿ ನೀರು ಸಂಗ್ರಹಿಸಿ ಈ ಕಿಟ್‌ಗಳಲ್ಲಿ ಟೆಸ್ಟ್ ಮಾಡಲಾಗುತ್ತದೆ. ನೀರಿನ ಶುದ್ಧತೆ ಪರೀಕ್ಷೆಗಾಗಿ ಪ್ರತಿ ಗ್ರಾಪಂಗೆ ತಲಾ ಐವರನ್ನು (ಅಂಗನವಾಡಿ, ಆಶಾ ಕಾರ್ಯಕರ್ತೆ) ನೇಮಿಸಲಾಗಿದ್ದು, ಇವರು ಬೋರ್‌ವೆಲ್‌ಗಳಿಂದ ನೀರು ಸಂಗ್ರಹಿಸಿ ಗ್ರಾಪಂಗೆ ತಂದು ಪರೀಕ್ಷಿಸುತ್ತಾರೆ. ಈಗಾಗಲೇ ಪುತ್ತೂರು, ಕಡಬ ತಾಲೂಕಿನಲ್ಲಿ ಕಿಟ್ ಬಳಕೆ ಕುರಿತು ತರಬೇತಿ ನೀಡಲಾಗಿದೆೆ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಭರತ್ ತಿಳಿಸಿದ್ದಾರೆ.
     
    ನೀರು ಮತ್ತು ನೈರ್ಮಲ್ಯ ಸಮಿತಿ ರಚಿಸಿ, ಸಮಿತಿ ಸದಸ್ಯರಿಗೆ ನೀರಿನ ಶುದ್ಧತೆ ಪರೀಕ್ಷಿಸುವ ವಿಧಾನದ ಬಗ್ಗೆ ತರಬೇತಿ ನೀಡಲಾಗಿದೆ. ಈಗಾಗಲೇ ಕಿಟ್ ಬಳಕೆ ಕುರಿತು ಪುತ್ತೂರಿನ ಎಂಟು ಗ್ರಾಪಂಗಳ ಸಮಿತಿ ಸದಸ್ಯರು ತರಬೇತಿ ಪಡೆದಿದ್ದಾರೆ. ಉಳಿದ ಗ್ರಾಪಂಗಳಲ್ಲಿ ಮುಂದಿನ ದಿನಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು. ಪ್ರತಿ ಆರು ತಿಂಗಳಿಗೊಮ್ಮೆ ಕುಡಿಯುವ ನೀರನ್ನು ಟೆಸ್ಟ್ ಮಾಡಲಾಗುತ್ತದೆ. ಪ್ರಸ್ತುತ ಮನೆ ಹಾಗೂ ಸರ್ಕಾರಿ ಕಟ್ಟಡಕ್ಕೆ ಒದಗಿಸುವ ನೀರನ್ನು ಮಾತ್ರ ಟೆಸ್ಟ್ ಮಾಡಲಾಗುವುದು.
    -ಶ್ರೀಕೃಷ್ಣ, ನೀರು ಮತ್ತು ನೈರ್ಮಲ್ಯ ಇಲಾಖೆ ಪ್ರಯೋಗಾಲಯ ತಜ್ಞ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts