More

    ಶ್ರಮಿಕರ ಜೀವಕ್ಕಿಲ್ಲ ಬೆಲೆ ; ಎತ್ತಿನಹೊಳೆ ಕಾಮಗಾರಿ ಕಾರ್ಮಿಕರಿಗೆ ಕನಿಷ್ಠ ಸೌಕರ್ಯವಿಲ್ಲ

    ತುಮಕೂರು: ಕಾರ್ಮಿಕರ ಜೀವಕ್ಕೆ ಇಲ್ಲಿ ಬೆಲೆಯೇ ಇಲ್ಲ. ಜೀತದಾಳುಗಳಂತೆ ದುಡಿಯುತ್ತಿರುವ ಈ ಕಾರ್ಮಿಕರಿಗೆ ಯಾವುದೇ ಮೂಲಸೌಕರ್ಯ ಒದಗಿಸಲಾಗಿಲ್ಲ. ಕಳೆದ 6 ತಿಂಗಳಲ್ಲಿ 5-6 ಕಾರ್ಮಿಕರು ಜೀವ ತೆತ್ತಿದ್ದರೂ ಈ ಸಾವುಗಳ ಹಿಂದಿನ ಸತ್ಯ ಮಣ್ಣಲ್ಲೇ ಹೂತುಹೋಗುತ್ತಿವೆ.

    ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯಲ್ಲಿ ಎತ್ತಿನಹೊಳೆ ಯೋಜನೆಯ ಅತ್ಯಂತ ವಿಶಿಷ್ಟವಾದ ‘ಅಕ್ವಡೆಕ್ಟ್’ (ಮೇಲ್ಗಾಲುವೆ) ನಿರ್ಮಾಣ ಕಾಮಗಾರಿಯಲ್ಲಿ ಕಾರ್ಮಿಕರಿಗೆ ಕನಿಷ್ಠ ಸುರಕ್ಷತೆ ಒದಗಿಸದೆ ದುಡಿಸಿಕೊಳ್ಳುತ್ತಿದ್ದು, ಈವರೆಗೆ ಹಲವು ಕಾರ್ಮಿಕರು ಪ್ರಾಣ ತೆತ್ತಿದ್ದಾರೆ. ಆದರೆ, ಈ ಸಾವುಗಳು ಬೆಳಕಿಗೆ ಬಾರದೆ ಎತ್ತಿನಹೊಳೆ ಮಣ್ಣಲ್ಲೇ ಮುಚ್ಚಿಹೋಗುತ್ತಿರುವ ಆರೋಪಗಳು ಕೇಳಿಬಂದಿವೆ.

    ಉತ್ತರಭಾರತೀಯರೇ ಹೆಚ್ಚು: 2018 ಮಾರ್ಚ್‌ನಲ್ಲೇ ಆರಂಭವಾಗಿರುವ ಎತ್ತಿನಹೊಳೆ ಯೋಜನೆಯಡಿ 10.47 ಕಿ.ಮೀ., ಉದ್ದದ ಅಕ್ವಡೆಕ್ಟ್ ನಿರ್ಮಾಣ ಕಾಮಗಾರಿಯನ್ನು ಮೂವರು ಗುತ್ತಿಗೆದಾರರು ಟೆಂಡರ್ ಪಡೆದು ಕಾಮಗಾರಿ ಆರಂಭಿಸಿದ್ದಾರೆ. ಈ ಅಕ್ವಡೆಕ್ಟ್ ನಿರ್ಮಾಣ ಕಾಮಗಾರಿಗೆ ಕೌಶಲಭರಿತ ಕಾರ್ಮಿಕರೇ ಆಗಬೇಕಿದ್ದು, ಈ ಬಹುತೇಕ ಉತ್ತರಭಾರತೀಯ ಕಾರ್ಮಿಕರನ್ನೇ ಇಲ್ಲಿಗೆ ಕರೆತಂದು ಕಾಮಗಾರಿ ಕೈಗೊಂಡಿದ್ದಾರೆ. ಆದರೆ, ಕನಿಷ್ಠ ಸುರಕ್ಷತಾ ಸಾಧನಗಳನ್ನೂ ಕಾರ್ಮಿಕರಿಗೆ ನೀಡದೆ ದುಡಿಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.

    6 ತಿಂಗಳಲ್ಲಿ 4 ಸಾವು: ಕಳೆದ 6 ತಿಂಗಳಲ್ಲಿ ಅಕ್ವಡೆಕ್ಟ್ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಭಾಗದಲ್ಲಿ ದಾಖಲೆ ಪ್ರಕಾರವೇ 4 ಸಾವುಗಳಾಗಿವೆ. ಈ ಸಂಬಂಧ ಚೇಳೂರು ಠಾಣೆಯಲ್ಲಿ 3 ಅಸಹಜ ಸಾವು ಹಾಗೂ 1 ಸಾವಿನ ಎಫ್‌ಐಆರ್ ಆಗಿದೆ. ಆದರೆ, ಈ ಸಾವುಗಳಲ್ಲಿ ಸಂಬಂಧಪಟ್ಟವರಿಗೆ ಸೂಕ್ತಪರಿಹಾರ ನೀಡದೆ ಸಣ್ಣಪುಟ್ಟ ಕೈಕಾಸು ಕೊಟ್ಟು ಮುಚ್ಚಿಹಾಕಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.
    10.47 ಕಿ.ಮೀ., ಉದ್ದದ ಅಕ್ವಡೆಕ್ಟ್ ನಿರ್ಮಾಣ ಕಾಮಗಾರಿಯು 32 ಮೀಟರ್ ಎತ್ತರದಲ್ಲಿ ನಡೆಯಲಿದ್ದು, ಅಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸುರಕ್ಷತಾ ಬೆಲ್ಟ್ ಕೊಡಬೇಕು. ಜತೆಗೆ ಕೆಳಭಾಗದಲ್ಲಿ ಪ್ರಾಣರಕ್ಷಿಸುವ ಬಲೆ (ನೆಟ್) ಹಾಕುವುದು ಕಡ್ಡಾಯ. ಇದ್ಯಾವುದೇ ಸುರಕ್ಷತಾ ಕ್ರಮಗಳನ್ನು ಕಾಮಗಾರಿ ಸ್ಥಳದಲ್ಲಿ ಅಳವಡಿಸಿಕೊಂಡಿಲ್ಲ.

    ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಎ.ಮಲ್ಲಿಕಾರ್ಜುನ್ ರಾಜ್ಯದ ಮುಖ್ಯಮಂತ್ರಿಗಳಿಗೆ, ಕಾರ್ಮಿಕ ಇಲಾಖೆ ಸಚಿವರಿಗೆ ಪತ್ರ ಬರೆದು ಕಾರ್ಮಿಕರಿಗೆ ಕನಿಷ್ಠ ಮೂಲಸೌಕರ್ಯವನ್ನೂ ಒದಗಿಸದೆ ದುಡಿಸಿಕೊಳ್ಳುತ್ತಿರುವ ಬಗ್ಗೆ ಹಾಗೂ ಕಾರ್ಮಿಕರ ಸಾವಿನ ತನಿಖೆಗೆ ಆಗ್ರಹಿಸಿ ದೂರು ಸಲ್ಲಿ ಸಲ್ಲಿಸಿದ್ದು, ಈ ಕಾರ್ಮಿಕರನ್ನು ಸಂಕಷ್ಟದ ಸರಮಾಲೆಯ ‘ಜೀತದಿಂದ’ ಮುಕ್ತಿಗೊಳಿಸುವಂತೆ ಮನವಿ ಮಾಡಿದ್ದಾರೆ.

    ಎತ್ತಿನಹೊಳೆ ಅಕ್ವಡೆಕ್ಟ್: ಎತ್ತಿನಹೊಳೆ ಯೋಜನೆ ಅಕ್ವಾಡೆಕ್ಟ್ ವಿಶಿಷ್ಟವಾಗಿದ್ದು 10.47 ಕಿ.ಮೀ., ಉದ್ದದ ಮೇಲ್ಗಾಲುವೆ ಇದಾಗಿದೆ. ಗುಬ್ಬಿ ತಾಲೂಕು ಚೇಳೂರು ಹೋಬಳಿ ಮಲೆಮಾಚನಕುಂಟೆಯಿಂದ ಆರಂಭವಾಗಿ ತುಮಕೂರು ತಾಲೂಕು ಬೆಳ್ಳಾವಿ ಹೋಬಳಿ ದೊಡ್ಡೇರಿ ಬಳಿವರೆಗೆ ಈ ನಾಲೆಯು ಮೇಲ್ಭಾಗದಲ್ಲಿ ಹಾದುಹೋಗಲಿದೆ.

    ಎತ್ತಿನಹೊಳೆ ಯೋಜನೆ ಅಡಿ ಚೇಳೂರು ಹೋಬಳಿಯಲ್ಲಿ ಅಕ್ವಡೆಕ್ಟ್ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವ ಗುತ್ತಿಗೆದಾರರು ಕಾರ್ಮಿಕರಿಗೆ ಕನಿಷ್ಠ ಸುರಕ್ಷತಾ ಸಾಧನವನ್ನೂ ನೀಡಿಲ್ಲ. ಅವರು ಉಳಿದುಕೊಂಡಿರುವ ಕ್ಯಾಂಪ್‌ಗಳಲ್ಲಿ ಮೂಲ ಸೌಕರ್ಯವಿಲ್ಲದೆ ನಿಕೃಷ್ಟ ಬದುಕು ಸಾಗಿಸುತ್ತಿದ್ದಾರೆ. ಇನ್ನು ಕರೊನಾ ಸಂದರ್ಭದಲ್ಲಿ ಲಾಕ್‌ಡೌನ್ ಇದ್ದರೂ ಕಾರ್ಮಿಕರನ್ನು ದುಡಿಸಿಕೊಳ್ಳಲಾಗಿದೆ. ಈ ಬಗ್ಗೆ ಸೂಕ್ತ ತನಿಖೆಗೆ ಒತ್ತಾಯಿಸಿ ಸಿಎಂ, ಕಾರ್ಮಿಕ ಸಚಿವರಿಗೆ ದೂರು ನೀಡಲಾಗಿದೆ.
    ಎ.ಮಲ್ಲಿಕಾರ್ಜುನ್ ಸಾಮಾಜಿಕ ಕಾರ್ಯಕರ್ತ

    ಎತ್ತಿನಹೊಳೆ ಯೋಜನೆ ಕಾಮಗಾರಿಗಳಲ್ಲಿ ದುಡಿಯುತ್ತಿರುವ ಸಂದರ್ಭದಲ್ಲಿ ಸಾವನ್ನಪ್ಪಿರುವ ಕಾರ್ಮಿಕರ ಸಾವಿನ ಬಗ್ಗೆ ಚೇಳೂರು ಠಾಣೆಯಲ್ಲಿ ದಾಖಲಾಗಿರುವ ದೂರುಗಳ ಮಾಹಿತಿ ಪಡೆಯಲು ಸ್ಥಳೀಯ ಕಾರ್ಮಿಕ ಅಧಿಕಾರಿಗೆ ಸೂಚನೆ ನೀಡಲಾಗಿದೆ. ಅಲ್ಲಿನ ಕ್ಯಾಂಪ್‌ಗಳಲ್ಲಿ ಒದಗಿಸಿರುವ ಮೂಲಸೌಕರ್ಯಗಳ ಬಗ್ಗೆಯೂ ವರದಿ ನೀಡಲು ಸೂಚಿಸಿದ್ದು ನಂತರ ಸರ್ಕಾರಕ್ಕೆ ಸೂಕ್ತ ವರದಿ ಸಲ್ಲಿಸಲಾಗುವುದು.
    ಸುಭಾಷ್ ಎಂ ಆಲದಕಟ್ಟಿ ಜಿಲ್ಲಾ ಕಾರ್ಮಿಕ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts