More

    ಲಕ್ಷ್ಮೇಶ್ವರಕ್ಕೆ 3-4 ದಿನಗಳಲ್ಲಿ ನೀರು ಸರಬರಾಜು

    ಲಕ್ಷ್ಮೇಶ್ವರ: ತಾಪಂ ಸಭಾಂಗಣದಲ್ಲಿ ತಾಲೂಕಾಡಳಿತದಿಂದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ನೇತೃತ್ವದಲ್ಲಿ ಬುಧವಾರ ಜನತಾ ದರ್ಶನ ಕಾರ್ಯಕ್ರಮ ಜರುಗಿತು.

    ಪಟ್ಟಣಕ್ಕೆ ಒಂದು ತಿಂಗಳಿನಿಂದ ನದಿ ನೀರು ಸರಬರಾಜು ನಿಂತಿದ್ದು, ಸಾರ್ವಜನಿಕರು ನೀರಿಗಾಗಿ ಪರಿತಪಿಸುವಂತಾಗಿದೆ ಎಂದು ಪತ್ರಕರ್ತರು ಮತ್ತು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ, ತುಂಗಭದ್ರಾ ಜಲಾಯಶದ ಪ್ರಾದೇಶಿಕ ಆಯುಕ್ತರನ್ನು ಸಂಪರ್ಕಿಸಿ ಜಲಾಶಯದಿಂದ ಫೆ. 7ರಂದೇ ನದಿಗೆ ನೀರು ಬಿಡಲಾಗಿದೆ. 3-4 ದಿನಗಳಲ್ಲಿ ನೀರು ಬರಲಿದೆ ಎಂಬ ಮಾಹಿತಿ ಪಡೆದರು. ಆದರೆ, ನೀರು ಹರಿದು ಬರುವ ವೇಳೆ ನದಿ ಪಾತ್ರದಲ್ಲಿನ ರೈತರು ಹಗಲು-ರಾತ್ರಿ ಪಂಪ್‌ಸೆಟ್‌ಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ನೀರೆತ್ತುತ್ತಿದ್ದಾರೆ. ಪಟ್ಟಣಕ್ಕೆ ನೀರೆತ್ತುವ ಮೇವುಂಡಿ ಜಾಕ್‌ವೆಲ್‌ನಿಂದಲೇ ರೈತರು ಪಂಪ್‌ಸೆಟ್ ಮೂಲಕ ನೀರೆತ್ತುತ್ತಿದ್ದಾರೆ. ಅಲ್ಲದೆ, ಸದ್ಯದ ಪರಿಸ್ಥಿತಿಯಲ್ಲಿ ಅಲ್ಲಿ ನೀರು ಸಂಗ್ರಹವಾಗುವ ವ್ಯವಸ್ಥೆಯಿಲ್ಲ ಎಂಬ ಮಾಹಿತಿ ಪಡೆದ ಜಿಲ್ಲಾಧಿಕಾರಿ ಕೂಡಲೇ ತಹಸೀಲ್ದಾರ್, ಪುರಸಭೆ, ತಾಪಂ, ಹೆಸ್ಕಾಂ ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಅಲ್ಲಿರುವ ರೈತರ ಪಂಪ್‌ಸೆಟ್ ತೆರವುಗೊಳಿಸುವಂತೆ ಸೂಚಿಸಿದರು.

    ಹಾವೇರಿ, ರಾಣೆಬೆನ್ನೂರ, ಹರಿಹರ ಭಾಗದಲ್ಲಿಯೂ ಪಂಪ್‌ಸೆಟ್ ತೆರವು ಮಾಡುವಂತೆ ಅಲ್ಲಿನ ಜಿಲ್ಲಾಧಿಕಾರಿ ಜತೆ ಮಾತನಾಡಿ, ಗದಗ ಜಿಲ್ಲೆಯ 4 ತಾಲೂಕುಗಳಿಗೆ ತುಂಗಭದ್ರಾ ನದಿ ನೀರೆ ಆಸರೆಯಾಗಿದೆ. ದಯವಿಟ್ಟು ಸಹಕಾರ ನೀಡುವಂತೆ ಕೋರಿದರು. ಈ ವೇಳೆ ಮುಖ್ಯಾಧಿಕಾರಿಗೆ ಪಟ್ಟಣ ವ್ಯಾಪ್ತಿಯ ಎಲ್ಲ ಬೋರ್‌ವೆಲ್‌ಗಳನ್ನು ಸರಿಪಡಿಸಿ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದರು.

    ಬಳಿಕ ಪಟ್ಟಣದಲ್ಲಿನ ಆಶ್ರಯ ನಿವೇಶನ ಫಲಾನುಭವಿಗಳ ಆಯ್ಕೆಯಲ್ಲಾದ ಅನ್ಯಾಯ ಸರಿಪಡಿಸಬೇಕು. ವಿವಿಧ ಯೋಜನೆಗಳಡಿ ರೈತರಿಗೆ ಲಭಿಸಿದ ಸಹಾಯಧನ ಅವರ ಸಾಲದ ಖಾತೆಗೆ ಜಮೆ ಮಾಡಿಕೊಳ್ಳುತ್ತಿರುವ ಬ್ಯಾಂಕ್ ಅಧಿಕಾರಿಗಳ ಕ್ರಮಕ್ಕೆ ಬ್ರೇಕ್ ಹಾಕಬೇಕು. ಗೃಹಲಕ್ಷ್ಮಿ, ಶಕ್ತಿಯೋಜನೆ, ಪಿಂಚಣಿಯಲ್ಲಾಗುತ್ತಿರುವ ಸಮಸ್ಯೆ, ತಾಲೂಕಿನಲ್ಲಿ ಹದಗೆಟ್ಟ ರಸ್ತೆಗಳು, ಹಳ್ಳ ಹಿಡಿದ ಯುಜಿಡಿ ಯೋಜನೆ, ವಿದ್ಯುತ್, ತಾಲೂಕು ಕೇಂದ್ರವಾದರೂ ಶಿರಹಟ್ಟಿಗೆ ಅಲೆಯುವುದು ತಪ್ಪದಿರುವ ಬಗ್ಗೆ, ಶಿಗ್ಲಿ ಗ್ರಾಮದಲ್ಲಿ ನೇಕಾರರು ಅನುಭವಿಸುತ್ತಿರುವ ಸಮಸ್ಯೆ, ನೀರಾವರಿ ರೈತರು ಅಂತರ್ಜಲಮಟ್ಟ ಕುಸಿತದ ಜತೆಗೆ ಕಾಡುಪ್ರಾಣಿಗಳಿಂದಾಗುತ್ತಿರುವ ಹಾನಿ, ಸೋಮೇಶ್ವರ ಸಹಕಾರಿ ನೂಲಿನ ಗಿರಣಿಯಿಂದ ತಮಗೆ ಅನ್ಯಾಯವಾಗಿದೆ ಎಂಬ ರೈತ ಕುಟುಂಬದ ಮನವಿ ಸೇರಿ 50 ಕ್ಕೂ ಅರ್ಜಿಯೊಂದಿಗೆ ಬಂದ ರೈತರು, ವೃದ್ಧರು, ಮಹಿಳೆಯರು, ಸಂಘಟಕರು ಸಾರ್ವಜನಿಕರಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು.

    ಜಿಲ್ಲಾಧಿಕಾರಿ ಮಾತನಾಡಿ, ಸ್ವೀಕೃತವಾದ ಅರ್ಜಿಗಳು ಹಾಗೂ ಮನವಿಗಳನ್ನು ಸಾರ್ವಜನಿಕ ಕುಂದು ಕೊರತೆ ನಿವಾರಣಾ ವ್ಯವಸ್ಥೆ ಐಪಿಜಿಆರ್‌ಎಸ್ ತಂತ್ರಾಂಶದಲ್ಲಿ ದಾಖಲಿಸುವುದು ಮತ್ತು ಅರ್ಜಿಗಳ ವಿಲೇವಾರಿಯನ್ನು ನಿರ್ವಹಿಸುವ ಪ್ರಕ್ರಿಯೆಯು ಜಿಲ್ಲಾಡಳಿತದಿಂದ ಅಚ್ಚುಕಟ್ಟಾಗಿ ನಡೆಯುತ್ತಿದೆ ಎಂದರು.
    ತಹಸೀಲ್ದಾರ್ ವಾಸುದೇವಸ್ವಾಮಿ, ತಾಪಂ ಇಒ ಕೃಷ್ಣಪ್ಪ ಧರ್ಮರ, ಪುರಸಭೆ ಮುಖ್ಯಾಧಿಕಾರಿ ಮಹೇಶ ಎಚ್. ಸೇರಿ ಕೃಷಿ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರಿಗೆ, ಜಿಪಂ, ಪಿಡಬ್ಲುೃಡಿ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts