More

    60 ಗ್ರಾಮಗಳ ಪ್ರತಿ ಮನೆಗೂ ನಲ್ಲಿ ನೀರಿನ ವ್ಯವಸ್ಥೆ

    ಶಿಗ್ಗಾಂವಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಜಲ ಜೀವನ ಮಿಷನ್ (ಜಿಜಿಎಂ) ಯೋಜನೆಯಡಿ ಕುಡಿಯವ ನೀರಿನ ಅನನುಕೂಲತೆಯಳ್ಳ ಕ್ಷೇತ್ರದ 60 ಗ್ರಾಮಗಳಲ್ಲಿ ಪ್ರತಿಯೊಬ್ಬರ ಮನೆಗೆ ನಲ್ಲಿ ಮೂಲಕ ಶಾಶ್ವತ ಕುಡಿಯುವ ನೀರು ಪೂರೈಸಲು 57 ಕೋಟಿ ವೆಚ್ಚದ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

    ತಾಲೂಕಿನ ಕಡಹಳ್ಳಿ ಗ್ರಾಮದ ಮನೆಗಳಿಗೆ ನಲ್ಲಿ ನೀರು ಸರಬರಾಜು ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

    ಕುಡಿಯವ ನೀರಿನ ಅನಾನುಕೂಲತೆ ಹೊಂದಿರುವ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಈ ಯೋಜನೆಯಡಿ ಶಾಶ್ವತ ಕುಡಿಯವ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ. ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಹಣ ಮಂಜೂರಾಗಿದ್ದು, ಮಳೆಗಾಲ ಬರುವಷ್ಟರಲ್ಲೇ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿ, ಗುತ್ತೆಗೆದಾರರಿಗೆ ಸೂಚಿಸಿದರು.

    ಕಡಹಳ್ಳಿ ಗ್ರಾಮದಲ್ಲಿ 35 ಲಕ್ಷ ರೂ. ವೆಚ್ಚದಲ್ಲಿ 165 ಮನೆಗಳಿಗೆ ನೇರವಾಗಿ ನಲ್ಲಿ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ. ಮೊದಲ ಹಂತದ ಹಿರೇಮಲ್ಲೂರು, ಚಿಕ್ಕ ಮಲ್ಲೂರ, ಬನ್ನೂರು ಗ್ರಾಮಗಳಿಂದ ಕಡಹಳ್ಳಿ ಗ್ರಾಮದವರೆಗೆ ಕಾಮಗಾರಿ ಕೈಗೊಳ್ಳಲಾಗುತ್ತದೆ. ಜಿಲ್ಲೆಯ 375 ಗ್ರಾಮಗಳನ್ನು ಸರ್ವೆ ಮಾಡಿ 175 ಗ್ರಾಮಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿ, 53 ಗ್ರಾಮಗಳ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

    ಪ್ರತಿಯೊಬ್ಬರ ಮನೆಗೂ ನಲ್ಲಿ ಮೂಲಕ ಕುಡಿಯವ ನೀರು ಪೂರೈಸುವ ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಈ ಯೋಜನೆಯಡಿ ಗ್ರಾಮಗಳಲ್ಲಿರುವ ಶಾಲೆ ಮತ್ತು ಅಂಗನವಾಡಿಗಳಿಗೆ ಮೇನ್​ಲೈನ್ ಮೂಲಕ ಪೈಪ್​ಲೈನ್ ಕನೆಕ್ಷನ್ ಮಾಡಿ ಶಾಶ್ವತ ನೀರು ಪೂರೈಸಲಾಗುತ್ತದೆ. ನರೇಗಾ ಯೋಜನೆಯಡಿ ಕಾಮಗಾರಿಗಳಿಗೆ ಹಣಕಾಸಿನ ನೆರವು ನೀಡುವುದಾಗಿ ಸಚಿವ ಬೊಮ್ಮಾಯಿ ಭರವಸೆ ನೀಡಿದರು.

    ತಾಪಂ ಸದಸ್ಯೆ ವಿಜಯಲಕ್ಷ್ಮೀ ಮುಂದಿನಮನಿ, ಗ್ರಾಪಂ ಸದಸ್ಯ ರಾಮನಗೌಡ ಬಸನಗೌಡ್ರ, ಮಲ್ಲನಗೌಡ ಪಾಟೀಲ, ತಾಪಂ ಇಒ ಪ್ರಶಾಂತ ತುರಕಾಣಿ, ಜಿಪಂ ಅಧಿಕಾರಿ ಸೈಯ್ಯದ್ ಮತ್ತಿತರರು ಉಪಸ್ಥಿತರಿದ್ದರು.

    ಸಚಿವರ ನಿರ್ದೇಶನದಂತೆ ಜಿಲ್ಲೆಯಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ಉತ್ಸಾಹದಿಂದ ಕೆಲಸ ಮಾಡಿದ್ದೇವೆ. 28 ದಿನದಲ್ಲಿ 375 ಗ್ರಾಮಗಳನ್ನು ಸರ್ವೆ ಮಾಡಿ, 175 ಗ್ರಾಮಗಳಲ್ಲಿನ ಕಾಮಗಾರಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿ 53 ಗ್ರಾಮಗಳಲ್ಲಿ ಕೆಲಸ ಮಾಡಿದ್ದೇವೆ. ಕಡಹಳ್ಳಿ ಗ್ರಾಮದಲ್ಲಿ ಬೇಗ ಕೆಲಸ ಪೂರ್ಣಗೊಳಿಸಲಾಗುವುದು.
    | ಮಹಮ್ಮದ್ ರೋಷನ್, ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts