More

    ನೀರು ಪೂರೈಕೆಗೆ 24×7 ಯೋಜನೆ

    | ಮಹೇಶ ಮಿರಜಕರ ಸವದತ್ತಿ

    ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ಸವದತ್ತಿ ಪಟ್ಟಣಕ್ಕೆ 24*7 ಮಾದರಿಯಲ್ಲಿ ಕುಡಿಯುವ ನೀರು ಪೂರೈಸಲು ಸವದತ್ತಿ ಯಲ್ಲಮ್ಮ ಪುರಸಭೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಅದಕ್ಕಾಗಿ 92.65 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಿದ್ದಾರೆ.
    ಪಟ್ಟಣದಲ್ಲಿ 27 ವಾರ್ಡ್‌ಗಳಿದ್ದು, 42 ಸಾವಿರ ಜನಸಂಖ್ಯೆ ಇದೆ. 4 ಸಾವಿರಕ್ಕೂ ಅಧಿಕ ನಲ್ಲಿಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ನೂರಾನಿ ಗಲ್ಲಿ ಮತ್ತು ಅಯ್ಯಪ್ಪ ನಗರದಲ್ಲಿ ಓವರ್‌ಹೆಡ್ ಟ್ಯಾಂಕ್ ನಿರ್ಮಿಸಲಾಗಿದೆ. 120 ಕಿರು ನೀರಿನ ಸರಬರಾಜು ಘಟಕಗಳಿವೆ. ನಾಲ್ಕು ದಿನಗಳಿಗೊಮ್ಮೆಕುಡಿಯುವ ನೀರು ಪೂರೈಸಲಾಗುತ್ತಿದೆ.

    ಆದರೆ, ಜನರು ನೀರಿನ ಮಿತವಾಗಿ ಬಳಸುತ್ತಿಲ್ಲ. ಜಾನುವಾರುಗಳು, ವಾಹನಗಳನ್ನು ತೊಳೆಯಲು ವ್ಯರ್ಥ ಮಾಡುತ್ತಿದ್ದಾರೆ. ಪ್ರತಿಸಲ ನೀರು ಬಂದಾಗಲೂ ಮನೆಯಲ್ಲಿ ಶೇಖರಿಸಿಟ್ಟ ನೀರು ಹೊರ ಚೆಲ್ಲುತ್ತಿದ್ದಾರೆ. ಚರಂಡಿಗೆ ಬೇಕಾಬಿಟ್ಟಿಯಾಗಿ ಹರಿಸುತ್ತಿದ್ದಾರೆ. ಇದರಿಂದ ಕೆಲವೊಮ್ಮೆ ನೀರಿನ ಅಭಾವ ಸೃಷ್ಟಿಯಾಗುತ್ತಿದೆ. ಹಾಗಾಗಿ, ನೀರಿನ ಅಪವ್ಯಯ ತಡೆಗಟ್ಟುವ ಜತೆಗೆ, ಲಭ್ಯವಿರುವ ಜಲಸಂಪನ್ಮೂಲ ಸಮರ್ಪಕವಾಗಿ ಬಳಸಿಕೊಳ್ಳಲು ಉತ್ತೇಜನ ನೀಡುವುದಕ್ಕಾಗಿ ಯೋಜನೆ ರೂಪಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶಾಸಕ ಆನಂದ ಮಾಮನಿ ಕೂಡ ಯೋಜನೆ ಅನುಷ್ಠಾನಕ್ಕೆ ಆಸಕ್ತಿ ತಳೆದಿದ್ದಾರೆ.

    ಪಟ್ಟಣಕ್ಕಿಲ್ಲ ಜಲ ಬವಣೆ: ಸವದತ್ತಿ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಮಲಪ್ರಭಾ ಜಲಾಶಯ ಮೈದುಂಬಿಕೊಂಡಿದೆ. ಡೆಡ್ ಸ್ಟೋರೇಜ್ ಹೊರತುಪಡಿಸಿ 34 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಜ.4ರಂದು 26.80 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಸಲ 16 ಟಿಎಂಸಿ ಹೆಚ್ಚಿನ ನೀರು ಲಭ್ಯವಿದೆ. ಹಾಗಾಗಿ, ಈ ಸಲ ಪಟ್ಟಣಕ್ಕೆ ಜಲಸಂಕಷ್ಟ ತಲೆದೋರದು ಎನ್ನುತ್ತಾರೆ ಅಧಿಕಾರಿಗಳು.


    ನೀರು ಪೂರೈಕೆಯಿಂದ ಪ್ರತಿ ವರ್ಷ 60 ಲಕ್ಷ ರೂ. ಸಂಗ್ರಹ ಪ್ರತಿವರ್ಷ 60 ಲಕ್ಷ ರೂ. ನೀರಿನ ಬಿಲ್ ಸಂಗ್ರಹವಾಗುತ್ತಿದೆ. ಹೊಸ ಯೋಜನೆ ಅನುಷ್ಠಾನಗೊಂಡರೆ ಜನರಿಗೆ ಅಗತ್ಯಕ್ಕೆ ತಕ್ಕಷ್ಟು ನೀರು ಲಭ್ಯವಾಗಲಿದೆ. ಪ್ರತಿ ಮನೆಗೆ ಮೀಟರ್ ಅಳವಡಿಸಲಾಗುತ್ತದೆ. ಬಳಕೆ ಪ್ರಮಾಣ ಆಧರಿಸಿ ಜನರು ಬಿಲ್ ಪಾವತಿಸಲಿದ್ದಾರೆ ಎನ್ನುತ್ತಾರೆ | ಪುರಸಭೆ ಮುಖ್ಯಾಧಿಕಾರಿ ಕೆ. ಐ.ನಾಗನೂರ.

    ಜನರು ಕುಡಿಯುವ ನೀರನ್ನು ಮಿತವಾಗಿ ಬಳಸಬೇಕು. ಅನಗತ್ಯವಾಗಿ ವ್ಯರ್ಥ ಮಾಡಬಾರದು. 24ಗಿ7 ಕುಡಿಯುವ ನೀರು ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಬೇಕಿರುವ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದೇವೆ.
    | ಕೆ.ಐ.ನಾಗನೂರ ಮುಖ್ಯಾಧಿಕಾರಿ, ಸವದತ್ತಿ ಯಲ್ಲಮ್ಮ ಪುರಸಭೆ

    24ಗಿ7 ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕಾಗಿ ರೂಪಿಸಿರುವ ಯೋಜನೆ ಸಂಬಂಧ ಒಂದು ತಿಂಗಳ ಹಿಂದೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅದಕ್ಕೆ ಅನುಮೋದನೆ ಸಿಗಲಿದೆ. ಸವದತ್ತಿ ಮಾತ್ರವಲ್ಲದೆ, ಇಡೀ ತಾಲೂಕಿಗೆ ಬೇಡಿಕೆಗೆ ತಕ್ಕಷ್ಟು ಕುಡಿಯುವ ನೀರು ಪೂರೈಸಲು ಕ್ರಮ ವಹಿಸಲಾಗಿದೆ.
    | ಆನಂದ ಮಾಮನಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts