More

    ಜಲಸಮೃದ್ಧಿಗಾಗಿ ತೋಡಿಗೆ ಕಾಯಕಲ್ಪ

    ಹೇಮನಾಥ ಪಡುಬಿದ್ರಿ

    ನೆರೆ ನೀರು ಸರಾಗ ಹರಿಯುವುದರೊಂದಿಗೆ ಅಂತರ್ಜಲ ವೃದ್ಧಿಗೆ ಅನುಕೂಲ ಕಲ್ಪಿಸಿ ಹಡಿಲು ಭೂಮಿ ಹಸನಾಗಿಸುವ ಮಹತ್ಕಾರ್ಯಕ್ಕೆ ಪಲಿಮಾರು ಗ್ರಾಮ ಪಂಚಾಯಿತಿ ಮುಂದಾಗಿದೆ.

    ಗ್ರಾಮದ ಮೂಡು ಪಲಿಮಾರಿನಲ್ಲಿನ ಸುಮಾರು 600 ಮೀಟರ್ ವ್ಯಾಪ್ತಿಯ ತೋಡು 50 ವರ್ಷಗಳಿಂದ ಹೂಳು ತುಂಬಿ ಮಳೆಗಾಲದಲ್ಲಿ ನೆರೆ ಉಂಟಾಗಿ ಗ್ರಾಮಸ್ಥರು ಸಂಕಷ್ಟಕ್ಕೊಳಗಾಗುತ್ತಿದ್ದರು. ಗ್ರಾಮಸ್ಥರ ಬವಣೆ ಕಂಡು ವಾರ್ಡ್‌ನ ಗ್ರಾಪಂ ಸದಸ್ಯರಾದ ಸುಮಂಗಲಾ ದೇವಾಡಿಗ, ರಾಯೇಶ್ವರ ಪೈ, ಪ್ರಿಯಾ ಶೆಟ್ಟಿ ವಿಶೇಷ ಮುತುವರ್ಜಿ ವಹಿಸಿ ಗ್ರಾ.ಪಂ ಅನುದಾನ ಬಳಸಿ ಸ್ಥಳೀಯ ಕೃಷಿಕರ ಸಹಕಾರದಿಂದ ತೋಡಿನ ಹೂಳೆತ್ತುವ ಕಾರ್ಯಕ್ಕೆ ಕೈಹಾಕಿದ್ದಾರೆ.

    ಹೂಳೆತ್ತಲು ಗ್ರಾಪಂನಿಂದ ಸಣ್ಣ ನೀರಾವರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅವರು ತೋಡು ಲೋಕೋಪಯೋಗಿ ಇಲಾಖೆಗೆ ಸೇರಿದ್ದೆಂದು ಹೇಳಿದರೆ, ಲೋಕೋಪಯೋಗಿ ಇಲಾಖೆಯವರು ಸಣ್ಣ ನೀರಾವರಿ ಇಲಾಖೆಗೆ ಸೇರಿದ್ದೆಂದು ಹೇಳಿ ನುಣುಚಿಕೊಳ್ಳತೊಡಗಿದರು. ಇದರಿಂದ ಬೇಸತ್ತ ಸದಸ್ಯರು ಪಂಚಾಯಿತಿ ಅಧ್ಯಕ್ಷರ ಗಮನಕ್ಕೆ ತಂದು ಕಾಮಗಾರಿ ಆರಂಭಿಸಿಯೇ ಬಿಟ್ಟರು. ಅಧ್ಯಕ್ಷರೂ ಅವರ ಕಾರ್ಯಕ್ಕೆ ಕೈಜೋಡಿಸಿದ್ದು, ಈಗಾಗಲೇ 400 ಮೀಟರ್ ವ್ಯಾಪ್ತಿಯಲ್ಲಿ ಜೆಸಿಬಿ ಸಹಾಯದಿಂದ ಹೂಳೆತ್ತುವ ಕಾರ್ಯ ಪ್ರಗತಿ ಕಂಡಿದೆ. ತೋಡಿನ ಇಕ್ಕೆಲಗಳಲ್ಲಿ ಕೃಷಿಯನ್ನೇ ಅವಲಂಬಿತ 50ಕ್ಕೂ ಹೆಚ್ಚು ಕುಟುಂಬಗಳಿದ್ದು, ಹಲವು ವರ್ಷಗಳಿಂದ ಬೇಡಿಕೆಯಾಗಿಯೇ ಉಳಿದ ಈ ಕಾಮಗಾರಿಯನ್ನು ಚುನಾಯಿತ ಪ್ರತಿನಿಧಿಗಳು ವಿಶೇಷ ಮುತುವರ್ಜಿ ವಹಿಸಿ ಕೈಗೆತ್ತಿಕೊಂಡಿರುವ ಬಗ್ಗೆ ಸ್ಥಳೀಯ ಕೃಷಿಕರು ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

    ಗ್ರಾಮದಲ್ಲಿನ ತೋಡುಗಳ ಹೂಳೆತ್ತುವ ಬಗ್ಗೆ ಸಣ್ಣ ನೀರಾವರಿ ಇಲಾಖೆಗೆ ಮನವಿ ಮಾಡಲಾಗಿದೆ. ಇಲಾಖೆಯ ಇಂಜಿನಿಯರ್‌ಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಣೆಕಟ್ಟು ಸಂಪರ್ಕಿಸುವ ತೋಡುಗಳ ಹೂಳೆತ್ತಿ ಅಂತರ್ಜಲ ವೃದ್ಧಿಗೆ ಗಮನ ಹರಿಸಲಾಗಿದೆ. ಹಡಿಲು ಭೂಮಿಯನ್ನು ಹಸನುಗೊಳಿಸಲು ಕೃಷಿಕರು ಮುಂದೆ ಬರಬೇಕು.
    ಗಾಯತ್ರಿ ಡಿ ಪ್ರಭು, ಪಲಿಮಾರು ಗ್ರಾಪಂ ಅಧ್ಯಕ್ಷೆ

    ಫಲಭರಿತವಾದ ಮಣ್ಣಿನ ಪಲಿಮಾರು ಮೂಡು ಪಲಿಮಾರು ವಾರ್ಡ್ ವ್ಯಾಪ್ತಿಯಲ್ಲಿ ಸುಮಾರು 130 ಎಕರೆ ಕೃಷಿ ಭೂಮಿಯಿದ್ದು, ಜನ ಪ್ರತಿವರ್ಷ ನೆರೆಯಿಂದ ಸಂಕಷ್ಟಪಡುತ್ತಿದ್ದಾರೆ. ಅದಕ್ಕೆ ಶಾಶ್ವ್ವತ ಪರಿಹಾರ ಕಂಡುಕೊಂಡು ಜಮೀನಿನನ್ನು ಮತ್ತೆ ಕೃಷಿ ಯೋಗ್ಯವಾಗಿಸುವುದು. ಪರಿಸರದ ತೋಡುಗಳ ಹೂಳೆತ್ತುವುದರೊಂದಿಗೆ ಬೇಸಿಗೆ ಕಾಲದಲ್ಲಿ ಶಾಂಭವಿ ಅಣೆಕಟ್ಟೆಯ ಹಿನ್ನೀರನ್ನು ಬಳಸಿ ವಾರ್ಷಿಕ 3 ಬೆಳೆ ಬೆಳೆಯಲು ಅನುಕೂಲ ಕಲ್ಪಿಸುವ ಇರಾದೆ ಹೊಂದಲಾಗಿದೆ. ಈ ಕಾರ್ಯಕ್ಕೆ ಸಂಬಂಧಿಸಿದ ಇಲಾಖೆಗಳೂ ನೆರವು ನೀಡಿದಲ್ಲಿ ಇನ್ನಷ್ಟು ಅನುಕೂಲವಾಗಲಿದೆ.
    ಸುಮಂಗಲಾ ಎಲ್.ದೇವಾಡಿಗ, ಪಲಿಮಾರು ಗ್ರಾಪಂ ಸದಸ್ಯೆ

    50 ವರ್ಷಗಳಿಂದ ಕೃಷಿ ಮಾಡುತ್ತಿದ್ದು, ನೆರೆಯಿಂದ ಏಣಿಲು ಕೃಷಿ ಮಾಡಲು ಸಾಧ್ಯವಿಲ್ಲದೆ, ಕೇವಲ ಸುಗ್ಗಿ ಭತ್ತದ ಬೆಳೆಯನ್ನಷ್ಟೇ ಬೆಳೆಯುತ್ತಿದ್ದೇವೆ. ಹೂಳೆತ್ತಿದ್ದರಿಂದ ನಮಗೆ ಅನುಕೂಲವಾಗಿದೆ.
    ಪದ್ಮನಾಭ ಶೆಟ್ಟಿ, ಕೃಷಿಕ ಮೂಡುಪಲಿಮಾರು

    ತೋಡಿನ ಹೂಳೆತ್ತುವ ಬಗ್ಗೆ ಸಣ್ಣ ನೀರಾವರಿ ಹಾಗೂ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಲಾಗಿದೆ. ವಾರ್ಡ್ ವ್ಯಾಪ್ತಿಯಲ್ಲಿ ಇನ್ನೂ ಎರಡು ತೋಡುಗಳ ಹೂಳೆತ್ತಬೇಕಿದ್ದು, ಇಲಾಖೆಗಳು ಸಹಕರಿಸಬೇಕು. ಪಲಿಮಾರಿನಲ್ಲಿ ಸುಮಾರು 20 ರೈತರನ್ನೊಳಗೊಂಡ ತಂಡ ರಚಿಸಿದ್ದು, ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲಾಗಿದೆ. ಕುಂಪಳ್ಳಿ ಬಳಿ 3 ಕೆರೆಗಳಿದ್ದು ಅದರಲ್ಲಿ ಸುಮಾರು 30 ಮೀಟರ್ ಸುತ್ತಳತೆಯ ಕೆರೆಯೊಂದನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಮೇ ತಿಂಗಳಿನಲ್ಲಿ ದುರಸ್ತಿ ಮಾಡುವ ಯೋಚನೆಯಿದೆ. ಈಗ ಹೂಳೆತ್ತಿರುವ ತೋಡು ಇಕ್ಕೆಲಗಳ ನಿರುಪಯುಕ್ತವಾಗಿರುವ ಮದಗಗಳ ಪುನಶ್ಚೇತನಗೊಳಿಸಿ ಅಂತರ್ಜಲ ವೃದ್ಧಿಗೆ ಕ್ರಮ ವಹಿಸಲಾಗುವುದು.
    ರಾಯೇಶ್ವರ ಪೈ, ಪಲಿಮಾರು ಗ್ರಾಪಂ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts