More

    ಪಹಣಿ, ಆಕಾರ್‌ಬಂದ್ ಅರ್ಜಿ ಶೀಘ್ರ ವಿಲೇವಾರಿ, ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಎಡಿಸಿ ಭರವಸೆ

    ಪಡುಬಿದ್ರಿ: ಪಲಿಮಾರು ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಿತು. ಜಿಲ್ಲಾಧಿಕಾರಿ ಅನುಪಸ್ಥಿತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಕಾರ್ಯಕ್ರಮ ಉದ್ಘಾಟಿಸಿದರು.

    ಬೆಳಗ್ಗೆ 10 ಗಂಟೆಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಿಗದಿಯಾಗಿದ್ದು, ಒಂದು ಗಂಟೆ ವಿಳಂಬವಾಗಿ ಆರಂಭವಾಯಿತು. ಜಿಲ್ಲೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಾರ್ಯಕ್ರಮದಿಂದಾಗಿ ಜಿಲ್ಲಾಧಿಕಾರಿ ಜಗದೀಶ್ ಅವರು ಗ್ರಾಮ ವಾಸ್ತವ್ಯಕ್ಕೆ ಮಧ್ಯಾಹ್ನದ ನಂತರ ಆಗಮಿಸಿದ್ದರು. ಆರೋಗ್ಯ, ಲೋಕೋಪಯೋಗಿ, ಮೆಸ್ಕಾಂ, ಹೆದ್ದಾರಿ, ಆರ್‌ಟಿಒ ಇಲಾಖೆಗೆ ಸಂಬಂಧಿಸಿದ ಜನರ ಅಹವಾಲುಗಳಿಗೆ ಉತ್ತರಿಸಬೇಕಾದ ಅಧಿಕಾರಿಗಳು ಗೈರಾಗಿದ್ದರು.

    ಕಂದಾಯ ಇಲಾಖೆಗೆ ಸಂಬಂಧಿಸಿ ರಕ್ಷಿತಾರಣ್ಯದ ಸಮಸ್ಯೆ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಅಸಾಧ್ಯವಾಗಿದೆ. ನ್ಯಾಯಾಲಯದಲ್ಲಿರುವ ಈ ಪ್ರಕರಣ ಇತ್ಯರ್ಥವಾದಲ್ಲಿ ಪ್ರಯೋಜನವಾಗಲಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಈ ಕಾರ್ಯಕ್ರಮದಿಂದ ಕಂದಾಯ ಇಲಾಖೆಗೆ ಸಂಬಂಧಿಸಿದ ಪಹಣಿ, ಆಕಾರ್‌ಬಂದ್ ಅರ್ಜಿಗಳನ್ನು ವಿಲೇ ಮಾಡಲು ಕ್ರಮ ವಹಿಸಲಾಗುವುದು ಎಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಎಡಿಸಿ ಸದಾಶಿವ ಪ್ರಭು ಹೇಳಿದರು.
    ಅಂಗವಿಕಲ ದಿನೇಶ್ ಎಂಬುವರಿಗೆ ತ್ರಿಚಕ್ರ ವಾಹನದ ಬೇಡಿಕೆಯಿದ್ದು ಆರ್‌ಟಿಒ ಅಧಿಕಾರಿ ಗೈರಿಂದಾಗಿ ಅರ್ಜಿ ವಿಲೇ ಮುಂದೂಡಲಾಯಿತು. ಅಡ್ವೆಯ ಜಯರಾಮ ಸುವರ್ಣ ಎಂಬ ಹಿರಿಯ ನಾಗರಿಕರು ವೇದಿಕೆಯನ್ನು ಹತ್ತಲಾಗದಿದ್ದಾಗ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಕುಂದಾಪುರದ ಸಹಾಯಕ ಕಮಿಷನರ್ ವೇದಿಕೆಯಿಂದ ಇಳಿದು ಬಂದು ಹೇಳಿಕೆ ಪಡೆದುಕೊಂಡರು.

    ಮನೆ ನಿವೇಶನಗಳ ಸುಮಾರು 350ಕ್ಕೂ ಹೆಚ್ಚು ಅರ್ಜಿಗಳಿದ್ದು, ಅವುಗಳ ವಿಲೇವಾರಿಗಾಗಿ ಆದ್ಯತೆಯ ಮೇಲೆ ವಿಶೇಷ ಗಮನಹರಿಸಲಾಗುವುದು ಎಂದು ಈ ಕುರಿತಾಗಿ ಅರ್ಜಿ ನೀಡಿದ್ದ ಗ್ರಾಪಂ ಮಾಜಿ ಅಧ್ಯಕ್ಷ ಜಿತೇಂದ್ರ ಫುರ್ಟಾಡೋ ಅವರಿಗೆ ಸದಾಶಿವ ಪ್ರಭು ಭರವಸೆ ನೀಡಿದರು.
    ಪಲಿಮಾರು ಗ್ರಾಪಂ ಬಳಿಯ ಅಂಗನವಾಡಿ ಕೇಂದ್ರ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಪರಿಶಿಷ್ಟ ಜಾತಿ ಕಾಲನಿ, ಚಿತ್ರಾಲಯ ಆರ್ಟ್ ಗ್ಯಾಲರಿಗಳಿಗೆ ಅಧಿಕಾರಿಗಳು ಭೇಟಿ ನೀಡಿದರು.
    ಪೌತಿ ಖಾತೆಗೆ ಸಂಬಂಧಿಸಿ 30, ಪಿಂಚಣಿ ಯೋಜನೆಗಳ 10 ಸೇರಿದಂತೆ 71ಅರ್ಜಿಗಳು ಬಂದಿದ್ದು, ಪೌತಿ ಹಾಗೂ ಪಿಂಚಣಿ ಯೋಜನೆಗಳ ಅರ್ಜಿಗಳನ್ನು ಪರಿಹರಿಸಲಾಯಿತು. ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯಿಂದ 11ಮಂದಿ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮಿಬಾಂಡ್‌ಗಳನ್ನು ವಿತರಿಸಲಾಯಿತು.

    ಅನಧಿಕೃತ ಜಾಹೀರಾತು ಫಲಕ ತೆರವಿಗೆ ಆದೇಶ
    ಹೆದ್ದಾರಿ ಬದಿಯಲ್ಲಿ ಅನಧಿಕೃತವಾಗಿ ಅಳವಡಿಸಲಾಗುತ್ತಿರುವ ಜಾಹೀರಾತು ಫಲಕವನ್ನು ಆಯಾಯ ಕಂಪನಿಗಳ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಿ ತೆರವುಗೊಳಿಸಲು ಎಡಿಸಿ ಸದಾಶಿವ ಪ್ರಭು ಪಲಿಮಾರು ಪಿಡಿಒ ಸತೀಶ್ ಅವರಿಗೆ ಆದೇಶಿಸಿದರು. ಅದೇ ರೀತಿ ಹೆಟೆನ್ಶನ್ ವಿದ್ಯುತ್ ತಂತಿಯಿಂದ ಬೆಂಕಿ ಕಿಡಿಗಳು ಹಾರಿ ನಾಶವಾಗುತ್ತಿರುವ ಮರಗಳನ್ನು ತಕ್ಷಣ ತೆರವುಗೊಳಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಥಳದಲ್ಲೇ ಎಡಿಸಿ ಆದೇಶಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts