More

    ಕುಡ್ಲ ನಗರಿಗೆ ಜಲಕ್ಷಾಮ

    ಮಂಗಳೂರಿಗೆ ನೀರು ಸರಬರಾಜು ಮಾಡುವ ತುಂಬೆ ಡ್ಯಾಂನಲ್ಲಿ ಕೊರತೆ ಮಧ್ಯೆಯೂ ಪ್ರತಿದಿನ 155 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದ್ದು, ನಗರದ ಎತ್ತರದ ಜನವಸತಿ ಪ್ರದೇಶಗಳಿಗೆ ನೀರು ತಲುಪುತ್ತಿಲ್ಲ ಎಂಬ ಕೂಗು ಕೇಳಿಸುತ್ತಿದ್ದು, ಕುಡ್ಲ ನಗರಿಗೆ ಜಲಕ್ಷಾಮ ಎದುರಾಗಲಿದೆ ಈ ಬಗ್ಗೆ ವಿಸ್ತೃತ ವರದಿ ಇಲ್ಲಿದೆ.

    ಶ್ರವಣ್‌ಕುಮಾರ್ ನಾಳ, ಮಂಗಳೂರು
    ಮಂಗಳೂರಿಗೆ ನೀರು ಸರಬರಾಜು ಮಾಡುವ ತುಂಬೆ ಡ್ಯಾಂನಲ್ಲಿ ಕೊರತೆ ಮಧ್ಯೆಯೂ ಪ್ರತಿದಿನ 155 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದ್ದು, ನಗರದ ಎತ್ತರದ ಜನವಸತಿ ಪ್ರದೇಶಗಳಿಗೆ ನೀರು ತಲುಪುತ್ತಿಲ್ಲ ಎಂಬ ಕೂಗು ಕೇಳಿಸುತ್ತಿದೆ.

    ಫೆಬ್ರವರಿ 20ರಿಂದ ತುಂಬೆ ಡ್ಯಾಂನಲ್ಲಿ ಒಳಹರಿವು ಸಂಪೂರ್ಣ ಸ್ಥಗಿತಗೊಂಡು 6 ಮೀ. ನೀರು ಶೇಖರಣೆಗೊಂಡಿದೆ. ಮಾರ್ಚ್ ಕೊನೆಯ ವಾರಕ್ಕೆ ಈ ನೀರಿನ ಮಟ್ಟ 4 ಮೀ.ಗೆ ಇಳಿದಿರುವುದರಿಂದ ಶಂಭೂರಿನಲ್ಲಿ ಇರುವ ಎಎಂಆರ್ ಡ್ಯಾಂನಿಂದ ನೀರನ್ನು ಹರಿಸಿ ತುಂಬೆ ಡ್ಯಾಂ ಮಟ್ಟವನ್ನು ಹೆಚ್ಚಿಸಲಾಗುತ್ತಿದೆ.

    ಮಂಗಳೂರು ನಗರದ ಶಕ್ತಿನಗರ, ಚಿಲಿಂಬಿಗುಡ್ಡ, ಯೆಕ್ಕೂರು, ಯೆಯ್ಯಡಿ, ಪಚ್ಚನಾಡಿ ಪ್ರದೇಶಗಳಿಗೆ ಈಗಾಗಲೇ ನೀರಿನ ಬಿಸಿ ತಟ್ಟಿದೆ. ಈಗಾಗಲೇ ಈ ಪ್ರದೇಶಗಳಿಗೆ ಪಾಲಿಕೆ ಟ್ಯಾಂಕರ್ ಮೂಲಕ ನೀರು ಸರಬರಾಜಾಗುತ್ತಿದೆ. ನೀರು ಕೊರತೆ ಪ್ರದೇಶಗಳಲ್ಲಿ ಖಾಸಗಿ ಟ್ಯಾಂಕರ್ ನೀರು ಪೂರೈಕೆ ಸಂಸ್ಥೆಗಳ ಪೈಪೊಟಿ ಹೆಚ್ಚಾಗತೊಡಗಿದೆ. ಅಗತ್ಯ ಇರುವ ಕಡೆ ಖಾಸಗಿ ನೀರಿನ ಟ್ಯಾಂಕರ್‌ಗಳು ನೀರು ಪೂರೈಸುತ್ತವೆ. ಆದರೆ ಶುದ್ಧತೆ, ಕುಡಿಯಲು ಯೋಗ್ಯತೆ ಪ್ರಮಾಣಪತ್ರ ಇಲ್ಲದ ನೀರಿನ ಮೂಲಗಳಿಂದ ಇವು ನೀರು ಪೂರೈಕೆ ಮಾಡುತ್ತಿವೆ ಎಂಬ ಆರೋಪವೂ ಇದೆ.

    56 ಬಾವಿ ಗುರುತು

    ಪಾಲಿಕೆ ವ್ಯಾಪ್ತಿಯಲ್ಲಿ ಬಳಸಲು ಯೋಗ್ಯ 56 ಬಾವಿಗಳನ್ನು ಗುರುತಿಸಲಾಗಿದ್ದು, ತುರ್ತು ಸಂದರ್ಭ ಬಳಸಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಆದರೆ ಈ ಮಾಸಾಂತ್ಯ ತನಕ ತೆರೆದ ಬಾವಿಗಳ ನೀರು ಸಾರ್ವಜನಿಕರ ಬಳಕೆಗೆ ಉದ್ದೇಶಿಸಿಲ್ಲ. ದೊಡ್ಡ ವಸತಿ ಸಮುಚ್ಚಯಗಳಿಗೆ ದಿನಂಪ್ರತಿ 10 ಟ್ಯಾಂಕರ್‌ಗಳಿಗಿಂತಲೂ ಅಧಿಕ ನೀರು ಪೂರೈಸಲಾಗುತ್ತಿದೆ. ಪ್ರಸ್ತುತ ಲಾಲ್‌ಬಾಗ್ ಸಮೀಪವಿರುವ ವಾಟರ್‌ಗೇಟ್‌ನಿಂದ ಟ್ಯಾಂಕರ್‌ಗಳಿಗೆ ನೀರು ತುಂಬಿಸಲು ವ್ಯವಸ್ಥೆಯುದ್ದು, ಪಾಲಿಕೆ ಗುರುತಿಸಿದ 56 ಬಾವಿಗಳ ನೀರು ಸಾರ್ವಜನಿಕರ ಬಳಕೆಗೆ ಉಪಯೋಗಿಸಲು ಪರೀಕ್ಷೆ ನಡೆಸಲಾಗಿಲ್ಲ.

    ಪುತ್ತೂರಿಗೆ ನಿರಂತರ ನೀರು ಪೂರೈಕೆ

    ಪುತ್ತೂರು ನಗರಕ್ಕೆ ನೆಕ್ಕಿಲಾಡಿ ಡ್ಯಾಂನಿಂದ ನಿರಂತರ ನೀರು ಪೂರೈಕೆಯಾಗುತ್ತಿದ್ದು, 630 ಎಂಎಲ್‌ಡಿ ನೀರು ಶೇಖರಣಾ ಸಾಮರ್ಥ್ಯದ ನೆಕ್ಕಿಲಾಡಿ ಡ್ಯಾಂ ತಾಂತ್ರಿಕ ದೋಷದಿಂದ ಡ್ಯಾಂ ಗೇಟ್ ಮೂಲಕ ನೀರು ಸೋರಿಕೆಯಾಗುತ್ತಿದೆ. ಹಿಂದೆ ಪುತ್ತೂರಿಗೆ 50 ಲಕ್ಷ ಲೀಟರ್ ನೀರು ಸಾಕಾಗುತ್ತಿತ್ತು. ಈಗ 75 ಲಕ್ಷಕ್ಕೆ ಏರಿದೆ. ಪ್ರಸ್ತುತ ಪ್ರತಿದಿನ ಅಗತ್ಯವಿರುವ 75 ಲಕ್ಷ ಲೀಟರ್ ನೀರಿನ ಪೂರೈಕೆಯಾಗುತ್ತಿದೆ. ತಾರಿಗುಡ್ಡೆ ರಾಗಿದಕುಮೇರ್, ಜಿಡೆಕಲ್‌ಲ್, ಮುಡಾಯೂರು ಸೇರಿದಂತೆ ಎತ್ತರದ ಪ್ರದೇಶಗಳಿಗೆ ಬೋರ್‌ವೆಲ್ ನೀರು ಪೂರೈಕೆಯಾಗುತ್ತದೆ. ಗ್ರಾಮಾಂತರ ಬಾಗಗಳಿಗೆ ಸ್ಥಳೀಯ ಗ್ರಾಪಂನ ಕೊಳವೆ ಬಾವಿ ಮೂಲಕ ನೀರು ಪೂರೈಕೆಯಾಗುತ್ತದೆ.

    ನೀರು ಸರಬರಾಜು ಮಾಡಲು ಕ್ರಮ

    ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಮುಲ್ಕಿಯಲ್ಲಿ 10, ಮೂಡುಬಿದಿರೆಯಲ್ಲಿ 2 ಹಾಗೂ ಸೋಮೇಶ್ವರದಲ್ಲಿ 4 ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲು ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಜಿಲ್ಲೆಯ ಜಿಯೋಲಜಿಸ್ಟ್‌ಗಳ ನೆರವಿನಿಂದ ಹೊಸ ಬೋರ್‌ವೆಲ್‌ಗಳನ್ನು ಕೊರೆಸಿ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಂಡಿದ್ದು, ಈಗಾಗಲೇ ಜಿಪಂ ಅನುದಾನದಲ್ಲಿ ಜಿಲ್ಲೆಯ 86 ಕಡೆಗಳಲ್ಲಿ ಹೊಸ ಬೋರ್‌ವೆಲ್ ಕೊರೆಸಲಾಗಿದೆ. ತುರ್ತು ಸಂದರ್ಭಕ್ಕಾಗಿ ನೀರಿನ ಲಭ್ಯತೆಯ ಆಧಾರದಲ್ಲಿ ಸರ್ಕಾರಿ ಜಾಗ, ಸರ್ಕಾರಿ ಕಚೇರಿಗಳ ಆಸುಪಾಸು, ಶಾಲೆ-ಅಂಗನವಾಡಿ ವ್ಯಾಪ್ತಿ ಸೇರಿದಂತೆ ಅಂರ್ತಜಲ ಲಭಿಸುವಲ್ಲಿ ಕೊಳವೆಬಾವಿ ಕೊರೆಸಿ ನೀರು ಪೂರೈಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದು, ಒಟ್ಟು 137 ಹೊಸ ನೀರಿನ ಕೇಂದ್ರವನ್ನು ಈಗಾಗಲೇ ಗುರುತಿಸಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ತಿಳಿಸಿದ್ದಾರೆ.

    ಏಪ್ರಿಲ್ ಮೊದಲ ವಾರದವರೆಗೆ ಮಂಗಳೂರು ನಗರಕ್ಕೆ ನೀರಿನ ಕೊರತೆ ಕಂಡುಬಂದಿಲ್ಲ. ಆದರೆ ಪ್ರಸ್ತುತ ಬಹುತೇಕ ಎತ್ತರ ಪ್ರದೇಶಗಳಿಗೆ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ. ಪ್ರತಿದಿನ ಯಥಾ ಸ್ಥಿತಿಯಲ್ಲಿ 155 ಎಂಎಲ್‌ಡಿ ನೀರು ನಗರಕ್ಕೆ ಪೂರೈಕೆಯಾಗುತ್ತಿದ್ದು, ಕೊರತೆಯಾದರೆ ಮುಂದಿನ ದಿನಗಳಲ್ಲಿ ರೇಷನಿಂಗ್ ಆಧಾರದಲ್ಲಿ ಪೂರೈಕೆಗೆ ಪಾಲಿಕೆ ಚಿಂತನೆ ನಡೆಸಿದೆ.
    – ಚನ್ನಬಸಪ್ಪ ಕಮಿಷನರ್, ಮನಪಾ ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts