More

    ಎತ್ತರ ಪ್ರದೇಶಕ್ಕೆ ನೀರು ವ್ಯತ್ಯಯ, ಉಡುಪಿ ಬಡಗುಬೆಟ್ಟು ಪಂಚಾಯಿತಿ ವ್ಯಾಪ್ತಿ ಸಮಸ್ಯೆ

    ಉಡುಪಿ: ಬೇಸಿಗೆ ಆರಂಭವಾಗುತ್ತಿದ್ದಂತೆ ನಗರದಲ್ಲಿ ಕುಡಿಯುವ ನೀರಿನ ಕೊರತೆ ಬಗ್ಗೆ ಆತಂಕ ಶುರುವಾಗುತ್ತದೆ. ಸದ್ಯ ಕುಡಿಯುವ ನೀರಿನ ಪೂರೈಕೆ ಗಂಭೀರ ಸಮಸ್ಯೆ ಇನ್ನೂ ಆರಂಭಗೊಂಡಿಲ್ಲ. ಕೆಲವೆಡೆ ಎತ್ತರ ಪ್ರದೇಶಗಳಲ್ಲಿ ನೀರು ನಿಧಾನವಾಗಿ ಮತ್ತು ಕೆಲವು ಕಡೆ ಪೂರೈಕೆಯಾಗುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ.
    80 ಬಡಗುಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ದಶರಥನಗರ, ಶಾಂತಿನಗರ ಮೊದಲಾದ ಪ್ರದೇಶಗಳಲ್ಲಿ ನೀರು ಪೂರೈಕೆ ಸರಿಯಾಗಿ ಆಗುತ್ತಿಲ್ಲ ಎಂದು ನಾಗರಿಕರು ದೂರಿದ್ದರು. ದಶರಥನಗರ ಎರಡನೇ ಹಂತದಲ್ಲಿ ಕಳೆದ ನಾಲ್ಕೈದು ದಿನ ನೀರಿನ ಸಮಸ್ಯೆ ತಲೆದೋರಿತ್ತು.

    ಬೊಮ್ಮರಬೆಟ್ಟು, ಅಲೆವೂರು, ಕೊಡಬೆಟ್ಟು, ಆತ್ರಾಡಿ, ಅಂಬಲಪಾಡಿ, ಕಡೆಕಾರು ಗ್ರಾಮ ಪಂಚಾಯಿತಿ ಭಾಗಕ್ಕೆ ನಗರಸಭೆಯಿಂದಲೂ ನೀರು ಪೂರೈಕೆಯಾಗುತ್ತಿದೆ. ಈ ಹಿಂದೆ 24 ಗಂಟೆ ಕಾಲ ಪೂರೈಕೆಯಾಗುತ್ತಿದ್ದ ನೀರನ್ನು 6 ಗಂಟೆಗೆ ಇಳಿಸಲಾಗಿದೆ. ಅಲ್ಲದೆ ನಗರದಲ್ಲಿ ಜನವರಿಯಿಂದಲೇ ನೀರು ಪೂರೈಕೆಯನ್ನು ಮೂರು ವಲಯಗಳಾಗಿ ವಿಂಗಡಿಸಿ ಪೂರೈಸಲಾಗುತ್ತಿದೆ. ಮೂರು ವಲಯಗಳಲ್ಲಿ ಎರಡು ವಲಯಕ್ಕೆ ಬೆಳಗ್ಗೆ 8 ರಿಂದ 10 ಗಂಟೆವರೆಗೆ, ಬೆಳಗ್ಗೆ 10 ರಿಂದ 4 ಗಂಟೆಗೆ ಮತ್ತು ಮಣಿಪಾಲ ಸುತ್ತಮುತ್ತಲ ಎತ್ತರ ಪ್ರದೇಶಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವಾರ ನಾಲ್ಕೈದು ದಿನ ದಶರಥ ನಗರ, ಶಾಂತಿನಗರದಲ್ಲಿ ನೀರಿನ ಸಮಸ್ಯೆಯಾಗಿತ್ತು. ಸದ್ಯ ಪರಿಸ್ಥಿತಿ ಸುಧಾರಿಸಿದೆ ಎಂದು ಸ್ಥಳೀಯರಾದ ಶಿವಶಂಕರ ತಿಳಿಸಿದ್ದಾರೆ.

    ಈ ಬಾರಿ ನೀರಿಗೆ ಸಮಸ್ಯೆ ಇಲ್ಲ
    ಹಿರಿಯಡಕ ಸ್ವರ್ಣ ನದಿ ಬಜೆ ಡ್ಯಾಂನಲ್ಲಿ 24 ಗಂಟೆ ಪಂಪಿಂಗ್ ನಡೆಯುತ್ತಿದೆ. ಬಜೆ ಮತ್ತು ಶಿರೂರು ಡ್ಯಾಂನಲ್ಲಿ ನೀರಿನ ಸಂಗ್ರಹ ಸಾಕಷ್ಟಿದೆ. ಈ ಬಾರಿ ನೀರಿಗೆ ಸಮಸ್ಯೆ ಆಗುವುದಿಲ್ಲ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಜನರು ನೀರಿನ ಬಳಕೆ ಬಗ್ಗೆ ಜಾಗೃತಿ ವಹಿಸಬೇಕಿದೆ. ಪವರ್‌ಬ್ಯಾಕಪ್, ಲೀಕೇಜ್ ಸಮಸ್ಯೆ ಇದ್ದಲ್ಲಿ ಒಂದು ವಾರ್ಡ್‌ನಲ್ಲಿ ಏಳೆಂಟು ಮನೆಗಳಿಗೆ ನೀರಿನ ಪೂರೈಕೆ ಸಮಸ್ಯೆ ಆಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

    80 ಬಡಗುಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಶರಥನಗರ, ಶಾಂತಿನಗರ ಪ್ರದೇಶಗಳಲ್ಲಿ ನೀರು ಪೂರೈಕೆ ಸಮಸ್ಯೆಯಾಗಿತ್ತು. ಬೋರ್‌ವೆಲ್‌ನಲ್ಲಿ ನೀರು ಖಾಲಿಯಾಗಿ ಸಮಸ್ಯೆಯಾಗಿದೆ. ಪ್ರತ್ಯೇಕ ಲೈನ್ ಮೂಲಕ ನೀರನ್ನು ಪೂರೈಸಿ ಸಮಸ್ಯೆ ಬಗೆಹರಿಸಲಾಗಿದೆ. ಅಲ್ಲದೇ ನಗರಸಭೆಯಿಂದಲೂ ನೀರು ಪೂರೈಕೆಯಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಹೊಸ ಬೋರ್‌ವೆಲ್ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ.
    ಅಶೋಕ್ ಕುಮಾರ್, ಪಿಡಿಒ, 80 ಬಡಗುಬೆಟ್ಟು ಗ್ರಾ.ಪಂ

    ಸ್ವರ್ಣ ನದಿ ಬಜೆ ಮತ್ತು ಶಿರೂರು ಡ್ಯಾಂಗಳಲ್ಲಿ ನೀರಿನ ಸಂಗ್ರಹ ಉತ್ತಮವಾಗಿದೆ. ಮೂರು ವಲಯಗಳಾಗಿ ನೀರು ಪೂರೈಕೆಯನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಪೂರೈಕೆ ವ್ಯತ್ಯಯ ಇದ್ದಲ್ಲಿ ತಕ್ಷಣ ಸ್ಪಂದಿಸಿ, ಸಮಸ್ಯೆ ಬಗೆಹರಿಸಲಾಗುತ್ತದೆ. ಬಜೆ ಡ್ಯಾಂನಿಂದ ನಗರದ ಸುತ್ತಮುತ್ತ ಗ್ರಾಮ ಪಂಚಾಯಿತಿಗಳಿಗೆ ನೀರು ಪೂರೈಕೆ 6 ಗಂಟೆಗೆ ಇಳಿಸಲಾಗಿದೆ.
    ಮೋಹನ್‌ರಾಜ್, ಎಇಇ, ನಗರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts