More

    ಮಳೆಗಾಲದಲ್ಲೂ ನೀರಿಗೆ ಬವಣೆ!

    ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯ ನಗರ ಕೇಂದ್ರೀಕೃತ ಪ್ರದೇಶ ಬನ್ನೂರು ವ್ಯಾಪ್ತಿಯ ಕರ್ಮಲ ಎಂಬಲ್ಲಿ ಮಳೆಗಾಲದಲ್ಲೂ ನೀರಿನ ಬವಣೆ…!
    ದಿನದ 24 ಗಂಟೆ ಪುತ್ತೂರಿಗೆ ನೀರು ಪೂರೈಕೆಗೆಂದೇ ನೆಕ್ಕಿಲಾಡಿ ಬಳಿ ಎಡಿಬಿ ಯೋಜನೆಯಿಂದ ಡ್ಯಾಂ ನಿರ್ಮಿಸಿ ನೀರು ಸರಬರಾಜಿಗೆ ವ್ಯವಸ್ಥೆಯಿದ್ದರೂ ಕರ್ಮಲ ವ್ಯಾಪ್ತಿಯಲ್ಲಿ ಪ್ರತ್ಯೇಕ ಕೊಳವೆಬಾವಿ ತೆರೆದು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಆದರೆ ನಾಲ್ಕು ದಿನಗಳಿಂದ ಈ ಬಾಗದಲ್ಲಿ ಮನೆಮನೆಗೆ ನೀರು ಪೂರೈಕೆಯಾಗಿಲ್ಲ. ಈ ಭಾಗದ ನಗರಸಭಾ ಸದಸ್ಯೆ ಜೊಹರಾ ಸ್ಥಳೀಯರು ಕರೆ ಮಾಡಿದರೂ ಕರೆ ಸ್ವೀಕರಿಸಿಲ್ಲ ಎನ್ನುತ್ತಾರೆ ಸಾರ್ವಜನಿಕರು.
    ಪ್ರಸ್ತುತ 630 ಎಂಎಲ್‌ಡಿ ನೀರು ಸಂಗ್ರಹಣಾ ಸಾಮರ್ಥ್ಯದ ನೆಕ್ಕಿಲಾಡಿ ಡ್ಯಾಂ ಹಾಗೂ ಪುತ್ತೂರು ನಗರ ನೀರು ಸರಬರಾಜು ಯೋಜನೆಯ ರೇಚಕ ಯಂತ್ರ ಸ್ಥಾವರ 34ನೇ ನೆಕ್ಕಿಲಾಡಿ ಗ್ರಾಮದಲ್ಲಿ ಕುಮಾರಧಾರಾ ನದಿ ದಂಡೆಯ ಬಳಿ ಇದೆ. ಇಲ್ಲಿ 35 ಅಶ್ವಶಕ್ತಿಗಳ ಮೂರು ಪಂಪ್‌ಗಳಿವೆ. ಪುತ್ತೂರು ನಗರಕ್ಕೆ ಇಲ್ಲಿಂದ ಪ್ರತಿದಿನ 70 ಲಕ್ಷ ಲೀಟರ್ ನೀರು ಸರಬರಾಜಾಗುತ್ತಿದೆ. ಪಂಪಿಂಗ್ ಮೂಲಕ 15 ಗಂಟೆ ನಿರಂತರ ನೀರು ಮೇಲೆತ್ತಲಾಗುತ್ತದೆ. ನಗರಸಭೆಯಲ್ಲಿ ಬೋರ್‌ವೆಲ್ ಕೊರೆಯಲು ಅನುದಾನವಿರುವುದರಿಂದ ಬಹುತೇಕ ವಾರ್ಡ್‌ಗಳಲ್ಲಿ ಬೋರ್‌ವೆಲ್ ಕೊರೆದು ಕೆಲವು ಮನೆಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ. ಆದರೆ ಬನ್ನೂರು ವ್ಯಾಪ್ತಿಯಲ್ಲಿ ಕೊರೆದ ಬೋರ್‌ವೆಲ್ ಪಂಪ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿರುವುದರಿಂದ ನೀರು ಪೂರೈಕೆ ಸಾಧ್ಯವಾಗಿಲ್ಲ ಎಂಬುದು ನಗರಸಭೆಯ ಉತ್ತರ.

    ಬೋರ್‌ನಲ್ಲಿ ನೀರು ಖಾಲಿ: ಪುತ್ತೂರಿಗೆ ಮೊದಲು 50 ಲಕ್ಷ ಲೀಟರ್ ನೀರು ಸಾಕಾಗುತ್ತಿತ್ತು, ಈಗ ಅದು 75 ಲಕ್ಷಕ್ಕೇರಿದೆ. 27 ವಾರ್ಡ್ ಹೊಂದಿರುವ ಪುತ್ತೂರು ನಗರಸಭೆಯಲ್ಲಿ 60 ಸಾವಿರ ಜನಸಂಖ್ಯೆಯಿದ್ದು, 75 ಲಕ್ಷ ಲೀಟರ್ ನೀರು ಪೂರೈಕೆಗೆ 9,200 ಸಂಪರ್ಕ ನೀಡಲಾಗಿದೆ. ನೆಕ್ಕಿಲಾಡಿ ಡ್ಯಾಂ ನೀರು ತಲುಪದ ಪ್ರದೇಶಕ್ಕೆ ಹಾಗೂ ಕೆಲವು ಮನೆಗಳಿಗೆ 18 ಬೋರ್‌ವೆಲ್‌ಗಳಿಂದ ನೀರು ಪೂರೈಕೆಯಾಗುತ್ತಿದೆ. ಇದರಲ್ಲಿ ಬಹುತೇಕ ಬೋರ್‌ವೆಲ್‌ಗಳಲ್ಲಿ ನೀರೇ ಇಲ್ಲ!

    ಜಲಸಿರಿ ಯೋಜನೆಯ ಭರವಸೆ: ಬನ್ನೂರು ವ್ಯಾಪ್ತಿಯ ಸ್ಥಳೀಯರ ಮಾಹಿತಿಯಂತೆ ಕರ್ಮಲದ ಬೋರ್‌ವೆಲ್‌ನಲ್ಲಿ ನೀರಿಲ್ಲದಿದ್ದರೂ ಪಂಪ್ ಅಳವಡಿಸಿ ಮನೆಮನೆಗಳಿಗೆ ಸಂಪರ್ಕ ನೀಡಲಾಗಿದೆ. ಎಡಿಬಿ ಯೋಜನೆಯ ನೀರಿನ ಸಂಪರ್ಕ ನೀಡುವಂತೆ ಕೇಳಿಕೊಂಡರೂ ಮುಂದೆ ಜಲಸಿರಿ ಬಂದಾಗ ಹೊಸ ಸಂಪರ್ಕ ನೀಡುವ ಭರವಸೆ ನಗರಸಭೆಯಿಂದ ದೊರಕಿದೆ.


    ಆರು ದಿನಗಳಿಂದ ನಗರಸಭೆಯ ಬನ್ನೂರು ಕರ್ಮಲ ವ್ಯಾಪ್ತಿಗೆ ನೀರು ಪೂರೈಕೆಯಾಗಿಲ್ಲ. ಈ ಬಗ್ಗೆ ನಗರಸಭಾ ಸದಸ್ಯೆ ಜೊಹರಾ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಭಾಗದ ಮುಸ್ಲಿಂ ಜನವಸತಿ ಪ್ರದೇಶಗಳಿಗೆ ನೀರು ಪೂರೈಕೆಯಾಗುತ್ತಿದೆ. ಹಿಂದುಗಳು ಇರುವ ಪ್ರದೇಶಕ್ಕೆ ಬೇಕೆಂದೇ ನೀರು ಪೂರೈಕೆಯಲ್ಲಿ ವ್ಯತ್ಯಯ ತೋರಲಾಗುತ್ತಿದೆ.
    |ಅಶೋಕ್ ಕರ್ಮಲ ನಿವಾಸಿ


    ಬನ್ನೂರು ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಯಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಹಲವೆಡೆ ನೀರು ಪೂರೈಕೆಗೆ ತಾಂತ್ರಿಕ ಸಮಸ್ಯೆಯಾಗಿರುವುದರಿಂದ ನಗರಸಭೆ ಅಧಿಕಾರಿಗಳಿಗೆ ತುರ್ತು ಸ್ಪಂದಿಸುವಂತೆ ಸೂಚನೆ ನೀಡಲಾಗಿದೆ.
    | ಜೀವಂಧರ್ ಜೈನ್ ಪುತ್ತೂರು ನಗರಸಭೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts