More

    ಬೇಸಿಗೆ ಮುನ್ನವೇ ನೀರಿನ ಬವಣೆ!

    ಸಂಸ್ಕರಿತ ನೀರಿನ ಆಸರೆ

    ತೋಟಗಾರಿಕೆ ಬೆಳೆಗೆ ಟ್ಯಾಂಕರ್ ಅವಲಂಬನೆ


    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ಕೈಕೊಟ್ಟ ಮಳೆಯಿಂದಾಗಿ ಜಿಲ್ಲೆಯ ಬಹುತೇಕ ಕೆರೆಕಟ್ಟೆಗಳು ಒಣಗಿದ್ದು, ಬೇಸಿಗೆ ಮುನ್ನವೇ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುವ ಆತಂಕ ಕಂಡುಬರುತ್ತಿದೆ.
    ಯಾವುದೇ ನದಿಮೂಲವಿಲ್ಲದ ಬಯಲುಸೀಮೆಯ ಗ್ರಾಮಾಂತರ ಜಿಲ್ಲೆಯಲ್ಲಿ ಕೊಳವೆ ಬಾವಿಗಳೇ ನೀರಿನ ಪ್ರಮುಖ ಮೂಲವಾಗಿವೆ. ಕೆರೆಕಟ್ಟೆಗಳು ತುಂಬಿದರಷ್ಟೇ ಅಂತರ್ಜಲಮಟ್ಟ ಸುಧಾರಿಸಿ ನೀರಿನ ಬವಣೆ ದೂರವಾಗಲಿದೆ. ಮಳೆ ಕೈಕೊಟ್ಟರೆ ಕೊಳವೆಬಾವಿ ಅವಲಂಬಿತ ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗುತ್ತದೆ. ಈ ಬಾರಿ ಇಂಥದ್ದೆ ಪರಿಸ್ಥಿತಿ ಎದುರಾಗುವ ಲಕ್ಷಣ ಕಂಡುಬರುತ್ತಿದೆ.
    ಸಂಸ್ಕರಿತ ನೀರಿನ ಆಸರೆ: ಬೆಂಗಳೂರಿನ ಸಂಸ್ಕರಿತ ನೀರನ್ನು ಕೆರೆಗಳಿಗೆ ಹರಿಸುವ ಕೆಸಿ ವ್ಯಾಲಿ ಯೋಜನೆ ಗ್ರಾಮಾಂತರ ಜಿಲ್ಲೆಗೆ ಆಸರೆಯಾಗಿದೆ. ದೇವನಹಳ್ಳಿಯ ಚಿಕ್ಕಕೆರೆ, ದೊಡ್ಡ ಕೆರೆ, ಆವತಿ ಕರೆ ಸೇರಿ ಹಲವು ಕೆರೆಗಳಿಗೆ ಎಚ್‌ಎನ್‌ವ್ಯಾಲಿ ನೀರು ಹರಿಬಿಡುವುದರಿಂದ ಕೆರೆಗಳಲ್ಲಿ ನೀರಿನಮಟ್ಟ ಕಾಯ್ದುಕೊಂಡಿದ್ದು, ಈ ಭಾಗಗಳಲ್ಲಿ ಅಂತರ್ಜಲಮಟ್ಟ ಸುಧಾರಿಸಿ ಕೊಳವೆಬಾವಿಗಳಲ್ಲಿ ಉತ್ತಮ ನೀರು ಲಭ್ಯವಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಪರಿಸ್ಥಿತಿಯಲ್ಲಿ ನೀರಿನ ಅಭಾವ ತಲೆದೋರಿಲ್ಲ. ಆದರೆ ತಿಂಗಳಿಂದ ತಾಂತ್ರಿಕ ಅಡಚಣೆ ಹಿನ್ನೆಲೆಯಲ್ಲಿ ಕೆರೆಗಳಿಗೆ ಹರಿದುಬರುತ್ತಿರುವ ನೀರು ನಿಲ್ಲಿಸಲಾಗಿದೆ ಎನ್ನಲಾಗಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಬೇಸಿಗೆಯಲ್ಲಿ ನೀರಿನ ಹಾಹಾಕಾರ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಇನ್ನು ಹೊಸಕೋಟೆಯ ಬಹುತೇಕ ಕೆರೆಗಳಿಗೆ ಕೆಸಿ ವ್ಯಾಲಿ ನೀರು ಹರಿಯುುತ್ತಿರುವುದರಿಂದ ಕೊಳವೆಬಾವಿಗಳಲ್ಲಿ ಉತ್ತಮ ನೀರು ಲಭ್ಯವಾಗುತ್ತಿದೆ. ಮೂರು ದಿನಕ್ಕೊಮ್ಮೆ ನೀರು ಪೂರೈಸುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಕುಡಿವ ನೀರಿಗೆ ದೊಡ್ಡಮಟ್ಟದಲ್ಲಿ ಸಮಸ್ಯೆಯಾಗಿಲ್ಲ. ನೆಲಮಂಗಲದಲ್ಲಿ ಎರಡು ವರ್ಷದ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಬಹುತೇಕ ಕೆರೆಕಟ್ಟೆಗಳು ತುಂಬಿದ್ದವು. ಪ್ರಸ್ತುತ ಕೆರೆಕಟ್ಟೆಗಳಲ್ಲಿ ನೀರು ತಳಸೇರಿದ್ದು ಮುಂದಿನ ದಿನಗಳಲ್ಲಿ ಕೊಳವೆಬಾವಿಗಳಲ್ಲಿ ನೀರಿನಮಟ್ಟ ಕುಸಿಯುವ ಆತಂಕ ಎದುರಾಗಿದೆ.
    ಜಕ್ಕಲಮಡು ಜಲಾಶಯ ಖಾಲಿ! ದೊಡ್ಡಬಳ್ಳಾಪುರ ನಗರದಲ್ಲಿ ಸದ್ಯಕ್ಕೆ ನೀರಿನ ಅಭಾವ ಕಂಡುಬಂದಿಲ್ಲ, ಐದು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ನಗರಕ್ಕೆ ಪ್ರಮುಖ ಕುಡಿವ ನೀರಿನ ಮೂಲವಾಗಿರುವ ಜಕ್ಕಲಮಡು ಜಲಾಶಯದಲ್ಲಿ ಹಾಲಿ 32 ಅಡಿ ನೀರು ಇದೆ. 58 ಅಡಿ ನೀರಿನ ಸಾಮರ್ಥ್ಯವಿರುವ ಜಲಾಶಯದಲ್ಲಿ ಈಗಾಗಲೇ 26 ಅಡಿ ನೀರು ಕುಸಿತಕಂಡಿದೆ. ಈ ಜಲಾಶಯದ ಮೂಲಕ ಶೇ.38 ನೀರನ್ನು ನಗರಕ್ಕೆ ಬಳಸಲಾಗುತ್ತಿದೆ. ಪ್ರತಿನಿತ್ಯ 2 ಎಂಎಲ್‌ಡಿಯಷ್ಟು ನೀರು ಪೂರೈಸಲಾಗುತ್ತಿದೆ. 15 ಸಾವಿರಕ್ಕೂ ಹೆಚ್ಚು ನಳ ಸಂಪರ್ಕವಿದ್ದು, ಜಲಾಶಯದಲ್ಲಿ ನೀರಿನಮಟ್ಟ ಕುಸಿದಷ್ಟು ನಗರಕ್ಕೆ ನೀರು ಪೂರೈಕೆಯಲ್ಲಿ ದೊಡ್ಡಮಟ್ಟದಲ್ಲಿ ವ್ಯತ್ಯಯ ಉಂಟಾಗುತ್ತದೆ.

    ತೋಟಗಾರಿಗೆ ಬೆಳೆಗೆ ನೀರಿಲ್ಲ: ತೀವ್ರ ಮಳೆ ಕೊರತೆಯಿಂದಾಗಿ ಈಗಾಗಲೇ ಹೊಲಗದ್ದೆಗಳು ಒಣಗಿಹೋಗಿವೆ. ಈ ಬಾರಿ ಕನಿಷ್ಠ ರಾಗಿ ಬೆಳೆಯನ್ನಷ್ಟೆ ಬೆಳೆಯಲಾಗಿದೆ. ಏತನ್ಯಧ್ಯೆ ತೋಟಗಾರಿಕೆ ಬೆಳೆಗಾರರಿಗೆ ಆತಂಕ ಎದುರಾಗಿದೆ. ಈಗಾಗಲೇ ಕೊಳವೆಬಾವಿಗಳಲ್ಲಿ ನೀರಿನಮಟ್ಟ ಸಾಕಷ್ಟು ಕುಸಿದಿದೆ. ದ್ರಾಕ್ಷಿ ಸೇರಿ ವಿವಿಧ ತೋಟಗಾರಿಗೆ ಬೆಳೆ ಉಳಿಸಿಕೊಳ್ಳಲು ರೈತರು ಈಗಾಗಲೇ ಟ್ಯಾಂಕರ್ ನೀರನ್ನು ಅವಲಂಬಿಸಿರುವ ದೃಶ್ಯ ಕಂಡುಬರುತ್ತಿದೆ.

    ಜಿಲ್ಲೆಯಲ್ಲಿ ಪ್ರಸ್ತುತ ಸನ್ನಿವೇಶದಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಿಲ್ಲ, ಕೊಳವೆಬಾವಿಗಳ ಮೂಲಕ ಕುಡಿವ ನೀರಿನ ಪೂರೈಕೆ ಮಾಡಲಾಗುತ್ತಿದೆ. ಅಗತ್ಯವಿದ್ದರೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಗ್ರಾಪಂಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಈ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದ್ದು ಮುಂಜಾಗ್ರತಾ ಕ್ರಮ ವಹಿಸುವಂತೆ ಜಿಪಂ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
    ಟಿ.ಕೆ.ರಮೇಶ್, ಉಪಕಾರ್ಯದರ್ಶಿ ಜಿಪಂ


    ಕಳೆದ 15 ದಿನಗಳಿಂದ ಕೊಳವೆಬಾವಿಯಲ್ಲಿ ನೀರಿನ ಪ್ರಮಾಣ ಗರಿಷ್ಟ ಮಟ್ಟದಲ್ಲಿ ಕುಸಿದಿದೆ. ದ್ರಾಕ್ಷಿ ಬೆಳೆ ಕಟಾವಿಗೆ ಬಂದಿದ್ದು ಬೆಳೆ ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ಅನಿವಾರ್ಯವಾಗಿ ಟ್ಯಾಂಕರ್ ಮೂಲಕ ಕೃಷಿ ಹೊಂಡಕ್ಕೆ ನೀರು ತುಂಬಿಸಿಕೊಂಡು ಹನಿ ನೀರಾವರಿ ಮೂಲಕ ನೀರು ಪೂರೈಕೆಗೆ ಕಸರತ್ತು ನಡೆಸುತ್ತಿದ್ದೇವೆ. ಟ್ಯಾಂಕರ್ ನೀರಿಗೆ ದುಬಾರಿ ದರ ಇರುವುದರಿಂದ ಕಷ್ಟಸಾಧ್ಯವಾಗಿದೆ.
    ಮುನಿಯಪ್ಪ, ವಿಜಯಪುರ ರೈತ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts