More

    ನೀರಿಗೆ ಬೇಕು ಪರ್ಯಾಯ ಯೋಜನೆ

    ಗುತ್ತಲ: ಕಳೆದ ಮೂರು ದಶಕದಿಂದ ಗುತ್ತಲ ಪಟ್ಟಣ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಪರ್ಯಾಯ ಪರಿಹಾರ ಮಾರ್ಗ ಇದ್ದರೂ ಅನುಷ್ಠಾನಕ್ಕೆ ಆಡಳಿತ ವರ್ಗ ಮುಂದಾಗಿಲ್ಲ.

    27 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಪಟ್ಟಣಕ್ಕೆ ಸದ್ಯ ತುಂಗಭದ್ರಾ ನದಿಯೇ ಕುಡಿಯುವ ನೀರಿನ ಮೂಲ. ಪ್ರತಿವರ್ಷ ಬೇಸಿಗೆ ಆರಂಭವಾಗುತ್ತಲೇ ಕುಡಿಯುವ ನೀರಿನ ಸಮಸ್ಯೆ ಶುರುವಾಗುತ್ತದೆ. ಭೌಗೋಳಿಕವಾಗಿ ನದಿಗಿಂತ ಗುತ್ತಲ ಪಟ್ಟಣದ ಸ್ವಲ್ಪ ಭಾಗ ತಗ್ಗು ಹಾಗೂ ಇನ್ನೂ ಸ್ವಲ್ಪ ಭಾಗ ಎತ್ತರದಲ್ಲಿದೆ. ಇದರಿಂದಾಗಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಸವಾಲಾಗಿದೆ.

    ಆಧುನಿಕ ತಂತ್ರಜ್ಞಾನ ಇದ್ದರೂ ಅದಕ್ಕೆ ಪೂರಕವಾಗಿ ಪಟ್ಟಣದಲ್ಲಿ ಕುಡಿಯವ ನೀರು ಸರಬರಾಜು ಮಾಡುವ ಮಾರ್ಗಗಳು ಸಮರ್ಪಕವಾಗಿಲ್ಲ. ಈ ಕಾರಣದಿಂದಾಗಿ ಪಟ್ಟಣದಲ್ಲಿ ಕನಿಷ್ಠ 20-25ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. 20-25 ದಿನಗಳವರೆಗೆ ನೀರು ಸಂಗ್ರಹಿಸಿಟ್ಟುಕೊಳ್ಳುವುದೂ ಜನರಿಗೆ ಸವಾಲಾಗಿದೆ.

    ಬೇಸಿಗೆಯಲ್ಲಿ ತುಂಗಭದ್ರಾ ನದಿಯಲ್ಲಿ ಹರಿವು ಕಡಿಮೆಯಾಗುತ್ತದೆ. ಇದರಿಂದ ನೀರು ಪೂರೈಸುವ ಜಾಕ್​ವೆಲ್​ಗೆ ನೀರು ತಲುಪದಿರುವುದರಿಂದ ಸಮಸ್ಯೆ ಬಿಗಡಾಯಿಸುತ್ತದೆ. ಆಗ ಬೋರ್​ವೆಲ್​ಗಳಿಂದ ಓವರ್​ಹೆಡ್ ಟ್ಯಾಂಕ್​ಗಳಲ್ಲಿ ನೀರು ಸಂಗ್ರಹಿಸಿ ಪೂರೈಕೆ ಮಾಡಲಾಗುತ್ತಿದೆ. ಇದರಿಂದಾಗಿ ನೀರು ಸರಬರಾಜು ಮತ್ತಷ್ಟು ವಿಳಂಬವಾಗುತ್ತಿದೆ.

    ಪ್ರಸ್ತುತ ಪಟ್ಟಣಕ್ಕೆ ನೀರು ಪೂರೈಸುವ ಯೋಜನೆ 20 ವರ್ಷ ಹಳೆಯದಾಗಿದ್ದು, ಇದನ್ನು ಉನ್ನತೀಕರಿಸಬೇಕಿದೆ. ನೀರಿನ ಲಭ್ಯತೆಗೆ ಅನುಗುಣವಾಗಿ ನಿರಂತರವಾಗಿ ಪೂರೈಸುವ ಬಗ್ಗೆ ಯೋಜನೆ ರೂಪಿಸಬೇಕಿದೆ.

    ಬೇಸಿಗೆಯಲ್ಲೂ ನೀರು ಪೂರೈಸಬಹುದು

    ವಿಜಯನಗರ ಅರಸರ ಕಾಲದಲ್ಲಿ ಗುತ್ತಲದ ಸಾಮಂತ ಅರಸ ಹನುಮಂತರಾಯ ಅಭಿವೃದ್ಧಿಪಡಿಸಿದ ದೊಡ್ಡ ಕೆರೆ ನಗರದಲ್ಲಿದೆ. 228 ಎಕರೆ ವ್ಯಾಪ್ತಿ ಹೊಂದಿರುವ ಈ ಕೆರೆ ಕಳೆದ ಆರೇಳು ವರ್ಷದಿಂದ ತುಂಗಾ ಮೇಲ್ದಂಡೆಯ ಯೋಜನೆಯ ಹೆಚ್ಚುವರಿ ನೀರಿನಿಂದ ಪ್ರತಿವರ್ಷ ತುಂಬುತ್ತದೆ. ಜತೆಗೆ ಶಿವಮೊಗ್ಗ ಜಿಲ್ಲೆಯ ಗಾಜನೂರ ಭದ್ರಾ ಜಲಾಶಯದಿಂದ (ಸುಮಾರು 221 ಕಿ.ಮೀ. ದೂರದಿಂದ) ನೀರು ಹರಿದು ಬರುತ್ತದೆ.

    ಗುತ್ತಲದ ದೊಡ್ಡ ಕೆರೆ ಪಟ್ಟಣಕ್ಕಿಂತ ಎತ್ತರದ ಪ್ರದೇಶದಲ್ಲಿರುವ ಕಾರಣ ಗುತ್ತಲ ಹಾಗೂ ಶಿವನಗರ ತಾಂಡಾಕ್ಕೆ ಅನಾಯಾಸವಾಗಿ ಬೇಸಿಗೆಯಲ್ಲೂ ನೀರು ಪೂರೈಸಬಹುದಾಗಿದೆ. ನೀರು ಶುದ್ಧೀಕರಣ ಘಟಕ ಸೇರಿದಂತೆ ಅಗತ್ಯ ವ್ಯವಸ್ಥೆ ಮಾಡಿಕೊಂಡಲ್ಲಿ, ನೀರಿನ ತಾಪತ್ರಯವಿರದು.

    ಗುತ್ತಲದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೆರೆಯಿಂದ ಪಟ್ಟಣಕ್ಕೆ ಕುಡಿಯುವ ನೀರನ್ನು ಶುದ್ಧೀಕರಿಸಿ ಪೂರೈಸುವ ಯೋಜನೆ ಸಿದ್ಧಪಡಿಸಲು ಈಗಾಗಲೇ ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮಂಡಳಿಗೆ ಶಿಫಾರಸು ಮಾಡಲಾಗಿದೆ.
    | ನೆಹರು ಓಲೇಕಾರ ಶಾಸಕ ಹಾವೇರಿ

    ಪ.ಪಂ.ನ ಬಜೆಟ್​ನಲ್ಲಿ ದೊಡ್ಡ ಕೆರೆಯಿಂದ ನೀರು ಶುದ್ಧೀಕರಿಸಿ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಯೋಜನೆ ಪ್ರಸ್ತಾವನೆ ಇದೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಣಯಿಸಲಾಗಿದೆ. ಕೆರೆಯಿಂದ ನೀರು ಪೂರೈಸಲು ಸಮಗ್ರ ಯೋಜನೆ ತಯಾರಿಸಲು ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
    | ಏಸು ಬೆಂಗಳೂರ, ಪ.ಪಂ ಮುಖ್ಯಾಧಿಕಾರಿ, ಗುತ್ತಲ

    ಪಟ್ಟಣಕ್ಕೆ ಹಾಗೂ ಶಿವ ನಗರ ತಾಂಡಾಕ್ಕೆ ಕುಡಿಯುವ ನೀರು ಸುಲಭವಾಗಿ ಹಾಗೂ ಸದಾಕಾಲ ದೊರೆಯಬೇಕೆಂದರೆ ಗುತ್ತಲದ ದೊಡ್ಡ ಕೆರೆಯಿಂದ ಪೂರೈಕೆ ಮಾಡಬೇಕು. ಈ ಬಗ್ಗೆ ಅನೇಕ ಪ.ಪಂ. ಸದಸ್ಯರಿಗೆ ಈ ಬಗ್ಗೆ ತಿಳಿಸಿದ್ದೇನೆ. ಆದಷ್ಟು ಬೇಗ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕಾಗಿದೆ.
    | ಈರಪ್ಪ ಲಮಾಣಿ, ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ, ಗುತ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts