More

    ಜಲದಿಂದ ಜೀವ, ಮತದಿಂದ ದೇಶದ ಪ್ರಗತಿ ಸಾಧ್ಯ

    ಆನವಟ್ಟಿ: ಜಲ ಹಾಗೂ ಮತ ಎರಡನ್ನೂ ಸಮನಾಗಿ ಕಾಪಾಡಿಕೊಂಡು ಹೋದಾಗ ಮಾತ್ರ ಸಮಾಜದ ಅಭ್ಯುದಯ ಸಾಧ್ಯ. ಜಲದಿಂದ ಜೀವ ಉಳಿಯಲು ಸಾಧ್ಯವಾದರೆ, ಮತದಿಂದ ದೇಶದ ಪ್ರಗತಿ ಸಾಧ್ಯವಾಗುತ್ತದೆ. ಹಾಗಾಗಿ ಪ್ರಜಾಪ್ರಭುತ್ವದ ಉಳಿವಿಗಾಗಿ ಯಾವುದೇ ಆಮಿಷಕ್ಕೆ ಒಳಗಾಗದೆ ಕಡ್ಡಾಯವಾಗಿ ಮತ ಚಲಾಯಿಸಿ ಎಂದು ಸೊರಬದ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಭಾಕರ್ ರಾವ್ ತಿಳಿಸಿದರು.

    ಆನವಟ್ಟಿಯ ಪಪಂ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘ, ಸೊರಬ ತಾಪಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚಾರಣೆ ಹಾಗೂ ಮತದಾನ ಜಾಗೃತಿ ಕುರಿತ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
    ಹಿಂದಿನ ಕಾಲದಲ್ಲಿ ಕೊಳವೆಬಾವಿ, ನಲ್ಲಿಗಳ ವ್ಯವಸ್ಥೆಗಳು ಇರಲಿಲ್ಲ. ಇದನ್ನು ಅರಿತ ನಮ್ಮ ಹಿರಿಯರು ಕೆರೆ-ಕಟ್ಟೆ, ಬಾವಿಗಳನ್ನು ನಿರ್ಮಿಸಿ ಅವುಗಳು ಬತ್ತದಂತೆ ನೀರು ಇಂಗಿಸುವ ವ್ಯವಸ್ಥೆ ಮಾಡಿದ್ದರು. ಇದರಿಂದ ಅಂತರ್ಜಲವೂ ಕಡಿಮೆಯಾಗುತ್ತಿರಲಿಲ್ಲ. ಆದರೆ ಇಂದು ಪರಿಸರ ನಾಶದಿಂದಾಗಿ ನೀರನ್ನು ಕಲುಷಿತಗೊಳಿಸುತ್ತಿದ್ದು ವಾತಾವರಣ ಹದಗೆಡಿಸಿ ಅನಾರೋಗ್ಯ ಹೆಚ್ಚಳಕ್ಕೆ ಕಾರಣರಾಗಿದ್ದೇವೆ. ಇದರಿಂದ ಪಾರಾಗಲು ಪರಿಸರ ಹಾಗೂ ನೀರಿನ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.
    ಸಿವಿಲ್ ನ್ಯಾಯಾಧೀಶ ರಾಘವೇಂದ್ರ ಉಪಾಧ್ಯ, ನಿವೃತ್ತ ಪ್ರಾಚಾರ್ಯ ಎಚ್.ಜಯಪ್ಪ, ಸಿಪಿಐ ರಮೇಶ್ ರಾವ್, ವಕೀಲರಾದ ವೈ.ಜಿ.ಪುಟ್ಟಸ್ವಾಮಿ, ಸುಧಾಕರ್ ಪಿ ನಾಯ್ಕ, ಅರುಣ್, ಪಪಂ ಮುಖ್ಯಾಧಿಕಾರಿ ಸಂತೋಷ್‌ಕುಮಾರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಿ.ಎನ್.ರವೀಂದ್ರ, ಸಹಾಯಕ ಕಾರ್ಯನಿರ್ವಾಹಕ ಶ್ರೀರಾಮ, ಪಪಂ ಸಿಬ್ಬಂದಿ ಮನೋಜ್‌ಕುಮಾರ್, ಜಾಕೀರ್, ಅಶೋಕ್‌ಕುಮಾರ್, ಗೀತಾ, ಸಿ.ಪ್ರಭು, ಮಂಜುನಾಥ, ಶಿವಲೀಲಾ ಹಿರೇಮಠ, ಶ್ರುತಿ ಇತರರಿದ್ದರು.

    ನಮ್ಮ ಸಂವಿಧಾನ ಅಮೂಲ್ಯವಾದ ಮತದಾನದ ಹಕ್ಕನ್ನು ದೇಶದ ಪ್ರತಿ ಪ್ರಜೆಗೂ ನೀಡಿದೆ. ನಮ್ಮ ಕರ್ತವ್ಯವನ್ನು ಯಾವುದೇ ಜಾತಿ, ಲಿಂಗ ಬೇಧವಿಲ್ಲದೆ ಪಾಲಿಸಬೇಕು. ಮತ ಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು. ಚುನಾವಣೆ ಸಂದರ್ಭದಲ್ಲಿ ಕಾನೂನಿಗೂ ಹಸ್ತಕ್ಷೇಪವಿಲ್ಲ. ಎಲ್ಲವೂ ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಕಾರ್ಯ ನಿರ್ವಹಿಸುತ್ತದೆ.
    ಪ್ರಭಾಕರ್ ರಾವ್, ಹಿರಿಯ ಸಿವಿಲ್ ನ್ಯಾಯಾಧೀಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts