More

    ನೀರಿನ ನಿರೀಕ್ಷೆಯಲ್ಲಿ ಮೆಣಸಿನಕಾಯಿ ನಾಟಿ

    ಬಳ್ಳಾರಿ: ಗಣಿನಾಡು ಬಳ್ಳಾರಿ ಮೆಣಸಿನಕಾಯಿ ಬೆಳೆಯುವಲ್ಲಿ ಅಗ್ರಸ್ಥಾನ ಹೊಂದಿರುವ ಜಿಲ್ಲೆಗಳ ಪೈಕಿ ಒಂದಾಗಿದೆ. ಇಲ್ಲಿನ ಒಣ ಮೆಣಸಿನಕಾಯಿಗೆ ರಾಜ್ಯವಲ್ಲದೆ ದೇಶ-ವಿದೇಶಗಳಲ್ಲೂ ಬೇಡಿಕೆ ಇದೆ. ಆದರೆ, ಪ್ರಸಕ್ತ ಮುಂಗಾರು ವಿಳಂಬದಿಂದ ಮೆಣಸಿನಕಾಯಿ ಸಸಿ ನಾಟಿ ತಡವಾಗಿತ್ತು. ಕಳೆದೊಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು ನಾಟಿಗೆ ರೈತರು ಸಿದ್ಧತೆ ಮಾಡಿಕೊಂಡಿದ್ದಾರೆ. ಕಾಲುವೆಗೆ ನೀರು ಹರಿಯದ ಹಿನ್ನೆಲೆಯಲ್ಲಿ ಚಾತಕ ಪಕ್ಷಿಯಂತೆ ಕಾದಿದ್ದಾರೆ.

    ಆಗಸ್ಟ್ ಅಂತ್ಯದವರೆಗೆ ಮೆಣಸಿನಕಾಯಿ ನಾಟಿ ಮಾಡಲು ಅವಕಾಶವಿದ್ದು, ಎಲ್ಲೆಡೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸಸ್ಯ ಉತ್ಪಾದನಾ ನರ್ಸರಿಗಳಲ್ಲಿ ಸಸಿಗಳನ್ನು ಬೆಳೆಸಲಾಗಿದ್ದು, ಇದೀಗ ಮಳೆ ಆಗುತ್ತಿರುವುದರಿಂದ ಬೇಡಿಕೆ ಹೆಚ್ಚುವ ಸಾಧ್ಯತೆ ಇದೆ. ತುಂಗಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಹರಿಯುವುದಷ್ಟೇ ಬಾಕಿಯಿದ್ದು, ರೈತರು ಕಾದು ಕುಳಿತಿದ್ದಾರೆ. ನರ್ಸರಿಗಳಲ್ಲಿ ಈಗಾಗಲೇ ರೈತರು ಮೆಣಸಿನಕಾಯಿ ಬೀಜ ನೀಡಿ ನಾಟಿಗಾಗಿ ಸಸಿಗಳನ್ನು ಬೆಳೆಸಲು ಮುಂಗಡ ಹಣ ಪಾವತಿಸಿದ್ದಾರೆ. ಹಾಗಾಗಿ ನರ್ಸರಿಗಳಲ್ಲಿ ತೋಟಗಾರಿಕೆ ಬೆಳೆಗಳಾದ ಟೊಮ್ಯಾಟೊ, ಮೆಣಸಿನಕಾಯಿ ಸಸಿಗಳ ಪಾಲನೆ, ಪೋಷಣೆ ಜೋರಾಗಿ ನಡೆದಿದೆ.

    ಬಿತ್ತನೆ ಕ್ಷೇತ್ರ ಇಳಿಕೆ: ಬಳ್ಳಾರಿ-ವಿಜಯನಗರ ಅವಳಿ ಜಿಲ್ಲೆಯಲ್ಲಿ ಕಳೆದ 2021-22ನೇ ಸಾಲಿನಲ್ಲಿ 66,345 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ನಾಟಿ ಮಾಡಲಾಗಿತ್ತು. 2022-23ರಲ್ಲಿ 37,892 ಹೆಕ್ಟೇರ್‌ನಲ್ಲಿ ನಾಟಿ ಮಾಡಲಾಗಿತ್ತು. ಈ ಬಾರಿಯೂ ಕಳೆದ ವರ್ಷದ ನಾಟಿಯ ಪ್ರಮಾಣನ್ನೇ ಗುರಿಯಾಗಿಸಿಕೊಂಡಿದ್ದು, ಈಗಾಗಲೇ 1,163 ಹೆಕ್ಟೇರ್‌ನಲ್ಲಿ ಮೆಣಸಿನಕಾಯಿ ಬಿತ್ತನೆ ಮಾಡಲಾಗಿದೆ.

    ಕಳೆದ 2021-22ನೇ ಸಾಲಿಗೆ ಹೋಲಿಸಿದರೆ ಎರಡು ವರ್ಷಗಳಲ್ಲಿ ನಾಟಿ ಮಾಡಿದ ಪ್ರಮಾಣ ಕಡಿಮೆಯಾಗಿದೆ. ಈ ಬಾರಿಯೂ ಮುಂಗಾರು ಕೈಕೊಟ್ಟಿದ್ದರಿಂದ ಬಿತ್ತನೆ ಕ್ಷೇತ್ರ ಕೂಡ ವಿಸ್ತರಣೆಗೊಂಡಿಲ್ಲ. ಬೋರ್‌ವೆಲ್ ಹೊಂದಿರುವ ರೈತರು ಮಾತ್ರ ಈಗಾಗಲೇ ನಾಟಿ ಮಾಡಿದ್ದು, ಇನ್ನುಳಿದವರು ಡ್ಯಾಮ್‌ನಿಂದ ಕಾಲುವೆಗೆ ನೀರು ಬಿಡುವುದನ್ನೇ ಕಾಯುತ್ತಿದ್ದಾರೆ. ಬಳ್ಳಾರಿ ತಾಲೂಕು ವ್ಯಾಪ್ತಿಯಲ್ಲಿ 61.20 ಹೆಕ್ಟೇರ್, ಕುರುಗೋಡು 47.40, ಕಂಪ್ಲಿ 109.29, ಸಂಡೂರು 47, ಸಿರಗುಪ್ಪ 898.60 ಹೆಕ್ಟೇರ್‌ನಲ್ಲಿ ಮೆಣಸಿನಕಾಯಿ ನಾಟಿ ಮಾಡಲಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

    ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ

    ಮೆಣಸಿನಕಾಯಿ ಬಿತ್ತನೆ ಬೀಜಕ್ಕೆ ಭಾರಿ ಬೇಡಿಕೆ ಇದ್ದು, ಇದನ್ನೇ ಖಾಸಗಿ ಕಂಪನಿಗಳು ಬಂಡವಾಳವನ್ನಾಗಿ ಮಾಡಿಕೊಂಡಿದ್ದಾರೆ. ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಬಿತ್ತನೆ ಬೀಜ ಮಾರಾಟ ಮಾಡಲಾಗುತ್ತಿದೆ. ಸಿಜೆಂಟಾ ಕಂಪನಿಯ 2043 ತಳಿಯ ಮೆಣಸಿನಕಾಯಿ ಬಿತ್ತನೆ ಬೀಜ ರೈತರಿಗೆ ಸಿಗುವುದು ಕಷ್ಟವಾಗಿದೆ. ಪ್ರತಿ ಕೆಜಿಗೆ ಮಾರುಕಟ್ಟೆಯಲ್ಲಿ ಎಂಆರ್‌ಪಿ ದರ 9 ಸಾವಿರ ರೂ. ನಂತೆ ಕ್ವಿಂ.ಗೆ 90 ಸಾವಿರ ರೂ. ಇದ್ದರೆ ಕಾಳಸಂತೆಯಲ್ಲಿ 1.40 ರಿಂದ 1.60 ಲಕ್ಷ ರೂ. ವರೆಗೆ ಮಾರಾಟ ಮಾಡಲಾಗುತ್ತಿದೆ ಎಂದು ರೈತರು ದೂರುತ್ತಾರೆ. ಈಗಾಗಲೇ ಜಿಲ್ಲೆಯಲ್ಲಿ ಸಿಜೆಂಟಾ ಕಂಪನಿಯ 2043 ತಳಿಗೆ ಮೆಣಸಿನಕಾಯಿ ಬಿತ್ತನೆ ಬೀಜ 677 ಕೆ.ಜಿ ಮಾರಾಟವಾಗಿದೆ. ಅದರಂತೆ 5531 ತಳಿಯ ಬಿತ್ತನೆ ಬೀಜ 1895 ಕೆ.ಜಿ ಮಾರಾಟವಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಯುರೋಪ್ ರಾಷ್ಟ್ರಗಳಿಗೆ ರಫ್ತು

    ಜಿಲ್ಲೆಯ ಒಣ ಮೆಣಸಿನಕಾಯಿ ವಿದೇಶಗಳಿಗೆ ರಫ್ತು ಆಗುತ್ತದೆ. ಸ್ಥಳೀಯವಾಗಿ ಮಾರುಕಟ್ಟೆ ಇಲ್ಲದಿದ್ದರೂ ಇಲ್ಲಿನ ರೆಡ್ ಚಿಲ್ಲಿಯನ್ನು ಪೌಡರ್, ಆಯಿಲ್ ಮಾಡಿ ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ. ಬಳ್ಳಾರಿ, ಕುರುಗೋಡು, ಸಿರಗುಪ್ಪ , ಸಂಡೂರು, ಕಂಪ್ಲಿ ಭಾಗದಲ್ಲಿ ಹೆಚ್ಚಾಗಿ ಮೆಣಸಿನಕಾಯಿ ಬೆಳೆಯಲಾಗುತ್ತದೆ. ಅವಳಿ ಜಿಲ್ಲೆಯಲ್ಲಿ 2021-22ರಲ್ಲಿ 1.25 ಲಕ್ಷ ಟನ್, 2022-23ರಲ್ಲಿ 79,916 ಟನ್ ಒಣ ಮೆಣಸಿನಕಾಯಿ ಉತ್ಪಾದನೆ ಆಗಿದ್ದು, ಬ್ಯಾಡಗಿ ಮಾರುಕಟ್ಟೆಗೆ ಹೋಗುತ್ತದೆ. ಅಲ್ಲಿಂದ ಯುರೋಪ್ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ಸದ್ಯಕ್ಕೆ ಒಣ ಮೆಣಸಿನಕಾಯಿ (ಗುಂಟೂರು ತಳಿ) ಕ್ವಿಂಟಾಲ್‌ಗೆ 22 ಸಾವಿರ ರೂ.ನಿಂದ 26 ಸಾವಿರ ರೂ., ಕಡ್ಡಿ ಒಣ ಮೆಣಸಿನಕಾಯಿ 7900 ರೂ. ನಿಂದ 54 ಸಾವಿರ ರೂ. ವರೆಗೆ ದರ ಇದೆ.


    ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕೆನಾಲ್‌ಗೆ ನೀರು ಹರಿಯುವುದು ವಿಳಂಬವಾಗಿರುವುದರಿಂದ ಮೆಣಸಿನಕಾಯಿ ನಾಟಿ ಕಾರ್ಯ ತಡವಾಗಿದೆ. ಆಗಸ್ಟ್‌ಅಂತ್ಯದವರೆಗೆ ನಾಟಿಗೆ ಅವಕಾಶವಿದ್ದು ರೈತರು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

    ಎಸ್.ಪಿ.ಬೋಗಿ
    ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ

    ರೈತರು ಮೆಣಸಿನಕಾಯಿ ಬಿತ್ತನೆಗಾಗಿ ಬಿತ್ತನೆ ಬೀಜ ತಂದು ನರ್ಸರಿಗಳಲ್ಲಿ ಸಸಿ ಮಾಡಲು ನೀಡಿ 30ರಿಂದ 40 ದಿನಗಳು ಕಳೆದಿವೆ. ಸಸಿಗಳ ನಾಟಿ ಮಾಡುವ ಅವಧಿ ಮುಗಿಯುತ್ತ ಬಂದಿದೆ. ಇನ್ನು 10 ದಿನಗಳ ಒಳಗೆ ಕೆನಾಲ್‌ಗೆ ನೀರು ಹರಿಯದಿದ್ದರೆ ಅನನುಕೂಲವಾಗಲಿದೆ. ರೈತರು ಬಿತ್ತನೆ ಬೀಜ ತಂದುಕೊಟ್ಟರೆ ಒಂದು ಸಸಿಗೆ 45 ಪೈಸೆಯಂತೆ ಸಸಿಗಳನ್ನು ಪೋಷಿಸಿ ಮಾರಾಟ ಮಾಡಲಾಗುತ್ತದೆ. ಕೆನಾಲ್‌ಗೆ ನೀರು ಹರಿಯದಿದ್ದರೆ ರೈತರು, ನರ್ಸರಿಯವರಿಗೆ ನಷ್ಟವಾಗಲಿದೆ.

    ಮದಿರೆ ಕುಮಾರಸ್ವಾಮಿ
    ರೈತ, ಕುರುಗೋಡು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts