More

    ಉಳ್ಳಾಲ ಕೋಟೆಪುರ ಕಡಲಿಗೆ ವಿಷ, ತ್ಯಾಜ್ಯ ಸುರಿಯುತ್ತಿರುವ ಕಿಡಿಗೇಡಿಗಳು

    ಪ್ರಕಾಶ್ ಮಂಜೇಶ್ವರ ಮಂಗಳೂರು

    ಸ್ವಚ್ಛತಾ ಅಭಿಯಾನ ದೇಶದಾದ್ಯಂತ ಸುದ್ದಿ ಮಾಡುತ್ತಿರುವ ಹೊತ್ತಲ್ಲೇ ಉಳ್ಳಾಲ ಕೋಟೆಪುರ ಭಾಗದ ಕಡಲು ಹಾಗೂ ಕಿನಾರೆಯನ್ನು ಕೆಲ ಜನರು ಕಸದ ತೊಟ್ಟಿಯಾಗಿ ಪರಿವರ್ತಿಸಿದ್ದಾರೆ!

    ಕಡಲಿನ ಒಡಲಿನಲ್ಲಿ ತ್ಯಾಜ್ಯದ ವಿಷ ತುಂಬುತ್ತಿರುವ ಬಗ್ಗೆ ಸುದ್ದಿ ಹಬ್ಬುತ್ತಲೇ ಉಳ್ಳಾಲ ನಗರಸಭೆ ಅಧಿಕಾರಿಗಳು ಎಚ್ಚೆತ್ತು ಇಲ್ಲಿ ಎರಡು ದಿನಗಳಲ್ಲಿ ಸುಮಾರು 3 ಕ್ವಿಂಟಾಲ್ ಕಸ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿದ್ದಾರೆ. ಇನ್ನೂ ಟನ್‌ಗಟ್ಟಲೆ ಕಸ ಇಲ್ಲಿ ಸಿಗಬಹುದು.

    ಪ್ಲಾಸ್ಟಿಕ್, ನಿರ್ಮಾಣ ಸಾಮಗ್ರಿ ಗುಡ್ಡೆ: ಶೀಥಲೀಕರಣ ಯಂತ್ರಗಳಲ್ಲಿ ಸಾಮಾನ್ಯವಾಗಿ ಬಳಸುವ ಥರ್ಮೋಕೋಲ್‌ನಂತಹ ವಸ್ತುಗಳ ಜತೆಗೆ ಒಮ್ಮೆ ಬಳಸಿ ಎಸೆದ ನಿಷ್ಪ್ರಯೋಜಕ ಪ್ಲಾಸ್ಟಿಕ್, ಚಪ್ಪಲಿ ಮತ್ತಿತರ ವಸ್ತುಗಳು, ಹಳೇ ಮನೆ ಗೋಡೆ ಸಾಮಗ್ರಿಗಳು ಅಧಿಕ ಸಂಖ್ಯೆಯಲ್ಲಿ ದೊರೆತಿವೆ.

    ತೀರದಲ್ಲಿ ಸುರಿಯುವ ಕಸ, ಕಟ್ಟಡ ನಿರ್ಮಾಣ ಸಾಮಗ್ರಿ, ಪ್ಲಾಸ್ಟಿಕ್ ವಸ್ತುಗಳು ನೇರವಾಗಿ ಸಮುದ್ರಕ್ಕೆ ಸೇರುವುದರಿಂದ ಕಡಲಿನ ಜೀವ ಸಂಕುಲದ ವ್ಯವಸ್ಥೆಯ ಮೇಲೆಯೇ ದುಷ್ಪರಿಣಾಮ ಬೀರುವುದು ಖಚಿತ ಎನ್ನುವ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಕಡಲ ಕಿನಾರೆಯ ಮರಳು ಮತ್ತು ಸಮುದ್ರದ ನೀರಲ್ಲಿ ಬೆರೆತು ಹೋಗಿರುವ ಕೆಲ ವಸ್ತುಗಳನ್ನು ಪ್ರತ್ಯೇಕಿಸಿ ತೆಗೆಯುವುದು ಕೂಡ ಅಸಾಧ್ಯ.

    ಪ್ರವಾಸೋದ್ಯಮಕ್ಕೂ ಪೆಟ್ಟು: ಕರಾವಳಿ ಕಡಲ ಕಿನಾರೆ ಪ್ರವಾಸೋದ್ಯಮ ದೃಷ್ಟಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ದೇಶದ ವಿವಿಧೆಡೆಗಳಿಂದ ಇಲ್ಲಿನ ಸೊಬಗು ಆಸ್ವಾದಿಸಲು ಪ್ರವಾಸಿಗರು ಬರುತ್ತಾರೆ. ಹಡಗುಗಳಲ್ಲಿ ಸುತ್ತಾಟ ನಡೆಸುವ ಪ್ರವಾಸಿಗರು ನವಮಂಗಳೂರು ಬಂದರಿನಲ್ಲಿ ಇಳಿದು ಖಾಸಗಿ ವಾಹನಗಳಲ್ಲಿ ಇಲ್ಲಿನ ಕಡಲ ತೀರಗಳಲ್ಲಿ ಸುತ್ತಾಟ ನಡೆಸುತ್ತಾರೆ. ಪ್ರವಾಸಿಗರು ಸುತ್ತಾಟ ನಡೆಸುವ ಸಂದರ್ಭ ಇಂತಹ ದೃಶ್ಯಗಳು ಗೋಚರಿಸಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರಾವಳಿ ಕರ್ನಾಟಕದ ಜನರ ಮಾನ ಹರಾಜಾಗಲಿದೆ. ಜತೆಗೆ ಪ್ರವಾಸೋದ್ಯಮ ಚಟುವಟಿಕೆಗಳಿಗೂ ಹಿನ್ನಡೆಯಾಗಲಿದೆ.

    ವಿಡಿಯೋ ವೈರಲ್ ಬಳಿಕ ಕ್ರಮ: ಕಡಲ ತೀರಗಳಲ್ಲಿ ಟನ್‌ಗಟ್ಟಲೆ ಕಸ, ತ್ಯಾಜ್ಯಗಳು ಬೀಳುವ ತನಕ ತಪ್ಪಿತಸ್ಥರ ಮೇಲೆ ಕ್ರಮ ಜರುಗುವುದಿಲ್ಲ. ಅಂದರೆ ಆಡಳಿತ ವ್ಯವಸ್ಥೆಯ ನಿರ್ಲಕ್ಷೃ ಎದ್ದು ಕಾಣುತ್ತದೆ. ಕೆಲ ಸಮಯದ ಹಿಂದೆ ಇಲ್ಲಿ ಸಮುದ್ರ ಕಿನಾರೆಯಲ್ಲಿ ವಾಹನವೊಂದರಿಂದ ಕಸ ಸುರಿಯುವ ವಿಡಿಯೋವನ್ನು ನಾಗರಿಕರು ವೈರಲ್ ಮಾಡಿದ ಬಳಿಕ ಸಂಬಂಧಪಟ್ಟವರ ಮೇಲೆ ಕ್ರಮ ಜರುಗಿಸಲಾಗಿತ್ತು. ಶಾಶ್ವತವಾಗಿ ಕಡಲ ತೀರದ ಮೇಲೆ ಕಣ್ಣಿಡುವ ವ್ಯವಸ್ಥೆ ಆಗಬೇಕು ಎನ್ನುವುದು ಸ್ಥಳೀಯ ಪರಿಸರ ಸ್ನೇಹಿಗಳ ಆಗ್ರಹ.

    ಕಡಲ ತೀರ ಮತ್ತು ಸಮುದ್ರದಲ್ಲಿ ತ್ಯಾಜ್ಯ ಸುರಿಯುವುದರಿಂದ ಸಮುದ್ರದಲ್ಲಿರುವ ಜಲಚರ ಜೀವಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಈ ಭಾಗದಲ್ಲಿ ಮತ್ಸೃ ಸಂತತಿ ಬೆಳೆಯಲು ಕೂಡ ಅಡ್ಡಿಯಾಗಲಿದೆ. ಒಟ್ಟು ಪರಿಣಾಮಗಳ ಬಗ್ಗೆ ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು ಅಧ್ಯಯನ ಮಾಡುವ ಬಗ್ಗೆ ಯೋಚನೆ ಮಾಡಬಹುದು.

    ಡಾ.ಎ.ಟಿ.ರಾಮಚಂದ್ರ ನಾಯ್ಕ, ಪ್ರಾಧ್ಯಾಪಕರು, ಮೀನುಗಾರಿಕಾ ಕಾಲೇಜು

    ಅಧಿಕ ಪ್ರಮಾಣದಲ್ಲಿ ಕಸ ದೊರೆತಿರುವ ಕೋಟೆಪುರ ಫಿಶ್‌ಮೀಲ್ ಭಾಗದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಲಾಗುತ್ತಿದೆ. ಕಡಲ ತೀರದಲ್ಲಿ ಕಸ ಹಾಕುವುದರ ಬಗ್ಗೆ ಗಮನ ಹರಿಸಲು ದಿನಂಪ್ರತಿ ಈ ಪ್ರದೇಶಗಳಿಗೆ ಭೇಟಿ ನೀಡಲು ಹೆಲ್ತ್ ಇನ್‌ಸ್ಪೆಕ್ಟರ್‌ಗಳಿಗೆ ಸೂಚಿಸಲಾಗಿದೆ. ಈ ಭಾಗದಲ್ಲಿ ಕಸ ಹಾಕುವವರು ಪತ್ತೆಯಾದರೆ ಅಂತವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು.

    ರಾಯಪ್ಪ, ಆಯುಕ್ತರು, ಉಳ್ಳಾಲ ನಗರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts