More

    ಮುಂದುವರಿದಿದೆ ರಸ್ತೆ ಬದಿ ತ್ಯಾಜ್ಯ ಎಸೆತ ಕೃತ್ಯ

    ಭಾಗ್ಯವಾನ್ ಸನಿಲ್ ಮೂಲ್ಕಿ
    ರಸ್ತೆ ಬದಿ ಗೃಹತ್ಯಾಜ್ಯ ಎಸೆಯುವ ಪ್ರವೃತ್ತಿ ಸಾಮಾನ್ಯವಾಗಿದ್ದು, ಇಥ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜನ ಒತ್ತಾಯಿಸಿದ್ದಾರೆ. ಮೂಲ್ಕಿಯ ಕಿಲ್ಪಾಡಿ, ತೋಕೂರು, ಹಳೆಯಂಗಡಿ ಬಳಿ ಐಷಾರಾಮಿ ಕಾರು, ಬೈಕ್‌ಗಳಲ್ಲಿ ಬರುವವರು ತ್ಯಾಜ್ಯ ವಸ್ತುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ರಸ್ತೆ ಬದಿಗೆ ಎಸೆದು ತೆರಳುತ್ತಾರೆ.

    ಪಾದಚಾರಿಗಳಿಗೆ ಇರಿಸುಮುರುಸು: ಆಹಾರ ಅರಸಿ ಬರುವ ಪ್ರಾಣಿಗಳು ತ್ಯಾಜ್ಯ ವಸ್ತುಗಳ ಚೀಲವನ್ನು ರಸ್ತೆ ಮಧ್ಯಕ್ಕೆ ತಂದು ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿಸುವ ಸಂದರ್ಭ ಅದರೊಳಗಿದ್ದ ಡಯಪರ್, ಸ್ಯಾನಿಟರಿ ನ್ಯಾಪ್ಕಿನ್‌ಗಳು ರಸ್ತೆಯಲ್ಲಿ ಹರಡಿ ದುರ್ವಾಸನೆ ಬೀರುತ್ತದೆ. ಇದರಿಂದ ಶಾಲಾ ವಿದ್ಯಾರ್ಥಿಗಳು, ಸಾಯಂಕಾಲ ವಾಯುವಿಹಾರಕ್ಕೆ ಬರುವವರಿಗೆ ನರಕದರ್ಶನವಾಗುತ್ತಿದೆ. ಈ ಕೃತ್ಯ ನಡೆಸುವವರು ಅವಿದ್ಯಾವಂತರಲ್ಲ. ತ್ಯಾಜ್ಯ ವಿಲೇವಾರಿಗೆ ಹಣ ನೀಡಲು ಸಮಸ್ಯೆಯಾಗುವ ಬಡತನವೂ ಇಲ್ಲದವರಿಂದಲೇ ಸಮಸ್ಯೆ ಎದುರಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

    ಅಪಾಯ ಭೀತಿ: ತ್ಯಾಜ್ಯ ರಾಶಿಗಾಗಿ ಕಚ್ಚಾಡುವ ನಾಯಿಗಳು ಕೆಲವೊಮ್ಮೆ ಉಗ್ರರೂಪ ತಾಳಿ ಪಾದಚಾರಿಗಳನ್ನು ಅಟ್ಟಿಸಿಕೊಂಡು ಬರುತ್ತಿದೆ. ಇದರಿಂದ ದ್ವಿಚಕ್ರ ವಾಹನ ಸವಾರರು ಉರುಳಿ ಬಿದ್ದಿರುವ ಹಲವು ಘಟನೆಗಳು ನಡೆದಿವೆ. ಹಕ್ಕಿಗಳು ಕೊಳೆತ ಆಹಾರ ವಸ್ತುಗಳನ್ನು ಕುಡಿಯುವ ನೀರಿನ ಬಾವಿಗೆ ಬೀಳಿಸಿದ ಹಲವು ನಿದರ್ಶನಗಳಿವೆ.

    ತೆರವು ಕಾರ್ಯಾಚರಣೆ: ರಸ್ತೆ ಬದಿ ಹುಲ್ಲು, ತ್ಯಾಜ್ಯಕ್ಕೆ ಬೆಂಕಿ ಬೀಳುವುದು ಸಾಮಾನ್ಯವಾಗಿದ್ದು ಬೆಂಕಿ ನಿಭಾಯಿಸಲು ಸ್ಥಳೀಯರ ಜತೆ ಪಂಚಾಯಿತಿ ಸಿಬ್ಬಂದಿ ಹರಸಾಹಸಪಡಬೇಕಿದೆ. ಕುಬೆವೂರು ರೈಲ್ವೆ ಸೇತುವೆ ಬಳಿ ದುಷ್ಕರ್ಮಿಗಳು ಬಿಸಾಡಿದ ಲೋಡುಗಟ್ಟಲೆ ತ್ಯಾಜ್ಯವನ್ನು ಕಿಲ್ಪಾಡಿ ಪಂಚಾಯಿತಿ ಉಪಾಧ್ಯಕ್ಷ ಗೋಪೀನಾಥ ಪಡಂಗ ನೇತೃತ್ವದಲ್ಲಿ ಸಿಬ್ಬಂದಿ ಸುರೇಶ, ಯತೀಶ, ಸಬಿತಾ, ರಮೇಶ, ತಾರಾನಾಥ್ ಮತ್ತಿತರರು ತೆರವುಗೊಳಿಸಿದರು.

    ಕಳೆದ ಕೆಲವು ಸಮಯಗಳಿಂದ ಕುಬೆವೂರು ರೈಲ್ವೆ ಸೇತುವೆ ಬಳಿ ಕೆಲವು ದುಷ್ಕರ್ಮಿಗಳು ತ್ಯಾಜ್ಯ ಎಸೆದು ಹೋಗುತ್ತಿದ್ದಾರೆ. ಪಂಚಾಯಿತಿ ಸಿಬ್ಬಂದಿ ಪರಿಸರದಲ್ಲಿ ಎಚ್ಚರಿಕೆ ನಾಮಫಲಕ ಹಾಕಿದರ ಪರಿಣಾಮ ಬೀರಿಲ್ಲ. ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕಾದ ನಾಗರಿಕರು ತ್ಯಾಜ್ಯ ಎಸೆದು ಹೋಗುತ್ತಿರುವುದು ಬೇಸರದ ಸಂಗತಿ. ಮುಂದಿನ ದಿನಗಳಲ್ಲಿ ತ್ಯಾಜ್ಯ ಎಸೆಯುವ ಕೆಲವು ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಮುಖಾಂತರ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗುವುದು.
    – ಗೋಪೀನಾಥ ಪಡಂಗ, ಉಪಾಧ್ಯಕ್ಷರು ಕಿಲ್ಪಾಡಿ ಗ್ರಾಮ ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts