More

    ನಪಂ ಎದುರಿನ ತ್ಯಾಜ್ಯಕ್ಕೆ ಮುಕ್ತಿ

    ಸುಳ್ಯ: ಇಲ್ಲಿನ ನಗರ ಪಂಚಾಯಿತಿ ಮುಂಭಾಗದಲ್ಲಿ ಶೇಖರಿಸಿಟ್ಟು ವಿವಾದಕ್ಕೆ ಕಾರಣವಾಗಿದ್ದ ತ್ಯಾಜ್ಯ ರಾಶಿಯನ್ನು ನಗರ ಪಂಚಾಯಿತಿಗೆ ನೂತನ ಆಡಳಿತ ಅಧಿಕಾರ ವಹಿಸಿದ ಬೆನ್ನಲ್ಲೇ ತೆರವು ಮಾಡುವುದಕ್ಕೆ ಚಾಲನೆ ದೊರೆತಿದೆ.
    ಎರಡು ವರ್ಷಗಳಿಂದಲೂ ಹೆಚ್ಚು ಸಮಯದಿಂದ ಸುಳ್ಯ ನಗರದ ತ್ಯಾಜ್ಯದ ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆ ಆಗಿದ್ದ ನಗರ ಪಂಚಾಯಿತಿ ಪರಿಸರಕ್ಕೆ ಕೊನೆಗೂ ಮುಕ್ತಿ ದೊರೆಯುವ ಸಾಧ್ಯತೆ ಇದೆ. ನಗರ ಪಂಚಾಯಿತಿ ಮುಂಭಾಗದ ಕಟ್ಟಡ ಮತ್ತು ಕಚೇರಿಯ ಹಿಂಭಾಗದಲ್ಲಿ ತುಂಬಿಡಲಾಗಿದ್ದ ಕಸ ದುರ್ನಾತ ಬೀರಿ ಪರಿಸರವನ್ನೇ ಕೆಡಿಸಿತ್ತು. ಪ್ರಥಮ ಹಂತದಲ್ಲಿ ಪ್ರತ್ಯೇಕಿಸಲ್ಪಟ್ಟ ಪ್ಲಾಸ್ಟಿಕ್ ಕಸವನ್ನು ಕಲ್ಚರ್ಪೆಗೆ ಸಾಗಿಸಲು ಆರಂಭಿಸಿದ್ದಾರೆ.
    ನಗರದಿಂದ ಸಂಗ್ರಹಿಸುವ ಹಸಿ ಕಸವನ್ನು ಗೊಬ್ಬರ ತಯಾರಿಕೆಗೆ ಕೊಂಡೊಯ್ಯಲಾಗುತ್ತಿದ್ದು ಸದ್ಯ ಅದೇ ರೀತಿ ಮುಂದುವರಿಸಲಿದೆ. ನಗರ ಪಂಚಾಯಿತಿನಲ್ಲಿ ಶೇಖರಗೊಂಡಿರುವ ಕಸದಿಂದ ಪ್ಲಾಸ್ಟಿಕ್ ಬಾಟ್ಲಿ, ರಟ್ಟು ಮತ್ತಿತರ ವಸ್ತುಗಳನ್ನು ಪ್ರತ್ಯೇಕಿಸಿ ಮರು ಬಳಕೆಗೆ ಉಪಯೋಗಕ್ಕೆ ಮಾರಾಟ ಮಾಡುವ ಬಗ್ಗೆ ಯೋಜನೆ ಸ್ಥಳಿಯಾಡಳಿತದ್ದು.

    ಬರ್ನಿಂಗ್ ಮಷಿನ್ ಅಳವಡಿಸಲು ಸಿದ್ಧತೆ : ನಗರದಿಂದ ಸಂಗ್ರಹಿಸಲಾಗುವ ಒಣ ಕಸದಿಂದ ಮತ್ತು ನಗರ ಪಂಚಾಯಿತಿಯಲ್ಲಿ ಕೂಡಿಟ್ಟ ಕಸದಿಂದ ಪ್ಲಾಸ್ಟಿಕ್ ಪ್ರತ್ಯೇಕಿಸಲಾಗುತ್ತದೆ. ಹೀಗೆ ಪ್ರತ್ಯೇಕಿಸಿದ ಪ್ಲಾಸ್ಟಿಕ್‌ಗಳನ್ನು ಕಲ್ಚರ್ಪೆಗೆ ಕೊಂಡೊಯ್ದು ಅಲ್ಲಿನ ಶೆಡ್‌ನಲ್ಲಿ ಶೇಖರಿಸಲಾಗುತ್ತದೆ. ಪ್ಲಾಸ್ಟಿಕ್ ಪ್ರೆಸ್ಸಿಂಗ್ ಮಷಿನ್ ತಂದು ಆ ಪ್ಲಾಸ್ಟಿಕ್‌ನ್ನು ಪ್ರೆಸ್ ಮಾಡಿ ಅದರ ಪ್ರಮಾಣವನ್ನು ಕಡಿಮೆ ಮಾಡಲಾಗುವುದು. ಬಳಿಕ ಅದನ್ನು ಮರು ಬಳಕೆಗೆ ಮಾರಾಟ ಮಾಡುವ ಯೋಚನೆ ರೂಪಿಸಲಾಗಿದೆ. ನಗರ ಪಂಚಾಯಿತಿ ವತಿಯಿಂದ ಬರ್ನಿಂಗ್ ಮಷಿನ್‌ಗಳನ್ನು ಅಳವಡಿಸಲಾಗುವುದು. ಅದಕ್ಕೆ ಅನುಮತಿ ದೊರೆಯುವ ಪ್ರಕ್ರಿಯೆಗಳು ಪೂರ್ತಿಗೊಂಡಿದೆ. ಈ ಬರ್ನಿಂಗ್ ಮಷಿನ್ ಮೂಲಕ ಕಲ್ಚರ್ಪೆಯ ಡಂಪಿಂಗ್ ಯಾರ್ಡ್‌ನಲ್ಲಿ ಈ ಹಿಂದೆ ತುಂಬಿರುವ ಕಸವನ್ನು ವೈಜ್ಞಾನಿಕವಾಗಿ ಉರಿಸಲಾಗುವುದು ಎಂದು ನಗರ ಪಂಚಾಯಿತಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ವಿವರಿಸಿದ್ದಾರೆ.

    ಸುಳ್ಯ ನಗರ ಪಂಚಾಯಿತಿ ಸಮೀಪ ತುಂಬಿರುವ ಕಸವನ್ನು ವಿಲೇವಾರಿ ಮಾಡುವ ಬಗ್ಗೆ ಕ್ರಿಯಾತ್ಮಕವಾಗಿ ಚಿಂತನೆ ನಡೆಸಲಾಗಿದ್ದು ಅಲ್ಲಿಂದ ಪ್ರತ್ಯೇಕಿಸಲಾದ ಪ್ಲಾಸ್ಟಿಕನ್ನು ಕಲ್ಚರ್ಪೆಗೆ ಸಾಗಿಸಿ ಅಲ್ಲಿ ಶೇಖರಿಸಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲಾಗುವುದು. ಮುಂದಿನ ಒಂದೆರಡು ತಿಂಗಳಲ್ಲಿ ನಗರದ ಕಸದ ಸಮಸ್ಯೆಯನ್ನು ಪರಿಹರಿಸಲಾಗುವುದು.
    ವಿನಯಕುಮಾರ್ ಕಂದಡ್ಕ ಅಧ್ಯಕ್ಷರು ನಪಂ ಸುಳ್ಯ05

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts