More

    ತ್ಯಾಜ್ಯ ನಿರ್ವಹಣೆಯೇ ಸವಾಲು, ನೆಲಭರ್ತಿ ವ್ಯವಸ್ಥೆಯಿಂದ ಅಪಾಯ ಸಾಧ್ಯತೆ

    ಹರೀಶ್ ಮೋಟುಕಾನ, ಮಂಗಳೂರು

    ಬೆಂಗಳೂರು ಸೇರಿದಂತೆ ನಗರಗಳಲ್ಲಿ ತ್ಯಾಜ್ಯ ನಿರ್ವಹಣೆ ಆಡಳಿತಕ್ಕೆ ಸವಾಲೊಡ್ಡುತ್ತಲೇ ಇದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ನಗರ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ತ್ಯಾಜ್ಯ ಉತ್ಪಾದನೆಯ ಪ್ರಮಾಣ ಏರಿಕೆಯಾಗುತ್ತಿದೆ. ವೈಜ್ಞಾನಿಕ ಸಂಸ್ಕರಣೆ ಹೆಸರಿಗಷ್ಟೇ ಸೀಮಿತವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದೊಂದು ದಿನ ಕರಾವಳಿಯ ಪ್ರಮುಖ ನಗರಗಳಲ್ಲಿ ತ್ಯಾಜ್ಯ ರಾಶಿ ಅಪಾಯಕಾರಿಯಾಗಿ ಪರಿಣಮಿಸಲಿದೆ.

    ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ವೈಜ್ಞಾನಿಕ ಘನತ್ಯಾಜ್ಯ ನಿರ್ವಹಣೆ ಮಾಡುವುದಾಗಿ ಸರ್ಕಾರ ಹಲವು ಬಾರಿ ಘೋಷಿಸಿದ್ದರೂ, ಪೂರ್ಣವಾಗಿ ಕಾರ್ಯಗತವಾಗಲೇ ಇಲ್ಲ. ಈಗಲೂ ಬಹುತೇಕ ಪೌರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಸ್ಕರಿತ ತ್ಯಾಜ್ಯಗಳನ್ನು ನೆಲದೊಳಗೆ ಭರ್ತಿ ಮಾಡಲಾಗುತ್ತಿದೆ.

    ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ನಿತ್ಯ 15 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಮರು ಬಳಕೆಯಾಗುವ ತ್ಯಾಜ್ಯವನ್ನು ಗುಜರಿ ಕೇಂದ್ರಕ್ಕೆ ಕಳುಹಿಸಿ, ಉಳಿದದ್ದನ್ನು ನೆಲಭರ್ತಿ ಮಾಡಲಾಗುತ್ತದೆ. ಇಂಥ ಸೂತ್ರವೇ ಕರಾವಳಿಯ ಉಳಿದ ಪೌರಾಡಳಿತ ಪ್ರದೇಶದಲ್ಲೂ ಜಾರಿಯಲ್ಲಿದೆ. ತ್ಯಾಜ್ಯವನ್ನು ವೈಜ್ಞಾನಿಕವಾಗಿಯೇ ಪೂರ್ಣವಾಗಿ ಸಂಸ್ಕರಿಸುವ ಬದಲು ನೆಲಭರ್ತಿ ಮಾಡುವ ಬಗ್ಗೆಯೇ ಆಡಳಿತ ವ್ಯವಸ್ಥೆ ಗಮನ ಹರಿಸಿದ್ದು ಮುಂದಿನ ದಿನಗಳಲ್ಲಿ ಇನ್ನೊಂದು ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ.

    ಬೆಳ್ತಂಗಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಿತ್ಯ 2.49 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಸಂಸ್ಕರಣೆಯಾಗಿ ಉಳಿದದ್ದು ಕುಂಟಾಲ್‌ಪಲ್ಕೆಯಲ್ಲಿ ನೆಲಭರ್ತಿ ಮಾಡಲು ವ್ಯವಸ್ಥೆ ಮಾಡಲಾಗಿದೆ. ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 4 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು ಸಂಸ್ಕರಣೆ ಮಾಡಲಾಗುತ್ತಿದೆ. ಉಳಿದದ್ದು ನೆಲಭರ್ತಿ. ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ 2.80 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು ಸಂಸ್ಕರಣೆಯಾಗಿ ಉಳಿದದ್ದು ಭೂ ಭರ್ತಿ ನಿವೇಶನದಲ್ಲಿ ನೆಲ ಸೇರುತ್ತಿದೆ. ಕಡಬ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2.80 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಬಹುತೇಕ ತ್ಯಾಜ್ಯ ಭೂಮಿಯೊಳಗೆ ಭರ್ತಿಯಾಗುತ್ತಿದೆ. ಸುಳ್ಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 5.50 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ನಿರ್ವಹಿಸಲಾಗುತ್ತಿದೆ.

    ಮೂಡುಬಿದಿರೆ ಪುರಸಭೆ ವ್ಯಾಪ್ತಿಯಲ್ಲಿ ನಿತ್ಯ 9 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಒಣತ್ಯಾಜ್ಯ ವಿಂಗಡಿಸಿ ಮರು ಬಳಕೆಯಾಗುವ ವಸ್ತುಗಳನ್ನು ಗುಜರಿ ಕೇಂದ್ರಕ್ಕೆ ಮಾರಾಟ ಮಾಡಲಾಗುತ್ತಿದೆ. ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ 14 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದ್ದು ಕಂಚಿನಡ್ಕಪದವಿನಲ್ಲಿ ತ್ಯಾಜ್ಯ ಸಂಸ್ಕರಣೆಗೆ ಉದ್ದೇಶಿಸಲಾಗಿದೆ. ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿದ್ದು ಖಾಸಗಿ ಗುತ್ತಿಗೆದಾರರ ಮೂಲಕ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ.

    ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ನಿತ್ಯ 71 ಟನ್, ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ 12.37 ಟನ್, ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ 10 ಟನ್, ಕಾಪು ಪುರಸಭೆ ವ್ಯಾಪ್ತಿಯಲ್ಲಿ 10 ಟನ್ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 4.11 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದೆ. ಇವುಗಳಲ್ಲಿ ಬಹುತೇಕ ಸಂಸ್ಕರಣೆ ಆಗಿ ಉಳಿದ ಪಾಲು ನೆಲಭರ್ತಿ.

    ಕುಡ್ಲದಲ್ಲಿ ದಿನಕ್ಕೆ 330 ಟನ್ ತ್ಯಾಜ್ಯ ಉತ್ಪತ್ತಿ!: ಕರಾವಳಿಯಲ್ಲಿ ಅತಿ ಹೆಚ್ಚು ತ್ಯಾಜ್ಯ ಉತ್ಪಾದನೆ ಆಗುತ್ತಿರುವುದು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ. ಇಲ್ಲಿನ 60 ವಾರ್ಡ್‌ಗಳಲ್ಲಿ ದಿನನಿತ್ಯ 330 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಈ ಪೈಕಿ ಕೊಂಚ ಪಾಲು ಸಂಸ್ಕರಣೆಯಾಗುತ್ತಿದ್ದರೆ, ಉಳಿದದ್ದು ಭೂಮಿಯೊಳಗೆ ಸಂಗ್ರಹ ಮಾಡಿಡಲಾಗುತ್ತಿದೆ. ಇದೇ ತ್ಯಾಜ್ಯ 2019ರ ಮಳೆಗಾಲದ ಸಂದರ್ಭ ತ್ಯಾಜ್ಯ ಗುಡ್ಡೆಯೇ ಜರಿದು ಎಕರೆಗಟ್ಟಲೆ ಕೃಷಿ ಭೂಮಿಯನ್ನೇ ನುಂಗಿತ್ತು. ಅಲ್ಲಿನ ನಿವಾಸಿಗಳು ಈ ಕಾರಣದಿಂದ ತಾತ್ಕಾಲಿಕ ವಸತಿ ವ್ಯವಸ್ಥೆಗೆ ಬದಲಾಗಿದ್ದಾರೆ. ಈ ಮಧ್ಯೆಯೇ, ಉಳ್ಳಾಲ ನಗರಸಭೆಯ 31 ವಾರ್ಡ್‌ಗಳಲ್ಲಿ ಉತ್ಪಾದನೆಯಾಗುವ 18.5 ಟನ್ ತ್ಯಾಜ್ಯವನ್ನು ಕೂಡ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿಗೆ ತಂದು ಡಂಪ್ ಮಾಡಲಾಗುತ್ತಿದೆ. ಕೋಟೆಕಾರ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ 3 ಟನ್ ತ್ಯಾಜ್ಯವನ್ನೂ ಪಚ್ಚನಾಡಿಗೆ ತಂದು ಹಾಕಲಾಗುತ್ತಿದೆ.

    ಎಲ್ಲ ಸ್ಥಳೀಯಾಡಳಿತಗಳು ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಿ ವೈಜ್ಞಾನಿಕವಾಗಿಯೇ ಸಂಸ್ಕರಣೆ ಮಾಡುವ ಬಗ್ಗೆ ಒತ್ತು ನೀಡಬೇಕಾಗಿದೆ. ತಜ್ಞರು, ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.

    ಎಸ್.ಅಂಗಾರ
    ಮೀನುಗಾರಿಕಾ ಸಚಿವ

    ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಣ ಹಾಗೂ ಹಸಿ ಕಸ ಪ್ರತ್ಯೇಕಿಸಿ ಸಂಗ್ರಹ ಮಾಡಲಾಗುತ್ತಿದೆ. ಇದು ಶೇ.70ರಷ್ಟು ಯಶಸ್ವಿಯಾಗಿದೆ. ಉಳಿದ ನಗರ ಸ್ಥಳೀಯ ಸಂಸ್ಥೆಗಳ ತ್ಯಾಜ್ಯ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಆದ್ಯತೆ ನೀಡಬೇಕಾಗಿದೆ.

    ಪ್ರೇಮಾನಂದ ಶೆಟ್ಟಿ
    ಮಂಗಳೂರು ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts