More

    ಕೋವಿಡ್ ತ್ಯಾಜ್ಯ ವಿಲೇವಾರಿ ವ್ಯವಸ್ಥಿತ

    ಹರೀಶ್ ಮೋಟುಕಾನ ಮಂಗಳೂರು

    ದ.ಕ. ಜಿಲ್ಲೆಯ ಕೋವಿಡ್ ಆಸ್ಪತ್ರೆಯಾಗಿರುವ ವೆನ್ಲಾಕ್‌ನಲ್ಲಿ ಪ್ರತಿದಿನ ಸುಮಾರು 60 ಕೆ.ಜಿ. ಹಾಗೂ ಉಡುಪಿ ಕೋವಿಡ್ ಆಸ್ಪತ್ರೆಯಲ್ಲಿ ಸುಮಾರು 75 ಕೆ.ಜಿ. ವೈದ್ಯಕೀಯ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಸುರಕ್ಷತಾ ಕ್ರಮ ಅನುಸರಿಸಿ ಗುತ್ತಿಗೆ ಸಂಸ್ಥೆಯ ಮೂಲಕ ನಿರ್ವಹಿಸಲಾಗುತ್ತಿದೆ.
    ವೆನ್ಲಾಕ್‌ನ ಐಸೋಲೇಶನ್ ವಾರ್ಡ್‌ಗಳಲ್ಲಿ 20 ಸಿಬ್ಬಂದಿ ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ದಿನಕ್ಕೆ ಮೂರು ಬಾರಿ ಪಿಪಿಇ ಬದಲಿಸುತ್ತಾರೆ. ಪಿಪಿಇ, ಗ್ಲವ್ಸ್, ಮಾಸ್ಕ್ ಸಹಿತ ವೈದ್ಯಕೀಯ ಸಿಬ್ಬಂದಿ ಮತ್ತು ಸೋಂಕಿತರು ಬಳಸಿದ ವಸ್ತುಗಳನ್ನು ಚೀಲದಲ್ಲಿ ತುಂಬಲಾಗುತ್ತದೆ. ಈ ಚೀಲವನ್ನು ಹೈಪೋಕ್ಲೋರೈಟ್ ಸಿಂಪಡಿಸಿದ ಮತ್ತೆರಡು ಚೀಲಗಳಲ್ಲಿ ತುಂಬಿ, ಒಟ್ಟು ಮೂರು ಪದರಗಳನ್ನಾಗಿಸಿ ವಿಲೇವಾರಿ ಮಾಡಲಾಗುತ್ತದೆ ಎಂದು ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸದಾಶಿವ ಶಾನುಭಾಗ್ ತಿಳಿಸಿದ್ದಾರೆ.

    ಪಿಪಿಇ ಕಿಟ್ ಕಳಚುವ ಬಗೆ: ವೈದ್ಯಕೀಯ ಸಿಬ್ಬಂದಿ ಬಳಸಿದ ಪಿಪಿಇ ಕಳಚಲೆಂದೇ ಪ್ರತ್ಯೇಕ ಜಾಗವಿದ್ದು, ಅದನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಪ್ರತ್ಯೇಕ ಕಸದ ಬುಟ್ಟಿಗೆ ಹಾಕುತ್ತಾರೆ. ವಿಲೇವಾರಿ ಸಿಬ್ಬಂದಿ ಕೂಡ ಪಿಪಿಇ ಕಿಟ್ ಧರಿಸಿಯೇ ಬರುತ್ತಾರೆ.
    ಹೈಪೋಕ್ಲೋರೈಟ್ ಸಿಂಪಡಿಸಿದ ಬುಟ್ಟಿಗಳನ್ನು ವಾರ್ಡ್‌ನ ಪ್ರವೇಶ ದ್ವಾರದಲ್ಲಿ ಇಡಲಾಗುತ್ತದೆ. ಗುತ್ತಿಗೆ ಸಂಸ್ಥೆಯ ಪ್ರತ್ಯೇಕ ವಾಹನ ಆಸ್ಪತ್ರೆ ಆವರಣಕ್ಕೆ ಬಂದಾಗ ಪ್ರತ್ಯೇಕ ಸಿಬ್ಬಂದಿ ಆ ಬುಟ್ಟಿಗಳನ್ನು ವಾಹನಕ್ಕೆ ತುಂಬಿಸುತ್ತಾರೆ. ಸೋಂಕಿತರು ಬಳಸಿದ ಬಳಸಿ ಬಿಸಾಕುವ ತಟ್ಟೆ, ಲೋಟ, ನೀರಿನ ಬಾಟಲಿ, ವ್ಯರ್ಥ ಆಹಾರ ಎಲ್ಲವನ್ನೂ ಪ್ಲಾಸ್ಟಿಕ್‌ಗಳಲ್ಲಿ ಕಟ್ಟಿ ವಾಹನಕ್ಕೆ ಹಾಕಲಾಗುತ್ತದೆ. ಯಾವುದೇ ವಸ್ತು ಮನಪಾ ತ್ಯಾಜ್ಯ ಸಂಗ್ರಹ ವಾಹನಕ್ಕೆ ನೀಡಲಾಗುವುದಿಲ್ಲ.
    ಕರೊನಾ ವೈರಸ್ 200ರಿಂದ 250 ಡಿಗ್ರಿ ಉಷ್ಣಾಂಶದಲ್ಲಿ ಸಾಯುತ್ತದೆ. ಸರ್ಕಾರದ ಮಾರ್ಗಸೂಚಿಯಂತೆ ತ್ಯಾಜ್ಯದ ಚೀಲಗಳನ್ನು ತೆರೆಯದೆ ಹಾಗೆಯೇ ಯಂತ್ರದ ಒಳಗೆ ಹಾಕಿ ಒಂದು ಸಾವಿರ ಡಿಗ್ರಿ ಉಷ್ಣಾಂಶದಲ್ಲಿ ಸುಡಲಾಗುತ್ತದೆ.

    ವೈದ್ಯಕೀಯ ತ್ಯಾಜ್ಯವನ್ನು ಸುರಕ್ಷತಾ ಕ್ರಮಗಳೊಂದಿಗೆ ಗುತ್ತಿಗೆ ಸಂಸ್ಥೆಯ ಮೂಲಕ ವಿಲೇ ಮಾಡಲಾಗುತ್ತಿದೆ. ಪ್ರತಿದಿನ ಸುಮಾರು 100 ಪಿಪಿಇ ಬಳಕೆಯಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ಕರ್ತವ್ಯದಲ್ಲಿರುವ ವೈದ್ಯರು, ದಾದಿಯರು ಮನೆಗೆ ಹೋಗದೆ ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡಿದ್ದಾರೆ.
    – ಡಾ.ಸದಾಶಿವ ಶಾನುಭಾಗ್, ಡಿಎಂಒ, ವೆನ್ಲಾಕ್ ಕೋವಿಡ್ ಆಸ್ಪತ್ರೆ

    ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಪ್ರತಿದಿನ ಸುಮಾರು 75 ಕೆ.ಜಿ ವೈದ್ಯಕೀಯ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಅದನ್ನು ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ವಿಲೇವಾರಿ ಮಾಡಲು ಖಾಸಗಿ ಗುತ್ತಿಗೆ ಸಂಸ್ಥೆಗೆ ನೀಡಲಾಗಿದೆ. ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿಕೊಂಡು ತ್ಯಾಜ್ಯ ವಿಲೇವಾರಿ ಮಾಡಲು ಸೂಚನೆ ನೀಡಲಾಗಿದೆ.
    – ಜಿ.ಜಗದೀಶ್, ಉಡುಪಿ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts