More

    ಸ್ಪಿನ್ ದಿಗ್ಗಜ ಶೇನ್ ವಾರ್ನ್‌ಗೆ ಮುಳುವಾಯಿತೇ ದ್ರವ ಆಹಾರದ ಪಥ್ಯ?

    ಮೆಲ್ಬೋರ್ನ್: ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಥಾಯ್ಲೆಂಡ್‌ಗೆ ರಜಾದಿನಗಳನ್ನು ಕಳೆಯಲು ಸ್ನೇಹಿತರೊಂದಿಗೆ ಹೋಗಿದ್ದ ವೇಳೆ ಹೃದಯಾಘಾತದಿಂದ ನಿಧನ ಹೊಂದಿದ್ದು ಕ್ರಿಕೆಟ್ ಜಗತ್ತಿಗೆ ಬಹುದೊಡ್ಡ ಆಘಾತ ನೀಡಿತ್ತು. ಆರೋಗ್ಯಕರವಾಗಿಯೇ ಕಾಣಿಸುತ್ತಿದ್ದ 52 ವರ್ಷದ ಶೇನ್ ವಾರ್ನ್ ಅವರ ದಿಢೀರ್ ಅಗಲಿಕೆ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿತ್ತು. ವೈದ್ಯರ ವರದಿಯಲ್ಲಿ ಅವರ ಸಾವು ಸಹಜವಾದುದು ಎಂದೇ ದೃಢಪಟ್ಟಿದೆ. ಆದರೆ ಅವರ ಹೃದಯದ ಆರೋಗ್ಯ ಕೆಡಲು ಇತ್ತೀಚೆಗಿನ ಅವರ ಆಹಾರ ಕ್ರಮವೇ ಕಾರಣವಾಯಿತೇ ಎಂಬ ಪ್ರಶ್ನೆಗಳು ಎದ್ದಿವೆ.

    ವಾರ್ನ್ ಅವರ ಮ್ಯಾನೇಜರ್ ಜೇಮ್ಸ್ ಎರ್ಸ್‌ಕಿನ್ ಪ್ರಕಾರ, ವಾರ್ನ್ ಥಾಯ್ಲೆಂಡ್‌ಗೆ ತೆರಳುವುದಕ್ಕೆ ಮುನ್ನ 2 ವಾರಗಳ ಕಾಲ ದ್ರವ ಆಹಾರವನ್ನು ಮಾತ್ರ ತೆಗೆದುಕೊಳ್ಳುವ ಕಠಿಣ ಡಯೆಟ್ ಪಾಲಿಸಿದ್ದರು. ಇದರ ಬೆನ್ನಲ್ಲೇ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. 14 ದಿನಗಳ ಕಾಲ ಅವರು ಕೇವಲ ದ್ರವ ಆಹಾರ ತೆಗೆದುಕೊಂಡಿದ್ದರು. ಹಿಂದೆಯೂ 3-4 ಬಾರಿ ಇಂಥದ್ದೇ ಡಯೆಟ್ ಮಾಡಿದ್ದರು. ಬೆಣ್ಣೆ ಸಹಿತ ಬನ್ ಮತ್ತು ಜ್ಯೂಸ್‌ಗಳನ್ನು ಮಾತ್ರ ಸೇವಿಸುತ್ತಿದ್ದರು. ಜತೆಗೆ ಸಾಕಷ್ಟು ಸಿಗರೇಟ್‌ಗಳನ್ನು ಸೇದುತ್ತಿದ್ದರು.

    ಸಾವಿಗೀಡಾಗುವುದಕ್ಕೆ ಮುನ್ನ ಇನ್‌ಸ್ಟಾಗ್ರಾಂನಲ್ಲಿ ವಾರ್ನ್ ತಮ್ಮ ಹಳೆಯ ಫಿಟ್ ಆಗಿರುವ ಚಿತ್ರವನ್ನು ಪ್ರಕಟಿಸಿದ್ದರು ಮತ್ತು ದೇಹ ತೂಕವನ್ನು ಕಳೆದುಕೊಂಡು ಮತ್ತೆ ಶೀಘ್ರವೇ ಈ ಚಿತ್ರದಲ್ಲಿರುವಂತೆ ಆಗುವೆ ಎಂದು ಬರೆದುಕೊಂಡಿದ್ದರು. ದ್ರವ ಆಹಾರದ ಡಯೆಟ್‌ನಿಂದಾಗಿಯೇ ಅವರಿಗೆ ಹೃದಯಾಘಾತದ ಅಪಾಯ ಹೆಚ್ಚಾಗಿತ್ತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಆಸ್ತಮಾದಿಂದಲೂ ಬಳಲಿದ್ದ ವಾರ್ನ್ ಥಾಯ್ಲೆಂಡ್‌ಗೆ ತೆರಳುವುದಕ್ಕೆ ಮುನ್ನ ವೈದ್ಯರನ್ನು ಭೇಟಿಯಾಗಿ ಹೃದಯದ ಪರೀಕ್ಷೆಗೂ ಒಳಗಾಗಿದ್ದರು ಎಂದು ಅವರ ಕುಟುಂಬದವರು ಮಾಹಿತಿ ನೀಡಿದ್ದಾರೆ.

    ಸ್ಪಿನ್ ದಿಗ್ಗಜ ಶೇನ್ ವಾರ್ನ್ ಸಾವಿನ ಗುಟ್ಟು ಬಿಚ್ಚಿಟ್ಟ ಥಾಯ್ಲೆಂಡ್ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts