More

    ವಾರ್ಡ್ ಮಹಿಳೆಯರಿಗೆ ಏನಂತ ಉತ್ತರ ಕೊಡೋಣ ?: ಕೂಡ್ಲಿಗಿ ಪಪಂ ಸಾಮಾನ್ಯ ಸಭೆಯಲ್ಲಿ ಸದಸ್ಯೆ ರೇಣುಕಾ ಪ್ರಶ್ನೆ

    ಕೂಡ್ಲಿಗಿ: ಪಟ್ಟಣದ ಅಂಬೇಡ್ಕರ್ ಕಾಲನಿಯಲ್ಲಿ ಮಹಿಳೆಯರ ಸಾಮೂಹಿಕ ಶೌಚಗೃಹ ನಿರ್ವಹಣೆ ಕೊರತೆ ಕುರಿತಾಗಿ ಎರಡು ವಷರ್ಗಳಿಂದ ದೂರು ನೀಡುತ್ತಿದ್ದರೂ ಬಗೆಹರಿಸುತ್ತಿಲ್ಲವೇಕೆ ಎಂದು ಪಪಂ ಮುಖ್ಯಾಧಿಕಾರಿ ಫಿರೋಜ್ ಖಾನ್ ಅವರನ್ನು ಸದಸ್ಯೆ ರೇಣುಕಾ ದುರುಗೇಶ್ ಪ್ರಶ್ನಿಸಿದರು.

    ಪಪಂ ಸಭಾಂಗಣದಲ್ಲಿ ಸೋಮವಾರ ಅಧ್ಯಕ್ಷೆ ಎಂ.ಶಾರದಾಬಾಯಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತಾನಾಡಿದ ರೇಣುಕಾ ದುರುಗೇಶ್, ನಾವು ಆಯ್ಕೆಯಾಗಿ ಎರಡು ವರ್ಷ ಕಳೆದರೂ ಈ ಸಮಸ್ಯೆಗೆ ಮುಕ್ತಿ ಸಿಗುತ್ತಿಲ್ಲ. ವಾರ್ಡ್ ಮಹಿಳೆಯರಿಗೆ ಏನಂತ ಹೇಳಬೇಕು ಎಂದು ಪ್ರಶ್ನಿಸಿದರು. ಮುಖ್ಯಾಧಿಕಾರಿ ಫಿರೋಜ್ ಖಾನ್ ಮಾತನಾಡಿ, ಶೀಘ್ರದಲ್ಲೇ ಸ್ವಚ್ಛತೆ ಕೈಗೊಳ್ಳುವುದಾಗಿ ತಿಳಿಸಿದರು. ಡಿಸಿ ಆದೇಶದಂತೆ ಎಲ್ಲ ವಾರ್ಡ್ ಶೌಚಗೃಹಗಳ ಸ್ಥಿತಿಗತಿಗಳ ಬಗ್ಗೆ ಖುದ್ದು ಭೇಟಿ ನೀಡಿ ವರದಿ ನೀಡಬೇಕಿದೆ ಎಂದರು.

    ಪಟ್ಟಣದ ಇಪ್ಪತ್ತು ವಾರ್ಡ್‌ಗಳಲ್ಲಿ ನೀರು-ಚರಂಡಿ ಹಾಗೂ ಸ್ವಚ್ಛತೆ ಬಗ್ಗೆ ಹಲವು ಬಾರಿ ದೂರು ನೀಡಿದರೂ ಸಿಬ್ಬಂದಿ ಕೊರತೆ ಹೇಳುತ್ತೀರಿ. ಸಮಸ್ಯೆ ಬಗೆಹರಿಯುವುದು ಯಾವಾಗ ಎಂದು ಪೂರ್ಯನಾಯ್ಕ ಕೇಳಿದ ಪ್ರಶ್ನೆಗೆ ಸಿರಬಿ ಮಂಜುನಾಥ ಹಾಗೂ ಸಚಿನ್ ಕುಮಾರ್ ಧ್ವನಿ ಗೂಡಿಸಿದರು. ಉತ್ತರಿಸಿದ ಮುಖ್ಯಾಧಿಕಾರಿ, 44 ಪೌರಕಾರ್ಮಿಕರು ಇರಬೇಕಿತ್ತು. ಅನೇಕ ಕಾರಣಗಳಿಂದ 32 ಜನರಿದ್ದಾರೆ. ಹೀಗಾಗಿ ಸಮಸ್ಯೆಗಳು ಎದುರಾಗಿವೆ. ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು. ಮದ್ಯಪ್ರವೇಶಿಸಿ ಮಾತಾನಾಡಿದ ಕಾವಲಿ ಶಿವಪ್ಪನಾಯಕ ನಾಯಕ ಹಾಗೂ ತಳಾಸ್ ವೆಂಕಟೇಶ, ಪೌರಕಾರ್ಮಿಕರನ್ನು ಶೀಘ್ರವೇ ನೇಮಕ ಮಾಡಿ ಎಂದರು.

    ಪಟ್ಟಣದ ಮುಖ್ಯ ರಸ್ತೆಯಲ್ಲಿ ಚಿಕನ್-ಮಾಂಸದ ಅಂಗಡಿಗಳು ತ್ಯಾಜ್ಯವನ್ನು ಅಲ್ಲಿಯೇ ಎಸೆಯುತ್ತಾರೆ. ಇದರಿಂದ ನಾಯಿಗಳ ಉಪಟಳ ಜಾಸ್ತಿಯಾಗಿದೆ. ರೋಗಗಳ ಭೀತಿ ಎದುರಾಗಿದೆ ಎಂದು ಸಿರಬಿ ಮಂಜುನಾಥ, ಕೆ.ಈಶಪ್ಪ, ಕಾವಲಿ ಶಿವಪ್ಪನಾಯಕ ದೂರಿದರು. ಫಿರೋಜ್ ಖಾನ್ ಮಾತನಾಡಿ, ಅವರಿಗೆ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ತಿಳಿಸಲಾಗುವುದು. ಹೀಗೇ ಮುಂದುವರಿದರೆ ದಂಡ ವಿಧಿಸುತ್ತೆವೆ ಎಂದರು.

    ಪಪಂ ನೌಕರನೊಬ್ಬ ಕಚೇರಿ ಸಮಯದ ನಂತರ ಕಡತಗಳನ್ನ ನೋಡುತ್ತಾರೆ. ಅಂಗಡಿಗಳಲ್ಲಿ ಲೈಸೆನ್ಸ್ ನೀಡದೆ ಅವರಿಂದ ಹಣ ಪಡೆಯುತ್ತಿರುವ ಸಾಕಷ್ಟು ದೂರುಗಳಿವೆ. ಇದಕ್ಕೇನು ಕ್ರಮ ಕೈಗೊಳ್ಳುತ್ತೀರಿ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಚಂದ್ರು ಪ್ರಶ್ನಿಸಿದರು. ಮುಖ್ಯಾಧಿಕಾರಿ ಉತ್ತರಿಸಿ, ಆ ಸಿಬ್ಬಂದಿಗೆ ಎಚ್ಚರಿಕೆ ನೀಡುವೆ. ಮುಂದೆ ಇಂಥ ದೂರುಗಳು ಬಂದರೆ ಶಿಸ್ತುಕ್ರಮ ಕೈಗೊಳ್ಳುವೆ ಎಂದರು.

    ಪದವಿ ಕಾಲೇಜಿಗೆ ನೂರಾರು ಕೋಟಿ ರೂ. ಬೆಲೆ ಬಾಳುವ ಜಮೀನು ನೀಡಿದ ದಾನಿ ದಿ.ಅಂಗಡಿ ಸಿದ್ದಣ್ಣ ಅವರ ಪುತ್ಥಳಿ ನಿರ್ಮಾಣಕ್ಕೆ ಅನುದಾನ ಮೀಸಲಿರಿಸುವಂತೆ ಹಲವಾರು ಬಾರಿ ಕೇಳಿದರೂ ಪ್ರಯೋಜನವಾಗಿಲ್ಲ ಎಂದು ಪಿ.ಚಂದ್ರು ಪ್ರಶ್ನಿಸಿದರು. ಇದಕ್ಕೆ ಸಿರಬಿ ಮಂಜುನಾಥ ಹಾಗೂ ಸಚಿನ್ ಕುಮಾರ್ ಧ್ವನಿಗೂಡಿಸಿದರು. ಮುಖ್ಯಾಧಿಕಾರಿ ಉತ್ತರಿಸಿ ಸರ್ವ ಸದಸ್ಯರು ಒಪ್ಪಿಗೆ ನೀಡಿದ್ದು, ಶೀಘ್ರವೇ ಅನುದಾನ ಮೀಸಲಿಡಲಾಗುವುದು ಎಂದರು.

    ಸಭೆಯಲ್ಲಿ ವಸತಿ, ವಿದ್ಯುತ್ ದೀಪ, ಕುಡಿವ ನೀರಿನ ವ್ಯವಸ್ಥೆಯ ಚರ್ಚೆ ನಡೆಯಿತು. ಇದಕ್ಕೂ ಮುನ್ನ ಪಪಂ ಸಿಬ್ಬಂದಿ ಪಪಂ ನಾನಾ ಕಾಮಾಗಾರಿಗಳ ಕ್ರಿಯಾ ಯೋಜನೆಯ ಬಗ್ಗೆ ತಿಳಿಸಿದರು. ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ಎನ್.ಟಿ.ಬೊಮ್ಮಣ್ಣ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು. ಉಪಾಧ್ಯಕ್ಷೆ ಬಿ.ಸರಸ್ವತಿ, ಸದಸ್ಯರು ಹಾಗೂ ಕಚೇರಿ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts