More

    ಗೌರಿಬಿದನೂರು 10ನೇ ವಾರ್ಡ್ ಚುನಾವಣೆ ; ಗದ್ದಲದ ನಡುವೆ ಮತದಾನ ಮುಕ್ತಾಯ

    ಗೌರಿಬಿದನೂರು: ನಗರಸಭೆಯಲ್ಲಿ ಅಧಿಕಾರ ಮುಂದುವರಿಸಲು ಕಾಂಗ್ರೆಸ್‌ಗೆ ಹಾಗೆಯೇ ಚುಕ್ಕಾಣಿ ಹಿಡಿಯಲು ಇತರರಿಗೆ ಪ್ರಮುಖ, ಪ್ರತಿಷ್ಠೆಯ ಕಣವಾಗಿದ್ದ ನಗರಸಭೆಯ 10 ವಾರ್ಡ್ ಉಪ ಚುನಾವಣೆಗೆ ಸೋಮವಾರ ಮತದಾನ ಗದ್ದಲದ ನಡುವೆ ಮುಕ್ತಾಯವಾಗಿದ್ದು, ಡಿ.30ರಂದು ಎಣಿಕೆ ನಡೆಯಲಿದೆ.

    ಕಾಂಗ್ರೆಸ್, ಬಿಜೆಪಿ, ಉದ್ಯಮಿ.ಕೆ.ಎಚ್.ಪುಟ್ಟಸ್ವಾಮಿಗೌಡ ಹಾಗೂ ಜಿಪಂ ಮಾಜಿ ಸದಸ್ಯ ಕೆ.ಕೆಂಪರಾಜು ಬಣಗಳ ನಡುವಿನ ಜಿದ್ದಾಜಿದ್ದಿನ ಕಾರಣಕ್ಕೆ ಚುನಾವಣೆ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಸೇರಿದೆ.
    ಟೋಕನ್ ವ್ಯವಸ್ಥೆ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 5 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ವಾರ್ಡ್‌ನಲ್ಲಿ 591 ಪುರುಷರು, 661 ಮಹಿಳಾ ಮತದಾರರಿದ್ದು, ಈ ಪೈಕಿ 508 ಪುರುಷರು, 462 ಮಹಿಳೆಯರು ಹಕ್ಕು ಚಲಾಯಿಸಿದ್ದಾರೆ. ಮತದಾನಕ್ಕೆ ಸಂಜೆ 5 ಗಂಟೆವರೆಗೆ ಸಮಯ ನಿಗದಿಪಡಿಸಲಾಗಿತ್ತು. ಆ ವೇಳೆ ಮತಗಟ್ಟೆ ಕೇಂದ್ರದ ಒಳಗೆ ಬಂದ ಮತದಾರರಿಗೆ ಟೋಕನ್ ನೀಡಿ, ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

    ಖುದ್ದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ, ಕೆಎಚ್‌ಪಿ ಬಣದ ಮುಖಂಡ ಎಂ.ನರಸಿಂಹಮೂರ್ತಿ, ಕೆ.ಎಸ್.ಅನಂತರಾಜು ಹಾಗೂ ಜಿಪಂ ಮಾಜಿ ಸದಸ್ಯ ಡಾ.ಕೆ.ಕೆಂಪರಾಜು ಮತಗಟ್ಟೆ ಕೇಂದ್ರದ ಬಳಿಗೆ ಭೇಟಿ ನೀಡಿ, ಅಭ್ಯರ್ಥಿಗಳ ಪರ ಮತಚಲಾಯಿಸುವಂತೆ ಮನವಿ ಮಾಡಿದರು.

    ಆಮಿಷಗಳ ಮಹಾಪೂರ: ಗೌರಿಬಿದನೂರಿನ ಪುರಸಭೆ, ನಗರಸಭೆ ಇತಿಹಾಸದಲ್ಲಿ ಕಂಡು ಕೇಳರಿಯದ ರೀತಿ ಚುನಾವಣೆ ನಡೆದಿದ್ದು ಮತದಾರರನ್ನು ಒಲಿಸಿಕೊಳ್ಳಲು ಅಭ್ಯರ್ಥಿಗಳು ಕೊನೆಯ ಹಂತದವರೆಗೆ ಆಮಿಷಗಳ ಮಹಾಪೂರವನ್ನೇ ಹರಿಸಿದರು. ಮುನ್ನಾ ದಿನ ರಾತ್ರಿಯಿಡೀ ಎಲ್ಲ ಅಭ್ಯರ್ಥಿಗಳ ಬೆಂಬಲಿಗರು ಮತದಾರರನ್ನು ಹಿಡಿದಿಟ್ಟುಕೊಳ್ಳಲು ಕಸರತ್ತು ನಡೆಸಿದರು. ಈ ಮೊದಲು ಆಹಾರದ ಕಿಟ್, ಮಟನ್, ಕೋಳಿ ಮಾಂಸ, ಅಕ್ಕಿ ಮೂಟೆ ನೀಡಿದ್ದ ಅಭ್ಯರ್ಥಿಗಳು, ಅಂತಿಮ ಅಂತದಲ್ಲಿ ಪ್ರತಿ ಮತಕ್ಕೆ 5 ಸಾವಿರ ರೂ., ಮಹಿಳೆಯರಿಗೆ ಕಾಲು ಚೈನು, ಕುಕ್ಕರ್ ಹಂಚಿಕೆ ಮಾಡಿದ್ದಾರೆ ಎಂಬ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ.

    ಮತಗಟ್ಟೆ ಬಳಿ ಬೆಂಬಲಿಗರ ದಂಡು: ಮತಗಟ್ಟೆ ಕೇಂದ್ರದ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಅಭ್ಯರ್ಥಿಗಳ ಬೆಂಬಲಿಗರು ಮತದಾರರಿಗೆ ಗುರುತಿನ ಸಂಖ್ಯೆ ಬರೆದುಕೊಟ್ಟು ಕೊನೇ ಗಳಿಗೆಯಲ್ಲೂ ತಮ್ಮ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಮನವಿ ಮಾಡುತ್ತಿದ್ದ ದೃಶ್ಯಗಳು ಕಂಡುಬಂದವು. ಕೇಂದ್ರಕ್ಕೆ ಬಾರದ ಮತದಾರರ ಮನೆ ಬಾಗಿಲಿಗೆ ತೆರಳಿ ಬಲವಂತದಿಂದ ಕರೆತಂದ ಪ್ರಸಂಗಗಳು ಕಾಣಿಸಿದವು.

    ಅಧಿಕಾರಿ ವಿರುದ್ಧ ಅಸಮಾಧಾನ: ಮತಗಟ್ಟೆ ಅಧಿಕಾರಿ ಕಾಂಗ್ರೆಸ್ ಏಜೆಂಟರಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪುಟ್ಟಸ್ವಾಮಿಗೌಡರ ಬಣದ ಮುಖಂಡರು ಆರೋಪಿಸಿದರು. ಇದರಿಂದ ಕೆಲಕಾಲ ಎರಡು ಬಣಗಳ ನಡುವೆ ಗದ್ದಲ ಉಂಟಾಯಿತು. ಪೊಲೀಸರು ಜನರನ್ನು ಚದುರಿಸಿದರು. ಅಧಿಕಾರಿಯನ್ನು ಬದಲಾವಣೆ ಮಾಡಿದ ಬಳಿಕ ಮತದಾನ ಸುಸೂತ್ರವಾಗಿ ಮುಂದುವರಿಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts