More

    ಹೆತ್ತವರ ಕಷ್ಟವನ್ನು ಎಂದಿಗೂ ಮರೆಯಬೇಡಿ: ನಿವೃತ್ತ ಪ್ರಾಧ್ಯಾಪಕ ಡಾ.ಡಿ.ಕೆ.ರಾಜೇಂದ್ರ ಕಿವಿಮಾತು

    ಮಂಡ್ಯ: ಆಧುನಿಕ ಜಗತ್ತಿನ ನಾಗಾಲೋಟದಲ್ಲಿ ಮಕ್ಕಳು ತಮ್ಮನ್ನು ಪೋಷಿಸಿದ ತಂದೆ, ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದು ಬಹಳ ವಿಷಾಧನೀಯ ಎಂದು ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ.ಡಿ.ಕೆ.ರಾಜೇಂದ್ರ ಹೇಳಿದರು.
    ನಗರದ ಗಾಂಧಿಭವನದಲ್ಲಿ ಪ್ರತಿಷ್ಠಿತ ದೇವಮ್ಮ ಪುಟ್ಟಚ್ಚಿ ಸಿದ್ದೇಗೌಡ ಮತ್ತು ಡಾ.ವಿ.ಟಿ.ಸುಶೀಲ ಜಯರಾಂ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಶತಾಯುಷಿ ಸಾಹಿತಿ ದಿವಂಗತ ಸೀತಾಸುತ ಅವರ 125ನೇ ವರ್ಷದ ಸಂಸ್ಮರಣೆ ಹಾಗೂ ರಾಜ್ಯಮಟ್ಟದ ಡಾ.ವಿ.ಟಿ.ಸುಶೀಲಾ ಜಯರಾಂ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳು ದೊಡ್ಡವರಾಗಿ ಒಂದು ಹಂತಕ್ಕೆ ಬಂದ ನಂತರ ಹೆತ್ತವರನ್ನು ತಾತ್ಸಾರದಿಂದ ಕಾಣುತ್ತಿದ್ದಾರೆ. ಆದರೆ, ಅವರನ್ನು ಆ ಮಟ್ಟಕ್ಕೆ ಬೆಳೆಸಲು ಎಷ್ಟು ಕಷ್ಟಪಟ್ಟಿರುತ್ತಾರೆ ಎನ್ನುವುದನ್ನೇ ಮರೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
    ಸೀತಾಸುತರ ಮಕ್ಕಳಾದ ಡಾ.ಕೆ.ಎಸ್. ಜಯರಾಂ ಮತ್ತು ಅವರ ಸಹೋದರರು ಅವರ ತಂದೆ, ತಾಯಿ ಹೆಸರಿನಲ್ಲಿ ಕಳೆದ 25 ವರ್ಷದಿಂದ ಸಮಾಜದಲ್ಲಿ ಉತ್ತಮ ಕೆಲಸ ಮಾಡಿರುವವರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಎಲ್ಲರಿಗೂ ಮಾದರಿ. ಸೀತಾಸುತ ಅವರು ಅಂದೇ 10 ಕೃತಿಗಳನ್ನು ರಚಿಸಿದ್ದಾರೆ. ಇದರಲ್ಲಿ ರಾಮಾಯಣ ಕುರಿತು ಬರೆದಿರುವ ಪುಸ್ತಕ ಉತ್ತಮವಾಗಿದೆ. ಅವರ ಕುಟುಂಬ ಆದರ್ಶ ಮತ್ತು ಅನುಕರಣೀಯ. ಮನುಷ್ಯ ಜೀವನವನ್ನು ವೈವಿಧ್ಯಮಯವಾಗಿ ಅನುಭವಿಸಬೇಕು. ವೃತ್ತಿಯಲ್ಲಿ ತಲ್ಲೀನರಾಗುವ ಮೂಲಕ ಆರೋಗ್ಯವಂತ ಜೀವನ ನಡೆಸಬಹುದು. ಸಾಹಿತಿ, ವೈದ್ಯರು ಹಾಗೂ ಸೈನಿಕರು ದೇಶ ಆರೋಗ್ಯವಾಗಿರಲು ಕಾರಣಕರ್ತರಾಗಿದ್ದಾರೆ. ಸೈನಿಕರು ಗಡಿ ಕಾಯುತ್ತಿರುವುದರಿಂದ ನಾವು ನೆಮ್ಮದಿ ಜೀವನ ನಡೆಸುತ್ತಿದ್ದೇವೆ ಎಂದರು.
    ಟ್ರಸ್ಟ್‌ನ ಅಧ್ಯಕ್ಷ, ವಕೀಲ ಕೆ.ಎಸ್.ದೊರೆಸ್ವಾಮಿ ಮಾತನಾಡಿ, ತಂದೆ-ತಾಯಿ ಪೂಜಿಸುವವರಿಗೆ ಸಮಾಜದಲ್ಲಿ ಗೌರವ ಸಿಗುತ್ತದೆ. ಹೆತ್ತವರನ್ನು ಎಷ್ಟು ಗೌರವಿಸಿದರೂ ಸಾಲದು. ಅವರನ್ನು ಪ್ರತಿದಿನ ನೆನಪಿಸಿಕೊಳ್ಳಬೇಕು. ಆಧುನಿಕ ಯುಗದಲ್ಲಿ ತಂದೆ ತಾಯಿ ಸೇವೆ ಮಾಡುವ ಪ್ರೌವೃತ್ತಿ ಕಡಿಮೆಯಾಗಿದೆ. ಅವರು ನಿಮ್ಮನ್ನು ಬೆಳೆಸಲು ಸರ್ವಸ್ವವನ್ನೂ ತ್ಯಾಗ ಮಾಡಿರುತ್ತಾರೆ. ಆದ್ದರಿಂದ ಅವರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.
    ಟ್ರಸ್ಟ್‌ನ ಕಾರ್ಯದರ್ಶಿ ಡಾ.ಕೆ.ಎಸ್.ಜಯರಾಂ ಹಾಗೂ ಕುಟುಂಬದವರು ಇದ್ದರು. ಇದೇ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು ಅರ್ಜುನದೊಡ್ಡಿ ಗ್ರಾಮದ ವೀರಯೋಧ ಸಕ್ರಿಯ ನಾಯಕ್ ಅವರಿಗೆ ಮರಣೋತ್ತರವಾಗಿ ನೀಡಿದ ದೇಶಸೇವಾ ಪ್ರಶಸ್ತಿಯನ್ನು ಅವರ ಪತ್ನಿ ಜ್ಯೋತಿ ಬಾಯಿ ಸ್ವೀಕರಿಸಿದರು. ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ.ಎಂ.ಜಿ.ಮಂಜುನಾಥ್ ಅವರಿಗೆ ಸಾಹಿತ್ಯ ಸೇವಾ ಪ್ರಶಸ್ತಿ, ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಡಾ.ಕೆ.ಎಂ.ಶಿವಕುಮಾರ್ ಅವರಿಗೆ ವೈದ್ಯಕೀಯ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೂವರಿಗೆ ತಲಾ 20 ಸಾವಿರ ರೂ ನಗದು ನೀಡಲಾಯಿತು.
    ಮಾತ್ರವಲ್ಲದೆ ಕಾರ್ಗಿಲ್ ಯುದ್ದದಲ್ಲಿ ಹೋರಾಡಿದ ಹಿನ್ನೆಲೆಯಲ್ಲಿ ನಿವೃತ್ತ ಸೈನಿಕರಾದ ನಾಯಕ್ ಸುಬೇದಾರ್ ಡಿ.ವಿ.ರಾಜಣ್ಣ, ಕ್ಯಾಪ್ಟನ್ ಕರೀಗೌಡ, ಕ್ಯಾಪ್ಟನ್ ಮಲ್ಲಾರಾಜ್, ನಾಯಕ್ ಪಿ.ಗಜೇಂದ್ರ ಹಾಗೂ ಸುಬೇದಾರ್ ಮೇಜರ್ ಉದಯ್‌ಕುಮಾರ್ ಅವರಿಗೆ ವಿಶೇಷ ಗೌರವಾರ್ಥ ಸನ್ಮಾನಿಸಲಾಯಿತು. ಗುರುದೇವ ಲಲಿತಾ ಕಲಾ ಅಕಾಡೆಮಿ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶನ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts