More

    ಲೋಕಸಭೆ ಚುನಾವಣೆಗೆ ಮನೆಯಿಂದಲೇ ಮತದಾನ

    ಮೈಸೂರು: ವಿಧಾನಸಭೆ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಈಗ ಲೋಕಸಭೆ ಚುನಾವಣೆಗ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ನಡೆಯಲು ಅಸಹಾಯಕರಾಗಿದ್ದರೆ ಅಂತಹವರನ್ನು ಮನೆಯಲ್ಲಿಯೇ ಮತದಾನ ಮಾಡಲು ಅವಕಾಶವಿದೆ. ಕ್ಷೇತ್ರದಲ್ಲಿ 43,605 ಜನ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರನ್ನು ಗುರುತಿಸಲಾಗಿದೆ. ಹಾಗೆಯೇ, 21,509 ಅಂಗವಿಕಲರಿದ್ದು, ಅವರಿಗೂ ಅಂಚೆ ಮತಪತ್ರ ಸೇವೆ ಒದಗಿಸಲಾಗಿದೆ. ಕರ್ತವ್ಯ ನಿರತರು ಅಂಚೆ ಮತದಾನ ಮಾಡಬಹುದು ಎಂದು ತಿಳಿಸಿದರು.

    ಹಣ ಸಾಗಿಸುವಂತಿಲ್ಲ:
    ಚುನಾವಣೆ ಅಕ್ರಮ ತಡೆಯಲು ಇಂದಿನಿಂದಲೇ ಚೆಕ್‌ಪೋಸ್ಟ್‌ಗಳನ್ನು ಆರಂಭಿಸಲಾಗಿದೆ. ಒಬ್ಬ ವ್ಯಕ್ತಿ 50 ಸಾವಿರ ರೂ.ಗಿಂತ ಹೆಚ್ಚಿನ ಹಣ ಸಾಗಿಸುವಂತಿಲ್ಲ. ಅಲ್ಲದೆ 10 ಸಾವಿರ ರೂ. ಮೌಲ್ಯಕ್ಕಿಂತ ಹೆಚ್ಚು ಬೆಲೆ ಬಾಳುವ ವಸ್ತುಗಳನ್ನು ಸಾಗಿಸುವಂತಿಲ್ಲ. ಆನ್‌ಲೈನ್, ಡಿಜಿಟಲ್ ನಗದೀಕರಣದ ಮೇಲೂ ನಿಗ ಇರಿಸಲಾಗುವುದು. ಒಂದೊಮ್ಮೆ ಹೆಚ್ಚು ಹಣ ತೆಗೆದುಕೊಂಡು ಹೋದರೆ ಅದಕ್ಕೆ ಸಕಾರಣ ನೀಡಿದರೆ ಸಮಿತಿ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಿದೆ ಎಂದರು.
    ಮಾದರಿ ನೀತಿ ಸಂಹಿತೆ ಜಾರಿ ಹಾಗೂ ಅಭ್ಯರ್ಥಿಗಳ ವೆಚ್ಚದ ಮೇಲೆ ನಿಗಾವಹಿಸಲು 8 ತಂಡಗಳನ್ನು ರಚಿಸಲಾಗಿದ್ದು, ಈ ಪೈಕಿ 241 ಮಂದಿ ಸೆಕ್ಟರ್ ಅಧಿಕಾರಿ, 50 ಜನ ಫೈಯಿಂಗ್ ಸ್ಕ್ವಾಡ್, ಸ್ಥಳ ಕಾಣ್ಗಾವಲು ತಂಡ 42, ವಿಡಿಯೋ ಚಿತ್ರೀಕರಣ ತಂಡ 23, ವಿಡಿಯೋ ವೀಕ್ಷಣೆಯ ತಂಡ 12, ಲೆಕ್ಕ ಪರಿಶೋಧನಾ ತಂಡ 11 ಹಾಗೂ 15 ಮೇಲ್ವಿಕ್ಷಣ ತಂಡ ಕಾರ್ಯ ನಿರ್ವಹಿಸಲಿವೆ ಎಂದು ತಿಳಿಸಿದರು.

    ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಅಪರ ಜಿಲ್ಲಾಧಿಕಾರಿ ಪಿ. ಶಿವರಾಜು ಇದ್ದರು.

    ಮೊಬೈಲ್ ಆ್ಯಪ್ ಬಳಕೆ
    ಚುನಾವಣೆ ಅಕ್ರಮ ತಡೆಯಲು ಸಿ-ವಿಜಿಲ್ ಮೊಬೈಲ್ ಆ್ಯಪ್ ಇದ್ದು, ಸಾರ್ವಜನಿಕರು ತಮ್ಮ ಭಾಗದಲ್ಲಿ ಕಂಡುಬರುವ ಚುನಾವಣಾ ಅಕ್ರಮಗಳ ಬಗ್ಗೆ ಇದರಲ್ಲಿ ಮಾಹಿತಿ ನೀಡಬಹುದಾಗಿದೆ. ಹಾಗೆಯೇ ಚುನಾವಣಾ ವೇಳಾಪಟ್ಟಿ ಪ್ರಕಟವಾದ 24 ಗಂಟೆಯೊಳಗೆ ಸರ್ಕಾರಿ ಕಟ್ಟಡ, ಕಚೇರಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಚುನಾವಣೆ ನೀತಿಸಂಹಿತೆ ಉಲ್ಲಂಘನೆಗೆ ಒಳಪಡುವ ಸೈನ್‌ಬೋರ್ಡ್, ಭಾವಚಿತ್ರ ಹಾಗೂ ಫ್ಲೆಕ್ಸ್ ಬೋರ್ಡ್‌ಗಳನ್ನು ತೆರವು ಮಾಡಲಾಗುವುದು ಎಂದು ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.

    ಮತದಾರರು ಮತಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಒಂದು ವೇಳೆ ಇಲ್ಲದಿದ್ದರೆ, ನಾಮಪತ್ರ ಸಲ್ಲಿಕೆವರೆಗೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ವೋಟರ್ ಹೆಲ್ಪ್‌ಲೈನ್ ಮೂಲಕ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ತುರ್ತು ಇದ್ದರೆ 1950 ಅಥವಾ 0821-2305656 ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಹೇಳಿದರು.

    ಬಂದೋಬಸ್ತ್ ಕಟ್ಟೆಚ್ಚರ
    ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ನಗರ ವ್ಯಾಪ್ತಿಯಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದರು.
    ಮೈಸೂರು ನಗರ ವ್ಯಾಪ್ತಿಗೆ ನರಸಿಂಹರಾಜ, ಕೃಷ್ಣರಾಜ, ಚಾಮರಾಜ ವಿಧಾನಸಭೆ ಕ್ಷೇತ್ರ, ಚಾಮುಂಡೇಶ್ವರಿ ಕ್ಷೇತ್ರದ 167 ಮತಗಟ್ಟೆಗಳು ಹಾಗೂ ವರುಣ ಕ್ಷೇತ್ರದ 8 ಮತಗಟ್ಟೆಗಳು ನಗರ ಪೊಲೀಸ್ ವ್ಯಾಪ್ತಿಯಲ್ಲಿವೆ. ಒಟ್ಟು 971 ಮತಗಟ್ಟೆಗಳಿದ್ದು, ಈ ಪೈಕಿ 220 ಕ್ರಿಟಿಕಲ್ ಬೂತ್, 751 ಸಾಮಾನ್ಯ ಬೂತ್‌ಗಳೆಂದು ಗುರುತಿಸಲಾಗಿದೆ. ಮೈಸೂರು ನಗರದ 10 ಕಡೆ ಚೆಕ್‌ಪೋಸ್ಟ್ ಸ್ಥಾಪನೆ ಮಾಡಲಾಗುತ್ತಿದ್ದು, ಚೆಕ್‌ಪೋಸ್ಟ್ನಲ್ಲಿ 24 ಗಂಟೆಯೂ ತಪಾಸಣೆ ನಡೆಸಲು ಕ್ರಮಕೈಗೊಳ್ಳಲಾಗಿದೆ ಎಂದರು.
    ಮೈಸೂರು ನಗರದಲ್ಲಿ 731 ರೌಡಿಶೀಟರ್‌ಗಳಿದ್ದು, 583 ಜನರ ಮೇಲೆ ಈಗಾಗಲೇ ನಿಗಾ ವಹಿಸಲಾಗಿದೆ. 69 ಜನರನ್ನು ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಈಗಾಗಲೇ ಸಿಆರ್‌ಪಿಎಫ್ ನ ಒಂದು ತುಕಡಿ ಮೈಸೂರಿಗೆ ಆಗಮಿಸಿ ಪಥಸಂಚಲನ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ತುಕಡಿ ಆಗಮಿಸಲಿವೆ ಎಂದು ತಿಳಿಸಿದರು.

    ನಗರದಲ್ಲಿ 1077 ಮಂದಿ ಪರವಾನಗಿ ಮೇಲೆ ಶಸ್ತ್ರಾಸ್ತ್ರ ಹೊಂದಿದ್ದು, ಈ ಪೈಕಿ ತೀವ್ರ ಅನಿವಾರ್ಯತೆ ಇರುವವರನ್ನು ಹೊರತುಪಡಿಸಿ ಉಳಿದವರ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದರು.

    ಕೋಟ್
    ಮೈಸೂರು ಜಿಲ್ಲೆ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಹಂಚಿಕೆಯಾಗಿದೆ. ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಗೆ 1947 ಬೂತ್‌ಗಳು ಒಳಪಡಲಿವೆ. ಈ ಪೈಕಿ 305 ಕ್ರಿಟಿಕಲ್ ಬೂತ್‌ಗಳಿದ್ದು, ಉಳಿದವು ಸಾಮಾನ್ಯ ಬೂತ್‌ಗಳಾಗಿವೆ. ಕ್ರಿಟಿಕಲ್ ಬೂತ್‌ಗಳಿಗೆ ಹೆಚ್ಚಿನ ಭದ್ರತೆ ನೀಡಲಾಗುತ್ತದೆ. ರಾಜ್ಯದ ಗಡಿ ಭಾಗ ಬಾವಲಿ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ 28 ಚೆಕ್‌ಪೋಸ್ಟ್ ಸ್ಥಾಪಿಸಲಾಗುತ್ತಿದ್ದು, ಮೈಸೂರು ಜಿಲ್ಲಾದ್ಯಂತ ರೌಡಿಶೀಟರ್‌ಗಳ ಮೇಲೆ ನಿಗಾ ಇಡಲಾಗಿದೆ.

    ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

    ಕೋಟ್
    ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸೋಷಿಯಲ್ ಮಿಡಿಯಾಗಳ ಮೇಲೂ ತೀವ್ರ ನಿಗಾವಹಿಸಿದ್ದು, ಯಾರ ಪರವಾಗಿ ಅಥವಾ ಪ್ರಚೋದನಾಕಾರಿ ಭಿತ್ತಿಪತ್ರ ಹಾಗೂ ಬರಹಗಳನ್ನು ಬರೆಯುವವರ ಮೇಲೂ ತೀವ್ರಾ ನಿಗಾವಹಿಸಲಾಗುವುದು. ಸಾಮಾಜಿಕ ಜಾಲತಾಣದ ಮೇಲೆ ನಿಗಾ ಇಡಲು ಅದಕ್ಕಾಗಿ ತಂಡವೊಂದನ್ನು ರಚಿಸಲಾಗಿದೆ. ದೃಶ್ಯ ಹಾಗೂ ಮುದ್ರಣ ಮಾಧ್ಯಮದಲ್ಲಿಯೂ ನಿಗಾ ವಹಿಸಲು ತಂಡವಿದ್ದು, ಪೇಯ್ಡ ಬರಹಗಳ ಕುರಿತು ಪರಿಶೀಲನೆ ನಡೆಸಲಿದೆ.
    ಡಾ.ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts